Highest Range EV Scooters: ಭರ್ಜರಿ ಮೈಲೇಜ್ ನೀಡುವ ಟಾಪ್ 5 ಇವಿ ಸ್ಕೂಟರ್ ಗಳಿವು!
ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳ ಬಳಕೆ ಪ್ರಮಾಣವು ನಿಧಾನವಾಗಿ ಹೆಚ್ಚಳವಾಗುತ್ತಿದ್ದು, ಇವಿ ವಾಹನಗಳ ಮಾರಾಟದಲ್ಲಿ ಸದ್ಯ ಎಲೆಕ್ಟ್ರಿಕ್ ಸ್ಕೂಟರ್ ಗಳು ಹೆಚ್ಚಿನ ಮೈಲೇಜ್ ನೊಂದಿಗೆ ಗ್ರಾಹಕರನ್ನು ಆಕರ್ಷಿಸುತ್ತಿವೆ.
ದುಬಾರಿ ಇಂಧನ ದರ ಮತ್ತು ನಿರ್ವಹಣಾ ವೆಚ್ಚದಿಂದಾಗಿ ಹೊಸ ವಾಹನಗಳ ಖರೀದಿದಾರರು ಎಲೆಕ್ಟ್ರಿಕ್ ವಾಹನಗಳ(Electric Vehicles) ಬಳಕೆಯತ್ತ ಆಕರ್ಷಿತರಾಗುತ್ತಿದ್ದು, ಕಳೆದ ಐದು ವರ್ಷಗಳಲ್ಲಿ ಇವಿ ವಾಹನಗಳ ಮಾರಾಟ ಪ್ರಮಾಣದಲ್ಲಿ ಸಾಕಷ್ಟು ಹೆಚ್ಚಳವಾಗಿದೆ. ಕೇಂದ್ರ ಮತ್ತು ವಿವಿಧ ರಾಜ್ಯ ಸರ್ಕಾರಗಳ ಸಬ್ಸಡಿ ಯೋಜನೆಗಳು ಎಲೆಕ್ಟ್ರಿಕ್ ವಾಹನಗಳ ಮಾರಾಟ ಹೆಚ್ಚಳಕ್ಕೆ ಪ್ರಮುಖ ಕಾರಣವಾಗಿದ್ದು, ಇವಿ ವಾಹನಗಳ ಮಾರಾಟದಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಗಳು(Electric Scooters) ಅಗ್ರಸ್ಥಾನದಲ್ಲಿವೆ. ಹಾಗಾದ್ರೆ ಅತಿ ಹೆಚ್ಚು ಬೇಡಿಕೆಯಲ್ಲಿರುವ ಇವಿ ಸ್ಕೂಟರ್ ಗಳು ಯಾವುವು? ಅವುಗಳ ಮೈಲೇಜ್ ಮತ್ತು ಬೆಲೆ ಎಷ್ಟು? ಈ ಮಾಹಿತಿ ಇಲ್ಲಿದೆ.
ಸಿಂಪಲ್ ಒನ್
ಭಾರತದಲ್ಲಿ ಸದ್ಯ ಅತಿ ಹೆಚ್ಚು ಮೈಲೇಜ್ ಜೊತೆಗೆ ಅತ್ಯುತ್ತಮ ತಾಂತ್ರಿಕ ಸೌಲಭ್ಯ ಹೊಂದಿರುವ ಇವಿ ಸ್ಕೂಟರ್ ಗಳ ಪಟ್ಟಿಯಲ್ಲಿ ಸಿಂಪಲ್ ಎನರ್ಜಿ ಕಂಪನಿ ಸಿಂಪಲ್ ಒನ್ ಅಗ್ರಸ್ಥಾನದಲ್ಲಿದೆ. ಸಿಂಪಲ್ ಒನ್ ಇವಿ ಸ್ಕೂಟರ್ ಮಾದರಿಯು ಎರಡು ಮಾದರಿಯ ಬ್ಯಾಟರಿ ಪ್ಯಾಕ್ ಆಯ್ಕೆ ಹೊಂದಿದ್ದು, ಎರಡು ಬ್ಯಾಟರಿ ಪ್ಯಾಕ್ ಗಳು ಒಟ್ಟು 5ಕೆವಿಹೆಚ್ ಸಾರ್ಮರ್ಥ್ಯ ಹೊಂದಿವೆ. ಇವು ಪ್ರತಿ ಚಾರ್ಜ್ ಗೆ 212 ಕಿ.ಮೀ ಮೈಲೇಜ್ ನೀಡಲಿದ್ದು, ಇದು ಪ್ರತಿ ಗಂಟೆಗೆ 105 ಕಿ.ಮೀ ಟಾಪ್ ಸ್ಪೀಡ್ ಹೊಂದಿದೆ. ಇದರೊಂದಿಗೆ ಇದು ಎಕ್ಸ್ ಶೋರೂಂ ಪ್ರಕಾರ ರೂ. 1.45 ಲಕ್ಷದಿಂದ ರೂ. 1.50 ಲಕ್ಷ ಬೆಲೆ ಹೊಂದಿದ್ದು, ಎರಡನೇ ಬ್ಯಾಟರಿ ಪ್ಯಾಕ್ ಆಯ್ಕೆ ಮಾಡುವ ಗ್ರಾಹಕರು ಹೆಚ್ಚುವರಿಯಾಗಿ ರೂ. 13 ಸಾವಿರ ಪಾವತಿಸಬೇಕಾಗುತ್ತದೆ.
ಇದನ್ನೂ ಓದಿ: ಹೊಸ ಫೀಚರ್ಸ್ ಗಳೊಂದಿಗೆ 2023ರ ರಾಯಲ್ ಎನ್‌ಫೀಲ್ಡ್ ಬುಲೆಟ್ 350 ಬಿಡುಗಡೆ
ಓಲಾ ಎಸ್1 ಪ್ರೊ
ಎಲೆಕ್ಟ್ರಿಕ್ ಸ್ಕೂಟರ್ ಮಾರಾಟದಲ್ಲಿ ಸದ್ಯ ಅಗ್ರಸ್ಥಾನದಲ್ಲಿರುವ ಓಲಾ ಎಲೆಕ್ಟ್ರಿಕ್ ಕಂಪನಿಯು ಗ್ರಾಹಕರ ಬೇಡಿಕೆಯೆಂತೆ ವಿವಿಧ ರೇಂಜ್ ಹೊಂದಿರುವ ನಾಲ್ಕು ಇವಿ ಸ್ಕೂಟರ್ ಮಾರಾಟ ಮಾಡುತ್ತಿದೆ. ಓಲಾ ಇವಿ ಸ್ಕೂಟರ್ ಗಳಲ್ಲಿ ಎಸ್1 ಪ್ರೊ ನ್ಯೂ ಜನರೇಷನ್ ಆವೃತ್ತಿಯು ಹೆಚ್ಚಿನ ಮಟ್ಟದ ಮೈಲೇಜ್ ಮತ್ತು ಪ್ರೀಮಿಯಂ ಫೀಚರ್ಸ್ ಗಳೊಂದಿಗೆ ಅಗ್ರಸ್ಥಾನದಲ್ಲಿದ್ದು, ಇದು ಪ್ರತಿ ಚಾರ್ಜ್ ಗೆ 195 ಕಿ.ಮೀ ಮೈಲೇಜ್ ನೀಡುವ 4 ಕೆವಿಹೆಚ್ ಬ್ಯಾಟರಿ ಪ್ಯಾಕ್ ಜೋಡಣೆ ಹೊಂದಿದೆ. ಜೊತೆಗೆ ಹೊಸ ಎಸ್1 ಪ್ರೊ ಪ್ರತಿ ಗಂಟೆಗೆ 120 ಕಿ.ಮೀ ಟಾಪ್ ಸ್ಪೀಡ್ ಹೊಂದಿದ್ದು, ಇದು ಎಕ್ಸ್ ಶೋರೂಂ ಪ್ರಕಾರ ರೂ. 1,47,499 ಬೆಲೆ ಪಡೆದುಕೊಂಡಿದೆ. ಹಾಗೆಯೇ ಈ ಹೊಸ ಇವಿ ಸ್ಕೂಟರಿನಲ್ಲಿ ಓಲಾ ಕಂಪನಿಯು ಹಲವಾರು ಪ್ರೀಮಿಯಂ ಫೀಚರ್ಸ್ ಜೋಡಣೆ ಮಾಡಿದ್ದು, ಭರ್ಜರಿ ಬೇಡಿಕೆ ಪಡೆದುಕೊಳ್ಳುತ್ತಿದೆ.
ಹೀರೋ ವಿಡಾ ವಿ1 ಪ್ರೊ
ಭಾರತದಲ್ಲಿ ಮಾರಾಟಗೊಳ್ಳುತ್ತಿರುವ ಅತ್ಯುತ್ತಮ ಇವಿ ಸ್ಕೂಟರ್ ಗಳಲ್ಲಿ ಹೀರೋ ವಿಡಾ ವಿ1 ಪ್ರೊ ಕೂಡಾ ಒಂದಾಗಿದೆ. ವಿಡಾ ವಿ1 ಪ್ರೊ ಇವಿ ಸ್ಕೂಟರ್ ಮಾದರಿಯು 3.94 ಕೆವಿಹೆಚ್ ಬ್ಯಾಟರಿ ಪ್ಯಾಕ್ ಹೊಂದಿದ್ದು, ಇದು ಪ್ರತಿ ಚಾರ್ಜ್ ಗೆ ಗರಿಷ್ಠ 165 ಕಿ.ಮೀ ಮೈಲೇಜ್ ನೀಡುತ್ತದೆ. ಜೊತೆಗೆ ಹಲವಾರು ಪ್ರೀಮಿಯಂ ಫೀಚರ್ಸ್ ಹೊಂದಿರುವ ವಿ1 ಪ್ರೊ ಮಾದರಿಯು ಎಕ್ಸ್ ಶೋರೂಂ ಪ್ರಕಾರ ರೂ. 1,47,746 ಬೆಲೆ ಹೊಂದಿದೆ. ವಿಡಾ ವಿ1 ಇವಿ ಸ್ಕೂಟರ್ ನಲ್ಲಿ ಪ್ರೊ ಮತ್ತು ಸ್ಟ್ಯಾಂಡರ್ಡ್ ವೆರಿಯೆಂಟ್ ಗಳಿದ್ದು, ಪ್ರತಿಸ್ಪರ್ಧಿ ಮಾದರಿಗಳಿಗೆ ಉತ್ತಮ ಪೈಪೋಟಿ ನೀಡುತ್ತಿವೆ.
ಎಥರ್ 450ಎಕ್ಸ್
ಪ್ರೀಮಿಯಂ ಎಲೆಕ್ಟ್ರಿಕ್ ಸ್ಕೂಟರ್ ಮಾರಾಟದಲ್ಲಿ ಮುಂಚೂಣಿಯಲ್ಲಿರುವ ಎಥರ್ ಎನರ್ಜಿ ಕಂಪನಿಯು ಇತ್ತೀಚೆಗೆ 3ನೇ ತಲೆಮಾರಿನ 450ಎಕ್ಸ್ ಇವಿ ಸ್ಕೂಟರ್ ಬಿಡುಗಡೆ ಮಾಡಿದ್ದು, ಹೊಸ ಇವಿ ಸ್ಕೂಟರ್ ಭರ್ಜರಿ ಬೇಡಿಕೆ ಪಡೆದುಕೊಳ್ಳುತ್ತಿದೆ. 3.7 ಕೆವಿಹೆಚ್ ಬ್ಯಾಟರಿ ಪ್ಯಾಕ್ ಜೋಡಣೆ ಹೊಂದಿರುವ ಹೊಸ ಇವಿ ಸ್ಕೂಟರ್ ಮಾದರಿಯು ಪ್ರತಿ ಚಾರ್ಜ್ ಗೆ ಗರಿಷ್ಠ 150 ಕಿ.ಮೀ ಮೈಲೇಜ್ ನೀಡಲಿದ್ದು, ಇದು ಪ್ರತಿ ಗಂಟೆಗೆ 90 ಕಿ.ಮೀ ಟಾಪ್ ಸ್ಪೀಡ್ ನೊಂದಿಗೆ ಹಲವಾರು ಪ್ರೀಮಿಯಂ ಫೀಚರ್ಸ್ ಗಳ ಜೋಡಣೆ ಹೊಂದಿದೆ.
ಇದನ್ನೂ ಓದಿ: ಕ್ಲಾಸಿಕ್ ಸ್ಟೈಲ್ ನಲ್ಲಿ ಜಾವಾ 42 ಬಾಬರ್ ಬ್ಲ್ಯಾಕ್ ಮಿರರ್ ಬೈಕ್ ಬಿಡುಗಡೆ
ಟಿವಿಎಸ್ ಐಕ್ಯೂಬ್
ಅತಿ ಹೆಚ್ಚು ಬೇಡಿಕೆ ಹೊಂದಿರುವ ಎಲೆಕ್ಟ್ರಿಕ್ ಸ್ಕೂಟರ್ ಮಾರಾಟದಲ್ಲಿ ಟಿವಿಎಸ್ ಐಕ್ಯೂಬ್ ಕೂಡಾ ಭರ್ಜರಿ ಬೇಡಿಕೆ ಪಡೆದುಕೊಳ್ಳುತ್ತಿದ್ದು, ಇದು ಎಸ್ ಟಿಡಿ ಮತ್ತು ಎಸ್ ಎನ್ನುವ ಎನ್ನುವ ಎರಡು ವೆರಿಯೆಂಟ್ ಗಳಲ್ಲಿ ಖರೀದಿಗೆ ಲಭ್ಯವಿದೆ. 3.04 ಕೆವಿಹೆಚ್ ಬ್ಯಾಟರಿ ಪ್ಯಾಕ್ ಹೊಂದಿರುವ ಐಕ್ಯೂಬ್ ಇವಿ ಸ್ಕೂಟರ್ ಪ್ರತಿ ಚಾರ್ಜ್ ಗೆ 100 ಕಿ.ಮೀ ಮೈಲೇಜ್ ನೀಡಲಿದ್ದು, ಪ್ರತಿ ಗಂಟೆಗೆ 78 ಕಿ.ಮೀ ಟಾಪ್ ಸ್ಪೀಡ್ ಹೊಂದಿದೆ. ಐಕ್ಯೂಬ್ ಇವಿ ಸ್ಕೂಟರ್ ಸ್ಟ್ಯಾಂಡರ್ಡ್ ಮಾದರಿಗಳು ಎಕ್ಸ್ ಶೋರೂಂ ಪ್ರಕಾರ ರೂ. 1.56 ಲಕ್ಷ ಆರಂಭಿಕ ಬೆಲೆ ಹೊಂದಿದ್ದು, ಬೆಲೆಯಲ್ಲಿ ತುಸು ದುಬಾರಿ ಎನ್ನಿಸಿದರೂ ಅತ್ಯುತ್ತಮ ಫೀಚರ್ಸ್ ಮತ್ತು ಉತ್ಪಾದನಾ ಗುಣಮಟ್ಟದಿಂದಾಗಿ ಗ್ರಾಹಕರನ್ನು ಸೆಳೆಯುತ್ತಿದೆ.
Published On - 7:39 pm, Mon, 11 September 23