ನವದೆಹಲಿ: ಭಾರತದ ಎಲೆಕ್ಟ್ರಿಕ್ ವಾಹನ ಕ್ಷೇತ್ರದಲ್ಲಿ ಟಾಟಾ ಮೋಟಾರ್ಸ್ ಪ್ರಾಬಲ್ಯಕ್ಕೆ ಸೆಡ್ಡು ಹೊಡೆಯಲು ಚೀನಾ ಕಂಪನಿಯೊಂದು ಪ್ರಬಲ ಅಸ್ತ್ರ ಬಿಟ್ಟಿದೆ. ಚೀನಾ ಮೂಲದ ಎಂಜಿ ಮೋಟಾರ್ ಸಂಸ್ಥೆ (MG Motor) ಭಾರತದಲ್ಲಿ ಏಪ್ರಿಲ್ 26ರಂದು ಎಲೆಕ್ಟ್ರಿಕ್ ಕಾರೊಂದನ್ನು ಬಿಡಗಡೆ ಮಾಡಿದೆ. ಕಾಮೆಟ್ ಇವಿ (Comet EV) ಹೆಸರಿನ ಈ ವಿದ್ಯುತ್ ಚಾಲಿತ ಕಾರು ಸದ್ಯ ಭಾರತದ ಮಾರುಕಟ್ಟೆಯಲ್ಲಿರುವ ಅತೀ ಅಗ್ಗದ ಎಲೆಕ್ಟ್ರಿಕ್ ಕಾರು ಎನಿಸಿದೆ. ಈವರೆಗೂ ಭಾರತದ ಅತಿ ಅಗ್ಗದ ಎಲೆಕ್ಟ್ರಿಕ್ ಕಾರು ಎನಿಸಿದ್ದ ಟಾಟಾದ ಟಿಯಾಗೊ (Tata Tiago) ಇವಿ ದಾಖಲೆಯನ್ನು ಚೀನಾದ ಈ ಕಾಮೆಟ್ ಇವಿ ಮುರಿದಿದೆ. ಟಾಟಾದ ಟಿಯಾಗೋ ಇವಿ ಆರಂಭಿಕ ಬೆಲೆ 8,49,000 ರೂ ಆದರೆ, ಕಾಮೆಟ್ ಇವಿ ಸ್ಟಾರ್ಟಿಂಗ್ ಪ್ರೈಸ್ 7,98,000 ರೂ ಇದೆ.
ಚೀನಾದ ಎಸ್ಎಐಸಿ ಮೋಟಾ ಮಾಲಕತ್ವದ ಎಂಜಿ ಎಂಜಿ ಮೋಟಾರ್ ಸಂಸ್ಥೆ ತಯಾರಿಸಿರುವ ಕಾಮೆಟ್ ಇವಿ ಕಾರು ಒಮ್ಮೆ ಬ್ಯಾಟರಿ ಪೂರ್ತಿ ಚಾರ್ಜ್ ಮಾಡಿದರೆ 230 ಕಿ.ಮೀ. ವರೆಗೂ ಸಾಗಬಲ್ಲುದು. ಟಾಟಾ ಟಿಯಾಗೊ ಇವಿ ಬ್ಯಾಟರಿ ಸಾಮರ್ಥ್ಯ ಇನ್ನೂ ದೊಡ್ಡದು. ಇದು 250-315 ಕಿಮೀ ದೂರ ಹೋಗಬಲ್ಲುದು. ಕಾಮೆಟ್ ಎವಿ ಎರಡು ಡೋರ್ನ ಕಾರಾದರೆ ಟಿಯಾಗೋ ಇವಿ ನಾಲ್ಕು ಡೋರ್ನದ್ದಾಗಿದೆ. ಟಾಟಾ ನ್ಯಾನೋ ಮತ್ತು ರೇವಾ ಕಾರುಗಳಂತೆ ಕಾಮೆಟ್ ಇವಿ 4 ಮಂದಿ ಕೂರಲು ಅಸನಗಳನ್ನು ಹೊಂದಿದೆ.
ಇದನ್ನೂ ಓದಿ: Maruti Suzuki Offers: ಮಾರುತಿ ಸುಜುಕಿ ಇಂಡಿಯಾ ನೆಕ್ಸಾನಲ್ಲಿ 44,000 ರೂ.ವರೆಗೆ ರಿಯಾಯಿತಿ
ನಿನ್ನೆ ಬುಧವಾರ ಆನ್ಲೈನ್ ಮೂಲಕವೇ ಕಾರಿನ ಬಿಡುಗಡೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಎಂಜಿ ಮೋಟಾರ್ ಸಂಸ್ಥೆಯ ಭಾರತೀಯ ವಿಭಾಗದ ಮುಖ್ಯಸ್ಥ ರಾಜೀವ್ ಛಬಾ, ‘ಕಾಮೆಟ್ ಎಲೆಕ್ಟ್ರಿಕ್ ಕಾರು ಭಾರತದಂತಹ ಜನದಟ್ಟನೆಯ ನಗರ ಮತ್ತು ರಸ್ತೆಗಳಲ್ಲಿ ಸಂಚರಿಸಲು ಹೇಳಿ ಮಾಡಿಸಿದ್ದಾಗಿದೆ’ ಎಂದು ಹೇಳಿದ್ದಾರೆ.
ಎಂಜಿ ಮೋಟಾರ್ ಸಂಸ್ಥೆ ಭಾರತೀಯ ಮಾರುಕಟ್ಟೆಗೆ ಬಿಡುಗಡೆ ಮಾಡಿದ ಮೊದಲ ಕಾರ್ ಇದೇನಲ್ಲ. ಈ ಹಿಂದೆ ಝಡ್ಎಸ್ ಎಂಬ ಎಲೆಕ್ಟ್ರಿಕ್ ಎಸ್ಯುವಿಯನ್ನು ಬಿಡುಗಡೆ ಮಾಡಿತ್ತು. ಝಡ್ಎಸ್ ಎಸ್ಯುವಿ ಕಾರು ದೊಡ್ಡದಾಗಿದೆ.
ಚೀನಾದ ಮತ್ತೊಂದು ಕಂಪನಿ ಬಿವೈಡಿ ಕೂಡ ಕಳೆದ ವರ್ಷ ಎಲೆಕ್ಟ್ರಿಕ್ ಕಾರೊಂದನ್ನು ಬಿಡುಗಡೆ ಮಾಡಿತ್ತು. ಸೀಗಲ್ ಹ್ಯಾಚ್ಬ್ಯಾಕ್ ಇವಿ ಕಾರಿನ ಮೇಲೆ ಬಿವೈಡಿ ಭಾರೀ ಭರವಸೆ ಇರಿಸಿದೆ. ಇದೀಗ ಸೀಗಲ್ ಕಾರಿನ ಬೆಲೆ ಇಳಿತಕ್ಕೆ ಬಿವೈಡಿ ಮುಂದಾಗಿದೆ. ವರದಿಗಳನ್ನು ನಂಬುವುದಾದರೆ ಸೀಗಲ್ ಹ್ಯಾಚ್ಬ್ಯಾಕ್ ಕಾರಿನ ಆರಂಭಿಕ ಬೆಲೆ 73,800 (ಸುಮಾರು 8.70 ಲಕ್ಷ ರೂಪಾಯಿ) ಇರಿಸುವ ಸಾಧ್ಯತೆ ಇದೆ.
ಇದನ್ನೂ ಓದಿ: ಟಾಟಾ ನೆಕ್ಸಾನ್ ಇವಿ ಮ್ಯಾಕ್ಸ್ ಡಾರ್ಕ್ ಎಡಿಷನ್ ಬಿಡುಗಡೆ
ಎಂಜಿ ಮೋಟಾರ್ನ ಕಾಮೆಟ್ ಎಲೆಕ್ಟ್ರಿಕ್ ಕಾರಿನ ಗಾತ್ರ ಬಹಳ ಸಣ್ಣದು. ಅದರ 7.98 ಲಕ್ಷ ರೂನ ಆರಂಭಿಕ ಬೆಲೆ ಅದರ ಮೌಲ್ಯಕ್ಕಿಂತ ಹೆಚ್ಚಾಗಿದೆ ಎಂದು ರೇಟಿಂಗ್ ಕಂಪನಿ ಎಸ್ ಅಂಡ್ ಪಿ ಗ್ಲೋಬಲ್ ಮೊಬಿಲಿಟಿಯ ಗೌರವ್ ವಂಗಾಲ್ ಅಭಿಪ್ರಾಯಪಟ್ಟಿದ್ದಾರೆ. ಬೇರೆ ಎಲೆಕ್ಟ್ರಿಕ್ ವಾಹನಗಳಿಗೆ ಹೋಲಿಸಿದರೆ ಕಾರಿನ ಗಾತ್ರ ಮತ್ತು ಫೀಚರ್ಗಳನ್ನು ಗಮನಿಸಿದರೆ ಕಾಮೆಟ್ ಇವಿ ಬೆಲೆ ಸ್ವಲ್ಪ ಹೆಚ್ಚಾಯಿತು ಎಂಬುದು ಇವರ ಅನಿಸಿಕೆ.
2022-23ರ ಹಣಕಾಸು ವರ್ಷದಲ್ಲಿ ಭಾರತದಲ್ಲಿ ಒಟ್ಟು 39 ಲಕ್ಷ ಕಾರುಗಳು ಮಾರಾಟ ಆಗಿವೆಯಂತೆ. ಈ ಪೈಕಿ ಎಲೆಕ್ಟ್ರಿಕ್ ಕಾರುಗಳ ಸಂಖ್ಯೆ ಕೆವಲ ಶೇ. 2 ಮಾತ್ರ. ಆದರೆ, ಕೇಂದ್ರ ಸರ್ಕಾರ ಎಲೆಕ್ಟ್ರಿಕ್ ವಾಹನಗಳಿಗೆ ಹೆಚ್ಚು ಆದ್ಯತೆ ಕೊಡುತ್ತಿರುವುದರಿಂದ ಮತ್ತು ಇವಿ ಚಾರ್ಜಿಂಗ್ ಸೆಂಟರ್ ಇತ್ಯಾದಿ ಇನ್ಫ್ರಾಸ್ಟ್ರಕ್ಚರ್ ಗಟ್ಟಿಗೊಳ್ಳುತ್ತಿರುವುದರಿಂದ ಮುಂದಿನ ದಿನಗಳಲ್ಲಿ ಎಲೆಕ್ಟ್ರಿಕ್ ವಾಹನ ಮಾರುಕಟ್ಟೆ ಹೆಚ್ಚು ವಿಸ್ತಾರ ಕಾಣುವ ನಿರೀಕ್ಷೆ ಇದೆ. 2030ರಷ್ಟರಲ್ಲಿ ಭಾರತದ ಕಾರು ಕ್ಷೇತ್ರದಲ್ಲಿ ಇವಿ ಪಾಲು ಶೇ 30ರಷ್ಟು ಇರಬೇಕೆಂಬುದು ಸರ್ಕಾರದ ಗುರಿ.
ಭಾರತದ ಪ್ರಮುಖ ವಾಹನ ಸಂಸ್ಥೆಗಳು ಈಗೀಗ ಇವಿಗಳತ್ತ ಗಮನ ಹರಿಸಿವೆ. ಟಾಟಾ ಮೋಟಾರ್ಸ್ ಸದ್ಯ ಈ ನಿಟ್ಟಿನಲ್ಲಿ ಮುಂಚೂಣಿಯಲ್ಲಿದೆ.
Published On - 11:14 am, Thu, 27 April 23