Mercedes EQE: ಪ್ರತಿ ಚಾರ್ಜ್ ಗೆ 590 ಕಿ.ಮೀ ಮೈಲೇಜ್ ಹೊಂದಿರುವ ಹೊಸ ಮರ್ಸಿಡಿಸ್ ಇಕ್ಯೂಇ ಅನಾವರಣ
ಜನಪ್ರಿಯ ಐಷಾರಾಮಿ ಕಾರು ಉತ್ಪಾದನಾ ಕಂಪನಿಯಾಗಿರುವ ಮರ್ಸಿಡಿಸ್ ಬೆಂಝ್ ಕಂಪನಿಯು ತನ್ನ ಹೊಸ ಇಕ್ಯೂಎಸ್ ಆಧರಿತ ಇಕ್ಯೂಇ ಅನಾವರಣಗೊಳಿಸಿದ್ದು, ಹೊಸ ಕಾರು ಹಲವಾರು ಹೊಸ ಫೀಚರ್ಸ್ ಗಳೊಂದಿಗೆ ಮಾರುಕಟ್ಟೆ ಪ್ರವೇಶಿಸಲಿದೆ.
ಎಲೆಕ್ಟ್ರಿಕ್ ಕಾರುಗಳ ಸರಣಿಯತ್ತ ಹೊಸ ಯೋಜನೆ ರೂಪಿಸಿರುವ ಮರ್ಸಿಡಿಸ್ ಬೆಂಝ್ ಕಂಪನಿಯು ಶೀಘ್ರದಲ್ಲಿಯೇ ಮತ್ತಷ್ಟು ಹೊಸ ಕಾರುಗಳನ್ನು ಬಿಡುಗಡೆ ಮಾಡಲಿದ್ದು, ಇಕ್ಯೂಇ ಮಾದರಿಯು ಪ್ರಮುಖ ಐದು ವೆರಿಯೆಂಟ್ ಗಳಲ್ಲಿ ಖರೀದಿಗೆ ಲಭ್ಯವಿರಲಿದೆ. ಐದು ವೆರಿಯೆಂಟ್ ಗಳಲ್ಲೂ ಮೂರು ಸಾಮಾನ್ಯ ಮಾದರಿಗಳಾಗಲಿದ್ದರೆ ಇನ್ನೇರಡು ವೆರಿಯೆಂಟ್ ಗಳು ಪರ್ಫಾಮೆನ್ಸ್ ಪ್ಯಾಕ್ ನೊಂದಿಗೆ ಎಎಂಜಿ ಬ್ಯಾಡ್ಜ್ ಹೊಂದಿರಲಿವೆ.
ವೆರಿಯೆಂಟ್ ಗಳು ಮತ್ತು ಮೈಲೇಜ್
ಹೊಸ ಕಾರು ಇಕ್ಯೂಇ 350 ಪ್ಲಸ್, ಇಕ್ಯೂಇ 350 ಪ್ಲಸ್ ರಿಯರ್ ವ್ಹೀಲ್ ಡ್ರೈವ್, ಇಕ್ಯೂಇ 500 4ಮ್ಯಾಟಿಕ್ ಜೊತೆಗೆ ಎಎಂಜಿ ಬ್ಯಾಡ್ಜ್ ಹೊಂದಿರುವ ಇಕ್ಯೂಇ 43 ಮ್ಯಾಟಿಕ್ ಮತ್ತು ಇಕ್ಯೂಇ 53 ಮ್ಯಾಟಿಕ್ ಪ್ಲಸ್ ವೆರಿಯೆಂಟ್ ಹೊಂದಿದ್ದು, ಇದರಲ್ಲಿ ಆರಂಭಿಕ ವೆರಿಯೆಂಟ್ 288 ಬಿಎಚ್ ಪಿ ಉತ್ಪಾದನೆಯೊಂದಿಗೆ ಪ್ರತಿ ಚಾರ್ಜ್ ಗೆ ಗರಿಷ್ಠ 590 ಕಿ.ಮೀ ಮೈಲೇಜ್ ನೀಡುತ್ತಿದೆ.
ಇಕ್ಯೂಇ 350 ಪ್ಲಸ್ ರಿಯರ್ ವ್ಹೀಲ್ ಡ್ರೈವ್, ಇಕ್ಯೂಇ 350 4ಮ್ಯಾಟಿಕ್ ವೆರಿಯೆಂಟ್ ಗಳು ಆರಂಭಿಕ ಮಾದರಿಗಿಂತ ಹೆಚ್ಚಿನ ಮಟ್ಟದ ಪರ್ಫಾಮೆನ್ಸ್ ಜೊತೆಗೆ ಪ್ರತಿ ಚಾರ್ಜ್ ಗೆ 558 ಕಿ.ಮೀ ಮೈಲೇಜ್ ನೀಡಲಿದ್ದರೆ ಇಕ್ಯೂಇ 500 4ಮ್ಯಾಟಿಕ್ ಮಾದರಿಯು 547 ಕಿ.ಮೀ ಮೈಲೇಜ್ ನೀಡುತ್ತದೆ.
ಹೊಸ ಕಾರಿನ ಎಎಂಜಿ ಇಕ್ಯೂಇ ಮಾದರಿಯು ಮೊದಲ ಮೂರು ಮಾದರಿಗಿಂತಲೂ ಹೆಚ್ಚಿನ ಫೀಚರ್ಸ್ ಜೊತೆಗೆ ಸುಧಾರಿತ ಪರ್ಫಾಮೆನ್ಸ್ ಗಾಗಿ ಹೊಸ ತಂತ್ರಜ್ಞಾನ ಪ್ರೇರಣೆ ಹೊಂದಿದ್ದು, ಇದರಲ್ಲಿ ಇಕ್ಯೂಇ 43 ಮ್ಯಾಟಿಕ್ ಕಾರು 469 ಬಿಎಚ್ ಪಿಯೊಂದಿಗೆ ಪ್ರತಿಚಾರ್ಜ್ ಗೆ 488 ಕಿ.ಮೀ ಮೈಲೇಜ್ ನೀಡಲಿದ್ದರೆ ಇಕ್ಯೂಇ 53 ಮ್ಯಾಟಿಕ್ ಪ್ಲಸ್ 677 ಬಿಎಚ್ ಪಿ ಉತ್ಪಾದನೆಯೊಂದಿಗೆ ಪ್ರತಿ ಚಾರ್ಜ್ ಗೆ 470 ಕಿ.ಮೀ ಮೈಲೇಜ್ ನೀಡುತ್ತದೆ.
ಇಕ್ಯೂಇ ಬ್ಯಾಟರಿ ಪ್ಯಾಕ್
ಮರ್ಸಿಡಿಸ್ ಹೊಸ ಇಕ್ಯೂಇ 90.6kWh ಬ್ಯಾಟರಿ ಪ್ಯಾಕ್ ಜೋಡಣೆ ಹೊಂದಿದ್ದು, 170kW ಡಿಸಿ ಫಾಸ್ಟ್ ಚಾರ್ಜಿಂಗ್ ಮೂಲಕ ಅತಿ ದೊಡ್ಡ ಬ್ಯಾಟರಿ ಪ್ಯಾಕ್ ಅನ್ನು ಕೇವಲ 15 ನಿಮಿಷಗಳ ಚಾರ್ಜ್ ನೊಂದಿಗೆ ಗರಿಷ್ಠ 220 ಕಿ.ಮೀ ಮೈಲೇಜ್ ನೀಡುತ್ತದೆ.
ಡಿಸೈನ್ ಮತ್ತು ಫೀಚರ್ಸ್
ಫ್ಲ್ಯಾಗ್ ಶಿಪ್ ಎಸ್ ಯುವಿ ಇಕ್ಯೂಎಸ್ ಆಧರಿಸಿರುವ ಹೊಸ ಕಾರು ಇಕ್ಯೂಇ ಕಾರು ಮಾದರಿಯು ಮೂಲ ಮಾದರಿಯಿಂದ ಹಲವಾರು ಡಿಸೈನ್ ಮತ್ತು ಫೀಚರ್ಸ್ ಎರವಲು ಪಡೆದುಕೊಂಡಿದ್ದು, ಆಂಗ್ಯೂಲರ್ ಹೆಡ್‌ಲೈಟ್‌ಗಳು ಸ್ಲಿಮ್ ಎಲ್ಇಡಿ ಲೈಟ್ ಬಾರ್ ನೊಂದಿಗೆ ವಿನ್ಯಾಸಗೊಳಿಸಲಾಗಿದೆ. ಹಾಗೆಯೇ ಹೊಸ ಕಾರಿನಲ್ಲಿ ಫ್ಲಕ್ಸ್ ಗ್ರಿಲ್ ಮೇಲೆ ಮರ್ಸಿಡಿಸ್ ಬ್ಯಾಡ್ಜ್ ಮತ್ತು ಬ್ಯಾನೆಟ್ ಮೇಲೆ ಎಎಂಜಿ ಬ್ಯಾಡ್ಜ್ ನೀಡಲಾಗಿದೆ.
ಹೊಸ ಕಾರಿನ ಸೈಡ್ ಡಿಸೈನ್ ಕೂಡಾ ಆಕರ್ಷಕವಾಗಿದ್ದು, 22 ಇಂಚಿನ ಅಲಾಯ್ ವ್ಹೀಲ್ ಗಳು ಹೊಸ ಇವಿ ಕಾರಿನ ಗಾತ್ರಕ್ಕೆ ಪೂರಕವಾಗಿವೆ. ಹಾಗೆಯೇ ಹೊಸ ಕಾರು ಒಟ್ಟು 4,863 ಎಂಎಂ ಉದ್ದಳತೆಯೊಂದಿಗೆ ಅತ್ಯುತ್ತಮ ಒಳಾಂಗಣ ವಿನ್ಯಾಸ ಹೊಂದಿದ್ದು, ಕಾರಿನ ಒಳಭಾಗಕ್ಕೆ ಪ್ರವೇಶಿಸುತ್ತಿದ್ದಂತೆ 56 ಇಂಚಿನ ಹೈಪರ್ ಸ್ಕ್ರೀನ್ ಹೊಸ ಅನುಭವ ನೀಡುತ್ತದೆ.
ಇಕ್ಯೂಇ ಕಾರಿನ ಹೈಪರ್ ಸ್ಕ್ರೀನ್ ಇದೀಗ ಬೂರ್ಮೆಸ್ಟರ್ ಸೌಂಡ್ ಸಿಸ್ಟಂನಿಂದ ಪಡೆಯಲಾಗಿರುವ ಡಾಬ್ಲಿ ಅಟಾಮಾಸ್ ಆಡಿಯೋ ಎಕ್ಸ್ಪಿರೆನ್ಸ್ ಒದಗಿಸಲಿದ್ದು, ಅರಾಮದಾಯಕ ಪ್ರಯಾಣಕ್ಕಾಗಿ ಮಟ್ಟಿ ಫಂಕ್ಷನ್ ಹೊಂದಿರುವ ಲೆದರ್ ಆಸನಗಳನ್ನು ಜೋಡಿಸಲಾಗಿದೆ.
ಸುರಕ್ಷಾ ಸೌಲಭ್ಯಗಳು
ಎಲೆಕ್ಟ್ರಿಕ್ ಕಾರುಗಳ ಸುರಕ್ಷತೆಗಾಗಿ ಹೆಚ್ಚಿನ ಮಟ್ಟದ ಸೇಫ್ಟಿ ಫೀಚರ್ಸ್ ನೀಡಲಾಗಿದ್ದು, ಇಕ್ಯೂಇ ಮಾದರಿಯಲ್ಲಿ ಲೆವಲ್ 1 ಎಡಿಎಎಸ್ (ಅಡ್ವಾನ್ಸ್ ಡ್ರೈವರ್ ಅಸಿಸ್ಟ್ ಸಿಸ್ಟಂ) ಜೋಡಿಸಲಾಗಿದೆ. ಎಡಿಎಎಸ್ ಪ್ಯಾಕ್ ನಲ್ಲಿ ಆ್ಯಕ್ಟಿವ್ ಬ್ರೇಕ್ ಸಿಸ್ಟಂ, ಆ್ಯಕ್ಟಿವ್ ಲೇನ್ ಕೀಪಿಂಗ್ ಅಸಿಸ್ಟ್ ಮತ್ತು ಸ್ಪೀಡ್ ಲೀಮಿಟ್ ಅಸಿಸ್ಟ್ ಸೌಲಭ್ಯಗಳಿವೆ.
Published On - 5:58 pm, Thu, 20 October 22