World No Tobacco Day 2021: ಸಿಗರೇಟ್ ಸೇವನೆ ಬಿಡಬೇಕು ಎಂದು ಯೋಚಿಸುತ್ತಿದ್ದೀರಾ? ಈ ಮಾರ್ಗಗಳನ್ನು ಅನುಸರಿಸಿ
ಸಿಗರೇಟ್ ಬಿಡಬೇಕು ಎಂದು ಪ್ರಯತ್ನಿಸುತ್ತಿರುವವರ ಸಾಲಿನಲ್ಲಿ ನೀವಿದ್ದೀರಾದರೆ ಈ ಕೆಳಗಿನ ಅಂಶಗಳನ್ನು ಗಮನಿಸಿ. ಅದನ್ನು ಪಾಲಿಸಿ. ಧೂಮಪಾನ ತ್ಯಜಿಸಿ. ಉತ್ತಮ ಅಭ್ಯಾಸಗಳನ್ನು ರೂಢಿಸಿಕೊಳ್ಳಿ.
ಸಿಗರೇಟ್ ಅಥವಾ ಬೀಡಿ ಸೇದುವುದು ಆರೋಗ್ಯ ಸಮಸ್ಯೆಗಳನ್ನು ತಂದೊಡ್ಡುತ್ತದೆ. ಮನೆಯಲ್ಲಿ ಶಾಂತಿ, ಕೌಟುಂಬಿಕ ನೆಮ್ಮದಿಯನ್ನು ಹಾಳು ಮಾಡುತ್ತದೆ. ಅತಿಯಾದ ಸಿಗರೇಟ್ ಸೇವನೆ ಕೆಲವೊಮ್ಮೆ ನಮಗೇ ಸಾಕು ಅನಿಸಿಬಿಟ್ಟಿದೆ. ಸಿಗರೇಟ್ ಬಿಟ್ಟು ಬಿಡಬೇಕು ಅನಿಸಿದೆ. ಇಂಥಾ ಮನೋಭಾವ ನಿಮ್ಮದಾಗಿದ್ದರೆ ಅಥವಾ ಸಿಗರೇಟ್ ಬಿಡಬೇಕು ಎಂದು ಪ್ರಯತ್ನಿಸುತ್ತಿರುವವರ ಸಾಲಿನಲ್ಲಿ ನೀವಿದ್ದೀರಾದರೆ ಈ ಕೆಳಗಿನ ಅಂಶಗಳನ್ನು ಗಮನಿಸಿ. ಅದನ್ನು ಪಾಲಿಸಿ. ಧೂಮಪಾನ ತ್ಯಜಿಸಿ. ಉತ್ತಮ ಅಭ್ಯಾಸಗಳನ್ನು ರೂಢಿಸಿಕೊಳ್ಳಿ.
- ಸಿಗರೇಟ್ ಸೇದಬೇಕು ಎಂದು ಅನಿಸಿದಾಗಲೆಲ್ಲಾ ಅದರಿಂದಾಗುವ ಎಲ್ಲಾ ಆರೋಗ್ಯ ಸಮಸ್ಯೆಗಳನ್ನು ನೆನಪಿಸಿಕೊಳ್ಳಿ. ಸಿಗರೇಟ್ ಸೇದುವುದನ್ನು ತ್ಯಜಿಸುವುದರಿಂದ ಆಗುವ ಲಾಭಗಳನ್ನು ಪರಿಗಣಿಸಿ. ಸಿಗರೇಟ್ ಸೇದುವ ಅಭ್ಯಾಸ ಬಿಡುವುದರಿಂದ ವಾಸನೆ ಹಾಗೂ ರುಚಿ ಗ್ರಹಿಕೆ ಉತ್ತಮವಾಗುತ್ತದೆ. ನಿದ್ರೆಯ ಗುಣಮಟ್ಟ ಅಧಿಕವಾಗುತ್ತದೆ. ಹಾಗೂ ಸಿಗರೇಟ್ ತ್ಯಜಿಸಿದರೆ ಮುಂದಿನ ಒಂದು ವರ್ಷದಷ್ಟು ಕಾಲವೂ ಧೂಮಪಾನ ಮಾಡದೇ ಉಳಿದರೆ ಹೃದಯಾಘಾತದ ಸಮಸ್ಯೆಗಳು ಕಡಿಮೆ ಆಗುತ್ತದೆ. ಹತ್ತು ಹದಿನೈದು ವರ್ಷಗಳಲ್ಲಿ ಆಗಬಹುದಾದ ಕ್ಯಾನ್ಸರ್ ಅಥವಾ ಸ್ಟ್ರೋಕ್ನಂಥ ಆರೋಗ್ಯದ ಏರುಪೇರು ಕಡಿಮೆ ಆಗುತ್ತದೆ.
- ಸಿಗರೇಟ್ ತ್ಯಜಿಸುವುದರಿಂದ ಕೌಟುಂಬಿಕ ಜೀವನದಲ್ಲಿ ಕೂಡ ಹಲವು ಬದಲಾವಣೆಗಳು ಆರಂಭವಾಗುತ್ತದೆ. ಸಂಪೂರ್ಣ ಕುಟುಂಬದಲ್ಲಿ ಆರೋಗ್ಯಕರ ವಾತಾವರಣ ನಿರ್ಮಾಣವಾಗುತ್ತದೆ. ಹಣ ಉಳಿತಾಯ ಪ್ರಮಾಣ ಹೆಚ್ಚಾಗುತ್ತದೆ. ಹಾಗೂ ಕುಟುಂಬದಲ್ಲಿ ಇನ್ಯಾರಾದರೂ ಸಿಗರೇಟ್ ಸೇವನೆ ಮಾಡುತ್ತಿದ್ದರೆ ಅವರಿಗೆ ಧೂಮಪಾನ ಅಭ್ಯಾಸ ನಿಲ್ಲಿಸಲು ಪ್ರೇರಣೆಯಾಗುತ್ತದೆ.
- ಸಿಗರೇಟ್ ಸೇದುವ ಅಭ್ಯಾಸ ಇರುವವರು ಹೀಗೂ ಯೋಚಿಸಬೇಕು. ಸಿಗರೇಟ್ ಸೇವನೆ ಮಾಡಿದರೆ ಅದರ ಪ್ರಭಾವ ಕೇವಲ ಕೆಲವೇ ನಿಮಿಷಗಳು ಇರುತ್ತವೆ. ಆದರೆ, ಆರೋಗ್ಯದ ಮೇಲೆ ಉಂಟುಮಾಡುವ ದುಷ್ಪರಿಣಾಮ ಹಲವು ಕಾಲ ಕಾಡಬಲ್ಲದು. ಸಿಗರೇಟ್ ತ್ಯಜಿಸಲು ಮನಸ್ಸು ಮಾಡುವುದಾದರೆ, ಬಾಯಿಯಲ್ಲಿ ಲವಂಗ, ಏಲಕ್ಕಿ ಅಥವಾ ಚೀವಿಂಗ್ ಗಮ್ಗಳನ್ನು ಇಟ್ಟುಕೊಳ್ಳಬಹುದು. ಅದರಿಂದ ಉಪಯೋಗ ಆಗುತ್ತದೆ.
- ಧೂಮಪಾನ ಅಭ್ಯಾಸ ತ್ಯಜಿಸಲು ಪ್ರೇರಣೆ ನೀಡುವಂತಹ ಚಟುವಟಿಕೆಗಳನ್ನು ನಡೆಸಬೇಕು. ಅಂದರೆ, ಪ್ರಾಣಾಯಾಮ ಮಾಡುವುದು, ಉಸಿರಾಟದ ವ್ಯಾಯಾಮಗಳನ್ನು ಮಾಡುವುದು, ದೈಹಿಕ ವ್ಯಾಯಾಮ ಅಥವಾ ಧ್ಯಾನ ಮಾಡುವುದು ಇತ್ಯಾದಿಗಳಿಂದ ಸಿಗರೇಟ್ ಅಭ್ಯಾಸ ದೂರವಾಗಬಹುದು.
- ಒಂದುವೇಳೆ ಸಿಗರೇಟ್ ಅಭ್ಯಾಸ ಅತಿಯಾಗಿದ್ದರೆ, ಅಂದರೆ, ಬೆಳಗ್ಗೆ ಎದ್ದ ತಕ್ಷಣ ಸಿಗರೇಟ್ ಸೇದಲೇಬೇಕು ಎಂಬಷ್ಟು ಅಭ್ಯಾಸ ಅಂಟಿಕೊಂಡಿದ್ದರೆ. ಅಥವಾ ಒಂದು ದಿನಕ್ಕೆ 20ಕ್ಕಿಂತ ಹೆಚ್ಚಿನ ಸಿಗರೇಟ್ಗಳನ್ನು ನೀವು ಸೇವಿಸುವಿರಾದರೆ, ಖಂಡಿತವಾಗಿ ವೈದ್ಯರನ್ನು ಭೇಟಿಯಾಗಿ ಸಲಹೆ ಪಡೆಯುವುದು ಉತ್ತಮ. ಸಿಗರೇಟ್ ತ್ಯಜಿಸಲು ಸೂಕ್ತ ವೈದ್ಯಕೀಯ ಪರಿಹಾರ ಕಂಡುಕೊಳ್ಳಬೇಕಾಗಬಹುದು.
- ಸಿಗರೇಟ್ ತ್ಯಜಿಸಬೇಕು ಅಂದುಕೊಂಡಿರುವವರು ಒಂದು ಡೈರಿಯನ್ನು ಇಟ್ಟುಕೊಳ್ಳಬಹುದು. ನಿಮಗೆ ಸಿಗರೇಟ್ ಸೇದುವಂತೆ ಯಾವುದು ಪ್ರೋತ್ಸಾಹ ನೀಡುತ್ತದೆ ಎಂದು ಅಲ್ಲಿ ಬರೆದುಕೊಳ್ಳಿ. ಉದಾಹರಣೆಗೆ ಕೆಲಸದ ಒತ್ತಡ, ಕೌಟುಂಬಿಕ ಅಥವಾ ಜೀವನದ ಯಾವುದೇ ಸಮಸ್ಯೆಗಳು, ವೈಯಕ್ತಿಕ ಕಾರಣಗಳು ಇತ್ಯಾದಿ. ಇಂತವುಗಳನ್ನು ಗಮನಿಸಿ, ನೋಟ್ ಮಾಡಿಕೊಂಡಿರಿ. ಸಿಗರೇಟ್ ಬಿಡಲು ಸಹಾಯವಾಗುವಂತೆ ಮನಶ್ಶಾಸ್ತ್ರಜ್ಞರ ಅಭಿಪ್ರಾಯ ನೀವು ಪಡೆದುಕೊಳ್ಳಬಹುದು.
- ಹೀಗೆ ಉತ್ತಮ ಅಭ್ಯಾಸಗಳಿಂದ ಸಿಗರೇಟ್ ಸೇದುವುದನ್ನು ನೀವು ಬಿಟ್ಟಮೇಲೆ, ನಂತರದ ಸ್ವಲ್ಪಕಾಲ ಸಿಗರೇಟ್ ಸೇದಬೇಕು ಎಂದು ಮನೋಭಾವ ಉಂಟುಮಾಡುವ ಸ್ಥಳಗಳಿಗೆ ಹೋಗಬೇಡಿ. ಟೀ ಅಂಗಡಿಗಳು, ಸಿಗರೇಟ್ ಸೇದುವ ಗೆಳೆಯರ ಬಳಗ ಇತ್ಯಾದಿ ಸ್ಥಳಗಳಿಗೆ ಹೋಗುವುದನ್ನು ಕಡಿಮೆ ಮಾಡಿ. ಹೀಗೆ ಮಾಡುವುದರಿಂದ ಸಿಗರೇಟ್, ಬೀಡಿ ಇತ್ಯಾದಿ ದುರಾಭ್ಯಾಸಗಳನ್ನು ತ್ಯಜಿಸಲು ನೀವು ಯಶಸ್ವಿಯಾಗುವಿರಿ.
ಇದನ್ನೂ ಓದಿ: Health Tips: ಪ್ರತಿನಿತ್ಯ ವಾಯುವಿಹಾರ ಅಭ್ಯಾಸ ರೂಢಿಯಲ್ಲಿರಲಿ; ನೆಮ್ಮದಿ ಹಾಳು ಮಾಡುವ ಕಾಯಿಲೆಗಳಿಂದ ದೂರವಿರಿ
ಖುಷಿ ಯಾರಿಗೆ ಬೇಡ? ಸ್ಯಾಂಡಲ್ವುಡ್ಗೆ ನಾಯಕಿಯಾಗಿ ಎಂಟ್ರಿಕೊಟ್ಟ ಸಿಗರೇಟ್ ಜಾಗೃತಿ ಜಾಹೀರಾತಿನ ಬಾಲನಟಿ
Published On - 7:00 pm, Sun, 30 May 21