ಈ ದೀಪಾವಳಿಯಲ್ಲಿ ನೀವು ಹೊಸ ಕಾರು ಖರೀದಿಯ ಯೋಜನೆಯಲ್ಲಿದ್ದರೆ ನಿಮಗೆ ಈ ಸುದ್ದಿ ನಿರಾಶೆ ಉಂಟುಮಾಡುತ್ತೆ!

|

Updated on: Oct 19, 2022 | 2:57 PM

ಭಾರತದಲ್ಲಿ ದೀಪಾವಳಿ ಸಂಭ್ರಮಾಚರಣೆಗಾಗಿ ಹೊಸ ಕಾರುಗಳ ಖರೀದಿ ಪ್ರಕ್ರಿಯೆ ಜೋರಾಗಿದೆ. ಹೊಸ ವಾಹನಗಳ ಖರೀದಿಗಾಗಿ ಲಕ್ಷಾಂತರ ಗ್ರಾಹಕರು ಬುಕಿಂಗ್ ದಾಖಲಿಸಿದ್ದು, ಹಬ್ಬದ ದಿನದಂದು ವಾಹನಗಳ ವಿತರಣೆ ಪಡೆಯಲು ಗ್ರಾಹಕರು ಎದುರು ನೋಡುತ್ತಿದ್ದಾರೆ.

ಈ ದೀಪಾವಳಿಯಲ್ಲಿ ನೀವು ಹೊಸ ಕಾರು ಖರೀದಿಯ ಯೋಜನೆಯಲ್ಲಿದ್ದರೆ ನಿಮಗೆ ಈ ಸುದ್ದಿ ನಿರಾಶೆ ಉಂಟುಮಾಡುತ್ತೆ!
ಹೊಸ ಕಾರುಗಳ ವಿತರಣೆ
Follow us on

ಕಳೆದ ಎರಡು ವರ್ಷಗಳಿಂದ ಕೋವಿಡ್ ಪರಿಣಾಮ ತಗ್ಗಿದ್ದ ಹೊಸ ವಾಹನಗಳ ಮಾರಾಟವು ಇದೀಗ ಸಾಕಷ್ಟು ಸುಧಾರಣೆ ಕಂಡಿದ್ದು, ದಸರಾ ನಂತರ ಇದೀಗ ದೀಪಾವಳಿ ಸಂಭ್ರಮದಲ್ಲೂ ಭಾರೀ ಪ್ರಮಾಣದ ಹೊಸ ವಾಹನಗಳ ಮಾರಾಟ ನೀರಿಕ್ಷೆಯಿದೆ. ಆದರೆ ಗ್ರಾಹಕರ ಬೇಡಿಕೆಗೆ ತಕ್ಕಂತೆ ವಾಹನ ಉತ್ಪಾದನೆಯಿಲ್ಲದಿರುವುದು ವಿತರಣೆ ಪ್ರಮಾಣದ ಮೇಲೆ ಪರಿಣಾಮ ಬೀರುವ ಸಾಧ್ಯತೆಗಳಿವೆ. ಹಬ್ಬದ ದಿನದಂದೆ ಹೊಸ ವಾಹನ ವಿತರಣೆಯ ನೀರಿಕ್ಷೆಯಲ್ಲಿರುವ ಕೆಲವು ಗ್ರಾಹಕರಿಗೆ ಇದು ನಿರಾಶೆ ಉಂಟುಮಾಡಬಹುದಾಗಿದ್ದು, ವಾಹನ ವಿತರಣೆಗೆ ಇನ್ನು ಕೆಲವು ದಿನ ಅಥವಾ ಕೆಲವು ತಿಂಗಳುಗಳೇ ಬೇಕಾಗಬಹುದು.

ತಕ್ಷಣಕ್ಕೆ ಹೊಸ ವಾನಹಗಳ ಖರೀದಿ ಅಸಾಧ್ಯ
ಹೊಸ ವಾಹನಗಳ ಖರೀದಿಗಾಗಿ ಈಗಾಗಲೇ ಕೆಲವು ತಿಂಗಳು ಮುಂಚಿತವಾಗಿಯೇ ಬುಕಿಂಗ್ ಮಾಡಿದ್ದರೆ ಮಾತ್ರವೇ ನೀವು ಅಂದುಕೊಂಡಂತೆ ಹಬ್ಬದ ಸಂಭ್ರಮದಲ್ಲಿ ವಿತರಣೆ ಪಡೆದುಕೊಳ್ಳಬಹುದು. ಆದರೆ ಈ ತಕ್ಷಣಕ್ಕೆ ಬುಕಿಂಗ್ ದಾಖಲಿಸಿ ವಾಹನ ಖರೀದಿ ಬಯಸುವ ಗ್ರಾಹಕರಿಗೆ ನಿರಾಶೆ ಉಂಟಾಗಲಿದೆ. ಏಕೆಂದರೆ ಸದ್ಯ ಮಾರುಕಟ್ಟೆಯಲ್ಲಿ ಕೆಲವು ಪ್ರಮುಖ ಕಾರುಗಳ ಖರೀದಿಗಾಗಿ ಕನಿಷ್ಠ 2 ತಿಂಗಳಿನಿಂದ ಒಂದೂವರೆ ವರ್ಷಗಳ ಕಾಲ ಕಾಯಬೇಕಾದ ಅನಿವಾರ್ಯತೆಗಳಿವೆ.

ಭಾರತದಲ್ಲಿ ಹೆಚ್ಚಿನ ಗ್ರಾಹಕರು ಪ್ರಮುಖ ಹಬ್ಬಗಳ ದಿನಗಳೆಂದೆ ಹೊಸ ವಾಹನಗಳ ಖರೀದಿಗೆ ಮುಂದಾಗುವುದು ಬೇಡಿಕೆ ಹೆಚ್ಚಳಕ್ಕೆ ಪ್ರಮುಖ ಕಾರಣವಾಗಿದೆ ಎನ್ನುವ ಟಾಟಾ ಮೋಟಾರ್ಸ್ ಮತ್ತು ರೆನಾಲ್ಟ್ ಇಂಡಿಯಾ ಕಾರ್ ಶೋರೂಂ ಮಾಲೀಕರಾದ ಅಜಯ್ ಅಗರ್ವಾಲ್ ಅವರು ಮಾರಾಟ ಪ್ರಮಾಣವು ವರ್ಷದಿಂದ ವರ್ಷಕ್ಕೆ ದ್ವಿಗುಣಗೊಳ್ಳುತ್ತಿದೆ ಎಂದಿದ್ದಾರೆ.

ಇದನ್ನು ಓದಿ:  ಭಾರತದಲ್ಲಿ ಸದ್ಯ ಖರೀದಿಸಬಹುದಾದ ಅತಿಹೆಚ್ಚು ಸುರಕ್ಷಿತ ಮಧ್ಯಮ ಕ್ರಮಾಂಕದ ಕಾರುಗಳಿವು!

ಭಾರತದಲ್ಲಿ ಕೋವಿಡ್ ನಂತರ ವೈಯಕ್ತಿಕ ವಾಹನಗಳ ಬಳಕೆಯು ಹೆಚ್ಚುತ್ತಿರುವುದು ಹೊಸ ವಾಹನಗಳ ಬೇಡಿಕೆ ಪ್ರಮಾಣ ದ್ವಿಗುಣಗೊಳ್ಳಲು ಪ್ರಮುಖ ಕಾರಣವಾಗಿದ್ದು, ಬೇಡಿಕೆ ಹೆಚ್ಚಿದ್ದರೂ ಕೂಡಾ ಉತ್ಪಾದನಾ ಪ್ರಮಾಣವು ಮಾತ್ರ ಆಶಾದಾಯಕವಾಗಿಲ್ಲ ಎನ್ನಬಹುದು. ಇದಕ್ಕೆ ಪ್ರಮುಖ ಕಾರಣವೆಂದರೆ ಹೊಸ ವಾಹನಗಳಿಗೆ ಹೆಚ್ಚು ಬಳಕೆಯಾಗುತ್ತಿರುವ ಸೆಮಿಕಂಡಕ್ಟರ್ ಪೂರೈಕೆಯು ತಗ್ಗಿರುವುದು ಹೊಸ ವಾಹನಗಳ ಉತ್ಪಾದನೆ ಮೇಲೆ ಪರಿಣಾಮ ಬೀರುತ್ತಿದೆ.

ಆಧುನಿಕ ತಂತ್ರಜ್ಞಾನದೊಂದಿಗೆ ಬಿಡುಗಡೆಯಾಗುತ್ತಿರುವ ಹೊಸ ಕಾರುಗಳಲ್ಲಿ ಸೆಮಿಕಂಡಕ್ಟರ್ ಅವಶ್ಯಕವಾಗಿದ್ದು, ವಿದೇಶಿ ಮಾರುಕಟ್ಟೆಯಿಂದ ಹೆಚ್ಚಿನ ಪ್ರಮಾಣದಲ್ಲಿ ಆಮದುಗೊಳ್ಳುವ ಸೆಮಿಕಂಡಕ್ಟರ್ ಪ್ರಮಾಣವು ತಗ್ಗಿರುವುದು ಆಟೋ ಉದ್ಯಮಕ್ಕೆ ಹೊಡೆತ ನೀಡುತ್ತಿದೆ.

ಈ ಹೊಸ ಕಾರುಗಳ ಖರೀದಿಗೆ ವರ್ಷಗಳೇ ಬೇಕು!

ಪ್ರಸ್ತುತ ಮಾರುಕಟ್ಟೆಯಲ್ಲಿ ಹಲವು ಕಾರು ಮಾದರಿಗಳಿಗೆ ಹೆಚ್ಚಿನ ಬೇಡಿಕೆಯಿದ್ದು, ಮಹೀಂದ್ರಾ ನಿರ್ಮಾಣದ ಎಕ್ಸ್ ಯುವಿ700 ಎಸ್ ಯುವಿ ಖರೀದಿಗೆ ಕನಿಷ್ಠ 66 ವಾರಗಳಿಂದ 68 ವಾರಗಳ ಕಾಲ ಕಾಯಬೇಕಾಗುತ್ತದೆ. ಹಾಗೆಯೇ ಕಿಯಾ ಕಾರೆನ್ಸ್ ಕಾರು ಖರೀದಿಗಾಗಿ 40 ವಾರಗಳಿಂದ 50 ವಾರಗಳು, ಥಾರ್ ಖರೀದಿಗಾಗಿ 23 ವಾರಗಳಿಂದ 25 ವಾರಗಳು, ಪಂಚ್ ಕಾರು ಖರೀದಿಗಾಗಿ 24 ವಾರಗಳಿಂದ 26 ವಾರಗಳು, ನೆಕ್ಸಾನ್ ಕಾರಿಗಾಗಿ 16 ವಾರಗಳಿಂದ 20 ವಾರಗಳು, ಟೊಯೊಟಾ ಹೈರೈಡರ್ ಕಾರು ಖರೀದಿಗಾಗಿ ಕನಿಷ್ಠ 20 ವಾರಗಳ ಕಾಯಬೇಕಾಗುತ್ತದೆ.

ನವರಾತ್ರಿ ವೇಳೆ ಭರ್ಜರಿ ಬೇಡಿಕೆ ದಾಖಲು

ಕಳೆದ ತಿಂಗಳು ನವರಾತ್ರಿಯಂದು ದೇಶಾದ್ಯಂತ ಪ್ರಮುಖ ವಾಹನ ಕಂಪನಿಗಳು ಹೆಚ್ಚಿನ ಮಟ್ಟದ ಬೇಡಿಕೆ ಪಡೆದುಕೊಂಡಿದೆ. ಅಕ್ಟೋಬರ್ ಕೊನೆಯ ತನಕ ಒಟ್ಟು 5,39,227 ವಾಹನಗಳು ಮಾರಾಟಗೊಂಡಿದ್ದು, ಇದೀಗ ದೀಪಾವಳಿ ಮತ್ತು ಉತ್ತರ ಭಾರತದಲ್ಲಿ ಹೆಚ್ಚು ಆಚರಣೆ ಮಾಡಲಾಗುವ ಧಾಂತೆರಸ್ ವೇಳೆ ಇನ್ನು ಹೆಚ್ಚಿನ ಮಟ್ಟದ ಹೊಸ ವಾಹನಗಳ ಮಾರಾಟ ನೀರಿಕ್ಷೆಯಿದೆ.

Published On - 2:55 pm, Wed, 19 October 22