ತಂಬಾಕು ಅಥವಾ ಸಿಗರೇಟ್ ಸೇವನೆ ಕ್ಯಾನ್ಸರ್ಗೆ ಕಾರಣವಾಗಿದೆ. ವಿಶ್ವ ಆರೋಗ್ಯ ಸಂಸ್ಥೆ(WHO) ಪ್ರಕಾರ, ತಂಬಾಕು ಮತ್ತು ಧೂಮಪಾನ ಸೇವನೆ ವಿಶ್ವದಾದ್ಯಂತ ಒಟ್ಟು 8 ಲಕ್ಷಕ್ಕೂ ಹೆಚ್ಚಿನ ಜನರನ್ನು ಕೊಲ್ಲುತ್ತಿದೆ. ಆದ್ದರಿಂದ ಈ ಕುರಿತು ಜನರಿಗೆ ಜಾಗೃತಿ ಮೂಡಿಸಲು ಪ್ರತೀ ವರ್ಷ ಮೇ 31ರಂದು ವಿಶ್ವ ತಂಬಾಕು ರಹಿತ ದಿನವನ್ನು ಆಚರಿಸಲಾಗುತ್ತದೆ.
ಪ್ರಸ್ತುತ ಸಮಯದಲ್ಲಿ ಕೊರೊನಾ ಸೋಂಕು ದೇಶದೆಲ್ಲೆಡೆ ವ್ಯಾಪಿಸುತ್ತಿದೆ. ಅದೆಷ್ಟೋ ಜನ ಸೋಂಕಿನಿಂದ ಬಲಿಯಾಗಿದ್ದಾರೆ. ಇನ್ನೆಷ್ಟೋ ಜನ ಸೋಂಕಿನ ತೀವ್ರತೆಯಿಂದ ಬಳಲುತ್ತಿದ್ದಾರೆ. ಈ ಸಂದರ್ಭದಲ್ಲಿ ಧೂಮಪಾನ ಮತ್ತು ತಂಬಾಕು ಸೇವನೆ ಜನರಿಗೆ ಹಾನಿ ಮಾಡುತ್ತಿದೆಯೇ ಎಂಬ ಚರ್ಚೆ ನಡೆಯುತ್ತಿದೆ. ಧೂಮಪಾನ ಮಾಡದಿರುವವರಿಗೆ ಹೋಲಿಸಿದರೆ, ಧೂಮಪಾನ ಮಾಡುವವರ ಮೇಲೆ ಕೊರೊನಾ ಸೋಂಕಿಗೆ ತುತ್ತಾಗುವ ಅಪಾಯ ಹೆಚ್ಚು ಎಂದು ಅನೇಕ ತಜ್ಞರು ಎಚ್ಚರಿಕೆ ನೀಡಿದ್ದಾರೆ.
ಧೂಮಪಾನ ಮತ್ತು ಕೊರೊನಾ ಸೋಂಕಿನ ನಡುವಿನ ಸಂಬಂಧ
ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ತಂಬಾಕು ಮತ್ತು ಧೂಮಪಾನ ಮಾಡುವುದರಿಂದ ಕೊರೊನಾ ಸೋಂಕು ಹರಡುವಿಕೆ ಹೆಚ್ಚು. ಏಕೆಂದರೆ ಧೂಮಪಾನ ಮಾಡುವಾಗ ತುಟಿಗಳು ಮತ್ತು ಬೆರಳುಗಳ ಮೂಲಕ ಕ್ರಿಯೆ ನಡೆಯುವುದರಿಂದ ವೈರಸ್ ಹರಡುವ ಸಾಧ್ಯತೆ ಹೆಚ್ಚಾಗಿರುತ್ತದೆ.
ಇದೊಂದೇ ಅಲ್ಲದೇ, ಧೂಮಪಾನ ಮತ್ತು ತಂಬಾಕು ಸೇವನೆ ಶ್ವಾಸಕೋಶ ಸಂಬಂಧಿ ಕಾಯಿಲೆಗಳಿಗೆ ಕಾರಣವಾಗುತ್ತದೆ. ಕೊವಿಡ್ 19 ಕೂಡಾ ಉಸಿರಾಟಕ್ಕೆ ಸಂಬಂಧಿಸಿದ ಕಾಯಿಲೆ ಆದ್ದರಿಂದ ಸೋಂಕಿನ ವಿರುದ್ಧ ಹೋರಾಡಲು ಕಷ್ಟವಾಗಬಹುದು. ಧೂಮಪಾನಿಗಳ ಶ್ವಾಸಕೋಶ ದುರ್ಬಲಗೊಂಡಿರುವುದರಿಂದ ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರುವ ಸಾಧ್ಯತೆ ಹೆಚ್ಚಿದೆ.
ಧೂಮಪಾನ ಹಾಗೂ ತಂಬಾಕು ಸೇವನೆಯನ್ನು ತ್ಯಜಿಸುವಂತೆ ವಿಶ್ವ ಆರೋಗ್ಯ ಸಂಸ್ಥೆ ಶಿಪಾರಸು ಮಾಡುತ್ತದೆ. ಏಕೆಂದರೆ ಆರೋಗ್ಯಕ್ಕೆ ಹಾನಿ ಮಾಡುವ ಇಂತಹ ಕ್ರಿಯೆಗಳನ್ನು ನಿಲ್ಲಿಸುವುದರಿಂದ ಶ್ವಾಸಕೋಶ ಸದೃಢಗೊಳ್ಳುತ್ತದೆ. ಜತೆಗೆ ಹೃದಯವು ಉತ್ತಮವಾಗಿ ಕಾರ್ಯ ನಿರ್ವಹಿಸಲು ಸಹಾಯವಾಗುತ್ತದೆ. ಹೃದಯ ಬಡಿತ ಸರಿಯಾಗಿ ಕೆಲಸ ನಿರ್ವಹಿಸುತ್ತದೆ. ಆರೋಗ್ಯದ ಸುಧಾರಣೆಯಿಂದಾಗಿ ಕೊರೊನಾ ಸೋಂಕಿನ ವಿರುದ್ಧ ಹೋರಾಡಲು ಸಹಾಯಕಾರಿ ಆಗಿದೆ.
ಶ್ವಾಸಕೋಶ ಕ್ಯಾನ್ಸರ್, ಕ್ಷಯರೋಗ ಸೇರಿದಂತೆ ಅನೇಕ ರೋಗಗಳಿಗೆ ಕಾರಣ ಧೂಮಪಾನ ಮತ್ತು ತಂಬಾಕು ಸೇವನೆ. ಕ್ಷಯ ರೋಗಕ್ಕೆ ಸಂಬಂಧಿಸಿದಂತೆ ಶೇ 20ರಷ್ಟು ಪ್ರಕರಣಗಳು ಧೂಮಪಾನದ ಪರಿಣಾಮದಿಂದ ಸಂಭವಿಸಿದೆ.
ಇದನ್ನೂ ಓದಿ:
World No Tobacco Day 2021: ಸಿಗರೇಟ್ ಸೇವನೆ ಬಿಡಬೇಕು ಎಂದು ಯೋಚಿಸುತ್ತಿದ್ದೀರಾ? ಈ ಮಾರ್ಗಗಳನ್ನು ಅನುಸರಿಸಿ
World No Tobacco Day 2021: ವಿಶ್ವ ತಂಬಾಕು ರಹಿತ ದಿನದ ಇತಿಹಾಸ, ಮಹತ್ವ ಹಾಗೂ ಈ ವರ್ಷದ ಸಂದೇಶವೇನು?