- Kannada News Photo gallery Cricket photos Ruturaj Gaikwad's Vijay Hazare Century: Breaks Babar Azam's World Record
ಬಾಬರ್ ಆಝಂ ವಿಶ್ವ ದಾಖಲೆ ಮುರಿದ ರುತುರಾಜ್ ಗಾಯಕ್ವಾಡ್
Ruturaj Gaikwad Creates History in Vijay Hazare: ರುತುರಾಜ್ ಗಾಯಕ್ವಾಡ್ ವಿಜಯ್ ಹಜಾರೆ ಟ್ರೋಫಿಯಲ್ಲಿ ಗೋವಾ ವಿರುದ್ಧ ಅದ್ಭುತ ಶತಕ ಗಳಿಸಿ ಮಹಾರಾಷ್ಟ್ರವನ್ನು ಸಂಕಷ್ಟದಿಂದ ಪಾರು ಮಾಡಿದರು. ಈ ಇನ್ನಿಂಗ್ಸ್‌ನೊಂದಿಗೆ ಲಿಸ್ಟ್ A ಕ್ರಿಕೆಟ್‌ನಲ್ಲಿ 5000 ರನ್‌ಗಳನ್ನು ಪೂರೈಸಿದ ಅವರು, ಪಾಕಿಸ್ತಾನದ ಬಾಬರ್ ಅಜಮ್ ಅವರ ವಿಶ್ವ ದಾಖಲೆಯನ್ನು ಮುರಿದು ಇತಿಹಾಸ ಸೃಷ್ಟಿಸಿದರು. ಭಾರತ ತಂಡದಿಂದ ಹೊರಬಿದ್ದಿದ್ದ ರುತುರಾಜ್ ತಮ್ಮ ಸಾಮರ್ಥ್ಯವನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ.
Updated on: Jan 08, 2026 | 3:53 PM

ಭಾರತ ಏಕದಿನ ತಂಡದಿಂದ ಹೊರಬಿದ್ದಿರುವ ಪ್ರತಿಭಾವಂತ ಬ್ಯಾಟ್ಸ್‌ಮನ್ ರುತುರಾಜ್ ಗಾಯಕ್ವಾಡ್ ದೇಶಿ ಟೂರ್ನಿ ವಿಜಯ್ ಹಜಾರೆ ಟ್ರೋಫಿಯಲ್ಲಿ ಮತ್ತೊಮ್ಮೆ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ. ನಾಯಕನಾಗಿ ಮಹಾರಾಷ್ಟ್ರ ತಂಡವನ್ನು ಮುನ್ನಡೆಸುತ್ತಿರುವ ರುತುರಾಜ್, ಗೋವಾ ವಿರುದ್ಧದ ಪಂದ್ಯದಲ್ಲಿ ಅದ್ಭುತ ಶತಕ ಬಾರಿಸಿದರು.

ಈ ಪಂದ್ಯದಲ್ಲಿ ತಂಡದ ಇನ್ನಿಂಗ್ಸ್ ನಿಭಾಯಿಸಿದ್ದು ಮಾತ್ರವಲ್ಲದೆ ಜವಾಬ್ದಾರಿಯುತ ಬ್ಯಾಟಿಂಗ್ ಮಾಡಿದ ರುತುರಾಜ್ ತಂಡವನ್ನು ಸಂಕಷ್ಟದಿಂದ ಹೊರತಂದರು. ಏಕೆಂದರೆ ಅರ್ಧದಷ್ಟು ತಂಡ ಕೇವಲ 52 ರನ್‌ಗಳಿಗೆ ಪೆವಿಲಿಯನ್ ಸೇರಿಕೊಂಡಿದ್ದ ಸಮಯದಲ್ಲಿ ಕಣಕ್ಕಿಳಿದ ರುತುರಾಜ್ ಶತಕ ಬಾರಿಸುವುದರೊಂದಿಗೆ ಮಹಾರಾಷ್ಟ್ರವನ್ನು ಗೌರವಾನ್ವಿತ ಸ್ಕೋರ್‌ಗೆ ಮುನ್ನಡೆಸಿದರು. ಇದರೊಂದಿಗೆ ಪಾಕ್ ಮಾಜಿ ನಾಯಕ ಬಾಬರ್ ಆಝಂ ಅವರ ವಿಶ್ವ ದಾಖಲೆಯನ್ನು ಮುರಿದರು.

ಗೋವಾ ವಿರುದ್ಧ ರುತುರಾಜ್ ಗಾಯಕ್ವಾಡ್ 131 ಎಸೆತಗಳನ್ನು ಎದುರಿಸಿ 134 ರನ್‌ಗಳ ಇನ್ನಿಂಗ್ಸ್ ಆಡಿದರು. ಅವರ ಈ ಇನ್ನಿಂಗ್ಸ್‌ನಲ್ಲಿ 8 ಬೌಂಡರಿ ಮತ್ತು 6 ಸಿಕ್ಸರ್‌ಗಳು ಸೇರಿದ್ದವು. ವಿಜಯ್ ಹಜಾರೆ ಟ್ರೋಫಿಯ ಪ್ರಸ್ತುತ ಆವೃತ್ತಿಯ ಕೊನೆಯ 4 ಪಂದ್ಯಗಳಲ್ಲಿ ಇದು ಅವರ ಮೂರನೇ ಐವತ್ತು ಪ್ಲಸ್ ಸ್ಕೋರ್ ಆಗಿದೆ. ಇದಕ್ಕೂ ಮೊದಲು, ಕಳೆದ 3 ಇನ್ನಿಂಗ್ಸ್‌ಗಳಲ್ಲಿ, ಅವರು 124 ರನ್, 66 ರನ್ ಮತ್ತು 22 ರನ್ ಕಲೆಹಾಕಿದ್ದರು.

ಇದು ರುತುರಾಜ್ ಅವರ ಲಿಸ್ಟ್ ಎ ವೃತ್ತಿಜೀವನದ 20 ನೇ ಶತಕವಾಗಿದ್ದು, ತಮ್ಮ ಲಿಸ್ಟ್ ಎ ವೃತ್ತಿಜೀವನದಲ್ಲಿ ಅರ್ಧಶತಕಗಳಿಗಿಂತ ಹೆಚ್ಚು ಶತಕಗಳನ್ನು ಬಾರಿಸಿರುವುದು ಅವರ ಉತ್ತಮ ಪ್ರದರ್ಶನಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಈ ಮಾದರಿಯಲ್ಲಿ ಇದುವರೆಗೆ 19 ಅರ್ಧಶತಕಗಳನ್ನು ಬಾರಿಸಿರುವ ರುತುರಾಜ್ ಗಾಯಕ್ವಾಡ್ ಲಿಸ್ಟ್ ಎ ಕ್ರಿಕೆಟ್‌ನಲ್ಲಿ ತಮ್ಮ 5000 ರನ್‌ಗಳನ್ನು ಸಹ ಪೂರ್ಣಗೊಳಿಸಿದರು.

ಈ ಮೂಲಕ ಲಿಸ್ಟ್ ಎ ಕ್ರಿಕೆಟ್‌ನಲ್ಲಿ 5,000 ರನ್‌ಗಳನ್ನು ಅತಿ ವೇಗವಾಗಿ ಪೂರೈಸಿದ ವಿಶ್ವದ ಮೊದಲ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ರುತುರಾಜ್ ಪಾತ್ರರಾಗಿದ್ದಾರೆ. ಲಿಸ್ಟ್ ಎ ಕ್ರಿಕೆಟ್‌ನಲ್ಲಿ ಈ ವಿಶ್ವ ದಾಖಲೆಯನ್ನು ಈ ಹಿಂದೆ ಬಾಬರ್ ಆಝಂ ಹೊಂದಿದ್ದರು. ಪಾಕಿಸ್ತಾನದ ಬಾಬರ್ 97 ಇನ್ನಿಂಗ್ಸ್‌ಗಳಲ್ಲಿ ಲಿಸ್ಟ್ ಎ ಕ್ರಿಕೆಟ್‌ನಲ್ಲಿ 5,000 ರನ್‌ಗಳನ್ನು ಪೂರೈಸಿದ್ದರು. ಇದೀಗ ರುತುರಾಜ್ 95 ನೇ ಲಿಸ್ಟ್ ಎ ಇನ್ನಿಂಗ್ಸ್‌ನಲ್ಲಿ 5,000 ರನ್‌ಗಳ ಗಡಿ ದಾಟಿದ್ದಾರೆ.

ವಿಜಯ್ ಹಜಾರೆ ಟ್ರೋಫಿಯಲ್ಲಿ ಗೋವಾ ವಿರುದ್ಧ ಮೊದಲು ಬ್ಯಾಟಿಂಗ್ ಮಾಡಿದ ಮಹಾರಾಷ್ಟ್ರ ಕೇವಲ 52 ರನ್‌ಗಳಿಗೆ ಆರು ವಿಕೆಟ್ಗಳನ್ನು ಕಳೆದುಕೊಂಡಿತು. ಅಂತಹ ಪರಿಸ್ಥಿತಿಯಲ್ಲಿ, ತಂಡದ ನಾಯಕ ರುತುರಾಜ್ ಗಾಯಕ್ವಾಡ್ ಏಕಾಂಗಿ ಹೋರಾಟ ನಡೆಸಿ ಮಹಾರಾಷ್ಟ್ರ 50 ಓವರ್‌ಗಳಲ್ಲಿ 7 ವಿಕೆಟ್‌ಗಳ ನಷ್ಟಕ್ಕೆ 249 ರನ್‌ಗಳಿಗೆ ಕೊಂಡೊಯ್ದರು.
