ಬೈಕಿನಂತೆ ಮೈಲೇಜ್, 6 ಏರ್‌ಬ್ಯಾಗ್‌ಗಳನ್ನು ಪಡೆದುಕೊಂಡ ಮಾರುತಿ ಸುಜುಕಿ ಹೊಸ ಸ್ವಿಫ್ಟ್
ಮಾರುತಿ ಸುಜುಕಿ ಕಂಪನಿಯು ತನ್ನ ಹೊಸ ಸ್ವಿಫ್ಟ್ ಮಾದರಿಯನ್ನು ಭಾರತದಲ್ಲಿ ಬಿಡುಗಡೆ ಮಾಡಿದ್ದು, ಹೊಸ ಕಾರು ಸುಧಾರಿತ ಎಂಜಿನ್ ಆಯ್ಕೆ ಸೇರಿದಂತೆ ಭರ್ಜರಿ ಸುರಕ್ಷಾ ಫೀಚರ್ಸ್ ಗಳೊಂದಿಗೆ ಬಿಡುಗಡೆಯಾಗಿದೆ.
ಸಣ್ಣ ಕಾರುಗಳ ಮೂಲಕ ಭಾರೀ ಜನಪ್ರಿಯತೆ ಹೊಂದಿರುವ ಮಾರುತಿ ಸುಜುಕಿ (Maruti Suzuki) ಕಂಪನಿ ಇದೀಗ ಹೊಸ ಸ್ವಿಫ್ಟ್ ಮೂಲಕ ಮತ್ತಷ್ಟು ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಲ್ಲಿದೆ. ಹೊಸ ತಂತ್ರಜ್ಞಾನ ಪ್ರೇರಣೆ ಹೊಂದಿರುವ ಸ್ವಿಫ್ಟ್ ಕಾರು ಹೊರ ಮತ್ತು ಒಳವಿನ್ಯಾಸದಲ್ಲೂ ಗುರುತರ ಬದಲಾವಣೆಗಳನ್ನು ಪಡೆದುಕೊಂಡಿದ್ದು, ಇದು ಎಲ್ಎಕ್ಸ್ಐ, ವಿಎಕ್ಸ್ಐ, ವಿಎಕ್ಸ್ಐ(ಆಪ್ಷನ್), ಜೆಡ್ಎಕ್ಸ್ಐ ಮತ್ತು ಜೆಡ್ಎಕ್ಸ್ಐ ಪ್ಲಸ್ ವೆರಿಯೆಂಟ್ ಗಳೊಂದಿಗೆ ದೆಹಲಿ ಎಕ್ಸ್ ಶೋರೂಂ ಪ್ರಕಾರ ರೂ. 6.49 ಲಕ್ಷದಿಂದ ರೂ. 9.50 ಲಕ್ಷ ಬೆಲೆ ಹೊಂದಿದೆ.
ಹೊಸ ಸ್ವಿಫ್ಟ್ ಕಾರನ್ನು ಮಾರುತಿ ಈ ಬಾರಿ ಹಲವಾರು ಸ್ಟ್ಯಾಂಡರ್ಡ್ ಫೀಚರ್ಸ್ ಗಳೊಂದಿಗೆ ಅಭಿವೃದ್ದಿಗೊಂಡಿದ್ದು, ಹ್ಯಾಚ್ ಬ್ಯಾಕ್ ವಿಭಾಗದಲ್ಲಿ ಇದು ಭಾರೀ ಪ್ರಮಾಣದ ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಲ್ಲಿದೆ. ಹೊಸ ಸ್ವಿಫ್ಟ್ ಕಾರಿನಲ್ಲಿ ಈ ಬಾರಿ ಗಮನಿಸಬೇಕಾದ ಮುಖ್ಯ ಬದಲಾವಣೆ ಅಂದರೆ ಅದು ಸುಧಾರಿತ ಎಂಜಿನ್ ಆಯ್ಕೆ ಜೋಡಣೆಯಾಗಿದೆ. ಹೊಸ ಕಾರಿನಲ್ಲಿ ಈ ಬಾರಿ ಮೂರು ಸಿಲಿಂಡರ್ ವೈಶಿಷ್ಟತೆಯ 1.2 ಲೀಟರ್ ಜೆಡ್12ಇ ಪೆಟ್ರೋಲ್ ಎಂಜಿನ್ ನೀಡಲಾಗಿದ್ದು, ಇದು 5-ಸ್ಪೀಡ್ ಮ್ಯಾನುವಲ್ ಮತ್ತು 5-ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಆಯ್ಕೆ ಹೊಂದಿದೆ. ಈ ಮೂಲಕ ಇದು 82 ಹಾರ್ಸ್ ಪವರ್ ಮತ್ತು 112 ಎನ್ಎಂ ಟಾರ್ಕ್ ಉತ್ಪಾದನಾ ಸಾಮರ್ಥ್ಯ ಹೊಂದಿದ್ದು, ಇದರಲ್ಲಿ ಮ್ಯಾನುವಲ್ ಮಾದರಿಯು ಪ್ರತಿ ಲೀಟರ್ ಗೆ 24.8 ಕಿ.ಮೀ ಮೈಲೇಜ್ ನೀಡಿದರೆ ಆಟೋಮ್ಯಾಟಿಕ್ ಮಾದರಿಯು 25.75 ಕಿ.ಮೀ ಮೈಲೇಜ್ ನೀಡುತ್ತದೆ.
ಇದನ್ನೂ ಓದಿ: ಐಷಾರಾಮಿ ಫೀಚರ್ಸ್ ಗಳೊಂದಿಗೆ ಮಹೀಂದ್ರಾ ಎಕ್ಸ್‌ಯುವಿ 3ಎಕ್ಸ್ಒ ಬಿಡುಗಡೆ
ಜೊತೆಗೆ ಹೊಸ ಕಾರು ಈ ಹಿಂದಿನ ಮಾದರಿಗಿಂತಲೂ ಈ ಬಾರಿ ಹೆಚ್ಚುವರಿಯಾಗಿ 15 ಎಂಎಂ ಉದ್ದ, 40 ಎಂಎಂ ಅಗಲ ಮತ್ತು 30 ಎಂಎಂ ಎತ್ತರವನ್ನು ಪಡೆದುಕೊಂಡಿದ್ದು, ಇದು ಅರಾಮದಾಯಕ ಪ್ರಮಾಣ ಒದಗಿಸಲು ಅನುಕೂಲಕರವಾಗಲಿದೆ. ಇದರೊಂದಿಗೆ ಹೊಸ ಕಾರು ಈ ಹಿಂದಿನ ಮಾದರಿಗಿಂತಲೂ ಸಾಕಷ್ಟು ಬದಲಾವಣೆಗೊಳಿಸಲಾದ ಆಕರ್ಷಕ ವಿನ್ಯಾಸ ಹೊಂದಿದ್ದು, ಒಳಭಾಗದಲ್ಲೂ ಕೂಡಾ ಹಲವು ಬದಲಾವಣೆಗಳನ್ನು ಪಡೆದುಕೊಂಡಿದೆ. ಹೊಸ ಕಾರಿನಲ್ಲಿ ಮರುವಿನ್ಯಾಸಗೊಳಿಸಲಾದ ಫ್ರಂಟ್ ಬಂಪರ್ ಸೇರಿದಂತೆ ಎಲ್ಇಡಿ ಹೆಡ್ ಲೈಟ್ಸ್, 9 ಇಂಚಿನ ಫ್ಲೋಟರಿಂಗ್ ಟಚ್ ಸ್ಕ್ರೀನ್ ಇನ್ಪೋಟೈನ್ ಮೆಂಟ್ ಸಿಸ್ಟಂ, ಪ್ರೀಮಿಯಂ ಆಗಿರುವ ಫ್ರಾಬ್ರಿಕ್ ಆಸನಗಳು, ವೈರ್ ಲೆಸ್ ಚಾರ್ಜಿಂಗ್, ಆಟೋ ಕ್ಲೈಮೆಟ್ ಕಂಟ್ರೋಲ್ ಸೇರಿದಂತೆ ವಿವಿಧ ಸೌಲಭ್ಯಗಳು ಗಮನಸೆಳೆಯಲಿವೆ.
ಇದನ್ನೂ ಓದಿ: ಸಖತ್ ಕ್ಯೂಟ್ ಆಗಿರೋ ಇವಿ ಕಾರು ಖರೀದಿಸಿದ ನಟಿ ನಮ್ರತಾ ಗೌಡ
ಹಾಗೆಯೇ ಸ್ವಿಫ್ಟ್ ಹೊಸ ಕಾರಿನಲ್ಲಿ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ಇದರಲ್ಲಿ ಈ ಬಾರಿ ಆರಂಭಿಕ ಮಾದರಿಗೂ ಅನ್ವಯಿಸುವಂತೆ ಆರು ಏರ್ ಬ್ಯಾಗ್ ಗಳು, ಐಸೋಫಿಕ್ಸ್ ಆ್ಯಂಕರ್ಸ್, ರಿಯರ್ ಪಾರ್ಕಿಂಗ್ ಸೆನ್ಸಾರ್, ಎಬಿಎಸ್ ಜೊತೆ ಇಬಿಡಿ, ಹಿಲ್ ಸ್ಟಾರ್ಟ್ ಅಸಿಸ್ಟ್ ಸೇರಿದಂತೆ ಹಲವು ಫೀಚರ್ಸ್ ನೀಡಲಾಗಿದೆ. ಇದರೊಂದಿಗೆ ಹೊಸ ಕಾರು ಪ್ರತಿಸ್ಪರ್ಧಿ ಮಾದರಿಗಳಿಗೆ ಭರ್ಜರಿ ಪೈಪೋಟಿ ನೀಡುವ ನೀರಿಕ್ಷೆಯಲ್ಲಿದ್ದು, ಹೊಸ ಕಾರು ಬಿಡುಗಡೆಯಾದ ಮೊದಲ ದಿನವೇ ಬರೋಬ್ಬರಿ 15 ಸಾವಿರಕ್ಕೂ ಹೆಚ್ಚು ಗ್ರಾಹಕರು ಬುಕಿಂಗ್ ಮಾಡಿದ್ದಾರೆ ಎನ್ನಲಾಗಿದೆ.
Published On - 10:29 pm, Fri, 10 May 24