ಜಾಝ್, ಡಬ್ಲ್ಯೂಆರ್-ವಿ ಮತ್ತು ಸಿಟಿ ಕಾರುಗಳ ಮಾರಾಟ ಸ್ಥಗಿತಗೊಳಿಸಿದ ಹೋಂಡಾ
ಹೋಂಡಾ ಕಾರ್ಸ್ ಇಂಡಿಯಾ ಕಾರು ಕಂಪನಿಯು ತನ್ನ ಪ್ರಮುಖ ಕಾರು ಮಾದರಿಗಳಾದ ಜಾಝ್, ಡಬ್ಲ್ಯೂಆರ್-ವಿ ಮತ್ತು ಸಿಟಿ ಕಾರುಗಳನ್ನು ಸ್ಥಗಿತಗೊಳಿಸಿದೆ.
ಭಾರತದಲ್ಲಿ ವಾಹನ ಮಾಲಿನ್ಯ ತಗ್ಗಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಹೊಸ ವಾಹನಗಳಿಗೆ ಆರ್ ಡಿಇ(Real Driving Emissions) ಮಾನದಂಡವನ್ನ ಏಪ್ರಿಲ್ 1ರಿಂದಲೇ ಕಡ್ಡಾಯವಾಗಿ ಜಾರಿಗೆ ತಂದಿದ್ದು, ಹೊಸ ಮಾನದಂಡಗಳಿಗೆ ಅನುಗುಣವಾಗಿ Real Driving Emissions ಕಂಪನಿಯು ಜಾಝ್, ಡಬ್ಲ್ಯೂಆರ್-ವಿ ಮತ್ತು ನಾಲ್ಕನೇ ತಲೆಮಾರಿನ ಸಿಟಿ ಕಾರುಗಳನ್ನ ಮಾರಾಟದಿಂದ ಸ್ಥಗಿತಗೊಳಿಸಿದೆ.
ಹೊಸ ಮಾಲಿನ್ಯ ನಿಯಂತ್ರಣ ಮಾನದಂಡಗಳನ್ನು ಪೂರೈಸಲು ಸಾಧ್ಯವಿಲ್ಲದ ಕಾರುಗಳ ಸ್ಥಗಿತಕ್ಕೆ ನಿರ್ಧರಿಸಿರುವ ಹೋಂಡಾ ಕಂಪನಿಯು ಐದನೇ ತಲೆಮಾರಿನ ಸಿಟಿ ಸೆಡಾನ್ ಮತ್ತು ಹೊಸ ಅಮೇಜ್ ಕಂಪ್ಯಾಕ್ಟ್ ಸೆಡಾನ್ ಮಾದರಿಯನ್ನ ಹೊರತುಪಡಿಸಿ ಜಾಝ್, ಡಬ್ಲ್ಯೂಆರ್-ವಿ ಮತ್ತು ನಾಲ್ಕನೇ ತಲೆಮಾರಿನ ಸಿಟಿ ಕಾರನ್ನ ಅಧಿಕೃತವಾಗಿ ಸ್ಥಗಿತಗೊಳಿಸಿದೆ.
ಹೊಸ ಮಾಲಿನ್ಯ ನಿಯಂತ್ರಣ ಮಾನದಂಡಗಳಿಗೆ ಅನುಗುಣವಾಗಿ ಕಳೆದ 6 ವರ್ಷಗಳಲ್ಲಿ ಒಟ್ಟು 9 ಕಾರು ಮಾದರಿಗಳನ್ನ ಸ್ಥಗಿತಗೊಳಿಸಿದ್ದು, ಪ್ರತಿಸ್ಪರ್ಧಿ ಕಾರು ಕಂಪನಿಗಳ ಹೊಸ ಮಾದರಿಗಳಿಂದ ಭಾರೀ ಪೈಪೋಟಿ ಎದುರಿಸುತ್ತಿದೆ. 2017ರಿಂದ ಪ್ರಮುಖ ಕಾರು ಮಾದರಿಗಳನ್ನು ಭಾರತದಲ್ಲಿ ಸ್ಥಗಿತಗೊಳಿಸಲಾಗುತ್ತಿದ್ದು, ಆರಂಭದಲ್ಲಿ ಬ್ರಿಯೊ, ಮೊಬಿಲಿಯೋ ಕಾರುಗಳನ್ನ ತದನಂತರ ಸಿವಿಕ್, ಸಿಆರ್-ವಿ, ಬಿಆರ್-ವಿ ಮತ್ತು ಜಾಝ್ ಡೀಸಲ್ ಮಾದರಿಯನ್ನ ಸ್ಥಗಿತಗೊಳಿಸಲಾಗಿತ್ತು. ಇದೀಗ ಬಿಎಸ್ 6 2ನೇ ಹಂತ ಜಾರಿ ನಂತರ ಜಾಝ್ ಪೆಟ್ರೋಲ್, ಡಬ್ಲ್ಯೂಆರ್-ವಿ ಮತ್ತು ನಾಲ್ಕನೇ ತಲೆಮಾರಿನ ಸಿಟಿ ಕಾರುಗಳನ್ನ ಸ್ಥಗಿತಗೊಳಿಸಲಾಗಿದೆ.
ಹೊಸ ಮಾಲಿನ್ಯ ನಿಯಂತ್ರಣ ಮಾನದಂಡಗಳೊಂದಿಗೆ ಪ್ರಸ್ತುತ ಮಾದರಿಗಳ ಉನ್ನತೀಕರಣವು ದುಬಾರಿಯಾಗುವ ಕಾರಣಕ್ಕೆ ಹೋಂಡಾ ಕಂಪನಿಯು ಸದ್ಯ ಹೊಚ್ಚ ಹೊಸ ಮಾದಿರಗಳ ಬಿಡುಗಡೆಯತ್ತ ಯೋಜನೆ ರೂಪಿಸಿದ್ದು, ಹೊಸ ಕಾರು ಮಾದರಿಗಳು ಶೀಘ್ರದಲ್ಲಿಯೇ ಮಾರುಕಟ್ಟೆಗೆ ಲಗ್ಗೆಯಿಡಲಿವೆ.
ಹೊಸ ಕಾರುಗಳ ಪಟ್ಟಿಯಲ್ಲಿ ಎಸ್ ಯುವಿ ಮಾದರಿಯೊಂದು ಸದ್ಯ ಭಾರೀ ನೀರಿಕ್ಷೆ ಹುಟ್ಟುಹಾಕಿದ್ದು, ಇದು ಹ್ಯುಂಡೈ ಕ್ರೆಟಾ, ಕಿಯಾ ಸೆಲ್ಟೊಸ್, ಸ್ಕೋಡಾ ಕುಶಾಕ್ ಕಾರು ಮಾದರಿಗಳಿಗೆ ಭಾರೀ ಪೈಪೋಟಿ ನೀಡಲಿದ್ದು, ದೆಹಲಿ ಎಕ್ಸ್ ಶೋರೂಂ ಪ್ರಕಾರ ರೂ. 11 ಲಕ್ಷದಿಂದ ರೂ. 18 ಲಕ್ಷ ಬೆಲೆ ಅಂತರದಲ್ಲಿ ವಿವಿಧ ಎಂಜಿನ್ ಆಯ್ಕೆಗಳಲ್ಲಿ ಬಿಡುಗಡೆಯಾಗಲಿದೆ. ಹೊಸ ಕಾರು ಮಾದರಿಯು ಇದೇ ತಿಂಗಳಾಂತ್ಯಕ್ಕೆ ಉತ್ಪಾದನಾ ಆವೃತ್ತಿಯಲ್ಲಿ ಅನಾವರಣಗೊಳ್ಳಲಿದ್ದು, ಮುಂದಿನ ಕೆಲವೇ ತಿಂಗಳುಗಳಲ್ಲಿ ಬಿಡುಗಡೆಯಾಗಲಿದೆ.