ಕೊರೊನಾ ಸಾಂಕ್ರಾಮಿಕ ಸಂದರ್ಭದಲ್ಲಿ ಮಾಡಿದ್ದನ್ನೇ ಪ್ರತಿಪಕ್ಷಗಳು ಉಕ್ರೇನ್ ವಿಚಾರದಲ್ಲೂ ಮಾಡುತ್ತಿವೆ: ಪ್ರಧಾನಿ ನರೇಂದ್ರ ಮೋದಿ
ಖಾದಿ ಎಂಬ ಹೆಸರಿನಿಂದಲೇ ವರ್ಷಾನುಗಟ್ಟಲೆ ರಾಜಕೀಯ ಮೈಲೇಜ್ ಪಡೆದ ಕಾಂಗ್ರೆಸ್ , ಇದೀಗ ಆ ಹೆಸರು ಹೇಳಲೂ ಹಿಂದೇಟು ಹಾಕುತ್ತಿದೆ ಎಂದು ಪ್ರಧಾನಿ ಮೋದಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ಪ್ರಧಾನಮಂತ್ರಿ ನರೇಂದ್ರ ಮೋದಿ (PM Narendra Modi) ಇಂದು ವಾರಾಣಸಿಯಲ್ಲಿ ಚುನಾವಣಾ ಪ್ರಚಾರ ನಡೆಸಿದ್ದಾರೆ. ಉತ್ತರ ಪ್ರದೇಶದಲ್ಲಿ ಇನ್ನೊಂದು ಹಂತದ ಮತದಾನ ಬಾಕಿ ಇದ್ದು, ಮಾರ್ಚ್ 7ರಂದು ನಡೆಯಲಿದೆ. ಈ ಕೊನೇ ಹಂತದಲ್ಲಿ ಮತದಾನ ನಡೆಯಲಿರುವ ವಾರಾಣಸಿಯಲ್ಲಿ ಇಂದು ಪ್ರಚಾರ ನಡೆಸಿದ ಪ್ರಧಾನಿ ಮೋದಿ, ಪ್ರತಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದರು. ವಿರೋಧ ಪಕ್ಷಗಳು ಏನನ್ನೂ ಸರಿಯಾಗಿ ಅರ್ಥ ಮಾಡಿಕೊಳ್ಳದೆ, ಕುರುಡಾಗಿ ನಮ್ಮ ಸರ್ಕಾರದ ವಿರುದ್ಧ ಆರೋಪ ಮಾಡುತ್ತವೆ. ತೀವ್ರವಾದ ಹತಾಶೆ ಮತ್ತು ಬಿಜೆಪಿ ವಿರುದ್ಧದ ನೆಗೆಟಿವಿಟಿ ಎಂಬುದು ಪ್ರತಿಪಕ್ಷಗಳ ರಾಜಕೀಯ ಸಿದ್ಧಾಂತ ಎಂದು ಹೇಳಿದರು.
ಉತ್ತರ ಪ್ರದೇಶದಲ್ಲಿ ಪರಿವಾರವಾದಿಗಳು ಸರ್ಕಾರ ರಚನೆ ಮಾಡುವುದು ಇಲ್ಲಿನ ಜನರಿಗೆ ಇಷ್ಟವಿಲ್ಲ. ಖಂಡಿತವಾಗಿಯೂ ಮುಂದಿನ ಬಾರಿಗೂ ಸಿಎಂ ಯೋಗಿ ಆದಿತ್ಯನಾಥ್ ನೇತೃತ್ವದ ಸರ್ಕಾರವೇ ಅಧಿಕಾರಕ್ಕೆ ಬರುತ್ತದೆ ಎಂದು ಹೇಳಿದ ಪ್ರಧಾನಮಂತ್ರಿ, ಕಳೆದ ಎರಡು ವರ್ಷಗಳಲ್ಲಿ, ದಲಿತರು, ಹಿಂದುಳಿದವರು, ಬುಡಕಟ್ಟು ಜನಾಂಗದ ಸುಮಾರು 80 ಕೋಟಿ ಬಡವರು ಉಚಿತ ರೇಶನ್ ಪಡೆಯುವಂತೆ ನಮ್ಮ ಸರ್ಕಾರ ಮಾಡಿದೆ. ಈ ಯೋಜನೆ ಬಗ್ಗೆ ಇಡೀ ಜಗತ್ತೇ ಅಚ್ಚರಿ ವ್ಯಕ್ತಪಡಿಸಿದೆ. ಬಡವರ್ಗದ ಜನರು ಖುಷಿಯಾಗಿದ್ದಾರೆಂದರೆ, ನಾನೂ ಖುಷಿಯಾಗಿದ್ದಂತೆ ಎಂದು ಹೇಳಿದರು.
ಉಕ್ರೇನ್ನಲ್ಲಿ ರಷ್ಯಾ ನಡೆಸುತ್ತಿರುವ ಆಕ್ರಮಣದ ಬಗ್ಗೆ ಮಾತನಾಡಿದ ಪ್ರಧಾನಿ ಮೋದಿ, ಇಂಥ ಸವಾಲಿನ ಸಂದರ್ಭದಲ್ಲೂ ಪ್ರತಿಪಕ್ಷಗಳು ತಮ್ಮ ರಾಜಕೀಯ ಹಿತಾಸಕ್ತಿಗೇ ಆದ್ಯತೆ ನೀಡುತ್ತಿವೆ. ನಮ್ಮ ದೇಶದ ಭದ್ರತಾ ಪಡೆಗಳು, ಸಂಬಂಧಪಟ್ಟ ಅಧಿಕಾರಿಗಳು, ಆಡಳಿತ ಇಂಥ ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿ ಹೋರಾಡುತ್ತಿದ್ದರೆ, ವಿರೋಧ ಪಕ್ಷಗಳ ನಾಯಕರು, ಬಿಕ್ಕಟ್ಟನ್ನು ಮತ್ತಷ್ಟು ಜಟಿಲಗೊಳಿಸುತ್ತಿವೆ. ಕೊರೊನಾ ಸಾಂಕ್ರಾಮಿಕದ ವೇಳೆ ಮಾಡಿದ್ದನ್ನೇ ಈಗಲೂ ಮಾಡುತ್ತಿವೆ ಎಂದು ಹೇಳಿದರು. ಕಾಂಗ್ರೆಸ್ ವಿರುದ್ಧ ಕಟು ಪ್ರತಿಕ್ರಿಯೆ ನೀಡಿದ ಪ್ರಧಾನಿ ಮೋದಿ, ಖಾದಿ ಎಂಬ ಹೆಸರಿನಿಂದಲೇ ವರ್ಷಾನುಗಟ್ಟಲೆ ರಾಜಕೀಯ ಮೈಲೇಜ್ ಪಡೆದ ಕಾಂಗ್ರೆಸ್ , ಇದೀಗ ಆ ಹೆಸರು ಹೇಳಲೂ ಹಿಂದೇಟು ಹಾಕುತ್ತಿದೆ. ಖಾದಿ ಮತ್ತು ಯೋಗವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬ್ರ್ಯಾಂಡ್ ಮಾಡಿದ್ದು ನಮ್ಮ ಸರ್ಕಾರ ಎಂದೂ ಹೇಳಿದರು.
ಇದನ್ನೂ ಓದಿ: ಯಾವ ಕಾರಣಕ್ಕೂ ಶೆಲ್ಟರ್ಗಳಿಂದ ಹೊರಬರಬೇಡಿ, ನಾವು ಸ್ಥಳಾಂತರ ಮಾಡುತ್ತೇವೆ: ಸುಮಿಯಲ್ಲಿರುವ ವಿದ್ಯಾರ್ಥಿಗಳಿಗೆ ಭಾರತದಿಂದ ಸೂಚನೆ
Published On - 5:33 pm, Sat, 5 March 22