Kinetic Luna: ಭರ್ಜರಿ ಮೈಲೇಜ್ ನೀಡುವ ಕೈನೆಟಿಕ್ ಲೂನಾ ಎಲೆಕ್ಟ್ರಿಕ್ ಬುಕಿಂಗ್ ಆರಂಭ

|

Updated on: Jan 25, 2024 | 7:09 PM

ಕೈನೆಟಿಕ್ ಲೂನಾ ಎಲೆಕ್ಟ್ರಿಕ್ ಆವೃತ್ತಿಯು ಶೀಘ್ರದಲ್ಲಿಯೇ ಮಾರುಕಟ್ಟೆಗೆ ಲಗ್ಗೆಯಿಡಲು ಸಿದ್ದವಾಗುತ್ತಿದ್ದು, ಹೊಸ ಇವಿ ಸ್ಕೂಟರ್ ಖರೀದಿಗಾಗಿ ನಾಳೆಯಿಂದಲೇ ಅಧಿಕೃತ ಬುಕಿಂಗ್ ಆರಂಭವಾಗುತ್ತಿದೆ.

Kinetic Luna: ಭರ್ಜರಿ ಮೈಲೇಜ್ ನೀಡುವ ಕೈನೆಟಿಕ್ ಲೂನಾ ಎಲೆಕ್ಟ್ರಿಕ್ ಬುಕಿಂಗ್ ಆರಂಭ
ಕೈನೆಟಿಕ್ ಲೂನಾ ಎಲೆಕ್ಟ್ರಿಕ್
Follow us on

ಭಾರತೀಯ ಆಟೋ ಮಾರುಕಟ್ಟೆಯಲ್ಲಿ ತನ್ನದೆ ಇತಿಹಾಸ ನಿರ್ಮಿಸಿ ಕಣ್ಮರೆಯಾಗಿದ್ದ ಕೈನೆಟಿಕ್ ಲೂನ್ (Kinetic Luna) ಇದೀಗ ಎಲೆಕ್ಟ್ರಿಕ್ ರೂಪದಲ್ಲಿ ಮರಳಿ ಮಾರುಕಟ್ಟೆಗೆ ಲಗ್ಗೆಯಿಡುತ್ತಿದ್ದು, ಹೊಸ ಇವಿ ಸ್ಕೂಟರ್ (Electric Scooter) ಮಾದರಿಗಾಗಿ ಜನವರಿ 26 ರ ಗಣರಾಜ್ಯೋತ್ಸವ ದಿನದಂದೇ ರೂ. 500 ಮುಂಗಡದೊಂದಿಗೆ ಅಧಿಕೃತ ಬುಕಿಂಗ್ ಪ್ರಾರಂಭವಾಗುತ್ತಿದೆ. ಗಣರಾಜ್ಯೋತ್ಸವ ದಿನದಂದೆ ಹೊಸ ಲೂನಾ ಎಲೆಕ್ಟ್ರಿಕ್ ಉತ್ಪಾದನಾ ಮಾದರಿಯು ಅನಾವರಣಗೊಳ್ಳುತ್ತಿದ್ದು, ಭಾರೀ ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಲ್ಲಿದೆ.

ಭಾರತದಲ್ಲಿ ಈ ಹಿಂದೆ ಲೂನಾ ಮತ್ತು ಕೈನೆಟಿಕ್-ಹೋಂಡಾ ಸ್ಕೂಟರ್‌ ಬ್ರಾಂಡ್ ಗಳೊಂದಿಗೆ ಭಾರೀ ಜನಪ್ರಿಯತೆ ಸಾಧಿಸಿದ್ದ ಕೈನೆಟಿಕ್ ಕಂಪನಿಯು ಇದೀಗ ಕೈನೆಟಿಕ್ ಗ್ರೀನ್ ಬ್ರಾಂಡ್ ಅಡಿಯಲ್ಲಿ ವಿವಿಧ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯನ್ನು ಬಿಡುಗಡೆ ಮಾಡುತ್ತಿದ್ದು, ಹೊಸ ಲೂನಾ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯು ಆಕರ್ಷಕ ಬೆಲೆಯೊಂದಿಗೆ ಅತ್ಯುತ್ತಮ ತಾಂತ್ರಿಕ ಅಂಶಗಳನ್ನು ಹೊಂದಿರಲಿದೆ.

ಬಿಡುಗಡೆಯ ಮಾಹಿತಿ ಹೊರತಾಗಿ ಹೊಸ ಲೂನಾ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯ ಬ್ಯಾಟರಿ ಪ್ಯಾಕ್ ಮತ್ತು ಮೈಲೇಜ್ ಮಾಹಿತಿಗಳನ್ನು ಗೌಪ್ಯವಾಗಿರಿಸಿರುವ ಕೈನೆಟಿಕ್ ಗ್ರೀನ್ ಕಂಪನಿಯು ಗಣರಾಜ್ಯೋತ್ಸವ ದಿನದಂದೇ ಅಧಿಕೃತವಾಗಿ ಬಹಿರಂಗ ಪಡಿಸಲಿದ್ದು, ಇದು ಸಾಮಾನ್ಯ ಪೆಟ್ರೋಲ್ ಮಾದರಿಗಳಂತೆ ಗುಣಮಟ್ಟದ ಉತ್ಪಾದನೆಯೊಂದಿಗೆ ಹೆಚ್ಚು ಬಾಳ್ವಿಕೆಯ ವಿಶ್ವಾಸ ವ್ಯಕ್ತಪಡಿಸಲಾಗಿದೆ.

ಇದನ್ನೂ ಓದಿ: ಆಕರ್ಷಕ ಬೆಲೆಯೊಂದಿಗೆ 150 ಕಿ.ಮೀ ಮೈಲೇಜ್ ನೀಡುವ ಸಿಂಪಲ್ ಡಾಟ್ ಒನ್ ಇವಿ ಸ್ಕೂಟರ್ ಬಿಡುಗಡೆ

ಕೆಲವು ಮಾಹಿತಿಗಳ ಪ್ರಕಾರ ಹೊಸ ಇ-ಲೂನಾ ಮಾದರಿಯು ಗ್ರಾಮೀಣ ಭಾಗದ ಗ್ರಾಹಕರನ್ನು ಗುರಿಯಾಗಿಸಿ ನಿರ್ಮಾಣಗೊಂಡಿದ್ದು, ಇದು ಗಂಟೆಗೆ 50 ಕಿಮೀ ಟಾಪ್ ಸ್ಪೀಡ್ ನೊಂದಿಗೆ ಪ್ರತಿ ಚಾರ್ಜ್ ಗೆ ಗರಿಷ್ಠ 110 ಕಿ.ಮೀ ಮೈಲೇಜ್ ನೀಡಬಹುದಾಗಿದ್ದು, ಫೇಮ್ 2 ಯೋಜನೆಯಡಿಯಲ್ಲಿ ರಿಯಾಯಿತಿ ಅರ್ಹವಾಗಿರಲಿದೆ ಎನ್ನಲಾಗಿದೆ. ಹಾಗೆಯೇ ಹೊಸ ಎಲೆಕ್ಟ್ರಿಕ್ ಲೂನಾ ಸುಮಾರು ರೂ. 70 ಸಾವಿರದಿಂದ ರೂ. 85 ಸಾವಿರ ತನಕ ಬೆಲೆ ಪಡೆಯಬಹುದಾಗಿದ್ದು, ಇದು ಬಜಾಜ್ ಚೇತಕ್ ಎಲೆಕ್ಟ್ರಿಕ್ ಮತ್ತು ಟಿವಿಎಸ್ ಐಕ್ಯೂಬ್ ಇವಿ ಸ್ಕೂಟರ್ ಗಳಿಗೆ ಉತ್ತಮ ಪೈಪೋಟಿ ನೀಡಲಿದೆ.

ಕೈನೆಟಿಕ್ ಗ್ರೀನ್ ಕಂಪನಿಯು ಹೊಸ ಕೈನೆಟಿಕ್ ಇ-ಲೂನಾವನ್ನು ಮಹಾರಾಷ್ಟ್ರದ ಅಹ್ಮದ್‌ನಗರದಲ್ಲಿರುವ ತನ್ನ ಹೊಸ ಉತ್ಪಾದನಾ ಸ್ಥಾವರದಲ್ಲಿ ತಯಾರಿಸುತ್ತಿದ್ದು, ಈ ಸ್ಥಾವರದಲ್ಲಿ ಪ್ರತಿ ತಿಂಗಳು ಸುಮಾರು 5 ಸಾವಿರ ಇ-ಲೂನಾವನ್ನು ಉತ್ಪಾದಿಸಲು ನಿರ್ಧರಿಸಲಾಗಿದೆ. ಹೀಗಾಗಿ ಹೊಸ ಇವಿ ಸ್ಕೂಟರ್ ಭಾರೀ ಪ್ರಮಾಣದಲ್ಲಿ ಮಾರಾಟವಾಗುವ ನೀರಿಕ್ಷೆಗಳಿದ್ದು, ಪೆಟ್ರೋಲ್ ಸ್ಕೂಟರ್ ಗಳಿಗೆ ಅತ್ಯುತ್ತಮ ಪರ್ಯಾಯ ಆಯ್ಕೆಯಾಗಲಿದೆ.

ಇದನ್ನೂ ಓದಿ: ಭರ್ಜರಿ ಫೀಚರ್ಸ್ ಹೊಂದಿರುವ ಎಥರ್ 450 ಅಪೆಕ್ಸ್ ಪ್ರೀಮಿಯಂ ಇವಿ ಸ್ಕೂಟರ್ ಬಿಡುಗಡೆ

ಇನ್ನು ಕೈನೆಟಿಕ್ ಕಂಪನಿಯು 1970-80ರ ದಶಕದಲ್ಲಿ ಕೇವಲ ರೂ. 2000ಕ್ಕೆ ಲೂನಾ ಮೊಪೆಡ್ ಬಿಡುಗಡೆ ಮಾಡಿತ್ತು. ಮೊಪೆಡ್ ವಿಭಾಗದಲ್ಲಿ ಸುಮಾರು 28 ವರ್ಷಗಳ ಕಾಲ ಪ್ರಾಬಲ್ಯ ಸಾಧಿಸಿದ್ದ ಲೂನಾ ಶೇಕಡಾ 95 ರಷ್ಟು ಪಾಲನ್ನು ಹೊಂದಿತ್ತು. ಆದರೆ 2000 ರಲ್ಲಿ ಮಾರುಕಟ್ಟೆಗೆ ಬಂದಿರುವ ವಿವಿಧ ಮಾದರಿಯ ಹೊಸ ದ್ವಿಚಕ್ರ ವಾಹನ ಪರಿಣಾಮವಾಗಿ ಬೇಡಿಕೆ ಕಳೆದುಕೊಂಡಿತು. ಗ್ರಾಹಕರು ಖರೀದಿಸಲು ಹಲವು ಹೊಸ ದ್ವಿಚಕ್ರ ವಾಹನಗಳ ಆಯ್ಕೆ ಲಭ್ಯವಿದ್ದರಿಂದ ಲೂನಾ ಉತ್ಪಾದನೆಯನ್ನು ಸಂಪೂರ್ಣವಾಗಿ ಸ್ಥಗಿತ ಮಾಡಲಾಗಿತ್ತು. ಆದರೆ ಇದೀಗ ಬದಲಾದ ಪರಿಸ್ಥಿತಿ ಇವಿ ಸ್ಕೂಟರ್ ಗಳಿಗೆ ಬೇಡಿಕೆ ಹೆಚ್ಚುತ್ತಿರುವುದರಿಂದ ಇವಿ ಮಾದರಿಯೊಂದಿಗೆ ಮರಳಿ ಮಾರುಕಟ್ಟೆಗೆ ಲಗ್ಗೆಯಿಡಲು ಸಿದ್ದವಾಗುತ್ತಿದೆ.

Published On - 7:03 pm, Thu, 25 January 24