ದೇಶದ ಅತಿದೊಡ್ಡ ಕಾರು ಉತ್ಪಾದನಾ ಕಂಪನಿಯಾಗಿರುವ ಮಾರುತಿ ಸುಜುಕಿ (Maruti Suzuki) ತನ್ನ ಪ್ರಮುಖ ಅರೆನಾ ಕಾರುಗಳ ಖರೀದಿ ಮೇಲೆ ಅತ್ಯುತ್ತಮ ಆಫರ್ ನೀಡುತ್ತಿದ್ದು, ಗ್ರಾಹಕರು ವಿವಿಧ ಆಫರ್ ಗಳಲ್ಲಿ ಹೆಚ್ಚಿನ ಉಳಿತಾಯ ಮಾಡಬಹುದಾಗಿದೆ. ಹೊಸ ಆಫರ್ ಗಳಲ್ಲಿ ಮಾರುತಿ ಸುಜುಕಿ ಕಂಪನಿ ಕ್ಯಾಶ್ ಡಿಸ್ಕೌಂಟ್ ಮತ್ತು ಎಕ್ಸ್ ಚೆಂಜ್ ಆಫರ್ ಗಳನ್ನು ನೀಡುತ್ತಿದ್ದು, ಹೊಸ ಆಫರ್ ಗಳಲ್ಲಿ ಇತ್ತೀಚೆಗೆ ಬಿಡುಗಡೆಯಾಗಿದ್ದ ಸ್ವಿಫ್ಟ್ ಮೇಲೂ ಅತ್ಯುತ್ತಮ ಆಫರ್ ನೀಡುತ್ತಿದೆ.
ಹೊಸ ಆಫರ್ ಗಳನ್ನು ಮಾರುತಿ ಸುಜುಕಿ ಕಂಪನಿಯು ಅರೆನಾ ಮಾರಾಟ ಮಳಿಗೆಯಲ್ಲಿ ಖರೀದಿಗೆ ಲಭ್ಯವಾಗುವ ಆಲ್ಟೋ ಕೆ10, ಎಸ್-ಪ್ರೆಸ್ಸೊ, ಸೆಲೆರಿಯೊ, ವ್ಯಾಗನ್ ಆರ್, ಇಕೋ, ಡಿಜೈರ್, ಬ್ರೆಝಾ ಮತ್ತು ಸ್ವಿಫ್ಟ್ ಕಾರುಗಳ ಮೇಲೆ ಘೋಷಣೆ ಮಾಡಲಾಗಿದ್ದು, ಎರ್ಟಿಗಾ ಎಂಪಿವಿಯ ಮೇಲೆ ಮಾತ್ರ ಯಾವುದೇ ಆಫರ್ ಗಳನ್ನು ನೀಡಲಾಗಿಲ್ಲ.
ಆಲ್ಟೋ ಕೆ10, ಎಸ್-ಪ್ರೆಸ್ಸೊ, ಸೆಲೆರಿಯೊ ಕಾರುಗಳ ಮೇಲೆ ಮಾರುತಿ ಸುಜುಕಿ ಕಂಪನಿಯು ರೂ. 43,100 ರಿಂದ ರೂ. 53,100 ಮೌಲ್ಯದ ಆಫರ್ ಗಳನ್ನು ನೀಡಲಾಗುತ್ತಿದ್ದು, ಇದರಲ್ಲಿ ಸಿಎನ್ ಜಿ ಮಾದರಿಗಳಿಗೂ ಹೊಸ ಆಫರ್ ಅನ್ವಯಿಸಲಿದೆ. ಈ ಮೂರು ಕಾರುಗಳಲ್ಲಿ 1.0 ಲೀಟರ್ ಪೆಟ್ರೋಲ್ ಎಂಜಿನ್ ಆಯ್ಕೆ ಲಭ್ಯವಿದ್ದು, ಇವು ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಗೇರ್ ಬಾಕ್ಸ್ ನೊಂದಿಗೆ ಅತ್ಯುತ್ತಮ ಇಂಧನ ದಕ್ಷತೆ ಪಡೆದುಕೊಂಡಿವೆ.
ಮಾರುತಿ ಸುಜುಕಿ ವ್ಯಾಗನ್ಆರ್ ಕಾರು ಖರೀದಿಯ ಮೇಲೆ ರೂ. 43,100 ರಿಂದ ರೂ. 48,100 ತನಕ ಆಫರ್ ಗಳನ್ನು ನೀಡಲಾಗುತ್ತಿದ್ದು, ಇಕೋ ವಾಹನದ ಮೇಲೆ ರೂ. 28,100 ತನಕ ಆಫರ್ ಲಭ್ಯವಿದೆ. ಹಾಗೆಯೇ ಬ್ರೆಝಾ ಕಂಪ್ಯಾಕ್ಟ್ ಎಸ್ ಯುವಿ ಮೇಲೆ ರೂ. 15 ಸಾವಿರ ತನಕ ಆಫರ್ ನೀಡಲಾಗುತ್ತಿದೆ.
ಇದನ್ನೂ ಓದಿ: ಭಾರತದಲ್ಲಿ ಅತಿ ಹೆಚ್ಚು ಮೈಲೇಜ್ ನೀಡುವ ಟಾಪ್ 10 ಕಾರುಗಳಿವು!
ಇನ್ನು ಇತ್ತೀಚೆಗೆ ಬಿಡುಗಡೆಯಾಗಿರುವ ಹೊಸ ತಲೆಮಾರಿನ ಸ್ವಿಫ್ಟ್ ಕಾರಿನ ಮಾರುತಿ ಸುಜುಕಿ ಕಂಪನಿಯು ರೂ.28,100 ರಿಂದ ರೂ. 33,100 ತನಕ ಆಫರ್ ನೀಡುತ್ತಿದ್ದು, ಇದರೊಂದಿಗೆ ಸ್ಟಾಕ್ ಲಭ್ಯವಿರುವ ಹಳೆಯ ತಲೆಮಾರಿನ ಸ್ವಿಫ್ಟ್ ಕಾರು ಖರೀದಿಯ ಮೇಲೂ ಹೆಚ್ಚಿನ ಮಟ್ಟದ ಕ್ಯಾಶ್ ಬ್ಯಾಕ್ ಆಫರ್ ನೀಡಲಾಗುತ್ತಿದೆ.