ಷೋ ರೂಮ್​​ನಲ್ಲಿ ಖರೀದಿಸಿದ ಮೇಲೆ ಎಲೆಕ್ಟ್ರಿಕ್ ಬೈಕ್ ಸರಿಯಾಗಿಯೇ ಇರುತ್ತದೆ ಎಂದು ಯಾಮಾರುವ ಮುನ್ನ, ಅದರ ಶಕ್ತಿ-ಸಾಮರ್ಥ್ಯ ಸರಿಯಾಗಿ ಅಳೆಯುವುದು ಹೇಗೆ?

|

Updated on: Sep 04, 2023 | 7:31 PM

ಈ ಎಲೆಕ್ಟ್ರಿಕ್ ಸ್ಕೂಟರುಗಳ ಖರೀದಿಸಿದ ಗ್ರಾಹಕರು ಅಷ್ಟೇ ವೇಗವಾಗಿ ರಿವರ್ಸ್​​ ಗೇರ್​​​ನಲ್ಲಿ ಈ ಷೋರೂಮ್​​ಗಳಿಗೆ ವಾಪಸಾಗುತ್ತಿದ್ದಾರೆ. ನಮ್ಮ ಈ ಸ್ಕೂಟರಿನಲ್ಲಿ ಏನೋ ಪ್ರಾಬ್ಲಂ ಇದೆ ನೋಡಿ ಎಂದು ಸ್ಕೂಟರಿನ ಜೀವಾತ್ಮವಾಗಿರುವ ಬ್ಯಾಟರಿಯೇ ಕೈಕೊಡುತ್ತಿದೆ. ಅದರಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಿದೆ ಎಂದು ಮಾರಾಟಗಾರರ ಮೇಲೆ ಬೆಂಕಿ ಉಗುಳುತ್ತಿದ್ದಾರೆ. ಹಾಗಾದರೆ ಇದಕ್ಕೆ ಪರಿಹಾರವೇನು? ಎಲೆಕ್ಟ್ರಿಕ್ ಬೈಕ್/ ಸ್ಕೂಟರ್​​ಗಳ ಬಗ್ಗೆ ಮಹತ್ವದ ಇನ್​ಸೈಡ್​​​ ಮಾಹಿತಿ ಮುಂದಿನ ಲೇಖನಗಳಲ್ಲಿ ನಿಮಗಾಗಿ ವಿವರಿಸಲಿದ್ದೇವೆ. ನಿರೀಕ್ಷಿಸಿ.

ಷೋ ರೂಮ್​​ನಲ್ಲಿ ಖರೀದಿಸಿದ ಮೇಲೆ ಎಲೆಕ್ಟ್ರಿಕ್ ಬೈಕ್ ಸರಿಯಾಗಿಯೇ ಇರುತ್ತದೆ ಎಂದು ಯಾಮಾರುವ ಮುನ್ನ, ಅದರ ಶಕ್ತಿ-ಸಾಮರ್ಥ್ಯ ಸರಿಯಾಗಿ ಅಳೆಯುವುದು ಹೇಗೆ?
ಎಲೆಕ್ಟ್ರಿಕ್ ಬೈಕ್ ಖರೀದಿಗಾಗಿ ಯಾಮಾರುವ ಮುನ್ನ ಅದರ ಶಕ್ತಿ-ಸಾಮರ್ಥ್ಯ ಸರಿಯಾಗಿ ಅಳೆಯಿರಿ
Follow us on

ದ್ವಿಚಕ್ರ ವಾಹನಗಳ ಉದ್ಯಮದಲ್ಲಿ ಈಗಿನ ಟ್ರೆಂಡ್​​ ಹೇಗಿದೆ ಅಂದರೆ ಎಲೆಕ್ಟ್ರಿಕ್ ಬೈಕ್/ ಸ್ಕೂಟರ್​​ಗಳು ಷೋರೂಮ್​​ಗಳಲ್ಲಿ ಕಾಣಿಸಿಕೊಳ್ಳುವುದೇ ತಡ ಜನ ವ್ಯಾಮೋಹಕ್ಕೆ ಒಳಗಾದವರಂತೆ ನಾಮುಂದು ತಾಮುಂದು ಎಂದು ಕ್ಯೂ ನಿಂತು ಈ ಎಲೆಕ್ಟ್ರಿಕ್ ಬೈಕ್​ಗಳನ್ನು ಖರೀಸುತ್ತಿದ್ದಾರೆ. ಆದರೆ ವಾಸ್ತವವಾಗಿ ಅದರ ಶಕ್ತಿ-ಸಾಮರ್ಥ್ಯ, ತಾಳಿಕೆ-ಬಾಳಿಕೆ, ಅದರಲ್ಲೂ ನಮ್ಮ ಒಣ ತಾಪಮಾನದ ಭಾರತದ ಹವಾಮಾನ ಗುಣಕ್ಕೆ ಇವು ಒಗ್ಗುತ್ತವಾ? ಇಲ್ಲಿನ ರಸ್ತೆಗಳ ಮೇಲೆ ಇವು ಲೀಲಾಜಾಲವಾಗಿ, ಸುದೀರ್ಘವಾಗಿ ಸಂಚರಿಸಬಲ್ಲವಾ? ಎಂದು ಪ್ರಶ್ನಿಸಿಕೊಂಡು ಪರೀಕ್ಷೆ ಮಾಡಿನೋಡಿದಾಗ ಇದಕ್ಕೆಲ್ಲಾ… ಇಲ್ಲ ಎಂಬ ನಕಾರಾತ್ಮಕ ಉತ್ತರವೇ ಸಿಗುತ್ತದೆ. ಅಸಲಿಗೆ ಈ ಎಲೆಕ್ಟ್ರಿಕ್ ಬೈಕ್/ ಸ್ಕೂಟರ್​​ಗಳು ಎಂಬ ಕಾನ್ಸೆಪ್ಟ್​​ ಬಂದಿದ್ದು ಶೀತಪ್ರದೇಶಗಳಿಗೆ ಒಗ್ಗುವಂತಹ ಪಾಶ್ಚಿಮಾತ್ಯ ದೇಶ ಪ್ರದೇಶಗಳಲ್ಲಿ. ಅಲ್ಲಿನ ಹವಾಮಾನ ಇಂತಹ ಎಲೆಕ್ಟ್ರಿಕ್ ಬೈಕ್​​ಗಳಿಗೆ ಹೇಳಿಮಾಡಿಸಿದಂತೆ ಇರುತ್ತದೆ. ಹಾಗಾಗಿ ಈ ಎಲೆಕ್ಟ್ರಿಕ್ ಬೈಕ್​​ಗಳನ್ನು ಎಷ್ಟೇ ಸ್ಪೀಡಲ್ಲಿ, ಎಷ್ಟೇ ದೂರ ಓಡಿಸಿದರೂ ಅದಕ್ಕೆ ಸೈ ಎನ್ನುತ್ತವೆ. ಅಲ್ಲಿನ ಸೂಕ್ಷ್ಮ ಗ್ರಾಹಕರೂ ಅದಕ್ಕೆ ಜೈ ಜೈ ಅನ್ನುತ್ತಾರೆ.

ಆದರೆ ಭಾರತದಲ್ಲಿ ಪ್ರಸ್ತುತ ಸಂಚರಿಸುತ್ತಿರುವ ಈ ಎಲೆಕ್ಟ್ರಿಕ್ ಬೈಕ್/ ಸ್ಕೂಟರ್​​ಗಳ ಜೀವಾತ್ಮವಾಗಿರುವ ಬ್ಯಾಟರಿಗಳ ಶಕ್ತಿ-ಸಾಮರ್ಥ್ಯ, ಅದರ ಮೇಕ್​​ ಖಂಡಿತಾ ಭಾರತದಲ್ಲಿ ಆಗುತ್ತಿಲ್ಲ. ಮತ್ತು ಅದು ಇಲ್ಲಿನ 35-40 ಡಿಗ್ರಿ ಸೆಲ್ಸಿಯಸ್​ ತಾಪಮಾನಕ್ಕೆ ಒಗ್ಗುವಂತಹುದಲ್ಲ. ಹೆವಿ ಡ್ಯೂಟಿಯ ಬೈಕುಗಳು ಅವಲ್ಲ. ಏಕೆಂದರೆ ಇಲ್ಲಿನ ಹವಾಗುಣಕ್ಕೆ ಹೊಂದುವಂತೆ ಇವುಗಳನ್ನು ತಯಾರಿಸಲಾಗುತ್ತಿಲ್ಲ. ಈ ಬ್ಯಾಟರಿಗಳ ತಯಾರಿಕೆಯೂ ಇಲ್ಲಿ ಆಗುತ್ತಿಲ್ಲ. ಜಸ್ಟ್​​ ವಿದೇಶಿ ತಂತ್ರಜ್ಞಾನದ ಕಾಪಿ ಆಗುತ್ತಿದೆ ಅಷ್ಟೇ. ಇಲ್ಲಿಯದ್ದೇ ಮಾನದಂಡಗಳಿಗೆ ಅನುಗುಣವಾಗಿ ತಯಾರಾಗುತ್ತಿಲ್ಲ ಎಂಬುದನ್ನು ಗ್ರಾಹಕರು ಅರಿತುಕೊಳ್ಳಬೇಕು. ಇದು ಜಸ್ಟ್​ ಬ್ಯಾಟರಿಗೆ ಸೀಮಿತವಾಗಿ ಹೇಳುತ್ತಿಲ್ಲ.

ಎಲೆಕ್ಟ್ರಿಕ್ ಸ್ಕೂಟರಿನ ಇತರೆ ಬಿಡಿಭಾಗಗಳಿಗೂ ಇದು ಅನ್ವಯವಾಗುತ್ತದೆ. ಆದರೆ ಜನ ಮಾತ್ರ ಜನ ಮರುಳೋ ಜಾತ್ರೆ ಮರುಳೋ ಎಂದು ಇಂತಹ ವಿದೇಶಿ ಮಾಲನ್ನು ಖರೀದಿಸುತ್ತಿದ್ದಾರೆ. ಅದರಲ್ಲೂ ಈ ಸೇವ್​ ಎನರ್ಜಿ ಎಂಬ ಫ್ಯಾಷನ್​​ಗೆ ಬಲಿಯಾಗಿ ಮಾರುಕಟ್ಟೆಯಲ್ಲಿ ಕಣ್ಣಿಗೆ ಬಿದ್ದ ಎಲೆಕ್ಟ್ರಿಕ್ ಸ್ಕೂಟರುಗಳನ್ನು ಖರೀದಿಸಿಬಿಡುತ್ತಿದ್ದಾರೆ. ಇನ್ನು ಸರ್ಕಾರವೂ ಈ ಬಗ್ಗೆ ಕಟ್ಟುನಿಟ್ಟಿನ ನಿಯಮಗಳನ್ನೇನೂ ಜಾರಿಗೊಳಿಸಿಲ್ಲ. ಟ್ರಯಲ್​ ಅಂಡ್​ ಎರರ್ ಮಾದರಿಯಲ್ಲಿ ನಡೆದಷ್ಟು ದಿನ ನಾಣ್ಯ ಎಂಬಂತೆ ಇವುಗಳಿಗೆ ಅನುಮತಿ ನೀಡುತ್ತಿದ್ದಾರೆ. ಇನ್ನು ಇವುಗಳ ತಯಾರಕರು ಮತ್ತು ಮಾರಾಟಗಾರರು ಬಣ್ಣ ಬಣ್ಣದ ಮಾತುಗಳನ್ನು ಕಟ್ಟಿ, ಪರಿಸರ ಸ್ನೇಹಿ ಎಂಬ ಪಟ್ಟಿ ಕಟ್ಟಿ ಜೈ ಎನ್ನುತ್ತಿದ್ದಾರೆ. ಆದರೆ ವಾಸ್ತವದ ನೆಲೆಗಟ್ಟು ಬೇರೆಯದ್ದೇ ಇದೆ.

ಗ್ರಾಹಕರೂ ಅಷ್ಟೇ. ಇದರ ಬಗ್ಗೆ ಆಳವಾದ ಅಧ್ಯಯನವನ್ನು ಮಾಡದೆ, ಷೋರೂಮ್​ನಲ್ಲಿ ಸಾರ್ವಜನಿಕವಾಗಿ ಮಾರಾಟ ಮಾಡುತ್ತಿದ್ದಾರೆ ಎಂದ ಮೇಲೆ ಅವುಗಳಲ್ಲಿ ಯಾವುದೇ ತಾಂತ್ರಿಕ ಸಮಸ್ಯೆಯಾಗಲಿ ಅಥವಾ ಇನ್ನಾವುದೇ ಮಾದರಿಯ ಸಮಸ್ಯೆಗಳು ಕಾಣಸಿಕೊಳ್ಳುವುದಿಲ್ಲ ಎಂಬ ಅದಮ್ಯ ವಿಶ್ವಾಸದೊಂದಿಗೆ ಖರೀದಿ ಮಾಡುತ್ತಿದ್ದಾರೆ. ಯಾವುದೇ ಷೋ ರೂಮ್​ ಸಾರ್ವಜನಿಕವಾಗಿ ಒಂದು​ ಬೆಲೆಯನ್ನು ನಿಗದಿ ಮಾಡಿರುವಾಗ ಅದು ಸರಿಯಾಗಿಯೇ ಇರುತ್ತದೆ. ಸರ್ಕಾರಿ ಸಂಸ್ಥೆಗಳು ಅವುಗಳ ಮೇಲೆ ಒಂದು ಕಣ್ಣು ಇಟ್ಟಿರುತ್ತದೆ. ಹಾಗಾಗಿ ಇದರಲ್ಲಿ ಯಾವುದೇ ರೀತಿಯ ಮೋಸ ನಡೆಯುವುದಿಲ್ಲ ಎಂದು ಪರಿಭಾವಿಸಿ ಅವರು ಹೇಳಿದ ರೇಟ್​​ ಕೊಟ್ಟು ಖರೀದಿ ಮಾಡುತ್ತಿದ್ದಾರೆ. ಬೆಲೆ ಹೊಂದಾಣಿಕೆಯಾಗುತ್ತಿದೆ ಎಂಬ ವಿಶ್ವಾಸ, ಜೊತೆಗೆ ಪರಿಸರ ಸ್ನೇಹಿ ಎಂದು ಹೇಳುವುದರಿಂದ ನಮ್ಮ ಉಚ್ವಾಸ ನಿಶ್ವಾಸಗಳಿಗೂ ಯಾವುದೇ ಬಾಧಕ ಇರುವುದಿಲ್ಲ ಎಂದು ಜನ ಪ್ಯಾಷನೇಟ್​​ಆಗಿ ಅವುಗಳನ್ನು ಖರೀದಿ ಮಾಡುತ್ತಿದ್ದಾರೆ.

ಆದರೆ ಈ ಎಲೆಕ್ಟ್ರಿಕ್ ಸ್ಕೂಟರುಗಳನ್ನು ಖರೀದಿಸಿದ ಗ್ರಾಹಕರು ಮುಂದೆ ಅಷ್ಟೇ ವೇಗವಾಗಿ ರಿವರ್ಸ್​​ ಗೇರ್​​​ನಲ್ಲಿ ಈ ಷೋರೂಮ್​​ಗಳಿಗೆ ವಾಪಸಾಗುತ್ತಿದ್ದಾರೆ. ಅಯ್ಯೋ ನಮ್ಮ ಈ ಸ್ಕೂಟರಿನಲ್ಲಿ ಏನೋ ಪ್ರಾಬ್ಲಮ್​ ಇದೆ ನೋಡಿ ಎಂದು ಸ್ಕೂಟರಿನ ಜೀವಾತ್ಮವಾಗಿರುವ ಬ್ಯಾಟರಿಯೇ ಕೈಕೊಡುತ್ತಿದೆ. ಅದರಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಿದೆ ಎಂದು ಮಾರಾಟಗಾರರ ಮೇಲೆ ಬೆಂಕಿ ಉಗುಳುತ್ತಿದ್ದಾರೆ. ಅಲ್ಲಿಂದ ಮುಂದೇ ಖರೀದಿದಾರರಿಗೆ ಎಲ್ಲವೂ ನರಕಸದೃಶವೇ.

ಅಯ್ಯೋ ಯಾಕಪ್ಪಾ ಈ ಬೈಕ್​ಅನ್ನು ಖರೀದಿಸಿದೆವು. ಈಗ ನಮ್ಮ ಕೈಹಿಡಿಯುವವರು ಯಾರು ಎಂದು ತಲೆಯ ಮೇಲೆ ಕೈಹೊತ್ತು, ಷೋರೂಮ್​​ ಮುಂದೆ ಬೈಕ್​ ಮೇಲೆಯೇ ಕುಳಿತುಬಿಡುತ್ತಿದ್ದಾರೆ. ಯಾಕೆಂದರೆ ಯಾರೆಂದರೆ ಯಾರೂ ಅವರ ಸಮಸ್ಯೆಯತ್ತ ಗಮನಹರಿಸುತ್ತಿಲ್ಲ. ಅವರ ನೆರವಿಗೆ ಧಾವಿಸುತ್ತಿಲ್ಲ. ಪೊಲೀಸ್​​, ಆರ್​​ಟಿಒ ಯಾರೂ ಅವರ ನೆರವಿಗೆ ಬರುತ್ತಿಲ್ಲ. ಜಸ್ಟ್​ ಒಂದು ಕಂಪ್ಲೇಂಟ್​​ ದಾಖಲಾಗುತ್ತದೆ. ಒಂದಷ್ಟು ತನಿಖಾ ಶಾಸ್ತ್ರ ನೆರವೇರಿಸುತ್ತಿದ್ದಾರೆ ಅಷ್ಟೆ. ಅದರಾಚೆಗೆ ಯಾರೂ ಹೊಣೆ ಹೊತ್ತು ಗ್ರಾಹಕನ ಕೈಹಿಡಿಯುತ್ತಿಲ್ಲ. ಜಾಸ್ತಿ ಮಾತನಾಡಿದರೆ ಇಂತಹುದನ್ನೆಲ್ಲಾ ಖರೀದಿಸಿ ಎಂದು ನಾವು ಹೇಳಿದ್ದೆವಾ? ನೀವು ಖರೀದಿಸಿದ್ದೀರಿ-ನೀವು ಅನುಭವಿಸಿ ಅನ್ನುತ್ತಿದ್ದಾರೆ.

ಹಾಗಾದರೆ ಇದಕ್ಕೆ ಪರಿಹಾರ ಏನು? ನಮ್ಮ ಕೈಹಿಡಿಯುವವರು ಯಾರು? ತಾಂತ್ರಿಕವಾಗಿ, ತಂತ್ರಜ್ಞಾನದ ಬಗ್ಗೆ ನಮಗೆ ಅರಿವು ಮೂಡಿಸುವವರು ಯಾರೂನೂ ಇಲ್ಲವಾ? ನಮಗೆ ಇದರ ಬಗ್ಗೆ ನಾಲೆಡ್ಜ್​​ ತುಂಬುವವರು ಯಾರು? ನಮಗೆ ಭರವಸೆ/ ಆಸರೆಯಾಗುವವರು ಯಾರು? ಎಂದು ಸೋತುಬಸವಳಿದ ಗ್ರಾಹಕರು ಕೇಳುತ್ತಿದ್ದಾರೆ. ಸರಿಯಾಗಿ ಇಲ್ಲಿಯೇ ನಿಮ್ಮ ಕೈಹಿಡಿಯುವ ಕೆಲಸವನ್ನು ನಿಮಗೆ ಭರವಸೆಯ ಆಶಾಕಿರಣ ಆಗುವ ಕೆಲಸವನ್ನು ಟಿವಿ 9 ಡಿಜಿಟಲ್​​ ಆಟೋಮೊಬೈಲ್​​ ಮಾಡುತ್ತಿದೆ. ಸರಣಿ ರೂಪದಲ್ಲಿ ಗ್ರಾಹಕರು ಎದುರಿಸುತ್ತಿರುವ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಿ, ಗ್ರಾಹಕನಲ್ಲಿ ವಿಶ್ವಾಸ ಮೂಡಿಸುವ ಪ್ರಯತ್ನ ಮಾಡಲಿದೆ.

ಪ್ರಸ್ತುತ ಭಾರತದ ರಸ್ತೆಗಳಲ್ಲಿ ಸಂಚರಿಸುತ್ತಿರುವ ಈ ಎಲೆಕ್ಟ್ರಿಕ್ ಬೈಕ್/ ಸ್ಕೂಟರ್​​ಗಳ ಅಸಲಿ ಸಮಸ್ಯೆ ಏನು? ತಾಂತ್ರಿಕವಾಗಿ ಏನೆಲ್ಲಾ ತೊಂದರೆಗಳು ಇವೆ? ಇದನ್ನೆಲ್ಲ ನಿಭಾಯಿಸುವುದು ಹೇಗೆ? ಎಂಬುದರತ್ತ ಟಿವಿ 9 ಆಟೋಮೊಬೈಲ್​​ ಸೆಕ್ಷನ್​​ ಗಮನ ಹರಿಸಲಿದೆ. ಸರಣಿ ರೂಪದಲ್ಲಿ ಒಂದಷ್ಟು ಲೇಖನಗಳನ್ನು ಬರೆದು ಗ್ರಾಹಕರನ್ನುಎಚ್ಚರಿಸುವ ಸದುದ್ದೇಶದ ಕಾರ್ಯ ಮಾಡುತ್ತಿದೆ.

ಹಾಗಾದರೆ ಈ ಎಲೆಕ್ಟ್ರಿಕ್ ಬೈಕ್/ ಸ್ಕೂಟರ್​​ಗಳು ಅಂದ್ರೆ ಬರೀ ಸಮಸ್ಯೆಗಳೇನಾ? ಇವು ನಮ್ಮ ರಸ್ತೆಗಳಿಗೆ ಒಗ್ಗುವುದಿಲ್ಲವಾ? ಮುಂದೆ ನಾವು ಏನು ಮಾಡಬೇಕು ಎಂದು ಗ್ರಾಹಕರು ಚಿಂತಾಕ್ರಾಂತರಾಗುವುದು ಬೇಡ. ಹೇಳಬೇಕು ಅಂದರೆ ಈ ಎಲೆಕ್ಟ್ರಿಕ್ ಬೈಕ್/ ಸ್ಕೂಟರ್​​ಗಳು (Electric Vehicle -EV) ನಿಜಕ್ಕೂ ಭವಿಷ್ಯದ ಬೈಕುಗಳು. ಮುಂದೆ ನಮ್ಮ ರಸ್ತೆಗಳನ್ನು ಆಳಬೇಕಾಗಿರುವುದು ಇವೇ. ಸಾಂಪ್ರದಾಯಿಕ ಪೆಟ್ರೋಲ್-ಡೀಸೆಲ್​ ಅವಲಂಬನೆಯನ್ನು ತಗ್ಗಿಸಿ, ಇಂತಹ ಭವಿಷ್ಯದ ಎನರ್ಜಿಯನ್ನು ನಾವು ಅವಲಂಬಿಸುವುದು ಈ ಕ್ಷಣದ ತುರ್ತು ಜರೂರತ್ತು ಆಗಿದೆ. ಎಲೆಕ್ಟ್ರಿಕ್ ಆಟೊಮೊಬೈಲ್​ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬೆಳವಣಿಗೆಗಳು ಆಗಬೇಕಿವೆ.

ಈ ನಿಟ್ಟಿನಲ್ಲಿ ಬೆಂಗಳೂರಿನ ಇಬ್ಬರು ಉತ್ಸಾಹಿ ನವೋದ್ಯಮಿಗಳು ಪ್ರಾರಂಭಿಸಿರುವ ಹೈಪರ್​ಒನ್​​ಎನರ್ಜಿ (hyperoneenergy) ಕಂಪನಿಯ ಮೂಲಕ ಇದಕ್ಕೆ ಪರಿಹಾರಗಳೇನು ಎಂಬುದರ ಬಗ್ಗೆ ಅರಿವು ಮೂಡಿಸಿದ್ದಾರೆ. ಸಾದ್ಯಂತವಾಗಿ ಎಲೆಕ್ಟ್ರಿಕ್ ಬೈಕ್/ ಸ್ಕೂಟರ್​​ಗಳ ಒಳಸುಳಿವುಗಳ ಮೇಲೆ ಬೆಳಕು ಚೆಲ್ಲಿದ್ದಾರೆ. ಸಾಕಷ್ಟು ಕ್ರಾಂತಿಕಾರಿ ಇನ್​ಸೈಡ್​​​ ಮಾಹಿತಿ ಒದಗಿಸಿದ್ದಾರೆ. ಅದನ್ನು ಮುಂದಿನ ಲೇಖನಗಳಲ್ಲಿ ನಿಮಗಾಗಿ ಸರಳವಾಗಿ ವಿವರಿಸಲಿದ್ದೇವೆ. ನಿರೀಕ್ಷಿಸಿ.

Published On - 5:43 pm, Mon, 4 September 23