FY22 Q3 GDP: ಮೂರನೇ ತ್ರೈಮಾಸಿಕ ಜಿಡಿಪಿ ಶೇ 5.4ರಷ್ಟು ಬೆಳವಣಿಗೆ
2022ರ ಹಣಕಾಸು ವರ್ಷದ ಮೂರನೇ ತ್ರೈಮಾಸಿಕವಾದ ಅಕ್ಟೋಬರ್ನಿಂದ ಡಿಸೆಂಬರ್ಗೆ ಜಿಡಿಪಿ ಬೆಳವಣಿಗೆ ಶೇ 5.4ರಷ್ಟು ಆಗಿದೆ ಎಂದು ಸರ್ಕಾರದಿಂದ ತಿಳಿಸಲಾಗಿದೆ.
ಇಂದು (ಫೆಬ್ರವರಿ 28, 2022ರ ಸೋಮವಾರ) ಬಿಡುಗಡೆಯಾದ ಸರ್ಕಾರಿ ಅಂಕಿ-ಅಂಶಗಳ ಪ್ರಕಾರ 2022ರ ಆರ್ಥಿಕ ವರ್ಷದ ಮೂರನೇ ತ್ರೈಮಾಸಿಕದಲ್ಲಿ ದೇಶದ ಒಟ್ಟು ಜಿಡಿಪಿ (GDP) ಶೇ 5.4ರಷ್ಟು ಬೆಳವಣಿಗೆಯಾಗಿದೆ. ಇದು ವಿಶ್ಲೇಷಕರು ಸೂಚಿಸಿದ್ದಕ್ಕಿಂತ ಕಡಿಮೆಯಿದ್ದು, ಇದು ಶೇ 6ಕ್ಕೆ ಹತ್ತಿರವಾಗಿತ್ತು. “2021-22ರ ಮೂರನೇ ತ್ರೈಮಾಸಿಕದಲ್ಲಿ ಸ್ಥಿರ (2011-12) ಬೆಲೆಯಲ್ಲಿ ಜಿಡಿಪಿ 38.22 ಲಕ್ಷ ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದ್ದು, 2020-21ರ ಮೂರನೇ ತ್ರೈಮಾಸಿಕದಲ್ಲಿ 36.26 ಲಕ್ಷ ಕೋಟಿಗಳಷ್ಟು ಇತ್ತು, ಶೇ 5.4ರ ಬೆಳವಣಿಗೆಯನ್ನು ತೋರಿಸಿದೆ,” ಎಂದು ಸರ್ಕಾರವು ಬಿಡುಗಡೆ ಮಾಡಿದ ಅಂಕಿ- ಅಂಶದಲ್ಲಿ ತಿಳಿದುಬಂದಿದೆ.
2021-22ರ ಎರಡನೇ ತ್ರೈಮಾಸಿಕದಲ್ಲಿ ದೇಶದ ಆರ್ಥಿಕತೆಯು ಕೊರೊನಾ-ಪೂರ್ವ ಮಟ್ಟವನ್ನು ದಾಟಲು ಶೇಕಡಾ 8.4ರಷ್ಟು ವಿಸ್ತರಿಸಿದೆ. ಆದಾರೂ ಜುಲೈ-ಸೆಪ್ಟೆಂಬರ್ ಅವಧಿಯಲ್ಲಿ ಜಿಡಿಪಿ ಬೆಳವಣಿಗೆಯು ಹಿಂದಿನ ತ್ರೈಮಾಸಿಕದಲ್ಲಿ ಶೇ 20.1 ಶೇಕಡಾ ವಿಸ್ತರಣೆಗಿಂತ ನಿಧಾನವಾಗಿದೆ. ರಾಷ್ಟ್ರೀಯ ಸಾಂಖ್ಯಿಕ ಕಚೇರಿಯು ಇಂದು ಹಣಕಾಸು ವರ್ಷ 2021- 22ರ ಮೂರನೇ ತ್ರೈಮಾಸಿಕದ ಜಿಡಿಪಿ ಅಂದಾಜುಗಳನ್ನು ಘೋಷಿಸಿದೆ. ಎಸ್‌ಬಿಐ ಸಂಶೋಧನಾ ವರದಿಯು ಜಿಡಿಪಿಯನ್ನು ಸುಮಾರು ಶೇ 5.8 ಎಂದು ಅಂದಾಜಿಸಿದ್ದು, ಆದರೆ ಹೆಚ್ಚಿನ ವಿಶ್ಲೇಷಕರು ಜಿಡಿಪಿಯನ್ನು ಶೇ 6ರ ಸುತ್ತ ಇರಬಹುದು ಎಂದಿದ್ದಾರೆ.
ಈ ತಿಂಗಳ ಆರಂಭದಲ್ಲಿ ಆರ್‌ಬಿಐ ತನ್ನ ಹಣಕಾಸು ನೀತಿ ಸಭೆಯಲ್ಲಿ ಹೇಳಿರುವಂತೆ, ಮುಂದಿನ ದಿನಗಳಲ್ಲಿ, ದೇಶೀಯ ಬೆಳವಣಿಗೆ ಸಂಗತಿಗಳು ಕ್ರಮೇಣ ಸುಧಾರಿಸುತ್ತಿದೆ. ಈ ಎಲ್ಲ ಅಂಶಗಳನ್ನು ಪರಿಗಣಿಸಿ, ನೈಜ ಜಿಡಿಪಿ ಬೆಳವಣಿಗೆಯನ್ನು 2022-23ಕ್ಕೆ ಶೇ 7.8ಕ್ಕೆ ಎಂದು ಯೋಜಿಸಲಾಗಿದೆ. ಮೊದಲನೇ ತ್ರೈಮಾಸಿಕ: 2022-23ರಲ್ಲಿ ಶೇ 17.2; ಎರಡನೇ ತ್ರೈಮಾಸಿಕದಲ್ಲಿ ಶೇ 7.0; ಮೂರನೇ ತ್ರೈಮಾಸಿಕದಲ್ಲಿ ಶೇ 4.3; ನಾಲ್ಕನೇ ತ್ರೈಮಾಸಿಕದಲ್ಲಿ ಶೇ 4.5 ಅಂದಾಜಿಸಲಾಗಿದೆ. 2022ರ ಜನವರಿಯಿಂದ ಮಾರ್ಚ್ (2021-22 ನಾಲ್ಕನೇ ತ್ರೈಮಾಸಿಕ) ಜಿಡಿಪಿ ಅಂದಾಜುಗಳ ಮುಂದಿನ ಬಿಡುಗಡೆ (2021-22ರ ನಾಲ್ಕನೇ ತ್ರೈಮಾಸಿಕ) ಮತ್ತು 2021-22ರ ತಾತ್ಕಾಲಿಕ ವಾರ್ಷಿಕ ಅಂದಾಜು 31.05.2022ರಂದು ಬಿಡುಗಡೆ ಆಗುತ್ತದೆ.
ಇದನ್ನೂ ಓದಿ: Indian Economy: ಭಾರತದ ಆರ್ಥಿಕತೆ ಚೇತರಿಕೆಗೆ ಕಚ್ಚಾ ತೈಲ ಬೆಲೆ ಏರಿಕೆಯ ಆತಂಕ ಇದೆಯೆಂದ ಅನಂತ ನಾಗೇಶ್ವರನ್
Published On - 8:33 pm, Mon, 28 February 22