BYD Seal: ಒಂದೇ ದಿನದಲ್ಲಿ 200 ಐಷಾರಾಮಿ ಇವಿ ಕಾರುಗಳನ್ನು ವಿತರಿಸಿದ ಬಿವೈಡಿ
ಬಿವೈಡಿ ಇಂಡಿಯಾ ಕಂಪನಿಯು ತನ್ನ ಹೊಸ ಎಲೆಕ್ಟ್ರಿಕ್ ಕಾರುಗಳ ಮೂಲಕ ಭಾರೀ ಬೇಡಿಕೆ ಪಡೆದುಕೊಳ್ಳುತ್ತಿದ್ದು, ಕಂಪನಿಯು ಇತ್ತೀಚೆಗೆ ತನ್ನ ಹೊಸ ಸೀಲ್ ಇವಿ ವಿತರಣೆಯ ಮೂಲಕ ಗಮನಸೆಳೆಯುತ್ತಿದೆ.
ಮಧ್ಯಮ ಕ್ರಮಾಂಕದ ಐಷಾರಾಮಿ ಎಲೆಕ್ಟ್ರಿಕ್ ಕಾರುಗಳ (Luxury Electric Cars) ಮಾರಾಟದಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಿರುವ ಬಿವೈಡಿ (BYD) ಕಂಪನಿಯು ಸೀಲ್ ಇವಿ (Seal EV) ವಿತರಣೆಯನ್ನು ಆರಂಭಿಸಿದ್ದು, ಒಂದೇ ದಿನದಲ್ಲಿ ಕಂಪನಿಯು ಸುಮಾರು 200 ಇವಿ ಕಾರುಗಳನ್ನು ವಿತರಣೆ ಮಾಡಿದೆ. ಹೊಸ ಸೀಲ್ ಇವಿ ಕಾರು ಐಷಾರಾಮಿ ಫೀಚರ್ಸ್ ಗಳೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಟ್ಟಿದ್ದು, ವಿಶೇಷ ಫೀಚರ್ಸ್ ಗಳೊಂದಿಗೆ ಭಾರೀ ಪ್ರಮಾಣದಲ್ಲಿ ಬೇಡಿಕೆ ಪಡೆದುಕೊಳ್ಳುತ್ತಿದೆ.
ಕಳೆದ ಕೆಲ ತಿಂಗಳ ಹಿಂದಷ್ಟೇ ಅಧಿಕೃತವಾಗಿ ಬಿಡುಗಡೆಯಾಗಿದ್ದ ಬಿವೈಡಿ ಸೀಲ್ ಕಾರು ಇದುವರೆಗೆ ಬರೋಬ್ಬರಿ 1 ಸಾವಿರಕ್ಕೂ ಹೆಚ್ಚು ಗ್ರಾಹಕರಿಂದ ಬುಕಿಂಗ್ ಪಡೆದುಕೊಂಡಿದ್ದು, ಇದೀಗ ಬುಕಿಂಗ್ ಮಾಡಿರುವ ಗ್ರಾಹಕರಿಗೆ ಹಂತ-ಹಂತವಾಗಿ ವಿತರಣೆ ಆರಂಭಿಸಲಾಗಿದೆ. ಹೊಸ ಕಾರು ಡೈನಾಮಿಕ್, ಪ್ರೀಮಿಯಂ ಮತ್ತು ಪರ್ಫಾಮೆನ್ಸ್ ಎನ್ನುವ ಪ್ರಮುಖ ಮೂರು ವೆರಿಯೆಂಟ್ ಗಳಲ್ಲಿ ಖರೀದಿಗೆ ಲಭ್ಯವಿದ್ದು, ಇದು ದೆಹಲಿ ಎಕ್ಸ್ ಶೋರೂಂ ಪ್ರಕಾರ ರೂ. 41 ಲಕ್ಷದಿಂದ ರೂ. 53 ಲಕ್ಷ ಬೆಲೆ ಹೊಂದಿದೆ.
ರಿಯರ್ ವ್ಹೀಲ್ ಡ್ರೈವ್ ಮತ್ತು ಆಲ್ ವ್ಹೀಲ್ ಡ್ರೈವ್ ಆಯ್ಕೆಗಳನ್ನು ಹೊಂದಿರುವ ಹೊಸ ಸೀಲ್ ಇವಿ ಕಾರಿನಲ್ಲಿ 61.44 ಕೆವಿಹೆಚ್ ಮತ್ತು 82.56 ಕೆವಿಹೆಚ್ ಬ್ಯಾಟರಿ ಪ್ಯಾಕ್ ಆಯ್ಕೆ ನೀಡಲಾಗಿದೆ. ಇವು ಪ್ರತಿ ಚಾರ್ಜ್ ಗೆ ಇದು 510 ಕಿ.ಮೀ ಮತ್ತು 650 ಕಿ.ಮೀ ಮೈಲೇಜ್ ನೀಡಲಿದ್ದು, ಈ ಮೂಲಕ ಇದು ಪರ್ಫಾಮೆನ್ಸ್ ನಲ್ಲೂ ಗಮನಸೆಳೆಯುತ್ತಿದೆ. ಇದರೊಂದಿಗೆ ಹೊಸ ಸೀಲ್ ಕಾರು 150ಕೆವಿ ಫಾಸ್ಟ್ ಚಾರ್ಜಿಂಗ್ ಸರ್ಪೊಟ್ ಹೊಂದಿದ್ದು, ಕೇವಲ 37 ನಿಮಿಷಗಳಲ್ಲಿ ಶೇ. 10 ರಿಂದ ಶೇ. 80ರಷ್ಟು ಚಾರ್ಜ್ ಆಗಬಲ್ಲದು.
ಇದನ್ನೂ ಓದಿ: ಬೈಕಿನಂತೆ ಮೈಲೇಜ್, 6 ಏರ್‌ಬ್ಯಾಗ್‌ಗಳನ್ನು ಪಡೆದುಕೊಂಡ ಮಾರುತಿ ಸುಜುಕಿ ಹೊಸ ಸ್ವಿಫ್ಟ್
ಇನ್ನು ಹೊಸ ಸೀಲ್ ಕಾರಿನಲ್ಲಿ ಹಲವಾರು ಐಷಾರಾಮಿ ಸೌಲಭ್ಯಗಳನ್ನು ನೀಡಲಾಗಿದ್ದು, ಇದು 4,800 ಎಂಎಂ ಉದ್ದಳತೆಯೊಂದಿಗೆ ಅತ್ಯುತ್ತಮ ಒಳಾಂಗಣ ಸೌಲಭ್ಯವನ್ನು ಹೊಂದಿದೆ. ಕೂಪೆ ಸ್ಟೈಲ್ ಹೊಂದಿರುವ ಹೊಸ ಕಾರಿನಲ್ಲಿ ಆಲ್ ಎಲ್ಇಡಿ ಲೈಟಿಂಗ್ಸ್, ಗ್ಲಾಸ್ ರೂಫ್, 19 ಇಂಚಿನ ಅಲಾಯ್ ವ್ಹೀಲ್ಸ್ ಸೇರಿದಂತೆ ಹಲವಾರು ಫೀಚರ್ಸ್ ನೀಡಲಾಗಿದೆ. ಒಳಭಾಗದಲ್ಲಿ 15.6 ಇಂಚಿನ ಇನ್ಪೋಟೈನ್ಮೆಂಟ್ ಸಿಸ್ಟಂ, 10.25 ಇಂಚಿನ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಮತ್ತು ಹೆಡ್ಸ್ ಅಪ್ ಡಿಸ್ ಪ್ಲೇ ಸೌಲಭ್ಯಗಳಿವೆ.
ಇದರೊಂದಿಗೆ ಹೊಸ ಇವಿ ಕಾರಿನಲ್ಲಿ ಸುರಕ್ಷತೆಗೂ ಹೆಚ್ಚಿನ ಒತ್ತು ನೀಡಲಾಗಿದ್ದು, ಎಡಿಎಎಸ್ ಸೇರಿದಂತೆ 10 ಏರ್ ಬ್ಯಾಗ್ ಗಳನ್ನು ನೀಡಲಾಗಿದೆ. ಈ ಮೂಲಕ ಇದು ಗ್ಲೋಬಲ್ ಕ್ರ್ಯಾಶ್ ಟೆಸ್ಟ್ ನಲ್ಲಿ ಈಗಾಗಲೇ 5 ಸ್ಟಾರ್ ರೇಟಿಂಗ್ಸ್ ಪಡೆದುಕೊಂಡಿದ್ದು, ಹಲವಾರು ಎಂಟ್ರಿ ಲೆವಲ್ ಐಷಾರಾಮಿ ಕಾರುಗಳಿಗೆ ಇದು ಉತ್ತಮ ಪೈಪೋಟಿ ನೀಡುತ್ತಿದೆ.