ಭರ್ಜರಿ ಮೈಲೇಜ್ ನೀಡುವ ಬಜಾಜ್ ಫ್ರೀಡಂ 125 ಸಿಎನ್​ಜಿ ಬೈಕ್ ವಿತರಣೆ ಶುರು

|

Updated on: Jul 18, 2024 | 10:33 PM

ಬಜಾಜ್ ಕಂಪನಿಯು ತನ್ನ ಹೊಸ ಫ್ರೀಡಂ 125 ಸಿಎನ್​ಜಿ ಬೈಕ್ ಮಾದರಿಯ ವಿತರಣೆಯನ್ನು ಅಧಿಕೃತವಾಗಿ ಆರಂಭಿಸಿದ್ದು, ಹೊಸ ಬೈಕ್ ಖರೀದಿಗಾಗಿ ಭಾರೀ ಬೇಡಿಕೆ ದಾಖಲಾಗಿದೆ.

ಭರ್ಜರಿ ಮೈಲೇಜ್ ನೀಡುವ ಬಜಾಜ್ ಫ್ರೀಡಂ 125 ಸಿಎನ್​ಜಿ ಬೈಕ್ ವಿತರಣೆ ಶುರು
ಬಜಾಜ್ ಫ್ರೀಡಂ 125 ಸಿಎನ್​ಜಿ ಬೈಕ್
Follow us on

ವಿಶ್ವದ ಮೊದಲ ಸಿಎನ್​ಜಿ ಬೈಕ್ ಎಂಬ ಹೆಗ್ಗಳಿಕೆ ಪಾತ್ರವಾಗಿರುವ ಬಜಾಜ್ ಫ್ರೀಡಂ 125 ಬೈಕ್ ವಿತರಣೆಗೆ ಅಧಿಕೃತವಾಗಿ ಚಾಲನೆ ನೀಡಲಾಗಿದ್ದು, ಹೊಸ ಬೈಕ್ ಮಾದರಿಯು ವಿನೂತನ ಫೀಚರ್ಸ್ ಗಳೊಂದಿಗೆ ಭರ್ಜರಿ ಬೇಡಿಕೆ ಪಡೆದುಕೊಳ್ಳುತ್ತಿದೆ. ಹೊಸ ಸಿಎನ್​ಜಿ ಬೈಕ್ ಖರೀದಿಗಾಗಿ ಗ್ರಾಹಕರು ಮುಗಿಬಿದ್ದಿದ್ದು, ದೇಶಾದ್ಯಂತ ಕಾರ್ಯಾಚರಣೆಯಲ್ಲಿರುವ ಬಜಾಜ್ ಕಂಪನಿಯ ಬಹುತೇಕ ಶೋರೂಂಗಳಲ್ಲೂ ಹೊಸ ಬೈಕ್ ಖರೀದಿಗೆ ಲಭ್ಯವಿದೆ.

ಪುಣೆಯಲ್ಲಿ ಹೊಸ ಬೈಕಿನ ಮೊದಲ ಯುನಿಟ್ ವಿತರಣೆ ಮೂಲಕ ಮಾರಾಟಕ್ಕೆ ಅಧಿಕೃತವಾಗಿ ಚಾಲನೆ ನೀಡಿರುವ ಬಜಾಜ್ ಕಂಪನಿಯು ಶೀಘ್ರದಲ್ಲಿಯೇ ಮತ್ತಷ್ಟು ಹೊಸ ಬೈಕ್ ಮಾದರಿಗಳನ್ನು ಸಿಎನ್ ಜಿ ಆಯ್ಕೆಯಲ್ಲಿ ಪರಿಚಯಿಸುವ ಸುಳಿವು ನೀಡಿದೆ. ಫ್ರೀಡಂ 125 ಸಿಎನ್​ಜಿ ಬೈಕ್ ಮಾದರಿಯು ಪ್ರಮುಖ ಮೂರು ವೆರಿಯೆಂಟ್ ಗಳಲ್ಲಿ ಖರೀದಿಗೆ ಲಭ್ಯವಿರಲಿದ್ದು, ಇದು ಎಕ್ಸ್ ಶೋರೂಂ ಪ್ರಕಾರ ರೂ. 95 ಸಾವಿರದಿಂದ ರೂ. 1.10 ಲಕ್ಷ ಬೆಲೆ ಹೊಂದಿದೆ.

 

ಪೆಟ್ರೋಲ್ ಮತ್ತು ಸಿಎನ್​ಜಿ ಎರಡೂ ಮಾದರಿಯಲ್ಲೂ ಚಾಲನೆಗೊಳ್ಳುವ ಹೊಸ ಬೈಕ್ ಮಾದರಿಯು ಸುಧಾರಿತ ತಂತ್ರಜ್ಞಾನ ಪ್ರೇರಣೆ ಹೊಂದಿದ್ದು, 125ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್ ಜೋಡಣೆ ಮಾಡಲಾಗಿದೆ. ಇದು 5-ಸ್ಪೀಡ್ ಗೇರ್ ಬಾಕ್ಸ್ ನೊಂದಿಗೆ 9.37 ಹಾರ್ಸ್ ಪವರ್, 9.7 ಎನ್ಎಂ ಟಾರ್ಕ್ ಉತ್ಪಾದನೆ ಮಾಡಲಿದ್ದು, ಪ್ರತಿ ಕೆಜಿ ಸಿಎನ್​ಜಿಗೆ ಬರೋಬ್ಬರಿ 102 ಕಿ.ಮೀ ಮೈಲೇಜ್ ನೀಡುತ್ತೆ. ಹಾಗೆಯೇ ಹೊಸ ಬೈಕಿನಲ್ಲಿ ಪೆಟ್ರೋಲ್ ಟ್ಯಾಂಕ್ ಸಹ ಜೋಡಣೆ ಮಾಡಲಾಗಿದ್ದು, ಇದು ಅತಿ ಕಡಿಮೆ ಬೆಲೆಯಲ್ಲಿ ಹೆಚ್ಚಿನ ದೂರವನ್ನು ಕ್ರಮಿಸಬಹುದಾಗಿದೆ. ಹಾಗೆಯೇ ಪೆಟ್ರೋಲ್ ಮತ್ತು ಸಿಎನ್ ಜಿ ಎರಡೂ ಮಾದರಿಯಲ್ಲಿ ಒಟ್ಟಾಗಿ ಒಂದು ಬಾರಿಗೆ ಬರೋಬ್ಬರಿ 330 ಕಿ.ಮೀ ದೂರವನ್ನು ಕ್ರಮಿಸಬಹುದಾಗಿದೆ.

 

ಬಜಾಜ್ ಮಾಹಿತಿಗಳ ಪ್ರಕಾರ ಹೊಸ ಬೈಕ್ ಅನ್ನು ಸಿಎನ್ ಜಿ ಸಹಾಯದೊಂದಿಗೆ 1 ಕಿಮೀ ದೂರವನ್ನು ಕೇವಲ ರೂ. 1 ವೆಚ್ಚದಲ್ಲಿ ಚಲಿಸಬಹುದಾಗಿದ್ದರೆ ಸಂಪೂರ್ಣವಾಗಿ ಪೆಟ್ರೋಲ್ ಮೂಲಕ 1 ಕಿ.ಮೀ ದೂರವನ್ನು 2.25 ರೂ ವೆಚ್ಚ ಮಾಡಬೇಕಾಗುತ್ತದೆ. ಹೀಗಾಗಿ ಸಿಎನ್ ಜಿ ಆಯ್ಕೆಯು ಗ್ರಾಹಕರ ಪ್ರಮುಖ ಆಕರ್ಷಣೆಯಾಗಿದ್ದು, ಹೊಸ ಬೈಕಿನಲ್ಲಿ 2 ಕೆಜಿ ಸಾಮರ್ಥ್ಯದ ಸಿಎನ್​ಜಿ ಟ್ಯಾಂಕ್ ಜೋಡಣೆ ಮಾಡಲಾಗಿದೆ.

ಹೊಸ ಬೈಕಿನ ಆಸನದ ಕೆಳಭಾಗದಲ್ಲಿದಲ್ಲಿರುವ ಸಿಎನ್ ಜಿ ಟ್ಯಾಂಕ್ ಚಾರ್ಸಿ ಮಧ್ಯದಲ್ಲಿ ಸುರಕ್ಷಿತವಾಗಿ ಜೋಡಣೆ ಮಾಡಲಾಗಿದ್ದು, ಸಿಎನ್ ಜಿ ಟ್ಯಾಂಕ್ ಆಸನ ಕೆಳಭಾಗದಲ್ಲಿರುವುದರಿಂದ ಬೈಕಿನ ಆಸನದ ಉದ್ದಳತೆಯು ಸಾಮಾನ್ಯ ಬೈಕ್ ಮಾದರಿಗಿಂತಲೂ ತುಸು ಹೆಚ್ಚಳವಾಗಿದೆ. ಇದು ದೂರದ ಪ್ರಯಾಣಕ್ಕೂ ಸಾಕಷ್ಟು ಅನುಕೂಲಕರವಾಗಲಿದ್ದು, ಗ್ರಾಮೀಣ ಭಾಗದ ಗ್ರಾಹಕರಿಗೆ ಹೆಚ್ಚು ಸಹಕಾರಿಯಾಗಿರಲಿದೆ ಎನ್ನಬಹುದು.

ಇನ್ನು ಹೊಸ ಬೈಕಿನಲ್ಲಿ ಭರ್ಜರಿ ಮೈಲೇಜ್ ಜೊತೆಗೆ ಹಲವಾರು ಪ್ರೀಮಿಯಂ ಫೀಚರ್ಸ್ ಸಹ ನೀಡಲಾಗಿದೆ. ಟಾಪ್ ಎಂಡ್ ಮಾದರಿಯಲ್ಲಿ ಎಲ್ಇಡಿ ಲೈಟಿಂಗ್ಸ್, ಎಲ್ ಸಿಡಿ ಸ್ಕ್ರೀನ್ ನೊಂದಿಗೆ ಬ್ಲೂಟೂಥ್ ಕನೆಕ್ಟಿವಿಟಿ, ಎಲ್ಇಡಿ ಟೈಲ್ ಲೈಟ್ಸ್ ಮತ್ತು ಸುರಕ್ಷತೆಗಾಗಿ ಡಿಸ್ಕ್ ಬ್ರೇಕ್ ಸೌಲಭ್ಯಗಳನ್ನು ನೀಡಲಾಗಿದೆ. ಹಾಗೆಯೇ ಹೊಸ ಬೈಕಿನಲ್ಲಿ ಒಟ್ಟು 7 ವಿವಿಧ ಬಣ್ಣಗಳ ಆಯ್ಕೆ ನೀಡಲಾಗಿದ್ದು, ಇದುವರೆಗೆ ಸುಮಾರು 30 ಸಾವಿರಕ್ಕೂ ಹೆಚ್ಚು ಗ್ರಾಹಕರು ಹೊಸ ಬೈಕ್ ಖರೀದಿಗಾಗಿ ಬುಕಿಂಗ್ ದಾಖಲಿಸಿದ್ದಾರೆ ಎನ್ನಲಾಗಿದೆ.