ಇರಾನ್ – ಇಸ್ರೇಲ್ ಯುದ್ಧದಿಂದ ಪಾಕಿಸ್ತಾನಕ್ಕೆ ಹೆಚ್ಚಾದ ಟೆನ್ಶನ್! ಕಾರಣ ಇಲ್ಲಿದೆ

ಪರಮಾಣು ಮತ್ತು ಮಿಲಿಟರಿ ತಾಣಗಳ ಮೇಲೆ ಇಸ್ರೇಲ್ ನಡೆಸಿದ ದಾಳಿಗೆ ಪ್ರತೀಕಾರವಾಗಿ ಇರಾನ್ ಕೂಡ ಪ್ರತಿ ದಾಳಿ ನಡೆಸಿದೆ. ಇದರೊಂದಿಗೆ ಉಭಯ ದೇಶಗಳ ನಡುವೆ ಉದ್ವಿಗ್ನತೆ ಹೆಚ್ಚಾಗಿದೆ. ಇರಾನ್ ಸೇನೆಯು ಇಸ್ರೇಲ್ ವಿರುದ್ಧದ ತನ್ನ ಕಾರ್ಯಾಚರಣೆಯನ್ನು ತೀವ್ರತರದ ಶಿಕ್ಷೆಯ ಕ್ರಮ ಎಂದು ಹೇಳಿಕೊಂಡಿದೆ. ಆದರೆ, ಈ ಎರಡು ದೇಶಗಳ ನಡುವಣ ಉದ್ವಿಗ್ನತೆ ಪಾಕಿಸ್ತಾನದ ಆತಂಕ ಹೆಚ್ಚಿಸಿದೆಯಂತೆ! ಇದಕ್ಕೆ ಕಾರಣವೇನು? ಇಲ್ಲಿದೆ ವಿವರ.

ಇರಾನ್ - ಇಸ್ರೇಲ್ ಯುದ್ಧದಿಂದ ಪಾಕಿಸ್ತಾನಕ್ಕೆ ಹೆಚ್ಚಾದ ಟೆನ್ಶನ್! ಕಾರಣ ಇಲ್ಲಿದೆ
ಇರಾನ್ - ಇಸ್ರೇಲ್ ಯುದ್ಧದಿಂದ ಪಾಕಿಸ್ತಾನಕ್ಕೆ ಹೆಚ್ಚಾದ ಟೆನ್ಶನ್!

Updated on: Jun 14, 2025 | 8:57 AM

ನವದೆಹಲಿ, ಜೂನ್​​ 14: ಇರಾನ್​​ನ ಪರಮಾಣು ನೆಲೆಗಳು ಮತ್ತು ಸೇನಾ ತಾಣಗಳನ್ನು ಗುರಿಯಾಗಿಸಿ ಶುಕ್ರವಾರ ಬೆಳಗ್ಗೆ ಇಸ್ರೇಲ್ (Israel Air Strike) ನಡೆಸಿದ್ದ ದಾಳಿಗೆ ಪ್ರತೀಕಾರವನ್ನು ಆರಂಭಿಸಲಾಗಿದೆ. ಇದರೊಂದಿಗೆ, ಇರಾನ್ (Iran) ಹಾಗೂ ಇಸ್ರೇಲ್ ಮಧ್ಯೆ ಯುದ್ಧದ ವಾತಾವರಣ ಸೃಷ್ಟಿಯಾಗಿದೆ. ಇಸ್ರೇಲ್ ದಾಳಿಗೆ ಸೇಡು ತೀರಿಸಿಕೊಳ್ಳುವುದಾಗಿ ಇರಾನ್ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಶುಕ್ರವಾರ ಪ್ರತಿಜ್ಞೆ ಮಾಡಿದ್ದಾರೆ. ಇಸ್ರೇಲ್ ನಮ್ಮ ಮೇಲೆ ಮಾಡಿದ ದಾಳಿಯೊಂದಿಗೆ ಎಲ್ಲವೂ ಮುಗಿದಿದೆ ಎಂದು ಭಾವಿಸಬೇಡಿ. ಇಲ್ಲ, ಈ ಅಪರಾಧದ ನಂತರ ನಾವು ಅವರನ್ನು ಸುರಕ್ಷಿತವಾಗಿರಲು ಬಿಡುವುದಿಲ್ಲ ಎಂದು ಅವರು ಹೇಳಿದ್ದಾರೆ. ಈ ಹೋರಾಟ ಇರಾನ್ ಮತ್ತು ಇಸ್ರೇಲ್ ನಡುವೆ ನಡೆಯುತ್ತಿದ್ದರೂ, ಆತಂಕ ಹೆಚ್ಚಾಗಿದ್ದು ಪಾಕಿಸ್ತಾನದ ಪ್ರಧಾನಿ ಶಹಬಾಜ್ ಷರೀಫ್​​ಗೆ!

ಇಸ್ರೇಲ್ ದಾಳಿಯ ಬೆನ್ನಲ್ಲೇ ಪಾಕಿಸ್ತಾನ ಪ್ರಧಾನಿ ಶಹಬಾಜ್ ಷರೀಫ್ ಕಳವಳ ವ್ಯಕ್ತಪಡಿಸಿದ್ದರು. ಜಾಗತಿಕ ಶಾಂತಿಗೆ ಅಪಾಯವನ್ನುಂಟುಮಾಡುವ ಇಂಥ ಚಟುವಟಿಕೆಯನ್ನು ನಿಲ್ಲಿಸಲು ತಕ್ಷಣ ಕ್ರಮಗಳನ್ನು ತೆಗೆದುಕೊಳ್ಳುವಂತೆ ಅಂತರರಾಷ್ಟ್ರೀಯ ಸಮುದಾಯ ಮತ್ತು ವಿಶ್ವಸಂಸ್ಥೆಗೆ ಮನವಿ ಮಾಡುತ್ತೇವೆ ಎಂದು ಹೇಳಿದ್ದರು. ಶಹಬಾಜ್ ಅವರ ಈ ಆತಂಕಕ್ಕೆ ಮೂರು ಪ್ರಮುಖ ಕಾರಣಗಳಿವೆ.

ಹೆಚ್ಚಿನ ಸಂಖ್ಯೆಯಲ್ಲಿ ಇರಾನ್​​ನಲ್ಲಿರುವ ಪಾಕಿಸ್ತಾನೀಯರು

ಹೆಚ್ಚು ಸಂಖ್ಯೆಯಲ್ಲಿ ಪಾಕಿಸ್ತಾನೀಯರು ಇರಾನ್​​ನಲ್ಲಿದ್ದಾರೆ. ಹೀಗಾಗಿ ಇಸ್ರೇಲ್ ದಾಳಿಯಿಂದ ಬಚಾವಾಗಲು ಅವರನ್ನೆಲ್ಲ ಸುರಕ್ಷಿತವಾಗಿ ಕರೆತರಲು ಎಲ್ಲ ರೀತಿಯ ವ್ಯವಸ್ಥೆ ಮಾಡುವಂತೆ ಅಧಿಕಾರಿಗಳಿಗೆ ಷರೀಫ್ ನಿರ್ದೇಶನ ನೀಡಿದ್ದಾರೆ. ಪಾಕಿಸ್ತಾನದ ಉಪ ಪ್ರಧಾನಿ ಮತ್ತು ವಿದೇಶಾಂಗ ಸಚಿವ ಇಶಾಕ್ ದಾರ್ ವಿದೇಶಾಂಗ ಸಚಿವಾಲಯದಲ್ಲಿ 24/7 ಬಿಕ್ಕಟ್ಟು ನಿರ್ವಹಣಾ ಘಟಕ (CMU) ಸ್ಥಾಪನೆ ಮಾಡಿರುವುದಾಗಿ ಘೋಷಿಸಿದ್ದಾರೆ. ಸಹಾಯವಾಣಿಯನ್ನೂ ತೆರೆಯಲಾಗಿದೆ.

ಇದನ್ನೂ ಓದಿ
ಇಸ್ರೇಲ್​ ದಾಳಿ; ಇರಾನ್​ನ 78 ಜನ ಸಾವು, 329 ಮಂದಿಗೆ ಗಾಯ
ಇರಾನ್‌ ಮೇಲಿನ ಕ್ಷಿಪಣಿ ದಾಳಿ, ರಹಸ್ಯ ಕಾರ್ಯಾಚರಣೆಯ ವಿಡಿಯೋ ರಿಲೀಸ್
ಇರಾನ್ ಮೇಲೆ ದಾಳಿ; ಪ್ರಧಾನಿ ಮೋದಿಗೆ ಕರೆ ಮಾಡಿದ ಇಸ್ರೇಲ್ ಪಿಎಂ ನೆತನ್ಯಾಹು
ಇಸ್ರೇಲ್ ಹಠಾತ್ ದಾಳಿಗೆ ಬೆಚ್ಚಿಬಿದ್ದ ಇರಾನ್: ಪರಮಾಣು ನೆಲೆಗಳೇ ಗುರಿ

ಪಾಕಿಸ್ತಾನದ ವಿದೇಶಾಂಗ ಸಚಿವಾಲಯದ ಮೂಲಗಳ ಪ್ರಕಾರ, ಪ್ರಸ್ತುತ ಇರಾನ್​​ನಲ್ಲಿ ಸುಮಾರು 5,000 ಪಾಕಿಸ್ತಾನಿ ಯಾತ್ರಿಕರಿದ್ದಾರೆ.

ಇರಾನ್​ನಲ್ಲಿ ಮಾಡಿರುವ ಹೂಡಿಕೆಗಳಿಗೆ ಸಂಕಷ್ಟ

ಪಾಕಿಸ್ತಾನ ಮತ್ತು ಇರಾನ್ ದ್ವಿಪಕ್ಷೀಯ ವ್ಯಾಪಾರವನ್ನು 10 ಬಿಲಿಯನ್ ಡಾಲರ್​​ಗೆ ಕೊಂಡೊಯ್ಯುವ ಗುರಿಯನ್ನು ಹೊಂದಿರುವ ಒಪ್ಪಂದಕ್ಕೆ (MoU) ಸಹಿ ಹಾಕಿವೆ. ವ್ಯಾಪಾರ ಮತ್ತು ಹೂಡಿಕೆಯನ್ನು ಹೆಚ್ಚಿಸಲು ಕಳೆದ ಸೆಪ್ಟೆಂಬರ್​​ನಲ್ಲಿ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಅಂತರರಾಷ್ಟ್ರೀಯ ಹಣಕಾಸು ನಿಧಿಯ (IMF) 7 ಬಿಲಿಯನ್ ಡಾಲರ್ ನೆರವಿನ ಯೋಜನೆ ಅಡಿಯಲ್ಲಿ ಪಾಕಿಸ್ತಾನ ಆರ್ಥಿಕ ಸುಧಾರಣೆಗೆ ಸಾಗುತ್ತಿರುವ ಸಮಯದಲ್ಲಿಯೇ ಉದ್ವಿಗ್ನತೆ ಹೆಚ್ಚಾಗಿರುವುದು ಗಮನಾರ್ಹ.

ಇರಾನ್ ಸಂಘರ್ಷ: ಪಾಕಿಸ್ತಾನಕ್ಕೆ ನುಂಗಲಾರದ ತುತ್ತು

ಪಾಕಿಸ್ತಾನಕ್ಕೆ ಬಹಳ ಹತ್ತಿರದಲ್ಲಿದೆ ಇರಾನ್. ಈಗ ಇರಾನ್​​ಗೆ ಪಾಕಿಸ್ತಾನ ಬಹಿರಂಗ ಬೆಂಬಲ ಘೋಷಿಸದಿದ್ದರೆ, ಮುಂಬರುವ ದಿನಗಳಲ್ಲಿ ಸಮಸ್ಯೆಗಳು ಹೆಚ್ಚಾಗಬಹುದು. ಮತ್ತೊಂದೆಡೆ, ಬಹಿರಂಗವಾಗಿ ಇರಾನ್ ಜೊತೆ ನಿಂತರೆ, ಅಮೆರಿಕವನ್ನು ಎದುರುಹಾಕಿಕೊಳ್ಳಬೇಕಾಗುತ್ತದೆ. ಹೀಗಾಗಿ ಇದು ಪಾಕಿಸ್ತಾನಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:04 am, Sat, 14 June 25