ಫ್ರೆಂಚ್ ಕಾರು ಉತ್ಪಾದನಾ ಕಂಪನಿಯಾಗಿರುವ ರೆನಾಲ್ಟ್ (Renault) ತನ್ನ ಮೂರನೇ ತಲೆಮಾರಿನ ಡಸ್ಟರ್ (Duster) ಎಸ್ ಯುವಿಯನ್ನು ಜಾಗತಿಕ ಮಾರುಕಟ್ಟೆಗಾಗಿ ಪರಿಚಯಿಸಲು ಸಿದ್ದವಾಗುತ್ತಿದ್ದು, ಹೊಸ ಕಾರು ಬಿಡುಗಡೆಗೂ ಮುನ್ನ ರೆನಾಲ್ಟ್ ಸಹೋದರಿ ಸಂಸ್ಥೆ ಡಾಸಿಯಾ ಕಂಪನಿಯು ಹೊಸ ಡಸ್ಟರ್ ಅನ್ನು ಪೋರ್ಚಗಲ್ ನಲ್ಲಿ ಅನಾವರಣಗೊಳಿಸಿದೆ.
ಹೊಸ ಡಸ್ಟರ್ ಮಾದರಿಯನ್ನು ಮೊದಲು ಡಾಸಿಯಾ ಕಂಪನಿಯು ಮುಂದಿನ ವರ್ಷದ ಆರಂಭದಲ್ಲಿ ಬಿಡುಗಡೆ ಮಾಡಲಿದ್ದು, ತದನಂತರವಷ್ಟೇ ರೆನಾಲ್ಟ್ ಕಂಪನಿಯು ಹೊಸ ಡಸ್ಟರ್ ಮಾದರಿಯನ್ನು ಭಾರತ ಸೇರಿದಂತೆ ವಿಶ್ವದ ಪ್ರಮುಖ ಮಾರುಕಟ್ಟೆಗಳಿಗೆ ಹಂತ ಹಂತವಾಗಿ ಪರಿಚಯಿಸಲಿದೆ. ಭಾರತದಲ್ಲಿ ಹೊಸ ಡಸ್ಟರ್ ಕಾರು 2024ರ ಕೊನೆಯಲ್ಲಿ ಇಲ್ಲವೆ 2025ರ ಆರಂಭದಲ್ಲಿ ಬಿಡುಗಡೆಯಾಗಬಹುದಾಗಿದ್ದು, ಇದು ಸಿಎಂಎಫ್-ಬಿ ಪ್ಲ್ಯಾಟ್ ಫಾರ್ಮ್ ಅಡಿ ನಿರ್ಮಾಣವಾಗಿದೆ.
ಹೊಸ ಡಸ್ಟರ್ ಈ ಹಿಂದಿನ ಆವೃತ್ತಿಗಿಂತಲೂ ಹಲವಾರು ಪ್ರೀಮಿಯಂ ಫೀಚರ್ಸ್ ಗಳೊಂದಿಗೆ ನವೀಕೃತ ವಿನ್ಯಾಸ ಭಾಷೆ ಹೊಂದಿದ್ದು, ಇದು 5 ಸೀಟರ್ ಮತ್ತು 7 ಸೀಟರ್ ಆವೃತ್ತಿಗಳಲ್ಲಿ ಮಾರಾಟಗೊಳ್ಳಲಿದೆ. ಸದ್ಯಕ್ಕೆ 5 ಸೀಟರ್ ಮಾದರಿಯನ್ನು ಮಾತ್ರ ಅನಾವರಣಗೊಳಿಸಲಾಗಿದ್ದು, ಶೀಘ್ರದಲ್ಲಿಯೇ 7 ಸೀಟರ್ ಮಾದರಿಯು ಸಹ ಅನಾವರಣಗೊಳ್ಳಲಿದೆ.
ಇದನ್ನೂ ಓದಿ: ಬಜೆಟ್ ಬೆಲೆಗೆ ಖರೀದಿಸಬಹುದಾದ ಅತ್ಯುತ್ತಮ 7 ಸೀಟರ್ ಕಾರುಗಳಿವು!
ಹೊಸ ಡಸ್ಟರ್ ಎಸ್‍ಯುವಿಯು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿರುವ ಡಾಸಿಯಾ ಬಿಗ್ ಸ್ಟರ್ ಮಾದರಿಯಿಂದಲೂ ಹಲವಾರು ವಿನ್ಯಾಸ ಪ್ರೇರಣೆ ಹೊಂದಿದ್ದು, ಜೊತೆಗೆ ಆಧುನಿಕ ತಂತ್ರಜ್ಞಾನ ಪ್ರೇರಣೆ ಹೊಂದಿರುವ ಸ್ಪೋರ್ಟಿ ವಿನ್ಯಾಸದೊಂದಿಗೆ ಮತ್ತಷ್ಟು ಗ್ರಾಹಕರನ್ನು ಸೆಳೆಯಲಿದೆ. ಹೊಸ ಕಾರು ಒಟ್ಟು 4.34 ಮೀಟರ್ ಉದ್ದಳತೆಯೊಂದಿಗೆ ಉತ್ತಮ ಒಳಾಂಗಣ ಹೊಂದಿದ್ದು, ಹೊಸ ಕಾರಿನ ಮುಂಭಾಗದಲ್ಲಿ ಎಲ್ಇಡಿ ಹೆಡ್ ಲ್ಯಾಂಪ್ಸ್ ಜೊತೆಗೆ ಫ್ರಂಟ್ ಗ್ರಿಲ್ ಗೆ ಹೊಂದಿಕೊಂಡಿರುವ Y ಆಕಾರದ ಎಲ್ಇಡಿ ಡಿಆರ್ ಎಲ್ಎಸ್ ಗಳು, ಆಫ್ ರೋಡ್ ಕೌಶಲ್ಯಕ್ಕೆ ಸಹಕಾರಿಯಾಗುವ ಸ್ಕ್ವೆರ್ಡ್ ಆಫ್ ವ್ಹೀಲ್ ಆರ್ಚ್ ಜೊತೆ 18 ಇಂಚಿನ ಅಲಾಯ್ ವ್ಹೀಲ್ ಗಳು, ರೂಫ್ ರೈಲ್ಸ್ ಮತ್ತು Y ಆಕಾರದ ಟೈಲ್ ಲೈಟ್ಸ್ ನೀಡಲಾಗಿದೆ.
ಡಸ್ಟರ್ ಹೊಸ ಕಾರಿನ ಒಳಭಾಗದಲ್ಲಿಯೂ ಹಲವಾರು ಹೊಸ ಬದಲಾವಣೆಗಳಿದ್ದು, ಡ್ಯುಯಲ್ ಟೋನ್ ಡ್ಯಾಶ್ ಬೋರ್ಡ್ ನೊಂದಿಗೆ 10.1 ಇಂಚಿನ ಟಚ್ ಸ್ಕ್ರೀನ್ ಇನ್ಪೋಟೈನ್ ಮೆಂಟ್ ಸಿಸ್ಟಂ, 7 ಇಂಚಿನ ಡಿಜಿಟಲ್ ಇನ್ ಸ್ಟ್ರುಮೆಂಟ್ ಕ್ಲಸ್ಟರ್, ಹೊಸ ವಿನ್ಯಾಸ ತ್ರಿ ಸ್ಪೋಕ್ ಸ್ಟೀರಿಂಗ್ ವ್ಹೀಲ್ ನೀಡಲಾಗಿದೆ. ಹೊಸ ಕಾರಿನ 5 ಸೀಟರ್ ಮಾದರಿಯಲ್ಲಿ ಈ ಬಾರಿ 472 ಲೀಟರ್ ಸಾಮರ್ಥ್ಯದ ಬೂಟ್ ಸ್ಪೇಸ್ ನೀಡಲಾಗಿದ್ದು, 7 ಸೀಟರ್ ಮಾದರಿಯಲ್ಲಿ ಬೂಟ್ ಸ್ಪೆಸ್ ತುಸು ಕಡಿಮೆ ಎನ್ನಿಸಲಿದೆ.
ಜೊತೆಗೆ ಹೊಸ ಕಾರಿನಲ್ಲಿ ಈ ಬಾರಿ ರೆನಾಲ್ಟ್ ಕಂಪನಿಯು ಅಡ್ವಾನ್ಸ್ ಡ್ರೈವರ್ ಅಸಿಸ್ಟ್ ಸಿಸ್ಟಂ ಸೌಲಭ್ಯವನ್ನು ಟಾಪ್ ಎಂಡ್ ಮಾದರಿಗಳಲ್ಲಿ ಜೋಡಣೆ ಮಾಡುತ್ತಿದ್ದು, ಇದು ಎಮೆಜೆನ್ಸಿ ಬ್ರೇಕಿಂಗ್ ಸಿಸ್ಟಂ, ಟ್ರಾಫಿಕ್ ಸಿಗ್ನಲ್ ಅಲರ್ಟ್, ರಿಯರ್ ಪಾರ್ಕಿಂಗ್ ಅಸಿಸ್ಟ್, ಲೇನ್ ಚೆಂಜ್ ವಾರ್ನಿಂಗ್ ಅಂಡ್ ಅಸಿಸ್ಟ್ ಸೇರಿದಂತೆ ಹಲವಾರು ಸೇಫ್ಟಿ ಫೀಚರ್ಸ್ ಹೊಂದಿರಲಿದೆ.
ಇನ್ನು ರೆನಾಲ್ಟ್ ಕಂಪನಿಯು ಹೊಸ ಡಸ್ಟರ್ ಕಾರಿನಲ್ಲಿ ಅಂತಾರಾಷ್ಟ್ರೀಯ ಮಾರುಕಟ್ಟೆಗಳಿಗಾಗಿ ಮೂರು ಎಂಜಿನ್ ಆಯ್ಕೆ ನೀಡುವ ಸಾಧ್ಯತೆಗಳಿವೆ. ಭಾರತದಲ್ಲಿ ಕೇವಲ 1.0 ಲೀಟರ್ ಟರ್ಬೊ ಪೆಟ್ರೋಲ್ ಮತ್ತು 1.2 ಲೀಟರ್ ಪೆಟ್ರೋಲ್ ಹೈಬ್ರಿಡ್ ಎಂಜಿನ್ ಆಯ್ಕೆ ನೀಡಬಹುದಾಗಿದ್ದು, ಯುರೋಪಿನ್ ಮಾರುಕಟ್ಟೆಗಳಿಗಾಗಿ 1.6 ಲೀಟರ್ ಪೆಟ್ರೋಲ್ ಹೈಬ್ರಿಡ್ ಎಂಜಿನ್ ಜೋಡಣೆ ಮಾಡುತ್ತಿದೆ. ಹೊಸ ಕಾರಿನಲ್ಲಿರುವ ಡೀಸೆಲ್ ಎಂಜಿನ್ ಆಯ್ಕೆಯನ್ನು ಸಂಪೂರ್ಣವಾಗಿ ಕೈಬಿಡಲಾಗಿದ್ದು, ಪೆಟ್ರೋಲ್ ಹೈಬ್ರಿಡ್ ಮಾದರಿಯು ಕಂಪ್ಯಾಕ್ಟ್ ಎಸ್ ಯುವಿ ವಿಭಾಗದಲ್ಲಿ ಹೆಚ್ಚಿನ ಮೈಲೇಜ್ ಹೊಂದಿರುವ ಡೀಸೆಲ್ ಎಂಜಿನ್ ಕಾರುಗಳಿಗೆ ಪರ್ಯಾಯ ಆಯ್ಕೆಯಾಗಲಿದೆ. ಇದಲ್ಲದೆ ಹೊಸ ಡಸ್ಟರ್ ಕಾರು ಈ ಹಿಂದಿನ ಮಾದರಿಗಿಂತಲೂ ಹೆಚ್ಚು ಆಫ್ ರೋಡ್ ಕೌಶಲ್ಯತೆ ಹೊಂದಿದ್ದು, ಇದು ವಿವಿಧ ವೆರಿಯೆಂಟ್ ಗಳಿಗೆ ಅನುಗುಣವಾಗಿ 4X2 ಮತ್ತು 4X4 ಡ್ರೈವ್ ಸಿಸ್ಟಂ ಪಡೆದುಕೊಳ್ಳಲಿದೆ.
ಇದನ್ನೂ ಓದಿ: ಪೆಟ್ರೋಲ್ ಕಾರುಗಳು Vs ಪೆಟ್ರೋಲ್ ಸಿಎನ್‌ಜಿ ಕಾರುಗಳು.. ಖರೀದಿಗೆ ಯಾವುದು ಬೆಸ್ಟ್?
ಈ ಮೂಲಕ ಹೊಸ ಡಸ್ಟರ್ ಕಾರು ಮಾದರಿಯು ಭಾರತದಲ್ಲಿ ಹ್ಯುಂಡೈ ಕ್ರೆಟಾ, ಕಿಯಾ ಸೆಲ್ಟೋಸ್, ಫೋಕ್ಸ್ ವ್ಯಾಗನ್ ಟೈಗುನ್, ಸ್ಕೋಡಾ ಕುಶಾಕ್, ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ ಮತ್ತು ಟೊಯೊಟಾ ಅರ್ಬನ್ ಕ್ರೂಸರ್ ಹೈರೈಡರ್ ಕಾರುಗಳಿಗೆ ಭರ್ಜರಿ ಪೈಪೋಟಿ ನೀಡಲಿದ್ದು, ಇದು 5 ಸೀಟರ್ ನಲ್ಲಿ ಮಾತ್ರವಲ್ಲದೆ 7 ಸೀಟರ್ ಮಾದರಿಯಲ್ಲೂ ಬಿಡುಗಡೆಯಾಗುತ್ತಿರುವುದು ಫುಲ್ ಸೈಜ್ ಎಸ್ ಯುವಿ ಕಾರುಗಳಿಗೂ ಪೈಪೋಟಿ ನೀಡುವ ನೀರಿಕ್ಷೆಯಿದೆ.