Stock Market Technical Glitches: ಎನ್ಎಸ್ಇಯಲ್ಲಿ ತಾಂತ್ರಿಕ ದೋಷ; ಕೆಲ ಸಮಯ ಷೇರು ದರ ಅಪ್‌ಡೇಟ್ ಆಗದ ಬಗ್ಗೆ ದೂರು
ಮಾರ್ಚ್ 7ನೇ ತಾರೀಕಿನ ಸೋಮವಾರದಂದು ದಿನದ ಆರಂಭದ ವಹಿವಾಟಿನಲ್ಲಿ ಎನ್ಎಸ್ಇಯಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡು, ಈಕ್ವಿಟಿ ಷೇರುಗಳ ದರ ಸರಿಯಾಗಿ ಅಪ್‌ಡೇಟ್ ಆಗುತ್ತಿರಲಿಲ್ಲ ಎಂದು ಹೂಡಿಕೆದಾರರು ದೂರಿದ್ದರು. ಆ ಬಗ್ಗೆ ವಿವರ ಇಲ್ಲಿದೆ.
ಮಾರ್ಚ್ 7ನೇ ತಾರೀಕಿನ ಸೋಮವಾರದ ಆರಂಭದ ವಹಿವಾಟಿನಲ್ಲಿ ಎನ್ಎಸ್ಇಯಲ್ಲಿ ಹಲವು ಮಂದಿ ತಾಂತ್ರಿಕ ದೋಷದ ಬಗ್ಗೆ ದೂರಿದ್ದಾರೆ. ರಾಷ್ಟ್ರೀಯ ವಿನಿಮಯ ಕೇಂದ್ರದಲ್ಲಿ (NSE) ಈಕ್ವಿಟಿ ದರಗಳು ಅಪ್‌ಡೇಟ್ ಆಗುತ್ತಿಲ್ಲ ಎಂದು ದೂರಿದ್ದಾರೆ. ಆ ಕೂಡಲೇ ಝೆರೋದಾ ಹಾಗೂ ಐಸಿಐಸಿಐ ಸೆಕ್ಯೂರಿಟೀಸ್ ಬ್ರೋಕರೇಜ್ ಸಂಸ್ಥೆಗಳು ಟ್ವಿಟ್ಟರ್ನಲ್ಲಿ ಈ ಬಗ್ಗೆ ಗಮನ ಸೆಳೆದವು. ಎನ್‌ಎಸ್‌ಇ ಸ್ಟಾಕ್ನಲ್ಲಿ ಡೇಟಾ ಪೂರೈಕೆ ವ್ಯತ್ಯಯ ಆಗಿದೆ. ಇದು ಎಲ್ಲ ಸದಸ್ಯರ ಅನುಭವಕ್ಕೂ ಬಂದಿದೆ ಎಂದು ಹೇಳಿದ್ದಾರೆ. “ಎಲ್ಲ ವಿಭಾಗಗಳಲ್ಲಿನ ವಹಿವಾಟು ಸಾಮಾನ್ಯವಾಗಿ ಕಾರ್ಯ ನಿರ್ವಹಿಸುತ್ತಿದೆ. ಆದರೂ ನಿಫ್ಟಿ ಮತ್ತು ಬ್ಯಾಂಕ್ ನಿಫ್ಟಿ ಸೂಚ್ಯಂಕಗಳು ಮಧ್ಯಂತರವಾಗಿ ಪ್ರಸಾರ ಆಗುತ್ತಿಲ್ಲ. ವಿನಿಮಯ ಕೇಂದ್ರವು ಸಮಸ್ಯೆಯನ್ನು ಪರಿಹರಿಸಲು ಕೆಲಸ ಮಾಡುತ್ತಿದೆ ಮತ್ತು ಸದಸ್ಯರಿಗೆ ಮಾಹಿತಿ ನೀಡುತ್ತದೆ,” ಎಂದು ಎನ್‌ಎಸ್‌ಇ ಟ್ವೀಟ್‌ನಲ್ಲಿ ತಿಳಿಸಿದೆ.
ಮೂಲಭೂತವಾಗಿ ಹೂಡಿಕೆದಾರರು ನೇರ ಈಕ್ವಿಟಿ ಬೆಲೆಯನ್ನು ವೀಕ್ಷಿಸಲು ಸಮಸ್ಯೆಗಳನ್ನು ಎದುರಿಸಿದರು. ಏಕೆಂದರೆ ಇದು ಎನ್ಎಸ್ಇನಲ್ಲಿ ಅಪ್‌ಡೇಟ್ ಆಗುತ್ತಿರಲಿಲ್ಲ. ಆದಾರೂ ತಾಂತ್ರಿಕ ದೋಷಗಳನ್ನು ಪರಿಹರಿಸಲಾಗಿದೆ ಮತ್ತು ಸರಿಯಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದು ಎನ್‌ಎಸ್‌ಇ ನಂತರ ಹೇಳಿಕೊಂಡಿದೆ. ರಷ್ಯಾ-ಉಕ್ರೇನ್ ಯುದ್ಧಕ್ಕೆ ಸಂಬಂಧಿಸಿದಂತೆ ಹೆಚ್ಚಿದ ಆತಂಕದ ಕಾರಣಕ್ಕೆ ನಕಾರಾತ್ಮಕ ಜಾಗತಿಕ ಪರಿಣಾಮಗಳ ನಂತರ ಸೆನ್ಸೆಕ್ಸ್ ಮತ್ತು ನಿಫ್ಟಿ 50 ಸೋಮವಾರ ಬೆಳಗ್ಗೆ ಸುಮಾರು ಶೇ 3ರಷ್ಟು ಕುಸಿದಾಗ ಈ ಬೆಳವಣಿಗೆಯು ಸಂಭವಿಸಿದೆ.
ರಷ್ಯಾ-ಉಕ್ರೇನ್ ಯುದ್ಧ ಮುಂದುವರಿd ಹಿನ್ನೆಲೆಯಲ್ಲಿ ಭಾರತದ ಷೇರುಪೇಟೆ ಕುಸಿತ ದಾಖಲಿಸಿದೆ. ಹೂಡಿಕೆದಾರರು ಹಣ ಹಿಂಪಡೆಯಲು ಹಾತೊರೆದ ಕಾರಣ ಬೆಳಗ್ಗೆ 9.25ರ ಸಮಯದಲ್ಲಿ ಬಿಎಸ್ಇ ಸೆನ್ಸೆಕ್ಸ್ 1,428 ಅಂಶಗಳ ಕುಸಿತ ದಾಖಲಿಸಿತು. ಹಿಂದಿನ ವಹಿವಾಟಿಗೆ ಹೋಲಿಸಿದರೆ ಇದು ಶೇ 2.63ರ ಇಳಿಕೆ ಆಗಿತ್ತು. ಬಿಎಸ್ಇ 52,906ರಲ್ಲಿ ವಹಿವಾಟು ನಡೆಸುತ್ತಿತ್ತು. ದೇಶದ ಬಹುತೇಕ ಕಂಪೆನಿಗಳನ್ನು ಒಳಗೊಂಡ ಎನ್‌ಎಸ್‌ಇ ನಿಫ್ಟಿ ಸೂಚ್ಯಂಕವು 398 ಅಂಶಗಳ ಕುಸಿತ ದಾಖಲಿಸಿ, 15,847 ಅಂಶಗಳಲ್ಲಿ ವಹಿವಾಟು ನಡೆಸುತ್ತಿತ್ತು. ಇದು ಹಿಂದಿನ ದಿನದ ವಹಿವಾಟಿಗೆ ಹೋಲಿಸಿದರೆ ಶೇ 2.45ರಷ್ಟು ಕುಸಿತವಾಗಿತ್ತು.
ಇದನ್ನೂ ಓದಿ: How To Invest In US Stocks: ಅಮೆರಿಕದ ಸ್ಟಾಕ್ಗಳಲ್ಲಿ ಎನ್‌ಎಸ್‌ಇ ಐಎಫ್ಎಸ್ಸಿ ಮೂಲಕ ಹೂಡಿಕೆ ಮಾಡುವುದು ಹೇಗೆ?