ಹೊಸ ಕಾರುಗಳ ಖರೀದಿಯ ನಂತರ ಅವುಗಳ ನಿರ್ವಹಣೆ ಮಾಲೀಕರಿಗೆ ಒಂದು ಸವಾಲಿನ ಕೆಲಸ ಎಂದರೆ ತಪ್ಪಾಗುವುದಿಲ್ಲ. ಅದರಲ್ಲೂ ಕಾರು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ಅದರ ಎಂಜಿನ್ ಪರಿಪೂರ್ಣವಾಗಿರುವುದು ತುಂಬಾ ಮುಖ್ಯವಾಗಿರುತ್ತದೆ. ಹೀಗಾಗಿ ಕೆಲವು ಅಗತ್ಯ ಮತ್ತು ಸರಳ ನಿರ್ವಹಣಾ ವಿಧಾನಗಳನ್ನು ನಿಯಮಿತವಾಗಿ ಅನುಸರಿಸಿದ್ದಲ್ಲಿ ನಿಮ್ಮ ಕಾರಿನ ದಕ್ಷತೆ ಉತ್ತಮವಾಗಿರಲು ಸಹಕಾರಿಯಾಗಿರುತ್ತದೆ.
ಕಾರುಗಳ ಹೃದಯ ಭಾಗವಾಗಿರುವ ಎಂಜಿನ್ ಉಳಿದೆಲ್ಲಾ ತಾಂತ್ರಿಕ ಸೌಲಭ್ಯಗಳಿಂತಲೂ ಅತಿ ಮುಖ್ಯವಾದ ಭಾಗವಾಗಿದ್ದು, ಕಾರು ಚಾಲನೆಗೂ ಮುನ್ನ ಎಂಜಿನ್ ಕಾರ್ಯನಿರ್ವಹಣೆ ಉತ್ತಮವಾಗಿದೆಯಾ ಎನ್ನುವುದು ಖಚಿತಪಡಿಸಿಕೊಳ್ಳಬೇಕು. ಹಾಗಾದ್ರೆ ಎಂಜಿನ್ ಕಾರ್ಯನಿರ್ವಹಣೆಯನ್ನ ಉತ್ತಮಗೊಳಿಸಲು ಅನುಕೂಲಕವಾಗುವ ನಿರ್ವಹಣಾ ವಿಧಾನಗಳು ಯಾವುವು? ಅವುಗಳ ಹೇಗೆ ಕಾರಿನ ಎಂಜಿನ್ ದಕ್ಷತೆಯನ್ನ ಸುಧಾರಿಸುತ್ತವೆ ಎನ್ನುವುದು ಇಲ್ಲಿ ತಿಳಿಯೋಣ.
ನಿಯಮಿತವಾಗಿ ಎಂಜಿನ್ ಆಯಿಲ್ ಬದಲಾಯಿಸಿ
ಕಾರುಗಳ ಎಂಜಿನ್ ದಕ್ಷತೆಯನ್ನು ಹೆಚ್ಚಿಸಲು ನಿಯಮಿತವಾಗಿ ಎಂಜಿನ್ ಆಯಿಲ್ ಬದಲಾಯಿಸುವುದು ತುಂಬಾ ಮುಖ್ಯವಾಗಿದೆ. ಎಂಜಿನ್ ಆಯಿಲ್ ಸರಾಗ ಕಾರ್ಯನಿರ್ವಹಿಸಲು ಮತ್ತು ಎಂಜಿನ್ ಘರ್ಷಣೆಯಿಂದಾಗುವ ಸವೆತವನ್ನು ಕಡಿಮೆ ಮಾಡುವಲ್ಲಿ ಸಾಕಷ್ಟು ಸಹಕಾರಿಯಾಗಿದೆ. ಹೀಗಾಗಿ ಕಾರು ತಯಾಕರು ಸೂಚಿಸುವ ಶಿಫಾರಸ್ಸು ಆಧರಿಸಿ ಅಗತ್ಯವಿದ್ದಾಗ ಎಂಜಿನ್ ಆಯಿಲ್ ಬದಲಾಯಿಸುವುದು ಉತ್ತಮ.
ಎಂಜಿನ್ ಕೂಲಂಟ್ ಪರೀಕ್ಷಿಸಿ
ಎಂಜಿನ್ ದಕ್ಷತೆ ಸುಧಾರಿಸಲು ಎಂಜಿನ್ ಕೂಲಂಟ್ ನಿರ್ವಹಣೆ ಕೂಡಾ ಪ್ರಮುಖವಾಗಿದೆ. ಇದು ಪವರ್‌ಟ್ರೇನ್ ಕಾರ್ಯನಿರ್ವಹಣೆಯ ಸಮಯದಲ್ಲಿ ಉತ್ಪತ್ತಿಯಾಗುವ ಶಾಖವನ್ನು ನಿಯಂತ್ರಿಸಲು ಸಹಕಾರಿಯಾಗಿದೆ. ಇದರಿಂದ ಎಂಜಿನ್ ನಲ್ಲಿ ಉತ್ಪತ್ತಿಯಾಗುವ ಶಾಖದ ಹರಡುವಿಕೆಗೆ ತಗ್ಗಿಸಲು ವಾಹನ ತಯಾರಕರು 1:1 ಅನುಪಾತದಲ್ಲಿ ಕೂಲಂಟ್ ಮತ್ತು ಡಿಸ್ಟಿಲ್ಲ್ಡ್ ವಾಟರ್ ಶಿಫಾರಸ್ಸು ಮಾಡುತ್ತಾರೆ.
ಏರ್ ಫಿಲ್ಟರ್ ಸ್ವಚ್ಛವಾಗಿರಲಿ
ಎಂಜಿನ್ ದಕ್ಷತೆಯಲ್ಲಿ ಏರ್ ಫಿಲ್ಟರ್ ಕೂಡಾ ಪ್ರಮುಖ ಪಾತ್ರವಹಿಸಲಿದ್ದು, ಎಂಜಿನ್‌ಗೆ ನುಗ್ಗುವ ಧೂಳಿನ ಕಣಗಳನ್ನು ತಡೆಯುವ ಮೂಲಕ ಮೋಟರ್‌ಗೆ ಹಾನಿಯಾಗುವುದನ್ನ ತಪ್ಪಿಸುತ್ತದೆ. ಧೂಳಿನಿಂದ ಫಿಲ್ಟರ್‌ನಲ್ಲಿ ಉಂಟಾಗುವ ಸಂಕುಚಿತ ಗಾಳಿಯ ಹರಿವು ಇಂಧನವನ್ನ ಸಂಪೂರ್ಣವಾಗಿ ಸುಡಲು ಬಿಡದೆ ಹೊರಸೂಸುವಿಕೆಯನ್ನು ಹೆಚ್ಚಿಸುತ್ತದೆ. ಹೀಗಾಗಿ ಧೂಳಿನಿಂದ ಕೂಡಿರುವ ಏರ್ ಫಿಲ್ಟರ್ ನಿಂದಾಗಿ ಇಂಧನ ದಕ್ಷತೆ ಕಡಿಮೆಯಾಗುತ್ತದೆ. ಆದ್ದರಿಂದ ನಿಯಮಿತವಾಗಿ ಏರ್ ಫಿಲ್ಟರ್ ಅನ್ನು ಸ್ವಚ್ಛಗೊಳಿಸಬೇಕು ಇಲ್ಲವೇ ಬದಲಾಯಿಸುವುದು ಉತ್ತಮ.
ತೈಲ ಸೋರಿಕೆಯನ್ನ ಪರಿಶೀಲಿಸಿ
ಕಾರು ಚಾಲನೆ ಆರಂಭಕ್ಕೂ ಮುನ್ನ ಕಾರಿನ ಅಡಿಯಲ್ಲಿ ಯಾವುದೇ ರೀತಿಯ ತೈಲ ಸೋರಿಕೆಯಾಗುತ್ತಿದೆಯಾ ಎಂಬುವುದನ್ನ ಖಚಿತಪಡಿಸಿಕೊಳ್ಳಿ. ಒಂದು ವೇಳೆ ಎಂಜಿನ್ ತೈಲ ಸೋರಿಕೆಯಾಗುತ್ತಿದ್ದರೆ ತಕ್ಷಣವೇ ಸರಿಪಡಿಸಿಕೊಳ್ಳಿ. ಯಾಕೆಂದರೆ ಅದು ನೇರವಾಗಿ ಎಂಜಿನ್ ದಕ್ಷತೆಯನ್ನು ಕುಗ್ಗಿಸುವುದರ ಜೊತೆಗೆ ಕಾರಿಗೆ ಗಮನಾರ್ಹ ಹಾನಿಯುಂಟು ಮಾಡಬಹುದು.
ಮೀಸಲು ಇಂಧನದಲ್ಲಿ ಚಾಲನೆ ಬೇಡ
ಕಾರು ಚಾಲನೆಯ ವೇಳೆ ಇಂಧನ ಉಳಿಸಲು ಮೀಸಲು ಇಂಧನದಲ್ಲಿ ಚಾಲನೆ ಮಾಡಿದ್ದಲ್ಲಿ ಅದು ನೇರವಾಗಿ ಎಂಜಿನ್ ದಕ್ಷತೆ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿ ಮೀಸಲು ಇಂಧನದಲ್ಲಿ ಚಾಲನೆ ಮಾಡುವುದನ್ನು ಸಾಧ್ಯವಿದ್ದಷ್ಟು ತಪ್ಪಿಸಿ. ಇಲ್ಲದಿದ್ದರೆ ಫ್ಯೂಲ್ ಫಿಲ್ಟರ್, ಪಂಪ್ ಮತ್ತು ಎಂಜಿನ್ ಅನ್ನು ಸರಿಪಡಿಸಲು ಅಥವಾ ಬದಲಾಯಿಸಲು ನೀವು ಸಾಕಷ್ಟು ಹಣವನ್ನು ಖರ್ಚು ಮಾಡಬೇಕಾಗಬಹುದು.
ಇನ್ನಷ್ಟು ಆಟೋಮೊಬೈಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 4:32 pm, Mon, 6 March 23