Hyundai Tucson: ಭರ್ಜರಿ ಫೀಚರ್ಸ್ ಗಳೊಂದಿಗೆ ಅನಾವರಣಗೊಂಡ ಹ್ಯುಂಡೈ ಟ್ಯೂಸಾನ್ ಫೇಸ್‌ಲಿಫ್ಟ್
ಹ್ಯುಂಡೈ ಕಂಪನಿ ತನ್ನ ಬಹುನೀರಿಕ್ಷಿತ ಟ್ಯೂಸಾನ್ ಫೇಸ್‌ಲಿಫ್ಟ್ ಆವೃತ್ತಿಯನ್ನು ಜಾಗತಿಕ ಮಾರುಕಟ್ಟೆಗಾಗಿ ಅನಾವರಣಗೊಳಿಸಿದ್ದು, ಹೊಸ ತಲೆಮಾರಿನ ವೈಶಿಷ್ಟ್ಯತೆಗಳೊಂದಿಗೆ ಭಾರೀ ಬದಲಾವಣೆ ಪಡೆದುಕೊಂಡಿದೆ.
ಮಧ್ಯಮ ಕ್ರಮಾಂಕದ ಪ್ರೀಮಿಯಂ ಕಾರುಗಳ ಮಾರಾಟದಲ್ಲಿ ಮುಂಚೂಣಿಯಲ್ಲಿರುವ ಹ್ಯುಂಡೈ (Hyundai) ಕಂಪನಿ ತನ್ನ ಹೊಚ್ಚ ಹೊಸ ಟ್ಯೂಸಾನ್ (Tucson) ಎಸ್ ಯುವಿಯನ್ನು ಜಾಗತಿಕ ಮಾರುಕಟ್ಟೆಗಾಗಿ ಅನಾವರಣಗೊಳಿಸಿದ್ದು, ಹೊಸ ಕಾರು ಮಾದರಿಯು 2024ರ ಆರಂಭದಲ್ಲಿ ಭಾರತಕ್ಕೂ ಲಗ್ಗೆಯಿಡಲಿದೆ. ವಿನೂತನ ಫೀಚರ್ಸ್ ಹೊಂದಿರುವ ಹೊಸ ಟ್ಯೂಸಾನ್ ಕಾರು ಈ ಬಾರಿ ಮತ್ತಷ್ಟು ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಲ್ಲಿದ್ದು, ಹೊಸ ವಿನ್ಯಾಸ ಮತ್ತು ವೈಶಿಷ್ಟ್ಯತೆಗಳು ಗಮನಸೆಳೆಯಲಿವೆ.
ವಿನ್ಯಾಸ ಮತ್ತು ವೈಶಿಷ್ಟ್ಯತೆಗಳು
ಟ್ಯೂಸಾನ್ ಫೇಸ್‌ಲಿಫ್ಟ್ ಮಾದರಿಯ ಮುಂಭಾಗದ ವಿನ್ಯಾಸವು ಪ್ರಸ್ತುತ ಮಾರುಕಟ್ಟೆಯಲ್ಲಿನ ಮಾದರಿಗಿಂತಲೂ ಸಾಕಷ್ಟು ಬದಲಾವಣೆಗೊಂಡಿದ್ದು, ಹೊಸ ಪ್ಯಾರಾಮ್ಯಾಟ್ರಿಕ್ ವಿನ್ಯಾಸ ಭಾಷೆಯೂ ಫೇಸ್‌ಲಿಫ್ಟ್ ಕಾರಿನ ಪ್ರಮುಖ ಆಕರ್ಷಣೆಯಾಗಿದೆ. ಜೊತೆಗೆ ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಇತ್ತೀಚೆಗೆ ಬಿಡುಗಡೆಯಾಗಿರುವ ಹೊಸ ತಲೆಮಾರಿನ ಕೊನಾ ಮತ್ತು ಸಾಂತಾ ಫೇ ಎಸ್ ಯುವಿ ಕಾರುಗಳ ಹಲವಾರು ತಾಂತ್ರಿಕ ಅಂಶಗಳನ್ನು ಟ್ಯೂಸಾನ್ ಫೇಸ್‌ಲಿಫ್ಟ್ ನಲ್ಲೂ ನೋಡಬಹುದಾಗಿದ್ದು, ಮರುವಿನ್ಯಾಸಗೊಳಿಸಲಾದ ಫ್ರಂಟ್ ಗ್ರೀಲ್, ಸ್ಕೀಡ್ ಪ್ಲೇಟ್, ಮರುವಿನ್ಯಾಸಗೊಳಿಸಲಾದ ಹೆಡ್ ಲೈಟ್ಸ್ ಮತ್ತು ಬಲಿಷ್ಠ ವಿನ್ಯಾಸದ ಅಲಾಯ್ ವ್ಹೀಲ್ ನೋಡಬಹುದಾಗಿದೆ.
ಇದನ್ನೂ ಓದಿ: ಕರ್ನಾಟಕದಲ್ಲಿ ಮತ್ತೊಂದು ಕಾರು ಉತ್ಪಾದನಾ ಘಟಕ ಘೋಷಣೆ ಮಾಡಿದ ಟೊಯೊಟಾ
ಹಾಗೆಯೇ ಹೊಸ ಕಾರಿನ ಒಳಭಾಗದ ವಿನ್ಯಾಸದಲ್ಲೂ ಮಹತ್ವದ ಬದಲಾವಣೆಗಳಾಗಿದ್ದು, ಈ ಬಾರಿ ಹಲವಾರು ಪ್ರೀಮಿಯಂ ಫೀಚರ್ಸ್ ಗಳನ್ನು ಸ್ಟ್ಯಾಂಡರ್ಡ್ ಆಗಿ ನೀಡಲಾಗಿದೆ. ಹೊಸ ಕಾರಿನಲ್ಲಿ ಐಷಾರಾಮಿ ಸೌಲಭ್ಯದ ಸ್ಟೀರಿಂಗ್ ವ್ಹೀಲ್, ಕಂಟ್ರೋಲ್ ಪ್ಯಾನೆಲ್ ಹೊಂದಿರುವ ಸೆಂಟರ್ ಕನ್ಸೊಲ್, ಆರಾಮದಾಯಕವಾಗಿರುವ ವೆಂಟಿಲೆಟೆಡ್ ಆಸನಗಳು, ಡ್ಯುಯಲ್ ಡಿಸ್ ಪ್ಲೇ ಸೆಟ್ಅಪ್ ಮತ್ತು ಹ್ವಾಕ್ ಸಿಸ್ಟಂ ನೀಡಲಾಗಿದೆ.
ಎಂಜಿನ್ ಮತ್ತು ಪರ್ಫಾಮೆನ್ಸ್
ಟ್ಯೂಸಾನ್ ಫೇಸ್‌ಲಿಫ್ಟ್ ಕಾರಿನಲ್ಲಿ ಎಂಜಿನ್ ಆಯ್ಕೆಯು ಈ ಹಿಂದಿನ ಮಾದರಿಯೆಂತೆ ಮುಂದುವರಿಯಬಹುದಾಗಿದ್ದು, 2.0 ಲೀಟರ್ ಪೆಟ್ರೋಲ್ ಮತ್ತು 2.0 ಲೀಟರ್ ಡೀಸೆಲ್ ಎಂಜಿನ್ ಆಯ್ಕೆಯಲ್ಲಿ ಲಭ್ಯವಿರಲಿದೆ. ಇದರಲ್ಲಿ ಪೆಟ್ರೋಲ್ ಮಾದರಿಯು 6-ಸ್ಪೀಡ್ ಆಟೋಮ್ಯಾಟಿಕ್ ಟಾರ್ಕ್ ಕನ್ವರ್ಟರ್ ಗೇರ್ ಬಾಕ್ಸ್ ನೊಂದಿಗೆ 154 ಹಾರ್ಸ್ ಪವರ್ ಮತ್ತು 192 ಎನ್ಎಂ ಟಾರ್ಕ್ ಉತ್ಪಾದಿಸಿದರೆ, ಡೀಸೆಲ್ ಮಾದರಿಯು 8-ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ನೊಂದಿಗೆ 184 ಹಾರ್ಸ್ ಪವರ್ ಮತ್ತು 416 ಎನ್ಎಂ ಟಾರ್ಕ್ ಉತ್ಪಾದನೆ ಮಾಡಬಲ್ಲದು.
ಇದರೊಂದಿಗೆ ಹೊಸ ಕಾರಿನಲ್ಲಿ ಆಲ್ ವ್ಹೀಲ್ ಡ್ರೈವ್ ಸಿಸ್ಟಂ ಸೌಲಭ್ಯವನ್ನು ಸ್ಟ್ಯಾಂಡರ್ಡ್ ಆಗಿ ನೀಡಲಾಗಿದ್ದು, ಇದು ಸ್ನೋ, ಮಡ್ ಮತ್ತು ಸ್ಯಾಂಡ್ ಡ್ರೈವ್ ಮೋಡ್ ಗಳೊಂದಿಗೆ ಸುರಕ್ಷಿತ ಚಾಲನೆಗೆ ಸಹಕಾರಿಯಾಗಿದೆ.
ಇದನ್ನೂ ಓದಿ: ಬಜೆಟ್ ಬೆಲೆಗೆ ಖರೀದಿಸಬಹುದಾದ ಅತ್ಯುತ್ತಮ 7 ಸೀಟರ್ ಕಾರುಗಳಿವು!
ಇನ್ನು ಹೊಸ ಕಾರಿನಲ್ಲಿ ಸುರಕ್ಷತೆಗೂ ಹೆಚ್ಚಿನ ಒತ್ತು ನೀಡಲಾಗಿದ್ದು, ಇದು ಈ ಹಿಂದಿನ ಮಾದರಿಯೆಂತೆಯೇ ಲೆವಲ್ 2 ಅಡ್ವಾನ್ಸ್ ಡ್ರೈವಿಂಗ್ ಅಸಿಸ್ಟ್ ಸಿಸ್ಟಂ ಸೇರಿದಂತೆ 7 ಏರ್ ಬ್ಯಾಗ್ ಗಳು, ಎಬಿಎಸ್ ಜೊತೆ ಇಬಿಡಿ, ಎಲೆಕ್ಟ್ರಾನಿಕ್ ಸ್ಟ್ಯಾಬಿಲಿಟಿ ಕಂಟ್ರೋಲ್ ಸೇರಿದಂತೆ ಹಲವಾರು ಫೀಚರ್ಸ್ ಪಡೆದುಕೊಳ್ಳಬಹುದಾಗಿದೆ. ಈ ಮೂಲಕ ಹೊಸ ಕಾರು ತುಸು ದುಬಾರಿ ಬೆಲೆ ಹೊಂದಿರಲಿದ್ದು, ಇದು ದೆಹಲಿ ಎಕ್ಸ್ ಶೋರೂಂ ಆರಂಭಿಕವಾಗಿ ರೂ. 30 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 36 ಲಕ್ಷ ಬೆಲೆ ಅಂತರದಲ್ಲಿ ಮಾರಾಟಗೊಳ್ಳಬಹುದಾಗಿದೆ.