ಮಹೀಂದ್ರಾ (Mahindra) ಕಂಪನಿಯು ತನ್ನ ಹೊಸ ಎಕ್ಸ್‌ಯುವಿ 3ಎಕ್ಸ್ಒ (XUV 3XO) ಪರಿಚಯಿಸಿದ್ದು, ಹೊಸ ಕಾರು ಮಾದರಿಯುವ ವಿನೂತನ ಫೀಚರ್ಸ್ ಗಳೊಂದಿಗೆ ಭರ್ಜರಿ ಬೇಡಿಕೆ ಪಡೆದುಕೊಳ್ಳುತ್ತಿದೆ. ಹೊಸ ಕಾರು ಖರೀದಿಗಾಗಿ ಬುಕಿಂಗ್ ಪ್ರಕ್ರಿಯೆ ಆರಂಭವಾದ ಕೇವಲ 1 ಗಂಟೆಯ ಅವಧಿಯಲ್ಲಿ ಬರೋಬ್ಬರಿ 50 ಸಾವಿರ ಗ್ರಾಹಕರು ಮುಂಗಡ ಪಾವತಿಸಿದ್ದಾರೆ. ಹೊಸ ಕಾರು ಪ್ರಮುಖ ಒಂಬತ್ತು ವೆರಿಯೆಂಟ್ ಗಳೊಂದಿಗೆ ಖರೀದಿಗೆ ಲಭ್ಯವಿದ್ದು, ಇದು ದೆಹಲಿ ಎಕ್ಸ್ ಶೋರೂಂ ಪ್ರಕಾರ ರೂ. 7.49 ಲಕ್ಷದಿಂದ ರೂ. 15.49 ಲಕ್ಷ ಬೆಲೆ ಹೊಂದಿದೆ. ಭಾರೀ ಬದಲಾವಣೆಯೊಂದಿಗೆ ರಸ್ತೆಗಿಳಿದಿರುವ ಹೊಸ ಕಾರು ಒಟ್ಟು ಮೂರು ಎಂಜಿನ್ ಆಯ್ಕೆಗಳನ್ನು ಹೊಂದಿದ್ದು, 1.2 ಲೀಟರ್ ಟರ್ಬೊ ಪೆಟ್ರೋಲ್, 1.5 ಲೀಟರ್ ಡೀಸೆಲ್ ಎಂಜಿನ್ ಮತ್ತು ಟಾಪ್ ಎಂಡ್ ವೆರಿಯೆಂಟ್ ಗಳಲ್ಲಿ 1.2 ಲೀಟರ್ ಡೈರೆಕ್ಟ್ ಇಂಜೆಕ್ಷನ್ ಪ್ರೇರಿತ ಟರ್ಬೊ ಪೆಟ್ರೋಲ್ ಎಂಜಿನ್ ಆಯ್ಕೆಗಳಿವೆ.
ಎಕ್ಸ್‌ಯುವಿ 3ಎಕ್ಸ್ಒ ಕಾರಿನಲ್ಲಿರುವ 1.2 ಲೀಟರ್ ಟರ್ಬೊ ಪೆಟ್ರೋಲ್ ಮಾದರಿಯು 6-ಸ್ಪೀಡ್ ಮ್ಯಾನುವಲ್ ಮತ್ತು 6-ಸ್ಪೀಡ್ ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಆಯ್ಕೆಯೊಂದಿಗೆ 111 ಹಾರ್ಸ್ ಪವರ್ ಉತ್ಪಾದಿಸಲಿದ್ದರೆ 1.5 ಲೀಟರ್ ಡೀಸೆಲ್ ಮಾದರಿಯು ಕೂಡಾ 6-ಸ್ಪೀಡ್ ಮ್ಯಾನುವಲ್ ಮತ್ತು 6-ಸ್ಪೀಡ್ ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಆಯ್ಕೆಯೊಂದಿಗೆ 117 ಹಾರ್ಸ್ ಪವರ್ ಉತ್ಪಾದಿಸುತ್ತದೆ. ಹಾಗೆಯೇ 1.2 ಲೀಟರ್ ಡೈರೆಕ್ಟ್ ಇಂಜೆಕ್ಷನ್ ಪ್ರೇರಿತ ಟರ್ಬೊ ಪೆಟ್ರೋಲ್ ಎಂಜಿನ್ ಕೂಡಾ ಮ್ಯಾನುವಲ್ ಮತ್ತು ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಆಯ್ಕೆಯೊಂದಿಗೆ 131 ಹಾರ್ಸ್ ಪವರ್ ಉತ್ಪಾದಿಸಲಿದ್ದು, ಇದರಲ್ಲಿ ಪೆಟ್ರೋಲ್ ಮಾದರಿಗಳು ಪ್ರತಿ ಲೀಟರ್ ಗೆ 18 ಕಿ.ಮೀ ನಿಂದ 20 ಕಿ.ಮೀ ಮೈಲೇಜ್ ನೀಡಲಿದ್ದರೆ ಡೀಸೆಲ್ ಮಾದರಿಗಳು ಪ್ರತಿ ಲೀಟರ್ ಗೆ 20 ಕಿ.ಮೀ ನಿಂದ 21.2 ಕಿ.ಮೀ ತನಕ ಮೈಲೇಜ್ ನೀಡುತ್ತವೆ.
ಇದನ್ನೂ ಓದಿ: ಭಾರತದಲ್ಲಿ ಮಾರುತಿ ಸುಜುಕಿ ಮೊದಲ ಇವಿ ಕಾರು ಬಿಡುಗಡೆ ಮಾಹಿತಿ ಬಹಿರಂಗ
ಇದರೊಂದಿಗೆ ಮಹೀಂದ್ರಾ ಕಂಪನಿಯು ಹೊಸ ಎಕ್ಸ್‌ಯುವಿ 3ಎಕ್ಸ್ಒ ಕಾರಿನಲ್ಲಿ ಸಂಪೂರ್ಣವಾಗಿ ಬದಲಾಯಿಸಲಾದ ವಿನ್ಯಾಸ ವೈಶಿಷ್ಟ್ಯತೆ ನೀಡಿದೆ. ಹೊಸ ಕಾರಿನ ಒಳಭಾಗದಲ್ಲೂ ಸಾಕಷ್ಟು ಬದಲಾವಣೆಗಳನ್ನು ತರಲಾಗಿದ್ದು, ಕಾರು ಪ್ರಯಾಣವನ್ನು ಮತ್ತಷ್ಟು ಆರಾಮದಾಯಕಗೊಳಿಸಲಾಗಿದೆ. ಹೊಸ ಕಾರಿನಲ್ಲಿ ಸುಧಾರಿತ ತಂತ್ರಜ್ಞಾನ ಪ್ರೇರಿತ 10.25 ಇಂಚಿನ ಇನ್ಪೋಟೈನ್ ಮೆಂಟ್ ಸಿಸ್ಟಂ, ಡೈವರ್ ಡಿಸ್ ಪ್ಲೇ, ಪನೊರಮಿಕ್ ಸನ್ ರೂಫ್, ಡ್ಯುಯಲ್ ಜೋನ್ ಕ್ಲೈಮೆಟ್ ಕಂಟ್ರೋಲ್, ಅಂಡ್ರಾಯಿಡ್ ಆಟೋ ಮತ್ತು ಆಟೋ ಕಾರ್ ಪ್ಲೇ, ವೈರ್ ಲೆಸ್ ಚಾರ್ಜಿಂಗ್ ಸಿಸ್ಟಂ, ಹಿಂಬದಿಯ ಆಸನಗಳಲ್ಲಿ ಸಿ ಟೈಪ್ ಚಾರ್ಜಿಂಗ್ ಪೋರ್ಟ್ಸ್ ಮತ್ತು ಎಸಿ ವೆಂಟ್ಸ್ ನೊಂದಿಗೆ 295 ಬೂಟ್ ಸ್ಪೆಸ್ ನೀಡಲಾಗಿದೆ. ಇದಲ್ಲದೆ ಹೊಸ ಕಾರಿನಲ್ಲಿ ವಿವಿಧ ಕಾರ್ ಕನೆಕ್ಟ್ ತಂತ್ರಜ್ಞಾನ ಹೊಂದಿರುವ ಆಡ್ರೆನೊಕ್ಸ್ ತಂತ್ರಜ್ಞಾನ ನೀಡಲಾಗಿದ್ದು, ಸುರಕ್ಷತೆಗೂ ಹೆಚ್ಚಿನ ಒತ್ತು ನೀಡಲಾಗಿದೆ.
ಇದನ್ನೂ ಓದಿ: ಸಖತ್ ಕ್ಯೂಟ್ ಆಗಿರೋ ಇವಿ ಕಾರು ಖರೀದಿಸಿದ ನಟಿ ನಮ್ರತಾ ಗೌಡ
ಸುರಕ್ಷೆತೆಗಾಗಿ ಹೊಸ ಕಾರಿನಲ್ಲಿ ಮಹೀಂದ್ರಾ ಕಂಪನಿಯು ಆರಂಭಿಕ ಮಾದರಿಗೂ ಅನ್ವಯಿಸುವಂತೆ 6 ಏರ್ ಬ್ಯಾಗ್ ಗಳು, ಆಲ್ ವ್ಹೀಲ್ ಡಿಸ್ಕ್ ಬ್ರೇಕ್, ಇಎಸ್ ಪಿ ಮತ್ತು ಐಸೋಫಿಕ್ಸ್ ಆ್ಯಂಕರ್ಸ್ ನೀಡಲಾಗಿದೆ. ಹಾಗೆಯೇ ಟಾಪ್ ಎಂಡ್ ಮಾದರಿಗಳಿಗಾಗಿ ಹೆಚ್ಚುವರಿಯಾಗಿ ಎಕ್ಸ್ ಯುವಿ700 ಕಾರಿನಲ್ಲಿರುವಂತೆ ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್, ಆಟೋ ಹೋಲ್ಡ್, ಹಿಲ್ ಸ್ಟಾರ್ಟ್, ಹಿಲ್ ಡಿಸೆಂಟ್, 360 ಡಿಗ್ರಿ ಕ್ಯಾಮೆರಾ, ಬ್ಲೈಂಡ್ ಸ್ಪಾರ್ಟ್ ಮಾನಿಟರ್ ಒಳಗೊಂಡಿರುವ ಲೆವಲ್ 2 ಎಡಿಎಎಸ್(ಅಡ್ವಾನ್ಸ್ ಡ್ರೈವರ್ ಅಸಿಸ್ಟ್ ಸಿಸ್ಟಂ) ಸೌಲಭ್ಯವನ್ನು ಒಳಗೊಂಡಿದೆ.