ಭಾರತದಲ್ಲಿ ಮಾರಾಟಗೊಳ್ಳುತ್ತಿರುವ ಹೊಸ ಕಾರುಗಳಲ್ಲಿ ಅಡ್ವಾನ್ಸ್ ಡ್ರೈವರ್ ಅಸಿಸ್ಟ್ ಸಿಸ್ಟಂ(ADAS) ಸೌಲಭ್ಯಕ್ಕೆ ಭಾರೀ ಬೇಡಿಕೆ ಹರಿದುಬರುತ್ತಿದ್ದು, ಈ ಹಿನ್ನಲೆಯಲ್ಲಿ ವಿವಿಧ ಕಾರು ಕಂಪನಿಗಳು ತಮ್ಮ ಪ್ರಮುಖ ಕಾರುಗಳಲ್ಲಿ ಎಡಿಎಎಸ್ ಫೀಚರ್ಸ್ ನೀಡುತ್ತಿವೆ. ಹಾಗಾದ್ರೆ ಹೊಸ ಕಾರುಗಳಲ್ಲಿ ಗಮನಸೆಳೆಯುತ್ತಿರುವ ಎಡಿಎಎಸ್ ಫೀಚರ್ಸ್ ವಿಶೇಷತೆಗಳೇನು? ಹೊಸ ಫೀಚರ್ಸ್ ಹೊಂದಲಿರುವ ಕಾರುಗಳು ಯಾವುವು? ಈ ಎಲ್ಲಾ ಮಾಹಿತಿ ಇಲ್ಲಿದೆ.
ಸಂಭಾವ್ಯ ಅಪಘಾತಗಳನ್ನು ತಗ್ಗಿಸಲು ಎಡಿಎಎಸ್ ಸೌಲಭ್ಯವು ಸಾಕಷ್ಟು ನೆರವಾಗುತ್ತಿದ್ದು, 2024ರ ಹಲವು ಕಾರು ಮಾದರಿಗಳಲ್ಲಿ ಎಡಿಎಎಸ್ ಜೋಡಿಸಲಾಗಿದೆ. ಹೊಸ ಸುರಕ್ಷಾ ಸೌಲಭ್ಯವನ್ನು ಕಾರು ಕಂಪನಿಗಳು ವಿವಿಧ ಮಾದರಿಗಳಲ್ಲಿ ಹಂತ-ಹಂತವಾಗಿ ಜೋಡಣೆ ಮಾಡುತ್ತಿದ್ದು, ಭಾರತದಲ್ಲೂ ಕೂಡಾ ಹೊಸ ಫೀಚರ್ಸ್ ಹೊಂದಿರುವ ಕಾರುಗಳು ನಿಧಾನವಾಗಿ ರಸ್ತೆಗಿಳಿಯುತ್ತಿವೆ. ಹೊಸ ಫೀಚರ್ಸ್ ಹೊಂದಿರುವ ಕಾರುಗಳು ಸದ್ಯ ಮಾರುಕಟ್ಟೆಯಲ್ಲಿ ರೂ. 15 ಲಕ್ಷದಿಂದ ರೂ. 20 ಲಕ್ಷ ಬೆಲೆ ಅಂತರದಲ್ಲಿ ಮಾರಾಟವಾಗುತ್ತಿದ್ದು, ಲೆವಲ್ ಟು ಎಡಿಎಎಸ್ ಸೌಲಭ್ಯ ಹೊಂದಿವೆ.
ಇದನ್ನೂ ಓದಿ: ಭರ್ಜರಿ ಫೀಚರ್ಸ್ ಗಳೊಂದಿಗೆ ಹ್ಯುಂಡೈ ಕ್ರೆಟಾ ಫೇಸ್‌ಲಿಫ್ಟ್ ಬಿಡುಗಡೆ
ಪ್ರಸ್ತುತ ಮಾರುಕಟ್ಟೆಯಲ್ಲಿ ಎಡಿಎಎಸ್ ಫೀಚರ್ಸ್ ಹೊಂದಿರುವ ಕಾರುಗಳಲ್ಲಿ ಟಾಟಾ ಹ್ಯಾರಿಯರ್, ಹ್ಯುಂಡೈ ಕ್ರೆಟಾ ಫೇಸ್ ಲಿಫ್ಟ್, ಎಂಜಿ ಹೆಕ್ಟರ್ ಫೇಸ್ ಲಿಫ್ಟ್, ಕಿಯಾ ಸೆಲ್ಟೊಸ್ ಫೇಸ್ ಲಿಫ್ಟ್, ಹ್ಯುಂಡೈ ವೆರ್ನಾ ಫೇಸ್ ಲಿಫ್ಟ್ ಮತ್ತು ಸಿಟಿ ಸೆಡಾನ್ ಪ್ರಮುಖವಾಗಿವೆ. ಹೊಸ ಸುರಕ್ಷಾ ಫೀಚರ್ಸ್ ಅನ್ನು ಸದ್ಯಕ್ಕೆ ಟಾಪ್ ಎಂಡ್ ವೆರಿಯೆಂಟ್ ಗಳಲ್ಲಿ ಮಾತ್ರ ಮಾಡಲಾಗಿದ್ದು, ಇದರಲ್ಲಿ ಆಟೋಮ್ಯಾಟಿಕ್ ಎಮರ್ಜೆನ್ಸಿ ಬ್ರೇಕಿಂಗ್, ಪೆಡೆಸ್ಟ್ರಿಯನ್ ಡಿಟೆಕ್ಷನ್, ಸರೌಂಡ್ ವ್ಯೂ, ಪಾರ್ಕಿಂಗ್ ಅಸಿಸ್ಟ್, ಲೇನ್ ಕೀಪ್ ಅಸಿಸ್ಟ್, ಫಾರ್ವಡ್ ಕೂಲಿಷನ್ ಅಸಿಸ್ಟ್, ರಿಯರ್ ಕ್ರಾಸ್ ಟ್ರಾಫಿಕ್ ಅಸಿಸ್ಟ್ ಸೌಲಭ್ಯಗಳಿರುತ್ತವೆ.
ಲೆವಲ್ 2 ಎಡಿಎಎಸ್ ಫೀಚರ್ಸ್ ನಲ್ಲಿ ಮತ್ತೊಂದು ಮುಖ್ಯವಾದ ವೈಶಿಷ್ಟ್ಯ ವೆಂದರೆ ಕಾರು ಚಾಲನೆ ಮಾಡುವ ವೇಳೆ ಚಾಲಕನಿಗೆ ನಿದ್ರೆ ಮಂಪರು ಬಂದಲ್ಲಿ ತಕ್ಷಣವೇ ಅದು ಅಲರ್ಟ್ ಮಾಡುತ್ತದೆ. ಚಾಲಕ ಚಾಲನಾ ಶೈಲಿಯನ್ನು ಆಧರಿಸಿ ನಿದ್ರೆ ಮಂಪರು ಪತ್ತೆ ಹಚ್ಚುವ ಹೊಸ ಸುರಕ್ಷಾ ಸೌಲಭ್ಯವು ಚಾಲಕನನ್ನು ಎಚ್ಚರಿಸಿ ವಿಶ್ರಾಂತಿಗೆ ಸೂಚಿಸುತ್ತೆ. ಈ ಮೂಲಕ ಅದು ಅಪಘಾತವನ್ನು ತಡೆಯಲು ಸಹಕಾರಿಯಾಗಿದೆ.
ಇದನ್ನೂ ಓದಿ: ಸಾಮಾನ್ಯ ವಾಹನಗಳಿಂತಲೂ ಎಲೆಕ್ಟ್ರಿಕ್ ವಾಹನಗಳ ಇನ್ಸುರೆನ್ಸ್ ಯಾಕೆ ದುಬಾರಿ ಗೊತ್ತಾ?
ಎಡಿಎಎಸ್ ಸೌಲಭ್ಯವು ಸಂಪೂರ್ಣವಾಗಿ ರಡಾರ್ ಆಧರಿಸಿ ಕಾರ್ಯನಿರ್ವಹಿಸಲಿದ್ದು, ಇದು ಭವಿಷ್ಯದ ಆಟೊನೊಮಸ್ ಕಾರುಗಳಲ್ಲೂ ಇದು ನಿರ್ಣಾಯಕ ಪಾತ್ರವಹಿಸಲಿದೆ. ಇನ್ನು ಆಟೋನೊಮಸ್ ಕಾರುಗಳಲ್ಲಿ ಸದ್ಯಕ್ಕೆ ಲೆವಲ್ 5 ಎಡಿಎಎಸ್ ಸೌಲಭ್ಯವನ್ನು ಬಳಕೆ ಮಾಡಲಾಗುತ್ತಿದ್ದು, ಭಾರತದಲ್ಲಿರುವ ಹೊಸ ಕಾರುಗಳು ಲೆವಲ್ 2 ಸೌಲಭ್ಯವನ್ನು ಬಳಕೆ ಮಾಡುತ್ತಿವೆ.