ಡೊನಾಲ್ಡ್ ಟ್ರಂಪ್ ಎರಡನೇ ಅವಧಿಗೆ ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕ ಅಧ್ಯಕ್ಷರಾಗಲು ಸಜ್ಜಾಗಿದ್ದಾರೆ. ಕಮಲಾ ಹ್ಯಾರಿಸ್ ವಿರುದ್ಧ ಅಮೆರಿಕ ಅಧ್ಯಕ್ಷೀಯ ರೇಸ್‌ನಲ್ಲಿ ಟ್ರಂಪ್ ಗೆಲುವು ಸಾಧಿಸಿದ್ದಾರೆ. ಅವರು ಕ್ರಿಮಿನಲ್ ಮೊಕದ್ದಮೆಗಳನ್ನು ಎದುರಿಸುತ್ತಿರುವ ಮೊದಲ ಯುಎಸ್ ಅಧ್ಯಕ್ಷರೆನಿಸಿಕೊಳ್ಳಲಿದ್ದಾರೆ. ಇತ್ತೀಚಿನ ಚುನಾವಣೆಗಳಲ್ಲಿ ರಿಪಬ್ಲಿಕನ್ನರ ಪರವಾಗಿ ಬದಲಾದ ಯುದ್ಧಭೂಮಿಯಾದ ಫ್ಲೋರಿಡಾವನ್ನು ಟ್ರಂಪ್ ಗೆದ್ದಿದ್ದಾರೆ.
ಟೆಕ್ಸಾಸ್, ದಕ್ಷಿಣ ಕೆರೊಲಿನಾ ಮತ್ತು ಇಂಡಿಯಾನಾದಂತಹ ವಿಶ್ವಾಸಾರ್ಹ ರಿಪಬ್ಲಿಕನ್ ರಾಜ್ಯಗಳಲ್ಲಿ ಆರಂಭಿಕ ವಿಜಯಗಳನ್ನು ಗಳಿಸಿದರು. 2024ರ ಅಧ್ಯಕ್ಷೀಯ ಚುನಾವಣೆಯಲ್ಲಿ ಟ್ರಂಪ್ ಗೆದ್ದರೆ ಅದು ಕೇವಲ ಶ್ವೇತಭವನಕ್ಕೆ ಸೀಮಿತವಾಗುವುದಿಲ್ಲ.
ಇಂತಹ ಪರಿಸ್ಥಿತಿಯಲ್ಲಿ ಟ್ರಂಪ್ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆದ್ದ ನಂತರ ಅವರ ವಿರುದ್ಧ ಬಾಕಿ ಉಳಿದಿರುವ ಕ್ರಿಮಿನಲ್ ಪ್ರಕರಣಗಳು ಏನಾಗುತ್ತವೆ ಎಂಬ ದೊಡ್ಡ ಪ್ರಶ್ನೆ ಈಗ ಉದ್ಭವಿಸಿದೆ.
ಟ್ರಂಪ್ ಇತಿಹಾಸದಲ್ಲಿ ಮೊದಲ ಅಧ್ಯಕ್ಷೀಯ ಅಭ್ಯರ್ಥಿಯಾಗಿದ್ದು, ಅವರ ವಿರುದ್ಧ ಮೊಕದ್ದಮೆಗಳು ಬಾಕಿ ಉಳಿದಿವೆ ಅಥವಾ ಜೈಲಿಗೆ ಹೋಗುವ ಬೆದರಿಕೆ ಎದುರಾಗಿದೆ. ಮಾಜಿ ಯುಎಸ್ ಅಧ್ಯಕ್ಷರ ಗೆಲುವು ಫೆಡರಲ್ ಪ್ರಕರಣಗಳು ಸೇರಿದಂತೆ ಅವರ ವಿರುದ್ಧದ ಕೆಲವು ಗಂಭೀರ ಕ್ರಿಮಿನಲ್ ಆರೋಪಗಳನ್ನು ವಜಾಗೊಳಿಸಬಹುದು ಅಥವಾ ನಾಲ್ಕು ವರ್ಷಗಳ ಕಾಲ ಸ್ಥಗಿತಗೊಳಿಸಬಹುದು ಎನ್ನಲಾಗುತ್ತಿದೆ.
ಕರೆನ್ ಫ್ರೈಡ್‌ಮನ್ ಅಗ್ನಿಫಿಲೋ ಹೇಳಿಕೆ ಪ್ರಕಾರ ಟ್ರಂಪ್ ಗೆದ್ದರೆ, ಅವರು ಎಲ್ಲಾ ಕ್ರಿಮಿನಲ್ ಮೊಕದ್ದಮೆಗಳಿಂದ ಮುಕ್ತರಾಗುತ್ತಾರೆ ಎಂದು ಹೇಳಿರುವುದಾಗಿ ಎಬಿಸಿ ನ್ಯೂಸ್ ವರದಿ ಮಾಡಿದೆ. ಮತ್ತೊಮ್ಮೆ ಅಧ್ಯಕ್ಷರಾಗಿ ಆಯ್ಕೆಯಾದರೆ ಎರಡು ಸೆಕೆಂಡುಗಳಲ್ಲಿ ವಿಶೇಷ ಸಲಹೆಗಾರ ಜಾಕ್ ಸ್ಮಿತ್ ಅವರನ್ನು ವಜಾ ಮಾಡುವುದಾಗಿ ಟ್ರಂಪ್ ಪ್ರತಿಜ್ಞೆ ಮಾಡಿದ್ದಾರೆ. ಟ್ರಂಪ್ ವಿರುದ್ಧ ಎರಡು ಫೆಡರಲ್ ಪ್ರಕರಣಗಳನ್ನು ದಾಖಲಿಸಿದ ವಕೀಲ ಸ್ಮಿತ್.
ಮತ್ತಷ್ಟು ಓದಿ: ಇಡೀ ಜಗತ್ತೇ ನಿಮ್ಮನ್ನು ಪ್ರೀತಿಸುತ್ತೆ, ಪ್ರಧಾನಿ ಮೋದಿಯನ್ನು ಹೊಗಳಿದ ಟ್ರಂಪ್
ಅಷ್ಟೇ ಅಲ್ಲ, ತನ್ನ ಪ್ರಕರಣವನ್ನು ನಿಭಾಯಿಸುವ ನ್ಯಾಯಮೂರ್ತಿಗಳು ಮತ್ತು ಪ್ರಾಸಿಕ್ಯೂಟರ್‌ಗಳಿಗೆ ತಕ್ಕ ಪಾಠ ಕಲಿಸುವುದಾಗಿಯೂ ಹೇಳಿಕೊಂಡಿದ್ದರು. 2016ರಲ್ಲಿ ನೀಲಿ ಚಿತ್ರ ತಾರೆ ಸ್ಟಾರ್ಮಿ ಡೇನಿಯಲ್ಸ್ ಅವರಿಗೆ ತಮ್ಮ ಕಂಪನಿಯಿಂದ ಹಣ ವರ್ಗಾಯಿಸಿದ್ದು, 2020ರ ಚುನಾವಣೆಯ ಫಲಿತಾಂಶವನ್ನು ಬುಡಮೇಲು ಮಾಡಲು ಯತ್ನಿಸಿದ ಆರೋಪ ಸೇರಿದಂತೆ ಹಲವು ಪ್ರಕರಣಗಳು ಡೊನಾಲ್ಡ್ ಟ್ರಂಪ್ ವಿರುದ್ಧ ದಾಖಲಾಗಿವೆ.
2016ರ ಅಧ್ಯಕ್ಷೀಯ ಚುನಾವಣೆ ವೇಳೆ ತಮ್ಮ ವಿರುದ್ಧ ಹೇಳಿಕೆ ನೀಡದಂತೆ ನೀಲಿಚಿತ್ರಗಳ ನಟಿಗೆ ಹಣ ನೀಡಿದ್ದ ಆರೋಪವನ್ನು ಟ್ರಂಪ್ ಎದುರಿಸುತ್ತಿದ್ದಾರೆ. ಟ್ರಂಪ್ ಅವರು ಕ್ರಿಮಿನಲ್ ಆರೋಪಗಳಿಗೆ ಗುರಿಯಾಗಿರುವ ಅಮೆರಿಕದ ಮೊದಲ ಮಾಜಿ ಅಧ್ಯಕ್ಷ. ಅವರು ನಾಲ್ಕು ಪ್ರಕರಣಗಳಲ್ಲಿ ವಿಚಾರಣೆ ಎದುರಿಸಿದ್ದಾರೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:41 pm, Thu, 7 November 24