ದೇಶದ ಜನಪ್ರಿಯ ಕ್ಲಾಸಿಕ್ ಬೈಕ್ ಉತ್ಪಾದನಾ ಕಂಪನಿಯಾಗಿರುವ ರಾಯಲ್ ಎನ್ಫೀಲ್ಡ್ (Royal Enfield) ತನ್ನ ಹೊಸ ಹಿಮಾಲಯನ್ ಎಲೆಕ್ಟ್ರಿಕ್ (HIM-E) ಆವೃತ್ತಿಯನ್ನು 2023ರ EICMA ಆಟೋ ಶೋದಲ್ಲಿ ಅನಾವರಣಗೊಳಿಸಿದ್ದು, ಹೊಸ ಇವಿ ಬೈಕ್ ಆವೃತ್ತಿಯು ಭವಿಷ್ಯದಲ್ಲಿ ಹೊಸ ಸಂಚಲನ ಮೂಡಿಸುವ ನೀರಿಕ್ಷೆಯಲ್ಲಿದೆ.
ವಿಶ್ವಾದ್ಯಂತ ಬಹುತೇಕ ವಾಹನ ಉತ್ಪಾದನಾ ಕಂಪನಿಗಳು ಎಲೆಕ್ಟ್ರಿಕ್ ವಾಹನಗಳತ್ತ ಗಮನಹರಿಸುತ್ತಿದ್ದು, ಇದೀಗ ರಾಯಲ್ ಎನ್ಫೀಲ್ಡ್ ಕೂಡಾ ತನ್ನ ಸಾಂಪ್ರದಾಯಿಕ ಬೈಕ್ ಮಾದರಿಗಳೊಂದಿಗೆ ಎಲೆಕ್ಟ್ರಿಕ್ ಬೈಕ್ ಮಾದರಿಯನ್ನು ಸಹ ಬಿಡುಗಡೆಗಾಗಿ ಸಿದ್ದವಾಗುತ್ತಿದೆ. ಸುಮಾರು 18 ತಿಂಗಳ ವಿವಿಧ ಪ್ರಯತ್ನಗಳ ನಂತರ ಹಿಮಾಲಯನ್ ವಿನ್ಯಾಸ ಆಧರಿಸಿದ ಎಲೆಕ್ಟ್ರಿಕ್ ಅಡ್ವೆಂಚರ್ ಬೈಕಿನ ಕಾನ್ಸೆಪ್ಟ್ ಮಾದರಿಯನ್ನು ಅಧಿಕೃತವಾಗಿ ಅನಾವರಣಗೊಳಿಸಿದ್ದು, ಹೊಸ ಇವಿ ಬೈಕ್ ಮಾದರಿಯು ಇನ್ನು ವಿವಿಧ ಹಂತಗಳಲ್ಲಿ ಪರೀಕ್ಷೆಗಳಿಗೆ ಒಳಪಡಲಿದೆ.
ರಾಯಲ್ ಎನ್ ಫೀಲ್ಡ್ ಕಂಪನಿಯು ಹೊಸ ಹಿಮಾಲಯನ್ ಎಲೆಕ್ಟ್ರಿಕ್ ಕಾನ್ಸೆಪ್ಟ್ ಮಾದರಿಯನ್ನು ಅನಾವರಣದ ಹೊರತಾಗಿ ಯಾವುದೇ ಅಧಿಕೃತ ಮಾಹಿತಿ ಹಂಚಿಕೊಂಡಿಲ್ಲ. ಹೊಸ ಇವಿ ಬೈಕ್ ಮಾದರಿಯನ್ನು ಮುಂಬರುವ 2025ರ ವೇಳೆಗೆ ಅಧಿಕೃತವಾಗಿ ಬಿಡುಗಡೆ ಮಾಡಬಹುದಾದ ಸಾಧ್ಯತೆಗಳಿದ್ದು, ಇದು ಉತ್ಪಾದನಾ ಮಾದರಿಯ ಅಭಿವೃದ್ದಿಯ ಹೊತ್ತಿಗೆ ಇನ್ನಷ್ಟು ಬದಲಾವಣೆಗೊಳ್ಳಲಿದೆ.
ಇದನ್ನೂ ಓದಿ: ಬಿಡುಗಡೆಗೆ ಸಿದ್ದವಾಗಿದೆ ಭರ್ಜರಿ ಮೈಲೇಜ್ ನೀಡುವ ಸಿಎನ್‌ಜಿ ಬೈಕ್!
ಹಿಮಾಲಯನ್ ಎಲೆಕ್ಟ್ರಿಕ್ ಮೋಟಾರ್‌ಸೈಕಲ್ ನಲ್ಲಿ ವೃತ್ತಾಕಾರದ ಹೆಡ್‌ಲ್ಯಾಂಪ್, ಆಸನಕ್ಕೆ ಹೊಂದಿಕೊಂಡಿರುವ ಫಕ್ಸ್ ಫ್ಯೂಲ್ ಟ್ಯಾಂಕ್, ದೊಡ್ಡದಾದ ವಿಂಡ್ ಡಿಫ್ಲೆಕ್ಟರ್ ಮತ್ತು ವಿವಿಧ ರೇಂಜ್ ಒಳಗೊಂಡ ಬ್ಯಾಟರಿ ಪ್ಯಾಕ್ ಜೋಡಣೆ ಹೊಂದಿರಲಿದೆ. ಹಾಗೆಯೇ ಹೊಸ ಇವಿ ಬೈಕಿನಲ್ಲಿ ಸ್ಪೋರ್ಟಿಯಾಗಿರುವ ಅಪ್ ಸೈಡ್ ಡೌನ್ ಫ್ರಂಟ್ ಫೋರ್ಕ್ಸ್ ಮತ್ತು ಹಿಂಬದಿಯಲ್ಲಿ ಹೊಂದಾಣಿಕೆ ಮಾಡಬಹುದಾದ ಮೊನೊಶಾಕ್ ಸಸ್ಷೆಂಷನ್ ನೀಡಲಾಗಿದ್ದು, ಇದು ಡಬಲ್ ಸೈಡೆಡ್ ಸ್ವಿಂಗ್ ಆರ್ಮ್ ನಂತೆ ಕಾಣುತ್ತದೆ.
ಜೊತೆಗೆ 21 ಇಂಚಿನ ಸ್ಪೋಕ್ಡ್ ವ್ಹೀಲ್ ಮತ್ತು 18 ಇಂಚಿನ ಹಿಂಭಾಗ ವ್ಹೀಲ್ ಜೋಡಿಸಲಾಗಿದ್ದು, ಸುರಕ್ಷತೆಗಾಗಿ ಡ್ಯುಯಲ್ ಚಾನಲ್ ಎಬಿಎಸ್ ನೊಂದಿಗೆ ಎರಡೂ ಚಕ್ರಗಳಲ್ಲೂ ಡಿಸ್ಕ್ ಬ್ರೇಕ್‌ಗಳನ್ನು ನೀಡಲಾಗಿದೆ. ಈ ಮೂಲಕ ಇದು ದೈನಂದಿನ ಬಳಕೆಯ ಜೊತೆಗೆ ಅಡ್ವೆಂಚರ್ ರೈಡ್ ಉದ್ದೇಶಗಳಿಗೆ ಬಳಕೆಯಾಗಲಿದ್ದು, ಹೆಚ್ಚಿನ ಮಟ್ಟದ ಮೈಲೇಜ್ ನೀಡುವ ನೀರಿಕ್ಷೆಯಿದೆ.
ಇದನ್ನೂ ಓದಿ: ಮರುಬಿಡುಗಡೆಗೆ ಸಿದ್ದವಾಗಿರುವ ಯಮಹಾ ಆರ್‌ಎಕ್ಸ್100 ವಿಶೇಷತೆಗಳೇನು?
ಇದರೊಂದಿಗೆ ಹೊಸ ಇವಿ ಬೈಕ್ ಬಿಡುಗಡೆಗಾಗಿ ರಾಯಲ್ ಎನ್ ಫೀಲ್ಡ್ ಕಂಪನಿಯು ಮುಂಬರುವ ದಿನಗಳಲ್ಲಿ ವಿವಿಧ ಹಂತದ ರೋಡ್ ಟೆಸ್ಟಿಂಗ್ ಪ್ರಕ್ರಿಯೆಗಳನ್ನು ಆರಂಭಿಸಲಿದ್ದು, ಹೊಸ ಬೈಕಿನ ಬ್ಯಾಟರಿ ಮತ್ತು ಮೋಟಾರ್ ಮಾಹಿತಿಗಳು ಶೀಘ್ರದಲ್ಲಿಯೇ ಬಹಿರಂಗಗೊಳ್ಳಬಹುದಾಗಿದೆ.