ಕೋವಿಡ್ ಪರಿಣಾಮ ಮುಂದೂಡಿಕೆಯಾದ್ದ ದೆಹಲಿ ಆಟೋ ಎಕ್ಸ್ ಪೋ(Auto Expo) 2023ರ ಆವೃತ್ತಿಗೆ ದಿನಗಣನೆ ಆರಂಭವಾಗಿದ್ದು, ಮುಂದಿನ ತಿಂಗಳು ಜನವರಿ 13ರಿಂದ 18ರ ತನಕ ದೆಹಲಿಯ ಪ್ರಗತಿ ಮೈದಾನದಲ್ಲಿ ಆಯೋಜಿಸಲಾಗಿದೆ. ಪ್ರತಿ ಎರಡು ವರ್ಷಗಳಿಗೆ ಒಂದು ಆಯೋಜನೆಯಾಗುವ ಆಟೋ ಎಕ್ಸ್ ಪೋ ಈ ಬಾರಿ ಹಲವು ವಿಶೇಷತೆಗಳಿಗೆ ಕಾರಣವಾಗಲಿದ್ದು, ಹಲವು ಹೊಸ ವಾಹನಗಳು ಪ್ರದರ್ಶನಗೊಳ್ಳುವುದರ ಜೊತೆಗೆ ಅಧಿಕೃತವಾಗಿ ಮಾರುಕಟ್ಟೆ ಲಗ್ಗೆಯಿಡಲಿವೆ.
ದೆಹಲಿ ಆಟೋ ಎಕ್ಸ್‌ಪೋದಲ್ಲಿ ಪ್ರಮುಖ ವಾಹನ ಉತ್ಪಾದನಾ ಕಂಪನಿಗಳಿಗೆ ತಮ್ಮ ಭವಿಷ್ಯದ ವಾಹನ ಮಾದರಿಗಳನ್ನು ಸಾರ್ವಜನಿಕವಾಗಿ ಪ್ರದರ್ಶನಗೊಳಿಸುವ ಪ್ರಮುಖ ವೇದಿಕೆಯಾಗಿದ್ದು, ಇಲ್ಲಿ ವಿವಿಧ ಮಾದರಿಯ ಕಾರುಗಳು, ಬೈಕ್‌ಗಳು, ವಾಣಿಜ್ಯ ವಾಹನಗಳು, ಹೈಬ್ರಿಡ್ ವಾಹನಗಳು, ಎಲೆಕ್ಟ್ರಿಕ್ ವಾಹನಗಳು, ಸಿಎನ್ ಜಿ ವಾಹನಗಳು ಮತ್ತು ವಿವಿಧ ಪರಿಕಲ್ಪನೆಯ ವಾಹನ ಮಾದರಿಗಳು ಪ್ರದರ್ಶನಗೊಳ್ಳಲಿವೆ.
ದೆಹಲಿ ಬಳಿಯ ಗ್ರೇಟರ್ ನೋಯ್ಡಾದಲ್ಲಿ 2023ರ ಆಟೋ ಎಕ್ಸ್‌ಪೋ ವೇದಿಕೆ ಸಿದ್ದವಾಗುತ್ತಿದ್ದು, ಈ ಬಾರಿ ಭಾರತೀಯ ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಹೊಸ ಮಾದರಿಯ ಬೈಕ್ ಮತ್ತು ಕಾರು ಮಾದರಿಗಳ ಪ್ರದರ್ಶನಗೊಳ್ಳುವುದನ್ನು ಎದರು ನೋಡುತ್ತಿದ್ದಾರೆ. ಇದರಲ್ಲಿ ಕೆಲವು ಹೊಸ ವಾಹನ ಮಾದರಿಗಳು ಪ್ರದರ್ಶನ ನಂತರ ಬಿಡುಗಡೆಯಾಗಲಿದ್ದರೆ ಇನ್ನು ಪರಿಕಲ್ಪನೆ ಮಾದರಿಗಳು ಭವಿಷ್ಯದಲ್ಲಿ ರಸ್ತೆಗಿಳಿಯಲಿವೆ.
ಮಾರುತಿ ಸುಜುಕಿ, ಹ್ಯುಂಡೈ, ಟಾಟಾ ಮೋಟಾರ್ಸ್, ಮಹೀಂದ್ರಾ, ಕಿಯಾ, ಟೊಯೊಟಾ, ಸ್ಕೋಡಾ, ರೆನಾಲ್ಟ್, ನಿಸ್ಸಾನ್ ಸೇರಿದಂತೆ ಪ್ರಮುಖ ಐಷಾರಾಮಿ ಕಾರು ಉತ್ಪಾದನಾ ಕಂಪನಿಗಳು ಸಹ ಈ ಬಾರಿಯ ಆಟೋ ಎಕ್ಸ್‌ಪೋದಲ್ಲಿ ತಮ್ಮ ಬಹುನೀರಿಕ್ಷಿತ ಕಾರು ಮಾದರಿಗಳನ್ನು ಪ್ರದರ್ಶನಗೊಳಿಸಿ ಬಿಡುಗಡೆ ಮಾಡಲಿದ್ದು, ಈ ಬಾರಿ 50ಕ್ಕೂ ಹೆಚ್ಚು ಹೊಸ ಕಾರು ಮಾದರಿಗಳು ಪ್ರದರ್ಶನಗೊಳ್ಳುವ ನೀರಿಕ್ಷೆಯಿದೆ.
ಜೊತೆಗೆ 2023ರ ಆಟೋ ಎಕ್ಸ್‌ಪೋ ಈ ಬಾರಿ ಅತಿ ಹೆಚ್ಚು ಎಲೆಕ್ಟ್ರಿಕ್ ದ್ವಿ-ಚಕ್ರ ವಾಹನಗಳ ಪ್ರದರ್ಶನಕ್ಕೆ ಸಾಕ್ಷಿಯಾಗಲಿದ್ದು, ಪ್ರಮುಖ ಬೈಕ್ ಮತ್ತು ಸ್ಕೂಟರ್ ಮಾದರಿಗಳು ಹೆಚ್ಚಿನ ಮಟ್ಟದಲ್ಲಿ ಎಲೆಕ್ಟ್ರಿಕ್ ಆವೃತ್ತಿಯೊಂದಿಗೆ ಪ್ರದರ್ಶನಗೊಳ್ಳಲಿವೆ. ಬಹುತೇಕ ವಾಹನ ಉತ್ಪಾದನಾ ಸಂಸ್ಥೆಗಳು ಒಂದು ವಾಹನ ನಿರ್ಮಾಣಕ್ಕೂ ಮುನ್ನ ಅದನ್ನು ಒಂದು ಪರಿಕಲ್ಪನೆಯ ಆಧಾರದ ಮೇಲೆ ನಿರ್ಮಾಣ ಮಾಡುವುದು ವಾಡಿಕೆ. ಇದರಿಂದ ಭವಿಷ್ಯ ವಾಹನ ಮಾದರಿಗಳನ್ನು ಜಗತ್ತಿಗೆ ಪರಿಚಯಿಸುವುದಕ್ಕೂ ಮುನ್ನ ಗ್ರಾಹಕರಲ್ಲಿ ಕುತೂಹಲ ಹುಟ್ಟುಹಾಕಲು ಆಟೋ ಎಕ್ಸ್‌ಪೋ ವೇದಿಕೆಗಳು ಮುಖ್ಯ ವೇದಿಕೆಯಾಗಿದೆ. ಎನ್ನಬಹುದು.
ಇನ್ನು ದೆಹಲಿಯಲ್ಲಿ ನಡೆಯಲಿರುವ 2023ರ ಆಟೋ ಎಕ್ಸ್‌ಪೋ ಸುದ್ದಿಗಳು ನಿಮ್ಮ ಟಿವಿ9 ಡಿಜಿಟಲ್ ಪ್ಲಾಟ್ ಫಾರ್ಮ್ ನಲ್ಲಿ ವಿಸ್ತೃತ ಮಾಹಿತಿಗಳೊಂದಿಗೆ ಪ್ರಕಟಗೊಳ್ಳಲಿದ್ದು, ಪ್ರದರ್ಶನಗೊಳ್ಳುವ ಪ್ರತಿ ಹೊಸ ವಾಹನದ ಸಂಪೂರ್ಣ ಮಾಹಿತಿ ಇಲ್ಲಿ ಲಭ್ಯವಿರಲಿದೆ.
Published On - 6:24 pm, Tue, 6 December 22