Kia Carens: ಮಹತ್ವದ ಬದಲಾವಣೆಗಳೊಂದಿಗೆ 2023ರ ಕಿಯಾ ಕಾರೆನ್ಸ್ ಬಿಡುಗಡೆ

|

Updated on: Mar 16, 2023 | 7:06 PM

ಕಿಯಾ ಇಂಡಿಯಾ ಕಂಪನಿಯು 2023ರ ಕಾರೆನ್ಸ್ ಎಂಯುವಿ ಆವೃತ್ತಿಯನ್ನು ಬಿಡುಗಡೆ ಮಾಡಿದ್ದು, ಹೊಸ ಕಾರು ಮಾದರಿಯ ನವೀಕೃತ ಎಂಜಿನ್ ನೊಂದಿಗೆ ಹಲವಾರು ಬದಲಾವಣೆಗಳನ್ನ ಪಡೆದುಕೊಂಡಿದೆ.

ಮಧ್ಯಮ ಕ್ರಮಾಂಕದ ಪ್ರೀಮಿಯಂ ಕಾರುಗಳ ಮಾರಾಟದಲ್ಲಿ ಮುಂಚೂಣಿಯಲ್ಲಿರುವ ಕಿಯಾ ಇಂಡಿಯಾ(Kia India) ಕಂಪನಿಯು 2023ರ ಕಾರೆನ್ಸ್(Carens) ಎಂಯುವಿ ಆವೃತ್ತಿಯನ್ನ ಬಿಡುಗಡೆ ಮಾಡಿದ್ದು, ಹೊಸ ಕಾರು ಮಾದರಿಯು ಮಹತ್ವದ ಬದಲಾವಣೆ ಪಡೆದುಕೊಂಡಿದೆ. ಹೊಸ ಕಾರಿನಲ್ಲಿ ಕಿಯಾ ಕಂಪನಿಯು ಈ ಬಾರಿ ನವೀಕೃತ ಟರ್ಬೊ ಪೆಟ್ರೋಲ್ ಎಂಜಿನ್ ಪರಿಚಯಿಸಿದ್ದು, ಏಪ್ರಿಲ್ 1ರಿಂದ ಜಾರಿಗೆ ಬರಲಿರುವ ಆರ್ ಡಿಇ ಮಾನದಂಡ ಪೂರೈಸಿದೆ.

ಬೆಲೆ ಮತ್ತು ವೆರಿಯೆಂಟ್

ಹೊಸ ಕಾರೆನ್ಸ್ ಕಾರು ಮಾದರಿಯು ಈ ಹಿಂದಿನಂತೆಯೇ ಪ್ರೀಮಿಯಂ, ಪ್ರೆಸ್ಟೀಜ್, ಪ್ರೆಸ್ಟೀಜ್ ಪ್ಲಸ್, ಲಗ್ಷುರಿ, ಲಗ್ಷುರಿ 6 ಸೀಟರ್ ಮತ್ತು ಲಗ್ಷುರಿ 7 ಸೀಟರ್ ವೆರಿಯೆಂಟ್ ಗಳನ್ನ ಹೊಂದಿದ್ದು, ತಾಂತ್ರಿಕ ಸೌಲಭ್ಯಗಳಿಗೆ ಅನುಗುಣವಾಗಿ ದೆಹಲಿ ಎಕ್ಸ್ ಶೋರೂಂ ಪ್ರಕಾರ ಆರಂಭಿಕವಾಗಿ ರೂ. 10.45 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 18.95 ಲಕ್ಷ ಬೆಲೆ ಹೊಂದಿದೆ. ಇದರಲ್ಲಿ ಟರ್ಬೊ ಪೆಟ್ರೋಲ್ ಮಾದರಿಯು ರೂ. 12 ಲಕ್ಷದಿಂದ ರೂ. 18.45 ಲಕ್ಷ ಬೆಲೆ ಹೊಂದಿದ್ದರೆ ಡೀಸೆಲ್ ಮಾದರಿಗಳು ರೂ. 12.65 ಲಕ್ಷದಿಂದ ರೂ. 18.95 ಲಕ್ಷ ಬೆಲೆ ಹೊಂದಿವೆ.

ಎಂಜಿನ್ ಮತ್ತು ಪರ್ಫಾಮೆನ್ಸ್

ಹೊಸ ಕಾರೆನ್ಸ್ ಕಾರಿನಲ್ಲಿ ಕಿಯಾ ಕಂಪನಿಯು ಏಪ್ರಿಲ್ 1ರಿಂದ ಕಡ್ಡಾಯವಾಗಿ ಜಾರಿಗೆ ಬರಲಿರುವ ರಿಯಲ್ ಡ್ರೈವಿಂಗ್ ಎಮಿಷನ್ ಗೆ ಎಂಜಿನ್ ಆಯ್ಕೆಯಲ್ಲಿ ಮಹತ್ವದ ಬದಲಾವಣೆ ಪರಿಚಯಿಸಿದೆ. ಹೊಸ ಕಾರಿನಲ್ಲಿ ಈ ಹಿಂದಿನ 1.4 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಸ್ಥಗಿತಗೊಳಿಸಲಾಗಿದ್ದು, ಹೊಸದಾಗಿ 1.5 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಜೋಡಣೆ ಮಾಡಲಾಗಿದೆ.

ಹೊಸ 1.5 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ 6-ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ನೊಂದಿಗೆ 7-ಸ್ಪೀಡ್ ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಆಯ್ಕೆ ಹೊಂದಿದ್ದು, ಇದು 160 ಹಾರ್ಸ್ ಪವರ್ ಮತ್ತು 253 ಎನ್ಎಂ ಟಾರ್ಕ್ ಉತ್ಪಾದನೆ ಮಾಡುತ್ತದೆ. ಇದರೊಂದಿಗೆ ಹೊಸ ಕಾರಿನಲ್ಲಿ ಈ ಹಿಂದಿನ ಸಾಮಾನ್ಯ 1.5 ಲೀಟರ್ ಪೆಟ್ರೋಲ್ ಮತ್ತು 1.5 ಲೀಟರ್ ಡೀಸೆಲ್ ಎಂಜಿನ್ ಅನ್ನು ಹೊಸ ಮಾಲಿನ್ಯ ನಿಯಮದೊಂದಿಗೆ ಬಿಡುಗಡೆ ಮಾಡಲಾಗಿದ್ದು, ಇದರಲ್ಲಿ 6-ಸ್ಪೀಡ್ ಐಎಂಟಿ ಮತ್ತು 6-ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ನೀಡಲಾಗಿದೆ.

ವಿನ್ಯಾಸ ಮತ್ತು ವೈಶಿಷ್ಟ್ಯತೆಗಳು

ಕಿಯಾ ಕಂಪನಿಯು ಹೊಸ ಕಾರೆನ್ಸ್ ಕಾರು ಮಾದರಿಯಲ್ಲಿ ನವೀಕೃತ ಎಂಜಿನ್ ಹೊರತುಪಡಿಸಿ ಈ ಹಿಂದಿನಂತೆ ವಿನ್ಯಾಸ ಭಾಷೆಯನ್ನ ಮುಂದುವರಿಸಿದ್ದು, ಹಲವಾರು ಸ್ಟ್ಯಾಂಡರ್ಡ್ ಫೀಚರ್ಸ್ ನೀಡಲಾಗಿದೆ. ಹೊಸ ಕಾರಿನಲ್ಲಿ 10.25 ಇಂಚಿನ ಇನ್ ಸ್ಟ್ರುಮೆಂಟ್ ಕ್ಲಸ್ಟರ್ ಸೇರಿದಂತೆ ವಿವಿಧ ತಾಂತ್ರಿಕ ಸೌಲಭ್ಯವನ್ನು ಬೆಸ್ ವೆರಿಯೆಂಟ್ ನಲ್ಲೂ ನೀಡಲಾಗಿದ್ದು, ಇದರೊಂದಿಗೆ ಕನೆಕ್ಟೆಡ್ ಕಾರ್ ಟೆಕ್, ಕೀ ಲೆಸ್ ಗೋ, ಕ್ರೂಸ್ ಕಂಟ್ರೂಲ್, ವೆಂಟಿಲೆಟೆಡ್ ಫ್ರಂಟ್ ಸೀಟ್, ವೈರ್ ಲೆಸ್ ಫೋನ್ ಚಾರ್ಜರ್, ರಿಯರ್ ವ್ಯೂ ಕ್ಯಾಮೆರಾ, ಆರು ಏರ್ ಬ್ಯಾಗ್, ಎಬಿಎಸ್, ಇಎಸ್ ಸಿ, ಹಿಲ್ ಸ್ಟಾರ್ಟ್, ಟೈರ್ ಪ್ರೆಷರ್ ಮಾನಿಟರಿಂಗ್ ಸಿಸ್ಟಂ ಜೋಡಿಸಲಾಗಿದೆ.

Published On - 7:06 pm, Thu, 16 March 23