ದ್ವಿಚಕ್ರ ವಾಹನಗಳ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವ ಹೋಂಡಾ ಮೋಟಾರ್ ಸೈಕಲ್ ಮತ್ತು ಸ್ಕೂಟರ್ ಇಂಡಿಯಾ(Honda Motorcycle and Scooter India) ಕಂಪನಿಯು ವಿಶೇಷ ಫೀಚರ್ಸ್ ಮತ್ತು ಆಕರ್ಷಕ ಬಣ್ಣದ ಆಯ್ಕೆ ಹೊಂದಿರುವ ಎಸ್‌ಪಿ125 ಸ್ಪೋರ್ಟ್ಸ್ ಎಡಿಷನ್(SP125 Sports Edition) ಬೈಕ್ ಬಿಡುಗಡೆ ಮಾಡಿದ್ದು, ಹೊಸ ಬೈಕ್ ಮಾದರಿಯು ದೆಹಲಿ ಎಕ್ಸ್ ಶೋರೂಂ ಪ್ರಕಾರ ರೂ. 90,567 ಬೆಲೆ ಹೊಂದಿದೆ.
125ಸಿಸಿ ಪ್ರೀಮಿಯಂ ಬೈಕ್ ವಿಭಾಗದಲ್ಲಿ ಹೆಚ್ಚಿನ ಬೇಡಿಕೆ ಹೊಂದಿರುವ ಎಸ್‌ಪಿ125 ಬೈಕ್ ಮಾದರಿಯಲ್ಲಿ ಇದೀಗ ಸೀಮಿತ ಅವಧಿಗಾಗಿ ಸ್ಪೋರ್ಟ್ಸ್ ಆವೃತ್ತಿಯನ್ನು ಬಿಡುಗಡೆ ಮಾಡಲಾಗಿದ್ದು, ಹೊಸ ಬೈಕ್ ಖರೀದಿಗಾಗಿ ಇಂದಿನಿಂದಲೇ ಹೋಂಡಾ ರೆಡ್ ವಿಂಗ್ ಶೋರೂಂಗಳಲ್ಲಿ ಬುಕಿಂಗ್ ದಾಖಲಿಸಬಹುದಾಗಿದೆ.
ಹೊಸ ಎಸ್‌ಪಿ 125 ಸ್ಪೋರ್ಟ್ಸ್ ಆವೃತ್ತಿಯಲ್ಲಿ ಹೋಂಡಾ ಕಂಪನಿಯು ಮ್ಯಾಟ್ ಮಫ್ಲರ್ ಕವರ್ ಮತ್ತು ಬಾಡಿ ಪ್ಯಾನೆಲ್ ಹಾಗೂ ಆಲಾಯ್ ವ್ಹೀಲ್‌ಗಳಲ್ಲಿ ಆಕರ್ಷಕ ಸ್ಪೋರ್ಟಿ ಗ್ರಾಫಿಕ್ಸ್ ನೀಡಿದ್ದು, ಡಿಸೆಂಟ್ ಬ್ಲೂ ಮೆಟಾಲಿಕ್ ಮತ್ತು ಹೇವಿ ಗ್ರೇ ಮೆಟಾಲಿಕ್ ಬಣ್ಣಗಳ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿದೆ.
ಇದನ್ನೂ ಓದಿ: ಭರ್ಜರಿ ಮೈಲೇಜ್ ನೀಡುವ ಟಾಪ್ 5 ಇವಿ ಸ್ಕೂಟರ್ ಗಳಿವು!
ಹೋಂಡಾ ಕಂಪನಿಯು ಎಸ್‌ಪಿ125 ಸ್ಪೋರ್ಟ್ಸ್ ಎಡಿಷನ್ ನಲ್ಲಿ ಗ್ರಾಹಕರ ಆಕರ್ಷಣೆಗಾಗಿ ಹೆಚ್ಚು ಪ್ರಕಾಶಮಾನವಾದ ಎಲ್ಇಡಿ ಹೆಡ್ ಲ್ಯಾಂಪ್, ಸಂಪೂರ್ಣ ಡಿಜಿಟಲ್ ಇನ್ ಸ್ಟ್ರುಮೆಂಟ್ ಕನ್ಸೊಲ್, ಸ್ಪೋರ್ಟಿಯಾಗಿರುವ ಅಲಾಯ್ ವ್ಹೀಲ್ ಮತ್ತು ಸುರಕ್ಷತೆಗಾಗಿ ಫ್ರಂಟ್ ಡಿಸ್ಕ್ ಬ್ರೇಕ್ ಹೊಂದಿದೆ.
ಎಂಜಿನ್ ಮತ್ತು ಪರ್ಫಾಮೆನ್ಸ್
ಹೊಸ ಎಸ್‌ಪಿ125 ಸ್ಪೋರ್ಟ್ಸ್ ಎಡಿಷನ್ ನಲ್ಲಿ ಹೋಂಡಾ ಕಂಪನಿಯು ಸ್ಟ್ಯಾಂಡರ್ಡ್ ಮಾದರಿಯಲ್ಲಿರುವಂತೆಯೇ ಬಿಎಸ್6 ಹಂತ 2ನೇ ಮಾನದಂಡ ಒಳಗೊಂಡಿರುವ 123.94 ಸಿಸಿ, ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿದ್ದು, ಇದು 5-ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ನೊಂದಿಗೆ 10.8 ಹಾರ್ಸ್ ಪವರ್ ಮತ್ತು 10.9 ಎನ್ಎಂ ಟಾರ್ಕ್ ಉತ್ಪಾದನೆ ಮಾಡಬಲ್ಲದು.
ಇನ್ನು ಎಸ್‌ಪಿ125 ಸ್ಪೋರ್ಟ್ಸ್ ಆವೃತ್ತಿಯ ಬಿಡುಗಡೆಯ ಕುರಿತಾಗಿ ಮಾತನಾಡಿರುವ ಹೋಂಡಾ ಮೋಟಾರ್‌ಸೈಕಲ್ ಮತ್ತು ಸ್ಕೂಟರ್ ಇಂಡಿಯಾದ ಅಧ್ಯಕ್ಷ ಮತ್ತು ಸಿಇಒ ಸುತ್ಸುಮು ಒಟಾನಿ ಅವರು “ಸುಧಾರಿತ ವೈಶಿಷ್ಟ್ಯತೆ, ಸೊಗಸಾದ ವಿನ್ಯಾಸ ಮತ್ತು ರೋಮಾಂಚಕ ಕಾರ್ಯಕ್ಷಮತೆ ಹೊಂದಿರುವ ಎಸ್‌ಪಿ125 ಸ್ಪೋರ್ಟ್ಸ್ ಗ್ರಾಹಕರಿಗೆ ಹೊಸ ರೈಡಿಂಗ್ ಅನುಭವ ನೀಡಲಿದ್ದು, 125ಸಿಸಿ ಪ್ರೀಮಿಯಂ ಬೈಕ್ ವಿಭಾಗದಲ್ಲಿ ಇದು ಅತ್ಯುತ್ತಮ ಪರ್ಫಾಮೆನ್ಸ್ ಮೂಲಕ ಯುವ ಪೀಳಿಗೆಯನ್ನು ಸೆಳೆಯಲಿದೆ ಎಂದಿದ್ದಾರೆ.
ಇದನ್ನೂ ಓದಿ: ದೇಶದ ಮೊದಲ ಹೈಡ್ರೋಜನ್ ಇಂಧನ ಚಾಲಿತ ಬಸ್ ಸಂಚಾರಕ್ಕೆ ಚಾಲನೆ
ಇನ್ನು ಹೋಂಡಾ ಮೋಟಾರ್ ಸೈಕಲ್ ಮತ್ತು ಸ್ಕೂಟರ್ ಇಂಡಿಯಾ ಕಂಪನಿಯು ಹೊಸ ಬೈಕ್ ಖರೀದಿ ಮೇಲೆ 3 ವರ್ಷಗಳ ಸ್ಟ್ಯಾಂಡರ್ಡ್ ವಾರಂಟಿ ಮತ್ತು 7 ವರ್ಷಗಳ ವಿಸ್ತರಿತ ವಾರಂಟಿ ನೀಡುತ್ತಿದ್ದು, ಮುಂಬರುವ ಹಬ್ಬದ ದಿನಗಳಲ್ಲಿ ಹೊಸ ಬೈಕ್ ಹೆಚ್ಚಿನ ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಲ್ಲಿದೆ.