ಭರ್ಜರಿ ಫೀಚರ್ಸ್ ಹೊಂದಿರುವ ಎಥರ್ 450 ಅಪೆಕ್ಸ್ ಪ್ರೀಮಿಯಂ ಇವಿ ಸ್ಕೂಟರ್ ಬಿಡುಗಡೆ
ಎಥರ್ ಎನರ್ಜಿ ಕಂಪನಿಯು ತನ್ನ ಹೊಚ್ಚ ಹೊಸ 450 ಅಪೆಕ್ಸ್ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡಿದ್ದು, ಹೊಸ ಸ್ಕೂಟರ್ ಸುಧಾರಿತ ತಂತ್ರಜ್ಞಾನ ಪ್ರೇರಣೆಯೊಂದಿಗೆ ಮಾರುಕಟ್ಟೆ ಪ್ರವೇಶಿಸಿದೆ.
ಪ್ರೀಮಿಯಂ ಎಲೆಕ್ಟ್ರಿಕ್ ಸ್ಕೂಟರ್ ಮಾರಾಟದಲ್ಲಿ ಅಗ್ರಸ್ಥಾನದಲ್ಲಿರುವ ಎಥರ್ ಎನರ್ಜಿ (Ather Energy) ಕಂಪನಿಯು ತನ್ನ ಹೊಚ್ಚ ಹೊಸ 450 ಅಪೆಕ್ಸ್ (450 Apex) ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡಿದ್ದು, ಹೊಸ ಇವಿ ಸ್ಕೂಟರ್ ಎಕ್ಸ್ ಶೋರೂಂ ಪ್ರಕಾರ ರೂ. 1.89 ಲಕ್ಷ ಬೆಲೆ ಹೊಂದಿದೆ. ಪ್ರಸ್ತುತ ಮಾರುಕಟ್ಟೆಯಲ್ಲಿರುವ ಎಥರ್ ಎಲೆಕ್ಟ್ರಿಕ್ ಸ್ಕೂಟರ್ ಗಳಲ್ಲಿಯೇ ದುಬಾರಿ ಬೆಲೆ ಹೊಂದಿರುವ ಹೊಸ 450 ಅಪೆಕ್ಸ್ ಮಾದರಿಯು ಹೆಚ್ಚಿನ ಮಟ್ಟದ ತಂತ್ರಜ್ಞಾನ ಪ್ರೇರಣೆಯೊಂದಿಗೆ ವಿಶೇಷವಾಗಿ ಪರ್ಫಾಮೆನ್ಸ್ ಪ್ರಿಯರಿಗಾಗಿ ನಿರ್ಮಾಣಗೊಂಡಿದೆ.
ಹೊಸ 450 ಅಪೆಕ್ಸ್ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯನ್ನು ಎಥರ್ ಎನರ್ಜಿ ಕಂಪನಿಯು ಸೀಮಿತ ಅವಧಿಗಾಗಿ ಮಾರಾಟ ಮಾಡಲು ನಿರ್ಧರಿಸಿದ್ದು, ಹೊಸ ಇವಿ ಸ್ಕೂಟರ್ ಖರೀದಿಗಾಗಿ ಬುಕಿಂಗ್ ದಾಖಲಿಸುವ ಗ್ರಾಹಕರಿಗೆ ಮಾರ್ಚ್ ಅವಧಿಯಲ್ಲಿ ಹೊಸ ಸ್ಕೂಟರ್ ವಿತರಣೆಯಾಗಲಿದೆ. 450 ಅಪೆಕ್ಸ್ ಮಾದರಿಯನ್ನು ಇತರೆ 450 ಸರಣಿ ಸ್ಕೂಟರ್ ಗಳಿಂತ ವಿಶೇಷ ಮಾದರಿಯಾಗಿಸಲು ಎಥರ್ ಕಂಪನಿಯ ಹಲವಾರು ವಿಶೇಷತೆಗಳನ್ನು ಸೇರ್ಪಡೆ ಮಾಡಿದ್ದು, ಇಂಡಿಯಮ್ ಬ್ಲೂ ಪೇಂಟ್ ಜೊತೆಗೆ ಕಾಂಟ್ರಾಸ್ಟ್ ಆರೆಂಜ್ ಆಕರ್ಷಕವಾಗಿದೆ.
ಇದನ್ನೂ ಓದಿ: 2023ರಲ್ಲಿ ಬಿಡುಗಡೆಯಾಗಿರುವ ಟಾಪ್ 5 ಸಖತ್ ಫೀಚರ್ಸ್ ಬೈಕ್ ಗಳಿವು..
ಎಥರ್ ಕಂಪನಿಯು ಹೊಸ 450 ಅಪೆಕ್ಸ್ ಇವಿ ಸ್ಕೂಟರಿನಲ್ಲಿ ಗರಿಷ್ಠ ಸಾಮರ್ಥ್ಯ ಹೊಂದಿರುವ 3.7kWh ಬ್ಯಾಟರಿ ಪ್ಯಾಕ್ ನೊಂದಿಗೆ 7kW ಪವರ್ ಮತ್ತು 26 ಎನ್ಎಂ ಉತ್ಪಾದಿಸಲಿದ್ದು, ವಾರ್ಪ್ ಪ್ಲಸ್ ರೈಡ್ ಮೋಡ್‌ನೊಂದಿಗೆ ಪ್ರತಿ ಗಂಟೆಗೆ ಗರಿಷ್ಠ 100 ಕಿ.ಮೀ ಟಾಪ್ ಸ್ಪೀಡ್ ತಲುಪುತ್ತದೆ. ಈ ಮೂಲಕ ಇದು 2.9 ಸೆಕೆಂಡುಗಳಲ್ಲಿ ಸೊನ್ನೆಯಿಂದ 40 ಕಿ.ಮೀ ವೇಗದೊಂದಿಗೆ ರೋಲ್-ಆನ್ ವೇಗವರ್ಧನೆಯು ಈ ಹಿಂದಿನ ಮಾದರಿಗಿಂತಲೂ ಶೇ. 30 ರಷ್ಟು ಸುಧಾರಣೆಗೊಂಡಿದ್ದು, ಪ್ರತಿ ಚಾರ್ಜ್ ಗೆ ಐಡಿಸಿ ರೇಂಜ್ ಮಾನದಂಡಗಳ ಪ್ರಕಾರ 157 ಕಿ.ಮೀ ಮೈಲೇಜ್ ನೀಡುತ್ತದೆ.
ಇದನ್ನೂ ಓದಿ: ಆಕರ್ಷಕ ಬೆಲೆಯೊಂದಿಗೆ 150 ಕಿ.ಮೀ ಮೈಲೇಜ್ ನೀಡುವ ಸಿಂಪಲ್ ಡಾಟ್ ಒನ್ ಇವಿ ಸ್ಕೂಟರ್ ಬಿಡುಗಡೆ
ಹಾಗೆಯೇ ಹೊಸ 450 ಅಪೆಕ್ಸ್ ಇವಿ ಸ್ಕೂಟರ್ ನಲ್ಲಿ ಮ್ಯಾಜಿಕ್ ಟ್ವಿಸ್ಟ್ ಹೆಸರಿನ ಸುಧಾರಿತ ರಿಜನರೇಟ್ ಬ್ರೇಕಿಂಗ್ ಸಿಸ್ಟಂ ಜೋಡಿಸಲಾಗಿದ್ದು, ಇದು ಬ್ರೇಕ್‌ಗಳಿಲ್ಲದೆ ಸ್ಕೂಟರ್ ಅನ್ನು ನಿಧಾನಗೊಳಿಸಲು ವೇಗವರ್ಧಕವನ್ನು 15 ಡಿಗ್ರಿಗಳಷ್ಟು ಹಿಂದಕ್ಕೆ ತಿರುಗಿಸುತ್ತದೆ. ಇನ್ನುಳಿದಂತೆ ಹೊಸ ಸ್ಕೂಟರಿನಲ್ಲಿ ಪಾರದರ್ಶಕವಾಗಿರುವ ಹಿಂಭಾಗದ ಚಾರ್ಸಿಸ್ ನೊಂದಿಗೆ ಗ್ರೌಂಡ್ ಕ್ಲಿಯೆರೆನ್ಸ್, ವ್ಹೀಲ್ ಬೆಸ್, ಟೈರ್ ಸೈಜ್ ಅನ್ನು 450ಎಕ್ಸ್ ನಲ್ಲಿರುವಂತೆ ಮುಂದುವರಿಸಲಾಗಿದ್ದು, ಪರ್ಫಾಮೆನ್ಸ್ ಇಷ್ಟಪಡುವ ಗ್ರಾಹಕರಿಗೆ ಇದು ಉತ್ತಮ ಆಯ್ಕೆ ಎನ್ನಬಹುದು.