ರಷ್ಯಾ ಇಂದು ಉಕ್ರೇನ್ನ ನಾಲ್ಕು ಪ್ರಮುಖ ನಗರಗಳಲ್ಲಿ ಮಧ್ಯಾಹ್ನ 12.30ರಿಂದ (ಭಾರತೀಯ ಕಾಲಮಾನ)ತಾತ್ಕಾಲಿಕ ಕದನ ವಿರಾಮ (Ceasefire) ಘೋಷಿಸಿದೆ. ಕೀವ್, ಮರಿಯುಪೋಲ್, ಖಾರ್ಕೀವ್, ಸುಮಿ ನಗರಗಳಲ್ಲಿ ಕದನ ವಿರಾಮ ಘೋಷಿಸಿದೆ. ಈ ಪ್ರದೇಶಗಳಲ್ಲಿ ಸಿಲುಕಿರುವ ಇತರ ದೇಶಗಳ ಪ್ರಜೆಗಳನ್ನು ರಕ್ಷಿಸಲು ಮಾನವೀಯ ಕಾರಿಡಾರ್ಗಳನ್ನು ತೆರೆಯುವ ಸಲುವಾಗಿ ಈ ಯುದ್ಧ ವಿರಾಮ ಘೋಷಿಸಿದ್ದಾಗಿ ರಷ್ಯಾ ಹೇಳಿದೆ. ಈಗೆರಡು ದಿನಗಳ ಹಿಂದೆ ಅಂದರೆ ಮಾರ್ಚ್ 5ರಂದು ಕೂಡ ರಷ್ಯಾ ಮರಿಯುಪೋಲ್, ವೊಲ್ನೋವಾಖಾಗಳಲ್ಲಿ ಕದನ ವಿರಾಮ ಘೋಷಿಸಿತ್ತು. ಆದರೆ ಅದು ಉಲ್ಲಂಘನೆಯೂ ಆಗಿದ್ದ ಬಗ್ಗೆ ವರದಿಯಾಗಿತ್ತು. ಇಲ್ಲಿದೆ ನೋಡಿ ಪ್ರಮುಖ ಬೆಳವಣಿಗೆಗಳ ವಿವರ
- ಫ್ರೆಂಚ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್ ಅವರ ವೈಯಕ್ತಿಕ ಮನವಿ ಮೇರೆಗೆ ಇಂದು ಮಾಸ್ಕೋ ಕಾಲಮಾನದ ಪ್ರಕಾರ ಬೆಳಗ್ಗೆ 10ಗಂಟೆಯಿಂದ ಕೀವ್, ಖಾರ್ಕೀವ್, ಮರಿಯುಪೋಲ್ ಮತ್ತು ಸುಮಿಯಲ್ಲಿ ಕದನ ವಿರಾಮ ಘೋಷಿಸಿದ್ದಾಗಿ ರಷ್ಯಾ ರಕ್ಷಣಾ ಸಚಿವಾಲಯ ತಿಳಿಸಿದೆ.
- ಈ ನಾಲ್ಕೂ ಪ್ರದೇಶಗಳಲ್ಲಿ ದಾಳಿ ತೀವ್ರವಾಗಿದೆ. ಹೀಗಾಗಿ ವಿದೇಶಿ ನಾಗರಿಕರ ಸ್ಥಳಾಂತರಕ್ಕೆ ತೊಡಕಾಗಿದೆ. ಈ ಹಿಂದೆ ಮರಿಯುಪೋಲ್ನಲ್ಲಿ ಕದನ ವಿರಾಮ ಘೋಷಣೆಯಾಗಿದ್ದರೂ ಅದು ಉಲ್ಲಂಘನೆಯಾಗಿದೆ. ಈ ನಾಲ್ಕೂ ಯುದ್ಧ ಪೀಡಿತ ಸ್ಥಳಗಳಲ್ಲಿ ಇರುವ ಇತರ ದೇಶಗಳ ನಾಗರಿಕರನ್ನು ಸ್ಥಳಾಂತರ ಮಾಡಿ ರಕ್ಷಣೆ ಮಾಡಲು ಇದೀಗ ತಾತ್ಕಾಲಿಕ ಕದನ ವಿರಾಮ ಘೋಷಣೆ ಮಾಡಲಾಗಿದೆ.
- ಯುದ್ಧ 12ನೇ ದಿನಕ್ಕೆ ಕಾಲಿಟ್ಟಿದ್ದು, ಉಕ್ರೇನ್ನ ಮಧ್ಯಭಾಗದಲ್ಲಿದ್ದ ವಿನ್ನಿಟ್ಸಿಯಾ ವಿಮಾನ ನಿಲ್ದಾಣ ರಷ್ಯಾದ ಕ್ಷಿಪಣಿ ದಾಳಿಗೆ ಧ್ವಂಸಗೊಂಡಿದೆ. ಈ ಬಗ್ಗೆ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿಯವರೇ ಮಾಹಿತಿ ನೀಡಿದ್ದಾರೆ. ಹಾಗೇ ಇನ್ನೊಂದೆಡೆ ಇರ್ಪಿನ್ ನಗರದಿಂದ ಪಲಾಯನ ಮಾಡುತ್ತಿದ್ದ ಮೂವರು ನಾಗರಿಕರನ್ನು ರಷ್ಯಾ ಸೇನೆ ಹತ್ಯೆ ಮಾಡಿದೆ ಎಂದು ಬಿಬಿಸಿ ವರದಿ ಮಾಡಿದೆ.
- ರಷ್ಯಾ ಉಕ್ರೇನ್ ಮೇಲೆ ಯುದ್ಧ ಮಾಡುತ್ತಿರುವುದನ್ನು ರಷ್ಯನ್ನರೇ ಅನೇಕರು ವಿರೋಧಿಸುತ್ತಿದ್ದಾರೆ. ಹೀಗೆ ರಷ್ಯಾದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಸುಮಾರು 4600 ಜನರನ್ನು ಅಲ್ಲಿನ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
- ಇಂದು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಮತ್ತು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿಯವರೊಂದಿಗೆ ಪ್ರಧಾನಿ ಮೋದಿ ಪ್ರತ್ಯೇಕ ಮಾತುಕತೆ ನಡೆಸಲಿದ್ದಾರೆ. ಈ ವೇಳೆ ಭಾರತೀಯರ ಸ್ಥಳಾಂತರದ ಬಗ್ಗೆ ಚರ್ಚೆ ನಡೆಯಲಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಇದನ್ನೂ ಓದಿ: Russia-Ukraine Crisis: 12ನೇ ದಿನಕ್ಕೆ ಕಾಲಿಟ್ಟ ರಷ್ಯಾ-ಉಕ್ರೇನ್ ಯುದ್ಧ; ಇಂದು 3ನೇ ಸುತ್ತಿನ ಮಾತುಕತೆ ಫಲಪ್ರದವಾಗಬಹುದೇ?