
ಆಫ್ ರೋಡ್(Off-Road) ಕಾರುಗಳ ವಿಭಾಗದಲ್ಲಿ ಮಹೀಂದ್ರಾ ಥಾರ್(Mahindra Thar) ಮುಂಚೂಣಿಯಲ್ಲಿದ್ದು, ಆಫ್ ರೋಡ್ ಜೊತೆಗೆ ಲೈಫ್ ಸ್ಟೈಲ್ ಮಾದರಿಯಾಗಿ ಬದಲಾಗುತ್ತಿರುವ ಥಾರ್ ಇದೀಗ ಮತ್ತೊಂದು ಮಹತ್ವದ ಬದಲಾವಣೆಯೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ. ಥಾರ್ ಕಾರಿನಲ್ಲಿ ಹೊಸದಾಗಿ ರಿಯರ್ ವ್ಹೀಲ್ ಡ್ರೈವ್ ಸಿಸ್ಟಂ ವೆರಿಯೆಂಟ್ ಬಿಡುಗಡೆ ಮಾಡಲಾಗಿದ್ದು, ಇದು ಹೈ ಎಂಡ್ ಮಾದರಿಯಾದ ಆಲ್ ವ್ಹೀಲ್ ಡ್ರೈವ್ ಸಿಸ್ಟಂ ಸೌಲಭ್ಯದ ವೆರಿಯೆಂಟ್ ಗಿಂತಲೂ ಕಡಿಮೆ ಬೆಲೆಯೊಂದಿಗೆ ಹಲವಾರು ಹೊಸ ಫೀಚರ್ಸ್ ಪಡೆದುಕೊಂಡಿದೆ.
ಆಫ್ ರೋಡ್ ಎಸ್ ಯುವಿ ಕಾರುಗಳ ವಿಭಾಗದಲ್ಲಿ ಮಹೀಂದ್ರಾ ಥಾರ್ ತನ್ನದೇ ಆದ ಜನಪ್ರಿಯತೆ ಹೊಂದಿದ್ದು, ಹಲವಾರು ವಿಶೇಷತೆಗಳೊಂದಿಗೆ ಕಳೆದ 2019ರಲ್ಲಿ ಹೊಸ ತಲೆಮಾರಿನ ವೈಶಿಷ್ಟ್ಯತೆಗಳನ್ನು ಪಡೆದುಕೊಂಡಿತ್ತು. ಇದೀಗ ಮತ್ತೊಂದು ಮಹತ್ವದ ಬದಲಾವಣೆಯೊಂದಿಗೆ ಮಾರುಕಟ್ಟೆ ಪ್ರವೇಶಿಸಿದ್ದು, ಹೊಸ ವೆರಿಯೆಂಟ್ ನೊಂದಿಗೆ ಲೈಫ್ ಸ್ಟೈಲ್ ವಿಭಾಗದಲ್ಲಿ ಈ ಬಾರಿ ಭರ್ಜರಿ ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಲ್ಲಿದೆ.
4X4 ಡ್ರೈವ್ ಸಿಸ್ಟಂನೊಂದಿಗೆ ಆಫ್ ರೋಡ್ ಪ್ರಿಯರನ್ನು ಸೆಳೆದಿರುವ ಥಾರ್ ಕಾರು ಈ ಬಾರಿ 4X2 ವೆರಿಯೆಂಟ್ ನೊಂದಿಗೆ ಬಿಡುಗಡೆಯಾಗಿದೆ. ಹೊಸ 4X2 ವೆರಿಯೆಂಟ್ ರಿಯಲ್ ವ್ಹೀಲ್ ಡ್ರೈವ್ ಸಿಸ್ಟಂ ಹೊಂದಿದ್ದು, ದೆಹಲಿ ಎಕ್ಸ್ ಶೋರೂಂ ಪ್ರಕಾರ ಇದು ಆರಂಭಿಕವಾಗಿ ರೂ. 9.99 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 14.28 ಲಕ್ಷ ಬೆಲೆ ಹೊಂದಿದೆ. ಇದು ಒಟ್ಟು ನಾಲ್ಕು ವೆರಿಯೆಂಟ್ ಗಳನ್ನು ಹೊಂದಿದ್ದು, 4X4 ವೆರಿಯೆಂಟ್ ಗಿಂತಲೂ ಕಡಿಮೆ ಬೆಲೆ ಹೊಂದಿರುವುದು ಪ್ರಮುಖ ಆಕರ್ಷಣೆಯಾಗಿದೆ.
ಥಾರ್ 4×4 ವೆರಿಯೆಂಟ್ ಎಕ್ಸ್ ಶೋರೂಂ ಪ್ರಕಾರ ಆರಂಭಿಕವಾಗಿ ರೂ. 13.59 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 16.29 ಲಕ್ಷ ಬೆಲೆ ಹೊಂದಿದ್ದು, ಇದರಲ್ಲಿ ಹೊಸ ವೆರಿಯೆಂಟ್ ಟಾಪ್ ಎಂಡ್ ವೆರಿಯೆಂಟ್ ಗಿಂತಲೂ ಸುಮಾರು ರೂ. 1 ಲಕ್ಷದಷ್ಟು ಕಡಿಮೆ ಬೆಲೆ ಹೊಂದಿದಂತಾಗಿದೆ. ಹೀಗಾಗಿ ಬೆಸ್ ವೆರಿಯೆಂಟ್ ಎಸ ಯುವಿ ಕಾರು ಖರೀದಿಸುವ ಗ್ರಾಹಕರಿಗೆ ಹೊಸ ವೆರಿಯೆಂಟ್ ಅತ್ಯುತ್ತಮ ಆಯ್ಕೆಯಾಗಿದೆ ಎನ್ನಬಹುದು.
ಮಹೀಂದ್ರಾ ಕಂಪನಿಯು ಥಾರ್ ಹೊಸ 4X2 ವೆರಿಯೆಂಟ್ ನಲ್ಲಿ 1.5 ಲೀಟರ್ ಡೀಸೆಲ್ ಎಂಜಿನ್ ಆಯ್ಕೆಯ ಜೊತೆಗೆ 2.0 ಲೀಟರ್ ಪೆಟ್ರೋಲ್ ಎಂಜಿನ್ ಜೋಡಣೆ ಮಾಡಿದೆ. ಇದರಲ್ಲಿ ಡೀಸೆಲ್ ಮಾದರಿಯು 6- ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಆಯ್ಕೆ ಹೊಂದಿದ್ದರೆ ಪೆಟ್ರೋಲ್ ಮಾದರಿಯು 6 ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಆಯ್ಕೆ ಹೊಂದಿದೆ. ಆದರೆ 4X4 ಮಾದರಿಯಲ್ಲಿ ಮಹೀಂದ್ರಾ ಕಂಪನಿಯು 2.2 ಲೀಟರ್ ಡೀಸೆಲ್ ಜೊತೆಗೆ ಹೆಚ್ಚು ಹಾರ್ಸ್ ಪವರ್ ಹೊಂದಿರುವ 2.0 ಲೀಟರ್ ಪೆಟ್ರೋಲ್ ಎಂಜಿನ್ ಜೋಡಣೆ ಮಾಡಿದೆ. ಇದರಲ್ಲಿ ಹೈ ಎಂಡ್ ಮಾದರಿಯು ಹೆಚ್ಚಿನ ಸಾಮಾರ್ಥ್ಯದೊಂದಿಗೆ ಆಫ್ ರೋಡ್ ಕೌಶಲ್ಯತೆ ಹೊಂದಿದ್ದರೆ 4X2 ವೆರಿಯೆಂಟ್ ಲೈಫ್ ಸ್ಟೈಲ್ ಉದ್ದೇಶಕ್ಕೆ ಉತ್ತಮವಾಗಿರಲಿದೆ.
ಹೊಸ ಥಾರ್ ವೆರಿಯೆಂಟ್ ನಲ್ಲಿ ಮಹೀಂದ್ರಾ ಕಂಪನಿಯು ಎಂಜಿನ್ ಮತ್ತು ಡ್ರೈವ್ ಸಿಸ್ಟಂ ಹೊರತಾಗಿ ಯಾವುದೇ ಗುರುತರ ಬದಲಾವಣೆ ಪರಿಚಯಿಸಿಲ್ಲ. ಹೊಸ ವೆರಿಯೆಂಟ್ ಸದ್ಯ ಹಾರ್ಡ್ ಟಾಪ್ ಆಯ್ಕೆಯಲ್ಲಿ ಮಾತ್ರ ಲಭ್ಯವಿರಲಿದ್ದು, ಹೊಸ ವೆರಿಯೆಂಟ್ ಖರೀದಿಗಾಗಿ ಇಂದಿನಿಂದಲೇ ಬುಕಿಂಗ್ ಆರಂಭವಾಗಿದೆ. ಹೊಸ ಬುಕಿಂಗ್ ಸಲ್ಲಿಸಲು ರೂ. 10 ಸಾವಿರ ಮುಂಗಡ ದರ ನಿಗದಿಪಡಿಸಲಾಗಿದ್ದು, ಇದೇ ತಿಂಗಳು 14ರಿಂದ ಹೊಸ ಕಾರಿನ ವಿತರಣೆ ಆರಂಭವಾಗಲಿದೆ.
Published On - 5:23 pm, Mon, 9 January 23