ಅಧ್ಯಕ್ಷ ಝೆಲೆನ್​ಸ್ಕಿ ಹತ್ಯೆಯಾದರೂ ಹೋರಾಟ ನಿಲ್ಲುವುದಿಲ್ಲ: ಪರ್ಯಾಯ ಯೋಜನೆಗಳನ್ನು ರೂಪಿಸಿಕೊಂಡಿದೆ ಉಕ್ರೇನ್

ಅಧ್ಯಕ್ಷ ಝೆಲೆನ್​ಸ್ಕಿ ಹತ್ಯೆಯಾದರೂ ಹೋರಾಟ ನಿಲ್ಲುವುದಿಲ್ಲ: ಪರ್ಯಾಯ ಯೋಜನೆಗಳನ್ನು ರೂಪಿಸಿಕೊಂಡಿದೆ ಉಕ್ರೇನ್
ವೊಲೊಡಿಮಿರ್ ಝೆಲೆನ್ಸ್ಕಿ

ಒಂದು ವೇಳೆ ಅಧ್ಯಕ್ಷ ಝೆಲೆನ್​ಸ್ಕಿ ಹತ್ಯೆಯಾದರೂ ಪರಿಸ್ಥಿತಿಯನ್ನು ಹೇಗೆ ನಿರ್ವಹಿಸಬೇಕು ಎಂಬ ಬಗ್ಗೆ ಉಕ್ರೇನ್ ಅಗತ್ಯ ಸಿದ್ಧತೆ ಮಾಡಿಕೊಂಡಿದೆ.

TV9kannada Web Team

| Edited By: Ghanashyam D M | ಡಿ.ಎಂ.ಘನಶ್ಯಾಮ

Mar 07, 2022 | 11:53 AM

ದೆಹಲಿ: ಉಕ್ರೇನ್ ಅಧ್ಯಕ್ಷ ವೊಲೊಡ್ಮಿರ್ ಝೆಲೆನ್​ಸ್ಕಿ (Volodymyr Zelensky) ಅವರ ಹತ್ಯೆಗೆ ರಷ್ಯಾ ಈಗಾಗಲೇ ಹಲವು ಬಾರಿ ಯತ್ನಿಸಿದೆ. ಈ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ಉಕ್ರೇನ್ ಅಡಳಿತ, ಒಂದು ವೇಳೆ ಅಧ್ಯಕ್ಷ ಝೆಲೆನ್​ಸ್ಕಿ ಹತ್ಯೆಯಾದರೂ ಪರಿಸ್ಥಿತಿಯನ್ನು ಹೇಗೆ ನಿರ್ವಹಿಸಬೇಕು ಎಂಬ ಬಗ್ಗೆ ಸಿದ್ಧತೆ ಮಾಡಿಕೊಂಡಿದೆ. ರಷ್ಯಾ ತನ್ನ ಪ್ರಯತ್ನದಲ್ಲಿ ಯಶಸ್ವಿಯಾಗಿ, ಝೆಲೆನ್​ಸ್ಕಿ ಹತ್ಯೆಯಾದರೂ ಉಕ್ರೇನ್ ತನ್ನ ಹೋರಾಟ ನಿಲ್ಲಿಸುವುದಿಲ್ಲ ಎಂದು ಅಮೆರಿಕದ ವಿದೇಶಾಂಗ ವ್ಯವಹಾರಗಳ ಇಲಾಖೆ ಕಾರ್ಯದರ್ಶಿ ಆಂಟೊನಿ ಬ್ಲಿಂಕೆನ್ ಹೇಳಿದ್ದಾರೆ. ಪತ್ರಕರ್ತೆ ಮಾರ್ಗರೆಟ್ ಬ್ರೆನನ್ ಅವರ ‘ಫೇಸ್​ ದ ನೇಷನ್’ ಟಿವಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಒಂದು ದಿನದ ಹಿಂದಷ್ಟೇ ನಾನು ಉಕ್ರೇನ್​ನಲ್ಲಿದ್ದೆ. ಅಲ್ಲಿನ ವಿದೇಶಾಂಗ ವ್ಯವಹಾರಗಳ ಸಚಿವ ಡ್ಮಿಟ್ರೊ ಕುಲೆಬಾ ಅವರನ್ನು ಭೇಟಿಯಾಗಿದ್ದೆ. ಈ ವೇಳೆ ಅವರು ಹೆಚ್ಚೇನು ವಿವರ ಹಂಚಿಕೊಳ್ಳಲಿಲ್ಲ. ಆದರೆ, ಝೆಲೆನ್​ಸ್ಕಿ ಅಧಿಕಾರದಲ್ಲಿದ್ದಾಗ ಹೇಗೆ ಆಡಳಿತ ನಡೆದುಕೊಂಡು ಹೋಗುತ್ತಿದೆಯೋ ನಂತರವೂ ಹೆಚ್ಚೂಕಡಿಮೆ ಅದೇ ರೀತಿ ಮುಂದುವರಿಸಲು ಅವರು ವ್ಯವಸ್ಥೆ ಮಾಡಿಕೊಂಡಿದ್ದಾರೆ’ ಎಂದು ತಿಳಿಸಿದರು. ತಮ್ಮ ಸಂದರ್ಶನದಲ್ಲಿ ಬ್ಲಿಂಕೆನ್ ಉಕ್ರೇನ್ ಆಡಳಿತವನ್ನು ಹೊಗಳಿದ್ದಾರೆ. ಉಕ್ರೇನ್​ನ ಧೈರ್ಯಶಾಲಿ ಜನರ ನಿಜವಾದ ಪ್ರತಿನಿಧಿಗಳಾಗಿ ಝೆಲೆನ್​ಸ್ಕಿ ಮತ್ತು ಅವರ ಸರ್ಕಾರ ಕೆಲಸ ಮಾಡುತ್ತಿದೆ ಎಂದು ತಾರೀಪು ಮಾಡಿದ್ದಾರೆ.

ಉಕ್ರೇನ್ ಮೇಲೆ ರಷ್ಯಾ ದಾಳಿ ನಡೆಸಿದ 12 ದಿನಗಳಲ್ಲಿ ಅಧ್ಯಕ್ಷ ಝೆಲೆನ್​ಸ್ಕಿ ಹತ್ಯೆಗೆ ಈವರೆಗೆ ಮೂರು ಬಾರಿ ರಷ್ಯಾ ಪ್ರಯತ್ನಿಸಿದೆ. ಉಕ್ರೇನ್ ಅಧಿಕಾರಿಗಳು ಮತ್ತು ಗುಪ್ತಚರ ಇಲಾಖೆ ಸಕಾಲದಲ್ಲಿ ಮುನ್ಸೂಚನೆ ನೀಡಿದ್ದರಿಂದ ಈ ಸಂಚುಗಳನ್ನು ವಿಫಲಗೊಳಿಸಲಾಯಿತು. ವಾಗ್​ನರ್ ಗ್ರೂಪ್ ಮತ್ತು ಚೆಚೆನ್ಯಾ ಬಂಡುಕೋರರ ಎರಡು ಪ್ರತ್ಯೇಕ ಗುಂಪುಗಳನ್ನು ಉಕ್ರೇನ್ ಅಧ್ಯಕ್ಷರ ಹತ್ಯೆಗೆಂದು ಕಳಿಸಲಾಗಿದೆ.

ಉಕ್ರೇನ್​ ಮೇಲೆ ದಂಡೆತ್ತಿ ಬಂದು ದುಂಡಾವರ್ತಿ ನಡೆಸಿದ ಎಲ್ಲರನ್ನೂ ಶಿಕ್ಷಿಸುತ್ತೇವೆ ಎಂದು ಝೆಲೆನ್​ಸ್ಕಿ ಇತ್ತೀಚೆಗಷ್ಟೇ ಪ್ರತಿಜ್ಞೆ ಮಾಡಿದ್ದರು. ರಷ್ಯಾ ವಿರುದ್ಧದ ಹೋರಾಟದಲ್ಲಿ ಮಹಿಳೆಯರು ಮತ್ತು ಮಕ್ಕಳೂ ಸೇರಿದಂತೆ ನೂರಾರು ಜನರು ಮೃತಪಟ್ಟಿದ್ದಾರೆ. ‘ಉಕ್ರೇನ್​ಗೆ ಬಂದಿರುವ ರಷ್ಯಾ ಸೇನೆಯು ಉದ್ದೇಶಪೂರ್ವಕವಾಗಿ ಜನರನ್ನು ಕೊಲ್ಲುತ್ತಿದೆ. ಯಾವು ಯಾವುದನ್ನೂ ಮರೆಯುವುದಿಲ್ಲ, ಯಾರನ್ನೂ ಕ್ಷಮಿಸುವುದಿಲ್ಲ. ನಮ್ಮ ನೆಲಕ್ಕೆ ಬಂದು ನಮ್ಮ ಮೇಲೆ ದೌರ್ಜನ್ಯ ಎಸಗಿದ ಎಲ್ಲರನ್ನೂ ಶಿಕ್ಷಿಸುತ್ತೇವೆ’ ಎಂದು ಝೆಲೆನ್​ಸ್ಕಿ ಹೇಳಿದ್ದರು. ಈ ಭೂಮಿಯಲ್ಲಿ ಗೋರಿ ಹೊರತುಪಡಿಸಿದರೆ ಬೇರೆಲ್ಲೂ ನೆಮ್ಮದಿಯ ಸ್ಥಳ ಇಲ್ಲ’ ಎಂದು ಝೆಲೆನ್​ಸ್ಕಿ ಹೇಳಿದ್ದರು.

ಉಕ್ರೇನ್ ಮತ್ತು ರಷ್ಯಾ ನಡುವಣ 3ನೇ ಸುತ್ತಿನ ಶಾಂತಿ ಮಾತುಕತೆಯ ಸೋಮವಾರ ನಡೆಯಲಿದೆ. ಆದರೆ ರಕ್ತಸಿಕ್ತ ಹೋರಾಟ ಮಾತ್ರ ಇನ್ನೂ ನಿಂತಿಲ್ಲ.

ಕಚ್ಚಾ ತೈಲ ಬ್ಯಾರಲ್​ಗೆ 10 ಯುಎಸ್​ಡಿಗೂ ಜಾಸ್ತಿ ಹೆಚ್ಚಳ

ಉಕ್ರೇನ್- ರಷ್ಯಾ ಬಿಕ್ಕಟ್ಟು ತೀವ್ರಗೊಳ್ಳುತ್ತಿದ್ದಂತೆ ಮಾರ್ಚ್ 7ನೇ ತಾರೀಕಿನ ಸೋಮವಾರದಂದು ಪ್ರತಿ ಬ್ಯಾರೆಲ್​ಗೆ ತೈಲ ಬೆಲೆ 10 ಯುಎಸ್​ಡಿಗೂ ಹೆಚ್ಚು ಮೇಲೇರಿದೆ. ರಷ್ಯಾದ ಮೇಲೆ ಮತ್ತಷ್ಟು ಕಠಿಣ ನಿರ್ಬಂಧಗಳನ್ನು ಹೇರಬೇಕು ಎಂಬ ಕರೆ ವ್ಯಾಪಕ ಆಗುತ್ತಿರುವ ಹಿನ್ನೆಲೆಯಲ್ಲಿ ಈ ಬೆಳವಣಿಗೆ ಆಗಿದೆ. ಸೋಮವಾರ ದಿನದ ಆರಂಭದಲ್ಲಿ ಬ್ರೆಂಟ್ ಕಚ್ಚಾ ತೈಲ 10 ಯುಎಸ್​ಡಿಗೂ ಹೆಚ್ಚು ಜಿಗಿತ ಕಂಡು, 130 ಯುಎಸ್​ಡಿ ಸಮೀಪ ಮುಟ್ಟಿತು. ಯು.ಎಸ್. ಕಚ್ಚಾ ತೈಲ ಬೆಂಚ್​ಮಾರ್ಕ್ 9 ಯುಎಸ್​ಡಿಗೂ ಜಾಸ್ತಿ ಮೇಲೇರಿ, ಈಗ ಬ್ಯಾರಲ್​ಗೆ 124 ಡಾಲರ್​ಗೂ ಹೆಚ್ಚಿನ ದರದಲ್ಲಿದೆ. ರಷ್ಯಾದ ಪಡೆಗಳು ಆಯಕಟ್ಟಿನ ಸ್ಥಳಗಳನ್ನು ವಶಕ್ಕೆ ಪಡೆದಿರುವುದರಿಂದ ಉಕ್ರೇನ್​ನ ದೇಶದ ಸ್ಥಾನಮಾನ ಅಪಾಯದಲ್ಲಿದೆ ಎಂದು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಎಚ್ಚರಿಕೆ ನಂತರ ಈ ಹೆಚ್ಚಳ ಆಗಿದೆ.

ಇದನ್ನೂ ಓದಿ: ಉಕ್ರೇನ್​ನಿಂದ ಬಂದ ಎಂಬಿಬಿಎಸ್ ವಿದ್ಯಾರ್ಥಿಗಳ ಭವಿಷ್ಯವೇನು? ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿ ಟ್ವೀಟ್

ಇದನ್ನೂ ಓದಿ: Russia-Ukraine War: ಇಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿಯವರೊಂದಿಗೆ ಪ್ರಧಾನಿ ಮೋದಿ ಮಾತು

Follow us on

Related Stories

Most Read Stories

Click on your DTH Provider to Add TV9 Kannada