ಭಾರತದಲ್ಲಿ ಮಾರುತಿ ಸುಜುಕಿ ಮೊದಲ ಇವಿ ಕಾರು ಬಿಡುಗಡೆ ಮಾಹಿತಿ ಬಹಿರಂಗ
ಕಾರು ಮಾರಾಟದಲ್ಲಿ ಅಗ್ರಸ್ಥಾನದಲ್ಲಿರುವ ಮಾರುತಿ ಸುಜುಕಿ ಕಂಪನಿಯು ತನ್ನ ಮೊದಲ ಎಲೆಕ್ಟ್ರಿಕ್ ಕಾರು ಬಿಡುಗಡೆಗಾಗಿ ಸಿದ್ದವಾಗುತ್ತಿದ್ದು, ಹೊಸ ಇವಿ ಕಾರಿನ ಬಿಡುಗಡೆಯ ಮಾಹಿತಿಯನ್ನು ಹಂಚಿಕೊಂಡಿದೆ.
ಹೊಸ ತಲೆಮಾರಿನ ಕಾರುಗಳ ಮೂಲಕ ಯುವ ಗ್ರಾಹಕರನ್ನು ಸೆಳೆಯುತ್ತಿರುವ ಮಾರುತಿ ಸುಜುಕಿ (Maruti Suzuki) ಕಂಪನಿಯು ತನ್ನ ಮಾರಾಟ ಪ್ರಮಾಣವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯಲು ಸಜ್ಜಾಗುತ್ತಿದ್ದು, ಶೀಘ್ರದಲ್ಲಿಯೇ ತನ್ನ ಬಹುನೀರಿಕ್ಷಿತ ಎಲೆಕ್ಟ್ರಿಕ್ ಕಾರು (Electric Car) ಬಿಡುಗಡೆ ಮಾಡುವ ಸುಳಿವು ನೀಡಿದೆ. ಪ್ರಸ್ತುತ ಮಾರುಕಟ್ಟೆಯಲ್ಲಿ ಕೇವಲ ಪೆಟ್ರೋಲ್ ಮತ್ತು ಸಿಎನ್ ಜಿ ಕಾರುಗಳ ಮಾರಾಟವನ್ನು ಮಾತ್ರ ಹೊಂದಿರುವ ಮಾರುತಿ ಸುಜುಕಿ ಕಂಪನಿಯು ಪ್ರತಿಸ್ಪರ್ಧಿ ಕಂಪನಿಗಳಿಗೆ ಪೈಪೋಟಿಯಾಗಿ ಅತ್ಯುತ್ತಮ ಇವಿ ಕಾರು ರಸ್ತೆಗಿಳಿಸುವ ಯೋಜನೆಯಲ್ಲಿದೆ.
ಹೊಸ ಇವಿ ಕಾರು ಬಿಡುಗಡೆಯ ಕುರಿತಾಗಿ ಮಾರುತಿ ಸುಜುಕಿ ಇಂಡಿಯಾ ಕಂಪನಿಯ ಮಾರ್ಕೆಟಿಂಗ್ ಮತ್ತು ಸೇಲ್ಸ್ ವಿಭಾಗದ ಹಿರಿಯ ಕಾರ್ಯನಿರ್ವಾಹಕ ಅಧಿಕಾರಿ ಪಾರ್ಥೋ ಬ್ಯಾನರ್ಜಿ ಅವರು ಪ್ರತಿಕ್ರಿಯೆಸಿದ್ದಾರೆ. ಇತ್ತೀಚೆಗೆ ಬಿಡುಗಡೆಯಾದ ಹೊಸ ತಲೆಮಾರಿನ ಸ್ವಿಫ್ಟ್ ಕಾರಿನ ಕುರಿತಾದ ಸಂವಾದದ ಸಂದರ್ಭದಲ್ಲಿ ಹೊಸ ಇವಿ ಕಾರಿನ ಬಿಡುಗಡೆ ಮಾಹಿತಿ ಹಂಚಿಕೊಳ್ಳಲಾಗಿದೆ. 2025ರ ಮೊದಲ ತೈಮಾಸಿಕ ವೇಳೆಗೆ ಹೊಸ ಇವಿ ಬಿಡುಗಡೆಯಾಗಲಿದ್ದು, ಮುಂಬರುವ ದಿನಗಳಲ್ಲಿ ಹೊಸ ಇವಿ ಕಾರಿನ ಮತ್ತಷ್ಟು ಮಾಹಿತಿ ಹಂಚಿಕೊಳ್ಳುವ ಭರವಸೆ ನೀಡಿದ್ದಾರೆ.
ವಾಹನ ಮಾರುಕಟ್ಟೆಯಲ್ಲಿ ಸದ್ಯ ಹೊಸ ತಂತ್ರಜ್ಞಾನ ಅಳವಡಿಕೆಯೊಂದಿಗೆ ವೇಗವಾಗಿ ಮುನ್ನುಗ್ಗುತ್ತಿರುವ ಭಾರತೀಯ ಆಟೋ ಉದ್ಯಮಕ್ಕೆ ವಿನೂತನ ಎಲೆಕ್ಟ್ರಿಕ್ ಕಾರು ಪರಿಚಯಿಸುತ್ತಿರುವ ಮಾರುತಿ ಸುಜುಕಿ ಇವಿಎಕ್ಸ್ ಪರಿಚಯಿಸುವ ಸಿದ್ದತೆಯಲ್ಲಿದೆ. 2023ರ ದೆಹಲಿ ಆಟೋ ಎಕ್ಸ್ ಪೋದಲ್ಲಿ ಮೊದಲ ಬಾರಿಗೆ ಅನಾವರಣಗೊಂಡಿದ್ದ ಇವಿಎಕ್ಸ್ ಕಾರು ಮಾದರಿಯು ಗುಜರಾತ್ ನಲ್ಲಿರುವ ಮಾರುತಿ ಸುಜುಕಿ ಹೊಸ ಪ್ಲ್ಯಾಟ್ ಫಾರ್ಮ್ ಪ್ರೇರಿತ ಹಂಸಲಾಪುರ್ ಉತ್ಪಾದನಾ ಘಟಕದಲ್ಲಿ ಉತ್ಪಾದನೆಗೊಳ್ಳಲಿದೆ.
ಇದನ್ನೂ ಓದಿ: ಭಾರತದಲ್ಲಿ ಜನಪ್ರಿಯವಾಗಿರುವ ಟಾಪ್ 5 ಕಳಪೆ ಕಾರುಗಳಿವು!
ಎಸ್ ಯುವಿ ಕೂಪೆ ವಿನ್ಯಾಸ ಹೊಂದಿರುವ ಹೊಸ ಇವಿಎಕ್ಸ್ ಕಾನ್ಸೆಪ್ಟ್ ಕಾರು ಸದ್ಯ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆಯಲ್ಲಿರುವ ಟಾಟಾ ನೆಕ್ಸಾನ್ ಇವಿ ಮತ್ತು ಮಹೀಂದ್ರಾ ಎಕ್ಸ್ ಯುವಿ400 ಎಲೆಕ್ಟ್ರಿಕ್ ಕಾರು ಮಾದರಿಗಳಿಗೆ ಭರ್ಜರಿ ಪೈಪೋಟಿ ನೀಡಲಿದೆ. ಹೊಸ ಕಾರಿನಲ್ಲಿ 40 ಕೆವಿಹೆಚ್ ಮತ್ತು 60 ಕೆವಿಹೆಚ್ ಬ್ಯಾಟರಿ ಪ್ಯಾಕ್ ಆಯ್ಕೆ ನೀಡುವ ಸಾಧ್ಯತೆಗಳಿದ್ದು, ಇದರಲ್ಲಿ ಆರಂಭಿಕ ಮಾದರಿಯು ಪ್ರತಿ ಚಾರ್ಜ್ ಗೆ 350 ರಿಂದ 400 ಕಿ.ಮೀ ಮೈಲೇಜ್ ನೀಡಿದರೆ ಹೈ ಎಂಡ್ ಮಾದರಿಯು ಪ್ರತಿ ಚಾರ್ಜ್ ಗೆ ಗರಿಷ್ಠ 550 ಕಿ.ಮೀ ಮೈಲೇಜ್ ನೀಡಬಹುದಾಗಿದೆ.
ಹೊಸ ಇವಿಎಕ್ಸ್ ಕಾರು ಭರ್ಜರಿ ಮೈಲೇಜ್ ಜೊತೆಗೆ ವಿನ್ಯಾಸ ಮತ್ತು ವೈಶಿಷ್ಟ್ಯತೆಗಳಲ್ಲೂ ಗಮನಸೆಳೆಯಲಿದ್ದು, ಹಲವಾರು ಸುಧಾರಿತ ತಂತ್ರಜ್ಞಾನ ಪ್ರೇರಣೆ ಹೊಂದಿರಲಿದೆ. ಜೊತೆಗೆ ಹೊಸ ಕಾರಿನಲ್ಲಿ ಟೂ-ವ್ಹೀಲ್ ಡ್ರೈವ್ ಮತ್ತು ಆಲ್-ವ್ಹೀಲ್ ಡ್ರೈವ್ ಸೌಲಭ್ಯ ಹೊಂದಿರಲಿದೆ ಎನ್ನಲಾಗಿದ್ದು, ಇದು 4,200 ಎಂಎಂ ಉದ್ದಳತೆಯೊಂದಿಗೆ ಆರಾಮದಾಯಕ ಒಳಾಂಗಣ ಸೌಲಭ್ಯ ಪಡೆದುಕೊಳ್ಳಲಿದೆ.
ಇದನ್ನೂ ಓದಿ: ಭಾರತದಲ್ಲಿ ಅತಿ ಹೆಚ್ಚು ಮೈಲೇಜ್ ನೀಡುವ ಟಾಪ್ 10 ಕಾರುಗಳಿವು!
ಹೊಸ ಕಾರಿನ ಒಳಭಾಗದಲ್ಲೂ ಆಕರ್ಷಕವಾದ ಡ್ಯಾಶ್ ಬೋರ್ಡ್, ಟ್ವಿನ್ ಸ್ಕ್ರೀನ್ ಸೆಟ್ಅಪ್, ದೊಡ್ಡದಾದ ಇನ್ಪೋಟೈನ್ಮೆಂಟ್ ಸಿಸ್ಟಂ, ಡಿಜಿಟಲ್ ಇನ್ ಸ್ಟ್ರುಮೆಂಟ್ ಕ್ಲಸ್ಟರ್, ವರ್ಟಿಕಲ್ ಎಸಿ ಮತ್ತು ಪ್ಲ್ಯಾಟ್ ಬಾಟಮ್ ಸ್ಟೀರಿಂಗ್ ವ್ಹೀಲ್ ಸೌಲಭ್ಯಗಳಿದ್ದು, ಇದರೊಂದಿಗೆ ಹಲವಾರು ಸ್ಟ್ಯಾಂಡರ್ಡ್ ಸೇಫ್ಟಿ ಫೀಚರ್ಸ್ ಜೋಡಣೆ ಮಾಡಲಾಗಿದೆ. ಜೊತಗೆ ಹೊಸ ಕಾರಿಗಾಗಿ ಟೊಯೊಟಾ ಇವಿ ಪ್ಲ್ಯಾಟ್ ಫಾರ್ಮ್ ನಿಂದಲೂ ಹಲವು ಫೀಚರ್ಸ್ ಎರವಲು ಪಡೆದುಕೊಳ್ಳಲಿದ್ದು, ಇವಿಎಕ್ಸ್ ಮಾದರಿಯನ್ನೇ ಟೊಯೊಟಾ ಕೂಡಾ ರೀಬ್ಯಾಡ್ಜ್ ಆವೃತ್ತಿಯಾಗಿ ಮಾರಾಟ ಮಾಡಲಿದೆ. ಈ ಮೂಲಕ ಇದು ಬೆಲೆಯಲ್ಲಿ ಗಮನಸೆಳೆಯಲಿದ್ದು, ಎಕ್ಸ್ ಶೋರೂಂ ಪ್ರಕಾರ ರೂ. 14 ಲಕ್ಷದಿಂದ ರೂ. 20 ಲಕ್ಷ ಬೆಲೆ ಅಂತರದಲ್ಲಿ ಮಾರಾಟಗೊಳ್ಳಬಹುದಾಗಿದೆ.