ಮಹೀಂದ್ರಾ ಅಂಗಸಂಸ್ಥೆಯಾಗಿರುವ ಮಹೀಂದ್ರಾ ಲಾಸ್ಟ್ ಮೈಲ್ ಮೊಬಿಲಿಟಿ ಲಿಮಿಟೆಡ್ (MLMML) ಕಂಪನಿಯು ತನ್ನ ನವೀಕೃತ ಜೀತೋ ಸ್ಟ್ರಾಂಗ್ (Jeeto Strong) ಲಘು ವಾಣಿಜ್ಯ ವಾಹನವನ್ನು ಬಿಡುಗಡೆ ಮಾಡಿದ್ದು, ಹೊಸ ವಾಣಿಜ್ಯ ವಾಹನವು ಕರ್ನಾಟಕ ಎಕ್ಸ್ ಶೋರೂಂ ಪ್ರಕಾರ ರೂ. 5.28 ಲಕ್ಷದಿಂದ ರೂ. 5.50 ಲಕ್ಷ ಬೆಲೆ ಹೊಂದಿದೆ.
ಜೀತೊ ಸ್ಟ್ರಾಂಗ್ ಹೊಸ ಮಾದರಿಯು ಈ ಬಾರಿ ಹೆಚ್ಚಿನ ಪೇಲೋಡ್ ಸಾಮರ್ಥ್ಯ ಮತ್ತು ಸುಧಾರಿತ ವೈಶಿಷ್ಟ್ಯಗಳೊಂದಿಗೆ ಅಭಿವೃದ್ದಿಗೊಂಡಿದ್ದು, ಈಗಾಗಲೇ ಇದು 2 ಲಕ್ಷಕ್ಕೂ ಹೆಚ್ಚು ಸಂತೃಪ್ತ ಗ್ರಾಹಕರನ್ನು ಹೊಂದಿದೆ. ಇದೀಗ ಹೊಸ ಬದಲಾವಣೆಗಳೊಂದಿಗೆ ಬ್ರ್ಯಾಂಡ್‌ನ ಮೌಲ್ಯವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯುವ ನೀರಿಕ್ಷೆಯಲ್ಲಿದ್ದು, ಕಡಿಮೆ ನಿರ್ವಹಣಾ ವೆಚ್ಚ ಮತ್ತು ಹೆಚ್ಚಿನ ಲಾಭಾಂಶದ ಮೂಲಕ ಮಾಲೀಕತ್ವದ ಅನುಭವ ಹೆಚ್ಚಿಸಲಿವೆ.
ಜೀತೋ ಸ್ಟ್ರಾಂಗ್ ವಾಣಿಜ್ಯ ವಾಹನದಲ್ಲಿ ಡೀಸೆಲ್ ಮಾದರಿಯು ರೂ. 5.28 ಲಕ್ಷ ಎಕ್ಸ್ ಶೋರೂಂ ದರ ಹೊಂದಿದ್ದರೆ ಸಿಎನ್ ಜಿ ಮಾದರಿಯು ರೂ. 5.50 ಲಕ್ಷ ಆರಂಭಿಕ ಬೆಲೆ ಹೊಂದಿದ್ದು, ಇದರಲ್ಲಿ ಡೀಸೆಲ್ ಮಾದರಿಯು 815 ಕೆಜಿ ಮತ್ತು ಸಿಎನ್ ಜಿ ಮಾದರಿಯು ಗರಿಷ್ಠ 750 ಕೆಜಿಯಷ್ಟು ಪೇಲೋಡ್ ಸಾಮರ್ಥ್ಯ ಹೊಂದಿದೆ. ಈ ಮೂಲಕ ಹೊಸ ಆವೃತ್ತಿಯು ಈ ಹಿಂದಿನ ಮಾದರಿಗಿಂತಲೂ ಹೆಚ್ಚುವರಿಯಾಗಿ 100 ಕೆಜಿ ಪೇಲೋಡ್ ಸಾಮರ್ಥ್ಯ ಪಡೆದುಕೊಂಡಿದ್ದು, ಇವು ಪ್ರತಿಸ್ಪರ್ಧಿ ಟಾಟಾ ಮತ್ತು ಅಶೋಕ್ ಲೇಲ್ಯಾಂಡ್ ಲಘು ವಾಣಿಜ್ಯ ವಾಹನಗಳಿಂತಲೂ ಅತಿ ಕಡಿಮೆ ನಿರ್ವಹಣಾ ವೆಚ್ಚ ಹೊಂದಿವೆ.
ಇದನ್ನೂ ಓದಿ: ಮಹೀಂದ್ರಾ ನಿರ್ಮಾಣದ ಈ ಕಾರಿನ ಮೇಲೆ ರೂ. 3.50 ಲಕ್ಷ ಡಿಸ್ಕೌಂಟ್
ಹೊಸ ಜೀತೋ ಸ್ಟ್ರಾಂಗ್ ವಾಣಿಜ್ಯ ವಾಹನದಲ್ಲಿರುವ ಡೀಸೆಲ್ ಮಾದರಿಯು ಪ್ರತಿ ಲೀಟರ್ ಗೆ 32 ಕಿ.ಮೀ ಮೈಲೇಜ್ ನೀಡಲಿದ್ದರೆ ಸಿಎನ್ ಜಿ ಮಾದರಿಯು ಪ್ರತಿ ಕೆಜಿ ಸಿಎನ್ ಜಿಗೆ 35 ಕಿ.ಮೀ ಮೈಲೇಜ್ ಹಿಂದಿರುಗಿಸಲಿದ್ದು, ಇದು ಉದ್ಯಮದಲ್ಲೇ ಅತ್ಯುತ್ತಮ ಮೈಲೇಜ್ ಎನ್ನಬಹುದಾಗಿದೆ. ಹಾಗೆಯೇ ಹೊಸ ವಾಣಿಜ್ಯ ವಾಹನದಲ್ಲಿ ಡ್ರೈವಿಂಗ್ ಅನುಭವ ಮತ್ತು ಅನುಕೂಲತೆಯನ್ನು ಹೆಚ್ಚಿಸಲು ಹಲವಾರು ವೈಶಿಷ್ಟ್ಯತೆಗಳನ್ನು ನೀಡಲಾಗಿದ್ದು, ಗರಿಷ್ಠ ಸುರಕ್ಷತೆಯೊಂದಿಗೆ ನಿರಂತರ ನಂಬಿಕೆ ಮತ್ತು ವಿಶ್ವಾಸವನ್ನು ಖಾತ್ರಿಪಡಿಸುತ್ತದೆ.
ಮಹೀಂದ್ರಾ ಕಂಪನಿ ಹೊಸ ವಾಹನದಲ್ಲಿ ಸಬ್-2 ಟನ್ ICE ಕಾರ್ಗೊ 4-ವೀಲರ್ನಲ್ಲಿಯೇ ಮೊದಲು ಎನ್ನಬಹುದಾದ ಎಲೆಕ್ಟ್ರಿಕ್ ವ್ಯಾಕ್ಯೂಮ್ ಪಂಪ್ ಸಹಾಯದ ಬ್ರೇಕಿಂಗ್ ಸಿಸ್ಟಂನೊಂದಿಗೆ ಬಳಕೆದಾರ ಸ್ನೇಹಿಯಾದ ಹೊಚ್ಚ ಹೊಸ ಡಿಜಿಟಲ್ ಕ್ಲಸ್ಟರ್ ಮತ್ತು ಸುಧಾರಿತ ಸಸ್ಪೆನ್ಶನ್ ಜೋಡಿಸಿದೆ. ಜೊತಗೆ ಮಾಲೀಕತ್ವದ ಅನುಭವವನ್ನು ಹೆಚ್ಚಿಸುವ ಉದ್ದೇಶದೊಂದಿಗೆ ಚಾಲಕನಿಗೆ ರೂ. 10 ಲಕ್ಷ ಮೌಲ್ಯದ ಉಚಿತ ಅಪಘಾತ ವಿಮೆಯನ್ನು ಸಹ ಮಹೀಂದ್ರ ಕಂಪನಿಯೇ ನೀಡಲಿದ್ದು, ಇದು ಗ್ರಾಹಕರ ಸುರಕ್ಷತೆ ಮತ್ತು ಭದ್ರತೆಯನ್ನು ಖಾತ್ರಿಪಡಿಸುತ್ತದೆ.
ಇದನ್ನೂ ಓದಿ: ಕಡಿಮೆ ಬೆಲೆಗೆ ಖರೀದಿಗೆ ಲಭ್ಯವಿರುವ ಅತ್ಯುತ್ತಮ ಟಾಪ್ 5 ಸಿಎನ್ ಜಿ ಕಾರುಗಳಿವು!
ಇನ್ನು ಹೊಸ ವಾಣಿಜ್ಯ ವಾಹನದ ಖರೀದಿಯ ಮೇಲೆ 3 ವರ್ಷ ಅಥವಾ 72 ಸಾವಿರ ಕಿ.ಮೀ ವಾರಂಟಿಯನ್ನು ಸಹ ಮಹೀಂದ್ರಾ ಕಂಪನಿಯು ಒದಗಿಸಲಿದ್ದು, ಗುಣಮಟ್ಟ ಹಾಗೂ ಬಾಳಿಕೆಯ ಕುರಿತು ತನ್ನ ಬದ್ಧತೆಯನ್ನು ಪ್ರದರ್ಶಿಸುತ್ತದೆ. ಈ ಮೂಲಕ ಹೊಸ ವಾಹನವು ಮುಂಬರುವ ಹಬ್ಬದ ಋತುಗಳಲ್ಲಿ ಹೆಚ್ಚಿನ ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಲ್ಲಿದ್ದು, ಈ ಕುರಿತು MLMML ಕಂಪನಿಯ ಮ್ಯಾನೇಜಿಂಗ್ ಡೈರೆಕ್ಟರ್ ಮತ್ತು ಸಿಇಓ ಶ್ರೀಮತಿ ಸುಮನ್ ಮಿಶ್ರಾ ಮಾತನಾಡಿ, ಜೀತೋ ಸ್ಟ್ರಾಂಗ್ ಈಗ ಸಾಟಿಯಿಲ್ಲದ ಪೇಲೋಡ್ ಸಾಮರ್ಥ್ಯದೊಂದಿಗೆ ಅತ್ಯುತ್ತಮ ಮಾದರಿಯಾಗಿದ್ದು, ಇದು ಕಡಿಮೆ ನಿರ್ವಹಣೆಯ ಕೊನೆಯ ಮೈಲಿ ಸರಕು ವಿತರಣೆಯನ್ನು ಮಾತ್ರವಲ್ಲದೆ ಚಾಲಕ ಪಾಲುದಾರರ ಜೀವನವನ್ನು ಸಹ ಪರಿವರ್ತಿಸಲಿದೆ ಎಂದಿದ್ದಾರೆ.