Sign In

By signing in or creating an account, you agree with Associated Broadcasting Company's Terms & Conditions and Privacy Policy.

Most Affordable 7 Seater Cars: ಬಜೆಟ್ ಬೆಲೆಗೆ ಖರೀದಿಸಬಹುದಾದ ಅತ್ಯುತ್ತಮ 7 ಸೀಟರ್ ಕಾರುಗಳಿವು!

ಭಾರತದಲ್ಲಿ ವಿವಿಧ ಕಾರು ಕಂಪನಿಗಳು ಗ್ರಾಹಕರ ಬೇಡಿಕೆಯೆಂತೆ ಹಲವಾರು ಕಾರು ಮಾದರಿಗಳನ್ನು ಮಾರಾಟ ಮಾಡುತ್ತಿದ್ದು, ಇತ್ತೀಚೆಗೆ 7 ಸೀಟರ್ ಸೌಲಭ್ಯ ಕಾರುಗಳಿಗೆ ಹೆಚ್ಚಿನ ಬೇಡಿಕೆ ಹರಿದುಬರುತ್ತಿದೆ. ಕುಟುಂಬ ಸಮೇತರಾಗಿ ಪ್ರಯಾಣಿಸಲು 7 ಸೀಟರ್ ಕಾರುಗಳು ಉತ್ತಮ ಆಯ್ಕೆಯಾಗಿದ್ದು, ಬಜೆಟ್ ಬೆಲೆಯಲ್ಲೂ ಹಲವು ಕಾರುಗಳು ಖರೀದಿಗೆ ಲಭ್ಯವಿವೆ.

Most Affordable 7 Seater Cars: ಬಜೆಟ್ ಬೆಲೆಗೆ ಖರೀದಿಸಬಹುದಾದ ಅತ್ಯುತ್ತಮ 7 ಸೀಟರ್ ಕಾರುಗಳಿವು!
7 ಸೀಟರ್ ಸೌಲಭ್ಯದ ಕಾರುಗಳು
Follow us
Praveen Sannamani
|

Updated on: Nov 22, 2023 | 6:28 PM

ಕಾರು ಮಾರುಕಟ್ಟೆಯಲ್ಲಿ ಎಸ್ ಯುವಿಗಳ (SUV’s) ನಂತರ 7 ಸೀಟರ್ ಸೌಲಭ್ಯದ ಎಂಪಿವಿ ಕಾರುಗಳಿಗೆ ಉತ್ತಮ ಬೇಡಿಕೆಯಿದ್ದು, ಈ ವಿಭಾಗದಲ್ಲಿ ಇತ್ತೀಚೆಗೆ ಹಲವು ಹೊಸ ಕಾರು ಮಾದರಿಗಳು ಲಗ್ಗೆಯಿಟ್ಟಿವೆ. ತಾಂತ್ರಿಕ ಅಂಶಗಳಿಗೆ ಅನುಗುಣವಾಗಿ ದುಬಾರಿಯಲ್ಲಿ ಮಾತ್ರವಲ್ಲದೆ ಗ್ರಾಹಕರ ಆದ್ಯತೆಗಳಿಗೆ ಅನುಗುಣವಾಗಿ ನಿರ್ಮಾಣವಾಗಿರುವ ಹಲವಾರು ಕಡಿಮೆ ಬೆಲೆಯ 7 ಸೀಟರ್ ಕಾರುಗಳು ಸಹ ಲಭ್ಯವಿವೆ. ಹಾಗಾದ್ರೆ ಭಾರತದಲ್ಲಿ ಸದ್ಯ ಉತ್ತಮ ಬೇಡಿಕೆಯಲ್ಲಿರುವ 7 ಸೀಟರ್ ಕಾರುಗಳು ಯಾವುವು? ಅವುಗಳ ಬೆಲೆ ಎಷ್ಟು? ಅವುಗಳಲ್ಲಿರುವ ವಿಶೇಷತೆಗಳೇನು? ಈ ಎಲ್ಲಾ ಮಾಹಿತಿ ಇಲ್ಲಿದೆ ನೋಡಿ.

ಮಾರುತಿ ಸುಜುಕಿ ಎರ್ಟಿಗಾ

ಎರ್ಟಿಗಾ ಕಾರು ಮಾದರಿಯು ಬಜೆಟ್ ಬೆಲೆಯಲ್ಲಿ ಮಾರಾಟವಾಗುತ್ತಿರುವ ಎಂಪಿವಿ ಕಾರುಗಳಲ್ಲಿ ಸದ್ಯ ಅಗ್ರಸ್ಥಾನ ಕಾಯ್ದುಕೊಂಡಿದ್ದು, ಇದು ಹಲವಾರು ಮಾರಾಟ ದಾಖಲೆಗಳನ್ನು ಹೊಂದಿದೆ. ಎಕ್ಸ್ ಶೋರೂಂ ಪ್ರಕಾರ ರೂ. 8.64 ಲಕ್ಷ ಆರಂಭಿಕ ಬೆಲೆ ಹೊಂದಿದ್ದು, ಇದು ಪೆಟ್ರೋಲ್ ಮತ್ತು ಸಿಎನ್ ಜಿ ಆಯ್ಕೆ ಹೊಂದಿದೆ. ದುಬಾರಿ ಬೆಲೆಯ ಇನೋವಾ ಕ್ರಿಸ್ಟಾ ಕಾರಿಗೆ ಪರ್ಯಾಯವಾಗಿ ಬಿಡುಗಡೆಯಾಗಿದ್ದ ಎರ್ಟಿಗಾ ಕಾರು ಇದೀಗ ಹಲವಾರು ಬದಲಾವಣೆಗಳೊಂದಿಗೆ ಮಾರುಕಟ್ಟೆಯಲ್ಲಿ ಮಾರಾಟಗೊಳ್ಳುತ್ತಿದೆ. 1.5 ಲೀಟರ್ ಪೆಟ್ರೋಲ್ ಮತ್ತು ಫ್ಯಾಕ್ಟರಿ ಫಿಟೆಡ್ ಸಿಎನ್ ಜಿ ಕಿಟ್ ಜೋಡಣೆ ಹೊಂದಿದ್ದು, ಇದು ಹಲವಾರು ಪ್ರೀಮಿಯಂ ಫೀಚರ್ಸ್ ಜೊತೆ ಇಂಧನ ದಕ್ಷತೆಯಲ್ಲೂ ಗಮನಸೆಳೆಯುತ್ತಿದೆ.

ಇದನ್ನೂ ಓದಿ: ರೂ. 10 ಲಕ್ಷಕ್ಕೆ ಭರ್ಜರಿ ಮೈಲೇಜ್ ನೀಡುವ ಅತ್ಯುತ್ತಮ ಕಂಪ್ಯಾಕ್ಟ್ ಎಸ್ ಯುವಿ ಕಾರುಗಳಿವು!

ರೆನಾಲ್ಟ್ ಟ್ರೈಬರ್

ಅತಿ ಕಡಿಮೆ ಬೆಲೆಯಲ್ಲಿ ಉತ್ತಮ ತಾಂತ್ರಿಕ ಅಂಶಗಳನ್ನು ಹೊಂದಿರುವ 7 ಸೀಟರ್ ಸೌಲಭ್ಯ ಕಾರುಗಳಲ್ಲಿ ಟ್ರೈಬರ್ ಮಿನಿ ಎಂಪಿವಿ ಪ್ರಮುಖವಾಗಿದೆ. 4 ಮೀಟರ್ ಉದ್ದಳತೆಯಲ್ಲಿಯೇ ಅಚ್ಚುಕಟ್ಟಾದ ಏಳು ಆಸನಗಳ ಜೋಡಣೆ ಹೊಂದಿರುವ ಟ್ರೈಬರ್ ಕಾರು ಬಜೆಟ್ ಕಾರು ಖರೀದಿದಾರ ಪ್ರಮುಖ ಆಕರ್ಷಣೆಯಾಗಿದ್ದು, ಇದು ಎಕ್ಸ್ ಶೋರೂಂ ಪ್ರಕಾರ ರೂ. 6.33 ಲಕ್ಷ ಆರಂಭಿಕ ಬೆಲೆ ಹೊಂದಿದೆ. ಇದರಲ್ಲಿ 1.0 ಲೀಟರ್ ಎನ್ಎ ಪೆಟ್ರೋಲ್ ಎಂಜಿನ್ ಜೋಡಣೆ ಹೊಂದಿದ್ದು, ಇದು 5-ಸ್ಪೀಡ್ ಮ್ಯಾನುವಲ್ ಮತ್ತು 5-ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಆಯ್ಕೆ ಖರೀದಿಗೆ ಲಭ್ಯವಿದೆ.

ಕಿಯಾ ಕಾರೆನ್ಸ್

ವಿವಿಧ ಎಂಜಿನ್ ಆಯ್ಕೆಯಲ್ಲಿ ಅತ್ಯುತ್ತಮ ಬೆಲೆ ಹೊಂದಿರುವ ಕಿಯಾ ಕಾರೆನ್ಸ್ ಎಂಪಿವಿ ಕಾರು ಬಿಡುಗಡೆಯಾದ ಕೆಲವೇ ದಿನಗಳಲ್ಲಿ ದಾಖಲೆ ಮಟ್ಟದ ಬೇಡಿಕೆ ಪಡೆದುಕೊಂಡಿದೆ. 6 ಸೀಟರ್ ಮತ್ತು 7 ಸೀಟರ್ ಆಯ್ಕೆ ಹೊಂದಿರುವ ಕಾರೆನ್ಸ್ ಕಾರು ಎಕ್ಸ್ ಶೋರೂಂ ಪ್ರಕಾರ ರೂ. 10.45 ಲಕ್ಷ ಆರಂಭಿಕ ಬೆಲೆ ಹೊಂದಿದ್ದು, ಇದು ಎರ್ಟಿಗಾ ಕಾರಿನ ಪ್ರಬಲ ಪೈಪೋಟಿಯಾಗಿದೆ. ಜೊತೆಗೆ ಪ್ರಯಾಣಿಕರ ಸುರಕ್ಷತೆಗೂ ಹೆಚ್ಚಿನ ಮಟ್ಟದ ಫೀಚರ್ಸ್ ಪಡೆದುಕೊಂಡಿದ್ದು, ಇದು 1.5 ಲೀಟರ್ ಪೆಟ್ರೋಲ್ ಎನ್ಎ, 1.5 ಲೀಟರ್ ಟರ್ಬೊ ಪೆಟ್ರೋಲ್ ಮತ್ತು 1.5 ಲೀಟರ್ ಡೀಸೆಲ್ ಎಂಜಿನ್ ನಲ್ಲಿ ಖರೀದಿಗೆ ಲಭ್ಯವಿದೆ.

ಸಿಟ್ರನ್ ಸಿ3 ಏರ್‌ಕ್ರಾಸ್

ಇತ್ತೀಚೆಗೆ ಬಿಡುಗಡೆಯಾದ ಸಿಟ್ರನ್ ಹೊಸ ಸಿ3 ಏರ್‌ಕ್ರಾಸ್ ಎಸ್‌ಯುವಿ ಕಾರು ಸಹ 7 ಸೀಟರ್ ಆಯ್ಕೆಯಲ್ಲಿ ಲಭ್ಯವಾಗಿರುವ ಬಜೆಟ್ ಬೆಲೆಯ ಕಾರು ಮಾದರಿಯಾಗಿದೆ. ಸಿ3 ಏರ್‌ಕ್ರಾಸ್ ಕಾರು 5 ಸೀಟರ್ ಮತ್ತು 7 ಸೀಟರ್ ಆಯ್ಕೆಯೊಂದಿಗೆ ಯು, ಪ್ಲಸ್ ಮತ್ತು ಮ್ಯಾಕ್ಸ್ ಎನ್ನುವ ಪ್ರಮುಖ ಮೂರು ವೆರಿಯೆಂಟ್ ಗಳಲ್ಲಿ ಖರೀದಿಗೆ ಲಭ್ಯವಿದ್ದು, ಇದರಲ್ಲಿ ಪ್ಲಸ್ ಮತ್ತು ಮ್ಯಾಕ್ಸ್ ವೆರಿಯೆಂಟ್ ನಲ್ಲಿ ಮಾತ್ರ 5 ಸೀಟರ್ ಮತ್ತು 7 ಸೀಟರ್ ಆಯ್ಕೆ ಮಾಡಬಹುದಾಗಿದೆ. 7 ಸೀಟರ್ ಹೊಂದಿರುವ ಸಿ3 ಏರ್‌ಕ್ರಾಸ್ ಕಾರು ಆರಂಭಿಕವಾಗಿ ರೂ. 11.69 ಲಕ್ಷ ಆರಂಭಿಕ ಬೆಲೆ ಹೊಂದಿದ್ದು, ಇದು ಉತ್ತಮ ಒಳಾಂಗಣ ಸೌಲಭ್ಯದೊಂದಿಗೆ ಪ್ರಮುಖ ಎಂಪಿವಿ ಕಾರು ಮಾದರಿಗಳಿಗೆ ಉತ್ತಮ ಪೈಪೋಟಿ ನೀಡುತ್ತಿದೆ.

ಇದನ್ನೂ ಓದಿ: ಕರ್ನಾಟಕದಲ್ಲಿ ಮತ್ತೊಂದು ಕಾರು ಉತ್ಪಾದನಾ ಘಟಕ ಘೋಷಣೆ ಮಾಡಿದ ಟೊಯೊಟಾ

ಮಹೀಂದ್ರಾ ಬೊಲೆರೊ ಮತ್ತು ಬೊಲೆರೊ ನಿಯೋ

ತಾಂತ್ರಿಕವಾಗಿ ಮಹೀಂದ್ರಾ ಬೊಲೆರೊ ಮತ್ತು ಬೊಲೆರೊ ನಿಯೋ ಕಾರುಗಳು ಎಂಪಿವಿ ಮಾದರಿಗಳಲ್ಲವಾದರೂ ಅತಿ ಕಡಿಮೆ ಬೆಲೆಯಲ್ಲಿ 7 ಸೀಟರ್ ಸೌಲಭ್ಯ ಹೊಂದಿರುವ ಪ್ರಮುಖ ಕಾರುಗಳಾಗಿವೆ. 1.5 ಲೀಟರ್ ಡೀಸೆಲ್ ಎಂಜಿನ್ ನಲ್ಲಿ ಮಾತ್ರ ಖರೀದಿಗೆ ಲಭ್ಯವಿರುವ ಬೊಲೆರೊ ಮತ್ತು ಬೊಲೆರೊ ನಿಯೋ ಕಾರುಗಳು ಎಕ್ಸ್ ಶೋರೂಂ ಪ್ರಕಾರ ಆರಂಭಿಕವಾಗಿ ರೂ. 9.64 ಲಕ್ಷದಿಂದ ರೂ. 9.79 ಲಕ್ಷ ಬೆಲೆ ಹೊಂದಿದ್ದು, ಇವು ಸಾಕಷ್ಟು ಪ್ರೀಮಿಯಂ ಫೀಚರ್ಸ್ ಗಳನ್ನು ಹೊಂದಿಲ್ಲವಾದರೂ ವಿವಿಧ ಕಾರಣಗಳೊಂದಿಗೆ ಗ್ರಾಹಕರ ಮೆಚ್ಚುಗೆಗೆ ಕಾರಣವಾಗಿವೆ.