ಕಂಪ್ಯಾಕ್ಟ್ ಎಸ್ ಯುವಿ ಮಾರಾಟದಲ್ಲಿ ಭರ್ಜರಿ ಬೇಡಿಕೆ ಪಡೆದುಕೊಳ್ಳುತ್ತಿರುವ ಹ್ಯುಂಡೈ ಕ್ರೆಟಾ (Hyundai Creta) ಕಾರು ಹೊಸ ದಾಖಲೆ ನಿರ್ಮಿಸಿದೆ. ಭಾರತದಲ್ಲಿ ಮೊದಲ ಬಾರಿಗೆ 2015ರಲ್ಲಿ ಬಿಡುಗಡೆಯಾಗಿದ್ದ ಕ್ರೆಟಾ ಕಾರು ಕೆಲವೇ ವರ್ಷಗಳಲ್ಲಿ ಭಾರೀ ಪ್ರಮಾಣದ ಬೇಡಿಕೆ ಪಡೆದುಕೊಂಡಿದೆ.
ಭಾರತದಲ್ಲಿ ಮೊದಲ ಬಾರಿಗೆ 2015ರ ಜುಲೈನಲ್ಲಿ ಬಿಡುಗಡೆಯಾಗಿದ್ದ ಕ್ರೆಟಾ ಕಾರು ಸತತ 8 ವರ್ಷಗಳ ನಂತರವೂ ಭರ್ಜರಿ ಬೇಡಿಕೆ ಕಾಯ್ದುಕೊಂಡಿದೆ. ಕಂಪ್ಯಾಕ್ಟ್ ಎಸ್ ಯುವಿ ವಿಭಾಗದಲ್ಲಿ ಸದ್ಯ ಅಗ್ರಸ್ಥಾನದಲ್ಲಿರುವ ಕ್ರೆಟಾ ಕಾರು ಇದುವರೆಗೆ ಬರೋಬ್ಬರಿ 10 ಲಕ್ಷ ಯುನಿಟ್ ಮಾರಾಟಗೊಂಡಿದೆ. ಹ್ಯುಂಡೈ ಕಂಪನಿಯ ಪ್ರಕಾರ ಪ್ರತಿ 5 ನಿಮಿಷಕ್ಕೆ ಒಂದು ಕ್ರೆಟಾ ಕಾರು ಮಾರಾಟವಾಗುತ್ತಿದ್ದು, ವಿವಿಧ ವಿಭಾಗಗಳಲ್ಲಿ ಹಲವಾರು ಅತ್ಯುನ್ನತ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದೆ.
ಕ್ರೆಟಾ ಕಾರು ಸದ್ಯ ಫೇಸ್ ಲಿಫ್ಟ್ ಮಾದರಿಯೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಟ್ಟಿದ್ದು, ಪ್ರಮುಖ ಏಳು ವೆರಿಯೆಂಟ್ ಗಳಲ್ಲಿ ಖರೀದಿಗೆ ಲಭ್ಯವಿದೆ. ಹೊಸ ಕಾರು ಫೀಚರ್ಸ್ ಗಳಿಗೆ ಅನುಗುಣವಾಗಿ ವಿವಿಧ ವೆರಿಯೆಂಟ್ ಗಳನ್ನು ಹೊಂದಿದ್ದು, ಇದರಲ್ಲಿ ಆರಂಭಿಕ ವೆರಿಯೆಂಟ್ ದೆಹಲಿ ಎಕ್ಸ್ ಶೋರೂಂ ಪ್ರಕಾರ ಆರಂಭಿಕವಾಗಿ ರೂ. 11 ಲಕ್ಷ ಬೆಲೆ ಹೊಂದಿದ್ದರೆ, ಟಾಪ್ ಎಂಡ್ ಮಾದರಿಯು ರೂ. 20 ಲಕ್ಷ ಬೆಲೆ ಹೊಂದಿದೆ.
ಇನ್ನೂ ಓದಿ: ಮೊದಲ ಬಾರಿಗೆ ಹೊಸ ಕಾರು ಖರೀದಿಸಿದ್ದೀರಾ? ಹಾಗಾದ್ರೆ ಈ ಟಿಪ್ಸ್ ತಪ್ಪದೇ ಪಾಲಿಸಿ..
ಹೊಸ ಕ್ರೆಟಾ ಕಾರು ವೆರ್ನಾ ಮತ್ತು ಟುಸಾನ್ ಕಾರಿನಲ್ಲಿರುವಂತೆ ಶಾರ್ಪ್ ಎಡ್ಜ್ ವಿನ್ಯಾಸ ಹೊಂದಿದೆ. ಇದರಲ್ಲಿ ಬಾಕ್ಸಿ ಡಿಸೈನ್ ನೊಂದಿಗೆ ಆಕರ್ಷಕವಾದ ಫ್ರಂಟ್ ಗ್ರಿಲ್, ಫ್ರಂಟ್ ಬಂಪರ್ ಮತ್ತು ಎಲ್ ಶೇಫ್ ಹೊಂದಿರುವ ಎಲ್ಇಡಿ ಲೈಟ್ಸ್ ಬ್ಯಾಂಡ್ ನೀಡಲಾಗಿದೆ. ಹಾಗೆಯೇ ಹೊಸ ಕಾರಿನ ಹಿಂಭಾಗದ ವಿನ್ಯಾಸದಲ್ಲೂ ಕೂಡಾ ಭಾರೀ ಬದಲಾವಣೆ ಮಾಡಲಾಗಿದ್ದು, ಟೈಲ್‌ಗೇಟ್ ಸಂಪೂರ್ಣವಾಗಿ ಹೊಸ ವಿನ್ಯಾಸದೊಂದಿಗೆ ಸಿದ್ದಗೊಂಡಿದೆ. ಜೊತೆಗೆ ಹೊಸ ಕಾರಿನ ಒಳಭಾಗದಲ್ಲೂ ಮಹತ್ವದ ಬದಲಾವಣೆ ಪರಿಚಯಿಸಲಾಗಿದ್ದು, ಆಕರ್ಷಕವಾದ ಡ್ಯಾಶ್ ಬೋರ್ಡ್ ನೊಂದಿಗೆ 10.25 ಇಂಚಿನ ಕನೆಕ್ಟೆಡ್ ಸ್ಕ್ರೀನ್, ಮರುವಿನ್ಯಾಸಗೊಳಿಸಲಾದ ಎಸಿ ವೆಂಟ್ಸ್, ಡ್ಯುಯಲ್ ಜೋನ್ ಕ್ಲೈಮೆಟ್ ಕಂಟ್ರೊಲ್ ಸೌಲಭ್ಯ ನೀಡಲಾಗಿದೆ.
ಇನ್ನೂ ಓದಿ: 5 ಸ್ಟಾರ್ ಸೇಫ್ಟಿ ರೇಟಿಂಗ್ಸ್ ಹೊಂದಿರುವ ಫೇಮಸ್ ಎಸ್‌ಯುವಿ ಕಾರುಗಳಿವು!
ಇನ್ನು ಹೊಸ ಕ್ರೆಟಾ ಕಾರಿನಲ್ಲಿ ಹ್ಯುಂಡೈ ಕಂಪನಿಯು 1.5 ಲೀಟರ್ ಎನ್ಎ ಪೆಟ್ರೋಲ್ ಎಂಜಿನ್ ಮತ್ತು 1.5 ಲೀಟರ್ ಡೀಸೆಲ್ ಎಂಜಿನ್ ಆಯ್ಕೆಗಳನ್ನು ಮುಂದುವರೆಸಿದೆ. ಇದರೊಂದಿಗೆ ಹೊಸದಾಗಿ ಪರ್ಫಾಮೆನ್ಸ್ ಪ್ರಿಯರಿಗಾಗಿ 1.5 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಆಯ್ಕೆ ಪರಿಚಯಿಸಿದ್ದು, ಇದು ಸೆವೆನ್ ಸ್ಪೀಡ್ ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ನೊಂದಿಗೆ 160 ಹಾರ್ಸ್ ಪವರ್ ಉತ್ಪಾದಿಸುತ್ತದೆ. ಹಾಗೆಯೇ ಹೊಸ ಕಾರಿನಲ್ಲಿ ಹಲವಾರು ಸುರಕ್ಷಾ ಫೀಚರ್ಸ್ ಗಳನ್ನು ಜೋಡಣೆ ಮಾಡಲಾಗಿದ್ದು, ಸಂಭಾವ್ಯ ಅಪಘಾತಗಳನ್ನು ತಡೆಯಬಲ್ಲ ಅಡ್ವಾನ್ಸ್ ಡ್ರೈವರ್ ಅಸಿಸ್ಟ್ ಸಿಸ್ಟಂ ಸೇರಿದಂತೆ ಹಲವಾರು ಸೇಫ್ಟಿ ಫೀಚರ್ಸ್ ನೀಡಲಾಗಿದೆ.