Safest Cars: ಭಾರತದಲ್ಲಿ ಸದ್ಯ ಖರೀದಿಸಬಹುದಾದ ಅತಿಹೆಚ್ಚು ಸುರಕ್ಷಿತ ಮಧ್ಯಮ ಕ್ರಮಾಂಕದ ಕಾರುಗಳಿವು!
ಭಾರತದಲ್ಲಿ ಹೊಸ ಕಾರುಗಳ ಉತ್ಪಾದನಾ ಗುಣಮಟ್ಟವು ಕಳೆದ ಒಂದು ದಶಕ ಅವಧಿಯಲ್ಲಿ ಸಾಕಷ್ಟು ಸುಧಾರಣೆ ಕಂಡಿದ್ದು, ಗ್ರಾಹಕರು ಕೂಡಾ ಅಗ್ಗದ ಬೆಲೆಯ ಕಾರುಗಳಿಂತ ಹೆಚ್ಚು ಸುರಕ್ಷಿತ ಕಾರುಗಳ ಖರೀದಿಗೆ ಆದ್ಯತೆ ನೀಡುತ್ತಿದ್ದಾರೆ.
ವಾಹನ ಮಾರುಕಟ್ಟೆಯಲ್ಲಿ ಸುರಕ್ಷಿತ ಕಾರುಗಳ ಸಂಖ್ಯೆ ಹೆಚ್ಚುತ್ತಿದ್ದು, ಐಷಾರಾಮಿ ಕಾರುಗಳಲ್ಲಿ ಮಾತ್ರವಲ್ಲ ಮಧ್ಯಮ ಕ್ರಮಾಂಕದ ಕಾರುಗಳು ಕೂಡಾ ಸುರಕ್ಷಾ ವಿಚಾರದಲ್ಲಿ ಗಮನಸೆಳೆಯುತ್ತಿವೆ. ಪ್ರಯಾಣಿಕರ ಗರಿಷ್ಠ ಸುರಕ್ಷತೆಗಾಗಿ ಕೇಂದ್ರ ಸರ್ಕಾರವು ಹೊಸ ಕಾರುಗಳ ಮಾರಾಟದಲ್ಲಿ ಹಲವು ಕಡ್ಡಾಯ ನಿಯಮಾವಳಿಗಳನ್ನು ಹಂತ-ಹಂತವಾಗಿ ಜಾರಿಗೆ ತರುತ್ತಿದ್ದು, ಪರಿಣಾಮ ಸುರಕ್ಷಿತ ಕಾರುಗಳ ಖರೀದಿಗೆ ಗ್ರಾಹಕರು ಕೂಡಾ ಆದ್ಯತೆ ನೀಡುತ್ತಿದ್ದಾರೆ. ಹಾಗಾದರೆ ಪ್ರಸ್ತುತ ಮಾರುಕಟ್ಟೆಯಲ್ಲಿ ಲಭ್ಯವಿರುವ ಸುರಕ್ಷಿತ ಕಾರುಗಳು ಯಾವವು? ಮತ್ತು ಸುರಕ್ಷಾ ಫೀಚರ್ಸ್ ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ.
ಸ್ಕೋಡಾ ಕುಶಾಕ್ ಮತ್ತು ಫೋಕ್ಸ್ ವ್ಯಾಗನ್ ಟೈಗುನ್
ಗ್ಲೋಬಲ್ ಎನ್ ಸಿಎಪಿ ಕ್ರ್ಯಾಶ್ ಟೆಸ್ಟಿಂಗ್ ನಲ್ಲಿ 71.64 ಅಂಕಗಳೊಂದಿಗೆ ಹೊಸ ಸ್ಕೋಡಾ ಕುಶಾಕ್ ಮತ್ತು ಫೋಕ್ಸ್ ವ್ಯಾಗನ್ ಟೈಗುನ್ ಎರಡು ಕಾರುಗಳು ಗರಿಷ್ಠ 5 ಸ್ಟಾರ್ ರೇಟಿಂಗ್ಸ್ ಪಡೆದುಕೊಂಡಿದ್ದು, ಪ್ರೀಮಿಯಂ ಫೀಚರ್ಸ್ ಜೊತೆಗೆ ಪ್ರಯಾಣಿಕರ ಸುರಕ್ಷತೆಯಲ್ಲಿ ಗರಿಷ್ಠ ಅಂಕಪಡೆದುಕೊಂಡಿವೆ.
ಎಂಕ್ಯೂಬಿ-ಎo ಇನ್ ಪ್ಲ್ಯಾಟ್ ಫಾರ್ಮ್ ಆಧರಿಸಿರುವ ಹೊಸ ಕುಶಾಕ್ ಮತ್ತು ಟೈಗುನ್ ಕಾರು ಮಾದರಿಗಳು ಹೆಚ್ಚಿನ ಸುರಕ್ಷಾ ಸೌಲಭ್ಯಗಳನ್ನು ಪಡೆದುಕೊಂಡಿದ್ದು, ಶೇ.90 ರಷ್ಟು ಸ್ಥಳೀಯ ಬಿಡಿಭಾಗಗಳೊಂದಿಗೆ ಅಭಿವೃದ್ದಿಗೊಂಡಿವೆ. ಜೊತೆಗೆ ಎರಡು ಕಾರು ಮಾದರಿಗಳಲ್ಲೂ ಹೆಚ್ಚಿನ ಮಟ್ಟದ ಸ್ಟ್ಯಾಂಡರ್ಡ್ ಸೇಫ್ಟಿ ಫೀಚರ್ಸ್ ನೀಡಲಾಗಿದ್ದು, ಎರಡು ಕಾರುಗಳಲ್ಲೂ ಕಾರ್ ಕನೆಕ್ಟ್ ಟೆಕ್ನಾಲಜಿ ಸೇರಿದಂತೆ ಒಟ್ಟು 40ಕ್ಕೂ ಹೆಚ್ಚು ಸುರಕ್ಷಾ ಸೌಲಭ್ಯಗಳಿವೆ.
ಮಹೀಂದ್ರಾ ಎಕ್ಸ್ ಯುವಿ700
ಮಧ್ಯಮ ಕ್ರಮಾಂಕದ ಎಸ್ ಯುವಿ ಕಾರುಗಳ ಮಾರಾಟದಲ್ಲಿ ಸದ್ಯ ಅಗ್ರಸ್ಥಾನದಲ್ಲಿರುವ ಎಕ್ಸ್ ಯುವಿ700 ಕಾರು ಮಾದರಿಯು ಕ್ರ್ಯಾಶ್ ಟೆಸ್ಟಿಂಗ್ ನಲ್ಲಿ 5 ಸ್ಟಾರ್ ಸೇಫ್ಟಿ ರೇಟಿಂಗ್ಸ್ ಹೊಂದಿದ್ದು, ಇದು ಎಡಿಎಎಸ್ ಸೌಲಭ್ಯದೊಂದಿಗೆ ಹೆಚ್ಚಿನ ಮಟ್ಟದ ಪ್ರೀಮಿಯಂ ಫೀಚರ್ಸ್ ಮೂಲಕ ಹೆಚ್ಚಿನ ಬೇಡಿಕೆ ಹೊಂದಿದೆ.
ಇದನ್ನು ಓದಿ: Polestar 3 EV: ಪ್ರತಿ ಚಾರ್ಜ್ ಗೆ 610 ಕಿ.ಮೀ ಮೈಲೇಜ್ ನೀಡುತ್ತದೆ ಪೊಲ್ ಸ್ಟಾರ್ 3 ಎಲೆಕ್ಟ್ರಿಕ್ ಕಾರು!
ಟಾಟಾ ಪಂಚ್
ಪ್ರಸ್ತುತ ಮಾರುಕಟ್ಟೆಯಲ್ಲಿ ಖರೀದಿಗೆ ಲಭ್ಯವಿರುವ ಬಜೆಟ್ ಬೆಲೆಯ ಸುರಕ್ಷಿತ ಕಾರುಗಳ ಪಟ್ಟಿಯಲ್ಲಿರುವ ಟಾಟಾ ಪಂಚ್ ಪ್ರಮುಖ ಕಾರುಗಳನ್ನು ಹಿಂದಿಕ್ಕಿ ಕ್ರ್ಯಾಶ್ ಟೆಸ್ಟಿಂಗ್ ನಲ್ಲಿ 5 ಸ್ಟಾರ್ ಸೇಫ್ಟಿ ರೇಟಿಂಗ್ಸ್ ಗಳಿಸಿದೆ. ಈ ಮೂಲಕ ಬಜೆಟ್ ಕಾರುಗಳ ಮಾರಾಟದಲ್ಲಿ ಹೆಚ್ಚು ಬೇಡಿಕೆ ಹೊಂದಿರುವ ಪಂಚ್ ಕಾರು 57.34 ಅಂಕಗಳೊಂದಿಗೆ ಹೆಚ್ಚು ಸುರಕ್ಷಿತ ಕಾರು ಮಾದರಿಯಾಗಿದ್ದು, ಹೊಸ ಕಾರಿನಲ್ಲಿ ಹಲವಾರು ಸುರಕ್ಷಾ ಸೌಲಭ್ಯಗಳನ್ನು ನೀಡಲಾಗಿದೆ.
ಮಹೀಂದ್ರಾ ಎಕ್ಸ್ ಯುವಿ300
ಸುರಕ್ಷಿತ ಕಾರುಗಳ ಪಟ್ಟಿಯಲ್ಲಿ ಎಕ್ಸ್ ಯುವಿ300 ಕಂಪ್ಯಾಕ್ಟ್ ಎಸ್ ಯುವಿ ಕೂಡಾ ಪ್ರಮುಖವಾಗಿದ್ದು, ಇದು 53.86 ಅಂಕಗಳೊಂದಿಗೆ ಹೆಚ್ಚಿನ ಮಟ್ಟದ ಸುರಕ್ಷತೆಯನ್ನು ಖಾತ್ರಿ ಪಡಿಸುತ್ತದೆ. ಇದರಲ್ಲಿ 6 ಏರ್ ಬ್ಯಾಗ್ ಸೇರಿದಂತೆ ಹಲವಾರು ಸೇಫ್ಟಿ ಫೀಚರ್ಸ್ ಗಳಿದ್ದು, ಅಪಘಾತದ ವೇಳೆ ಹೆಚ್ಚಿನ ಮಟ್ಟದ ಸುರಕ್ಷತೆ ನೀಡುತ್ತದೆ.
ಟಾಟಾ ಆಲ್ಟ್ರೋಜ್ ಮತ್ತು ನೆಕ್ಸಾನ್
ಸುರಕ್ಷಿತ ಕಾರುಗಳ ಪಟ್ಟಿಯಲ್ಲಿ ಸದ್ಯ ಟಾಟಾ ಮೋಟಾರ್ಸ್ ನಿರ್ಮಾಣದ ಕಾರುಗಳೇ ಅಗ್ರಸ್ಥಾನದಲ್ಲಿದ್ದು, 5 ಸ್ಟಾರ್ ಸೇಫ್ಟಿ ಹೊಂದಿರುವ ಕಾರುಗಳ ಪಟ್ಟಿಯಲ್ಲಿ ಪಂಚ್ ನಂತರ ಆಲ್ಟ್ರೋಜ್ ಮತ್ತು ನೆಕ್ಸಾನ್ ಕಾರುಗಳು ಕೂಡಾ ಪ್ರಮುಖವಾಗಿವೆ. ಈ ಎರಡೂ ಕಾರುಗಳಲ್ಲೂ ಟಾಟಾ ಕಂಪನಿಯು ಹಲವಾರು ಸ್ಟ್ಯಾಂಡರ್ಡ್ ಸೇಫ್ಟಿ ಫೀಚರ್ಸ್ ಅಳವಡಿಸಿದ್ದು, ಅಪಘಾತಗಳ ಸಂದರ್ಭದಲ್ಲಿ ಇವು ಗರಿಷ್ಠ ಸುರಕ್ಷತೆ ಖಾತ್ರಿಪಡಿಸುತ್ತವೆ.
Published On - 12:27 pm, Mon, 17 October 22