ಬೇಸಿಗೆ ಆರಂಭವಾಗುತ್ತಿದ್ದಂತೆ ವಾಹನ ಚಾಲನೆ (Car Driving) ವೇಳೆ ವಿವಿಧ ಸಮಸ್ಯೆಗಳು ಎದುರಾಗಲಿದ್ದು, ಇದರಲ್ಲಿ ಮುಖ್ಯವಾಗಿ ಬಿಸಿಲಿನ ತಾಪದಲ್ಲಿ ಚಾಲನೆ ಮಾಡುವುವರು ಹೆಚ್ಚಿನ ಕಿರಿಕಿರಿ ಅನುಭವಿಸುತ್ತಾರೆ. ಬೇಸಿಗೆ ತಾಪವನ್ನು ತಡೆಯಲು ಇತ್ತೀಚಿನ ಹೊಸ ಕಾರುಗಳಲ್ಲಿ ವಿವಿಧ ತಂತ್ರಜ್ಞಾನ ಸೌಲಭ್ಯಗಳಿದ್ದರೂ ಹಳೆಯ ಕಾರುಗಳ ಚಾಲನೆ ಒಂದು ಸವಾಲಾಗಿ ಪರಿಣಮಿಸುತ್ತದೆ. ಹೀಗಾಗಿ ಕೆಲವು ಸರಳ ಉಪಾಯಗಳನ್ನು ಅನುಸರಿಸುವ ಮೂಲಕ ಸುಡುಬಿಸಿಲಿನಲ್ಲೂ ನಿಮ್ಮ ಕಾರನ್ನು ತಂಪಾಗಿಸುವ ಮೂಲಕ ಅರಾಮದಾಯಕ ಪ್ರಯಾಣ ಮಾಡಬಹುದಾಗಿದೆ.
ನೆರಳಿನ ಅಡಿಯಲ್ಲಿ ಪಾರ್ಕ್ ಮಾಡಿ
ನಿಮ್ಮ ಕಾರನ್ನು ಸಾಧ್ಯವಷ್ಟು ನೆರಳು ಇರುವ ಪ್ರದೇಶದಲ್ಲಿ ನಿಲುಗಡೆ ಮಾಡಿ. ಇದರಿಂದ ಕಾರಿನ ಆಂತರಿಕ ತಾಪಮಾನವು ಗಮನಾರ್ಹವಾಗಿ ಕಡಿಮೆಯಾಗಲಿದ್ದು, ರಣಬಿಸಿಲಿನಿಂದ ಕಾರಿಗೆ ಆಗಬಹುದಾದ ಹಾನಿಯನ್ನು ತಡೆಯಬಹುದಾಗಿದೆ. ಒಂದು ವೇಳೆ ನೆರಳು ಇರುವ ಪ್ರದೇಶದಲ್ಲಿ ನಿಲುಗಡೆಗೆ ಸಾಧ್ಯವಾಗುತ್ತಿಲ್ಲ ಎನ್ನುವುದಾರರೇ ಹೊದಿಕೆಯ ಮೂಲಕ ಕಾರನ್ನು ಬಿಸಿಲಿನಿಂದ ರಕ್ಷಣೆ ಮಾಡಬಹುದಾಗಿದೆ.
ಕಿಟಕಿಗಳನ್ನು ಸ್ವಲ್ಪಮಟ್ಟಿಗೆ ತೆರೆದಿಡಿ
ನೀವು ಕಾರ್ ಅನ್ನು ಪಾರ್ಕ್ ಮಾಡುವಾಗ ಸಾಧ್ಯವಾದರೆ ಸುರಕ್ಷಿತ ಪಾರ್ಕಿಂಗ್ ಪ್ರದೇಶಗಳಲ್ಲಿ ಕಾರಿನ ಕಿಟಕಿಗಳನ್ನು ಸ್ವಲ್ಪಮಟ್ಟಿಗೆ ತೆರೆಯುವ ಮೂಲಕ ಕಾರಿನ ಒಳಭಾಗವನ್ನು ತಂಪಾಗಿ ಇರಿಸಬಹುದಾಗಿದೆ. ಆದರೆ ಸುರಕ್ಷಿತವಲ್ಲದ ಪ್ರದೇಶಗಳಲ್ಲಿ ಕಿಟಕಿ ತೆರೆಯುವುದು ಸೂಕ್ತವಲ್ಲ ಎನ್ನಬಹುದು. ಜೊತೆಗೆ ಅನಿರೀಕ್ಷಿತ ಮಳೆಯು ಕಾರಿನ ಒಳಭಾಗವನ್ನು ಹಾನಿಮಾಡಬಹುದಾಗಿದೆ. ಹೀಗಾಗಿ ಸುರಕ್ಷಿತ ಪ್ರದೇಶಗಳಲ್ಲಿ ಮಾತ್ರ ಕಾರಿನ ಕಿಟಕಿಗಳನ್ನು ಸ್ವಲ್ಪಮಟ್ಟಿಗೆ ತೆರೆದಿಡುವುದು ಉತ್ತಮ.
ವಿಸರ್ ಗಳನ್ನು ಬಳಕೆ ಮಾಡಿ ಮತ್ತು ಒಳಾಂಗಣ ರಕ್ಷಿಸಿ
ಬಿಸಿಲಿನಲ್ಲಿ ಕಾರ್ ಪಾರ್ಕ್ ಮಾಡಿದಾಗ ಒಳಭಾಗದಲ್ಲಿ ಉತ್ಪತ್ತಿಯಾಗುವ ಶಾಖ ಮತ್ತು ಬಿಸಿಲಿನ ತೀವ್ರತೆ ಕಾರಿನ ಆಸನಗಳನ್ನು ಹಾನಿಗೊಳಿಸಬಹುದಾಗಿದೆ. ಹೀಗಾಗಿ ಸೂರ್ಯನ ಶಾಖವನ್ನು ತಡೆಯಲು ವಿಸರ್ ಗಳನ್ನು ಬಳಸಬಹುದಾಗಿದ್ದು, ಇವು ಕಾರಿನ ಎಸಿ ನಿರ್ವಹಣೆ ಕಾರ್ಯಕ್ಷಮತೆ ಹೆಚ್ಚಿಸಲು ಸಹಾಕಾರಿಯಾಗಿದೆ. ಇದರೊಂದಿಗೆ ಲೆದರ್ ಆಸನಗಳಿಗೆ ಸೂರ್ಯ ಶಾಖ ತಪ್ಪಿಸಲು ಸನ್‌ಶೇಡ್‌ಗಳು ಅಥವಾ ವಿಶೇಷವಾಗಿ ವಿನ್ಯಾಸಗೊಳಿಸಿದ ಕವರ್‌ಗಳನ್ನು ಬಳಸುವುದರಿಂದ ಅವುಗಳನ್ನು ನೇರ ಸೂರ್ಯನ ಬೆಳಕಿನಿಂದ ರಕ್ಷಿಸಬಹುದಾಗಿದೆ.
ಕೂಲಿಂಗ್ ಕುಶನ್ ಗಳ ಬಳಕೆ
ಬೇಸಿಗೆಯಲ್ಲಿ ಕಾರು ಚಾಲನೆ ಮಾಡುವಾಗ ಆಸನಗಳು ಬಹುಬೇಗನೆ ಶಾಖ ಹೊರಹಾಕಲು ಆರಂಭಿಸುತ್ತದೆ. ಹೀಗಾಗಿ ಬೇಸಿಗೆಯ ಸಂದರ್ಭದಲ್ಲಿ ಕಾರು ಚಾಲನೆ ಸಾಕಷ್ಟು ಕಿರಿಕಿರಿ ಉಂಟುಮಾಡಬಹುದಾಗಿದೆ. ಇದರಿಂದ ನಿಮ್ಮ ಕಾರುಗಳಲ್ಲಿ ಕೂಲಿಂಗ್ ಸೀಟ್ ಕುಶನ್ ಹಾಕಬಹುದಾಗಿದ್ದು, ಇವು ತಂಪಾದ ಗಾಳಿಯನ್ನು ಪರಿಚಲನೆ ಮಾಡುವ ಮೂಲಕ ಚಾಲನೆಯನ್ನು ಅರಾಮದಾಯಕಗೊಳಿಸುತ್ತದೆ.
ಪ್ರಯಾಣಕ್ಕೂ ಮುನ್ನ ಕಾರನ್ನು ಕೂಲ್ ಮಾಡಿ
ಸುಡುಬಿಸಿಲಿನ ಸಂದರ್ಭದಲ್ಲಿ ಕಾರು ಪ್ರಯಾಣ ಮಾಡುವುದಕ್ಕೂ ಎಸಿಯನ್ನು ಸಕ್ರಿಯಗೊಳಿಸುವ ಮೊದಲು ನೀವು ಫ್ಯಾನ್ ಅನ್ನು ಆನ್ ಮಾಡುವುದು ಸರಳ ಮತ್ತು ಪರಿಣಾಮಕಾರಿ ತಂತ್ರವಾಗಿದೆ. ಫ್ಯಾನ್ ಮೋಡ್ ಮೂಲಕ ಕಿಟಕಿಗಳನ್ನು ಸ್ವಲ್ಪಮಟ್ಟಿಗೆ ತೆರೆದು ಒಳಭಾಗದಲ್ಲಿನ ಬಿಸಿ ಗಾಳಿಯನ್ನು ಹೊರಹಾಕಬಹುದಾಗಿದ್ದು, ತದನಂತರವಷ್ಟೇ ಎಸಿ ಆನ್ ಮಾಡುವ ಮೂಲಕ ಕಾರನ್ನು ಅತಿ ಕಡಿಮೆ ಸಮಯದಲ್ಲಿ ತಂಪಾಗಿಸಬಹುದಾಗಿದೆ.
ಸುಡುಬಿಸಿಲಿನಲ್ಲಿ ಕಾರು ಪ್ರಯಾಣ ತಪ್ಪಿಸಿ
ಗರಿಷ್ಠ ತಾಪಾಮನದ ಸಂದರ್ಭಗಳಲ್ಲಿ ಅನಗತ್ಯ ಕಾರು ಪ್ರಯಾಣವನ್ನು ತಪ್ಪಿಸುವುದು ಕೂಡಾ ಉತ್ತಮ ಕ್ರಮವಾಗಿದೆ. ತಂಪು ಇರುವ ಸಂದರ್ಭಯಲ್ಲಿಯೇ ಹೆಚ್ಚಿನ ಕಾರು ಪ್ರಯಾಣದ ಮೂಲಕ ಎಸಿ ಸಿಸ್ಟಂ ಮತ್ತು ಬ್ಯಾಟರಿ ಮೇಲಿನ ಒತ್ತಡವನ್ನು ಕಡಿಮೆ ಮಾಡಬಹುದಾಗಿದೆ. ಇದಕ್ಕಾಗಿ ಸುಡುಬಿಸಿಲಿನ್ನು ತಪ್ಪಿಸಲು ಮುಂಜಾನೆ ಮತ್ತು ಸಂಜೆಯ ಸಮಯವನ್ನು ಆಯ್ದಕೊಳ್ಳಬಹುದಾಗಿದ್ದು, ಅರಾಮದಾಯಕವಾಗಿ ಪ್ರಯಾಣ ಮಾಡಬಹುದಾಗಿದೆ.