ಹೈ-ಬೀಮ್ ಹೆಡ್‌ಲೈಟ್ ಹೊಂದಿರುವ ವಾಹನ ಮಾಲೀಕರಿಂದ ಭರ್ಜರಿ ದಂಡ ವಸೂಲಿ

|

Updated on: Jul 05, 2024 | 2:30 PM

ಪ್ರಕಾಶಮಾನವಾಗಿರುವ ಹೆಡ್‌ಲೈಟ್ಸ್ ಹೊಂದಿರುವ ವಾಹನಗಳಿಂದ ಅಪಘಾತಗಳ ಸಂಖ್ಯೆ ಗಣನೀಯವಾಗಿ ಹೆಚ್ಚಳವಾಗುತ್ತಿದ್ದು, ಹೈ-ಬೀಮ್ ಹೆಡ್‌ಲೈಟ್ ಬಳಕೆಗೆ ಕಡಿವಾಣ ಹಾಕಲು ದಂಡದ ಪ್ರಯೋಗ ಆರಂಭವಾಗಿದೆ.

ಹೈ-ಬೀಮ್ ಹೆಡ್‌ಲೈಟ್ ಹೊಂದಿರುವ ವಾಹನ ಮಾಲೀಕರಿಂದ ಭರ್ಜರಿ ದಂಡ ವಸೂಲಿ
ಹೈ-ಬೀಮ್ ಹೆಡ್‌ಲೈಟ್
Follow us on

ಪ್ರಕಾಶಮಾನವಾದ ಹೆಡ್‌ಲೈಟ್ ಗಳನ್ನು ವಾಹನಗಳಲ್ಲಿ ಬಳಕೆಗೆ ನಿಷೇಧವಿದ್ದರೂ ಹೈ-ಬೀಮ್ ಹೆಡ್‌ಲೈಟ್ಸ್ (High-Beam Headlights) ಬಳಕೆಯು ವೇಗವಾಗಿ ಹೆಚ್ಚುತ್ತಿದ್ದು, ಇದರಿಂದ ಅಪಘಾತಗಳ ಸಂಖ್ಯೆ ಇತ್ತೀಚೆಗೆ ಗಣನೀಯವಾಗಿ ಹೆಚ್ಚಳವಾಗುತ್ತಿದೆ. ಹೈ-ಬೀಮ್ ಹೆಡ್‌ಲೈಟ್ಸ್ ಬಳಕೆ ಕೆಲವು ಸಂದರ್ಭದಲ್ಲಿ ಅನುಕೂಲಕವಾಗಿದ್ದರೂ ಕೂಡಾ ನಗರಪ್ರದೇಶಗಳಲ್ಲಿ ಇವುಗಳ ಬಳಕೆಯು ಹೆಚ್ಚಿನ ಮಟ್ಟದ ಅಪಘಾತಗಳಿಗೆ ಮೂಲ ಕಾರಣವಾಗಿದ್ದು, ಇದನ್ನು ತಡೆಯಲು ಬೆಂಗಳೂರು ಸಂಚಾರಿ ಪೊಲೀಸರು ವಿಶೇಷ ಕಾರ್ಯಾಚರಣೆ ಆರಂಭಿಸಿದ್ದಾರೆ.

ನಿಯಮ ಉಲ್ಲಂಘನೆ ಮಾಡಿ ಹೈ-ಬೀಮ್ ಹೆಡ್‌ಲೈಟ್ ಬಳಕೆ ಮಾಡುತ್ತಿರುವ ವಾಹನ ಮಾಲೀಕರು ವಿರುದ್ದ ವಿಶೇಷ ಕಾರ್ಯಾಚರಣೆ ನಡೆಸುತ್ತಿರುವ ಸಂಚಾರಿ ಪೊಲೀಸರು ಜುಲೈ 1ರಿಂದ ಹಲವು ಪ್ರಕರಣಗಳನ್ನು ದಾಖಲಿಸಿದ್ದಾರೆ. ನಮ್ಮ ಬೆಂಗಳೂರಿನ ಪೂರ್ವ ವಿಭಾಗ ಒಂದಲ್ಲೇ ಬರೋಬ್ಬರಿ 400ಕ್ಕೂ ಹೆಚ್ಚು ಪ್ರಕರಣಗಳನ್ನು ದಾಖಲಿಸಿದ್ದು, ಇದರಿಂದ ರೂ. 2.16 ಲಕ್ಷಕ್ಕಿಂತೂ ಹೆಚ್ಚು ದಂಡವನ್ನು ಸಹ ವಸೂಲಿ ಮಾಡಲಾಗಿದೆ.

ದಂಡವಿಧಿಸುವುದರ ಜೊತೆಗೆ ಹೈ-ಬೀಮ್ ಹೆಡ್‌ಲೈಟ್ ಬಳಕೆಯಿಂದಾಗಿ ಆಗುತ್ತಿರುವ ಅನಾಹುತಗಳ ಬಗ್ಗೆ ಅರಿವು ಸಹ ಮೂಡಿಸುತ್ತಿದ್ದು, ಇನ್ಮುಂದೆ ಯಾವುದೇ ಕಾರಣಕ್ಕೂ ಹೈ-ಬೀಮ್ ಹೆಡ್‌ಲೈಟ್ ಬಳಸದಂತೆ ಎಚ್ಚರಿಕೆ ನೀಡುತ್ತಿದ್ದಾರೆ. ಮೋಟಾರ್ ವಾಹನ ಕಾಯ್ದೆಯ ಸೆಕ್ಷನ್ 177 ಅಡಿಯಲ್ಲಿ ದಂಡ ವಿಧಿಸುತ್ತಿರುವ ಪೊಲೀಸರು ಮೊದಲ ಬಾರಿಗೆ ನಿಯಮ ಉಲ್ಲಂಘಿಸಿದವರಿಗೆ ರೂ. 500 ದಂಡ ವಿಧಿಸುತ್ತಿದ್ದು, ಎರಡನೇ ಬಾರಿಗೆ ಸಿಕ್ಕಿಬಿದ್ದಲ್ಲಿ ರೂ. 1 ಸಾವಿರ ದಂಡ ವಿಧಿಸುವ ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ: ಭಾರತದಲ್ಲಿ ಅತಿ ಹೆಚ್ಚು ಮೈಲೇಜ್ ನೀಡುವ ಟಾಪ್ 10 ಕಾರುಗಳಿವು!

ಇನ್ನು ಪ್ರಕಾಶಮಾನವಾದ ಹೆಡ್‌ಲೈಟ್ ಗಳಿಂದಲಾಗಿ ವಿರುದ್ದ ದಿಕ್ಕಿನಲ್ಲಿ ಬರುವ ವಾಹನ ಸವಾರರು ಸಾಕಷ್ಟು ಕಿರಿಕಿರಿ ಅನುಭವಿಸುವಂತಾಗಿದ್ದು, ಅನಗತ್ಯವಾಗಿರುವ ಹೈ-ಬೀಮ್ ಹೆಡ್‌ಲೈಟ್ ಗಳು ವಾಹನ ಸವಾರಿಗೆ ಕಂಟಕವಾಗಿವೆ. ಪ್ರಕಾಶಮಾನದ ಬೆಳಕು ಹೊರಸೂಸುವುದಿಂದ ವಿರುದ್ದ ದಿಕ್ಕಿನಲ್ಲಿ ಬರುವ ವಾಹನ ಸವಾರರ ಕಣ್ಣಿಗೆ ಅಘಾತವಾಗಲಿದ್ದು, ಇದು ಅಪಘಾತಗಳಿಗೆ ಮೂಲ ಕಾರಣವಾಗುತ್ತಿದೆ. ಹೀಗಾಗಿ ದೇಶಾದ್ಯಂತ ಈಗಾಗಲೇ ಹಲವು ರಾಜ್ಯಗಳು ಹೈ-ಬೀಮ್ ಹೆಡ್‌ಲೈಟ್ಸ್ ಹೊಂದಿರುವ ವಾಹನಗಳ ವಿರುದ್ದ ವಿಶೇಷ ಕಾರ್ಯಾಚರಣೆ ಆರಂಭಿಸಿದ್ದು, ಇದೀಗ ರಾಜ್ಯ ಪೊಲೀಸರು ಕೂಡಾ ಕಠಿಣ ಕ್ರಮ ಕೈಗೊಳ್ಳುತ್ತಿದ್ದಾರೆ.

Published On - 10:38 pm, Thu, 4 July 24