ಆಲ್ಟ್ರೊಜ್ ರೇಸರ್ ಎಡಿಷನ್ ಟೀಸರ್ ಹಂಚಿಕೊಂಡ ಟಾಟಾ ಮೋಟಾರ್ಸ್
ಟಾಟಾ ಮೋಟಾರ್ಸ್ ಕಂಪನಿ ಅಲ್ಟ್ರೊಜ್ ಕಾರಿನ ಪರ್ಫಾಮೆನ್ಸ್ ಆವೃತ್ತಿಯಾದ ರೇಸರ್ ಎಡಿಷನ್ ಬಿಡುಗಡೆಗೆ ಸಿದ್ದವಾಗಿದ್ದು, ಹೊಸ ಕಾರಿನ ವಿನ್ಯಾಸ ಕುರಿತಾಗಿ ಟೀಸರ್ ಚಿತ್ರವನ್ನು ಹಂಚಿಕೊಂಡಿದೆ.
ಹೊಸ ಕಾರುಗಳಲ್ಲಿ ಇತ್ತೀಚೆಗೆ ಗ್ರಾಹಕರು ಪರ್ಫಾಮೆನ್ಸ್ ಆವೃತ್ತಿಗಳ ಖರೀದಿಗೆ ಆದ್ಯತೆ ನೀಡುತ್ತಿರುವುದರಿಂದ ಟಾಟಾ ಮೋಟಾರ್ಸ್ (Tata Motors) ಕಂಪನಿಯು ಸಹ ಶೀಘ್ರದಲ್ಲಿಯೇ ಆಲ್ಟ್ರೊಜ್ ರೇಸರ್ (Altroz Racer) ವರ್ಷನ್ ಬಿಡುಗಡೆಗೆ ಸಿದ್ದವಾಗುತ್ತಿದೆ. ಹೊಸ ಕಾರನ್ನು ಈ ಮೊದಲು 2023ರ ದೆಹಲಿ ಆಟೋ ಎಕ್ಸ್ ಪೋದಲ್ಲಿ ಅನಾವರಣಗೊಳಿಸಿದ್ದ ಟಾಟಾ ಕಂಪನಿಯು ಇದೀಗ ಅಂತಿಮವಾಗಿ ಬಿಡುಗಡೆಯ ಸುಳಿವು ನೀಡಿದೆ.
ಪ್ರೀಮಿಯಂ ಹ್ಯಾಚ್ ಬ್ಯಾಕ್ ಮಾರಾಟದಲ್ಲಿ ಸದ್ಯ ಮುಂಚೂಣಿಯಲ್ಲಿರುವ ಆಲ್ಟ್ರೊಜ್ ಕಾರಿನಲ್ಲಿ ಈ ಹಿಂದೆ ಟರ್ಬೊ ಎಡಿಷನ್ ಪರಿಚಯಿಸಿದ್ದ ಟಾಟಾ ಕಂಪನಿಯು ಇದೀಗ ಇನ್ನು ಹೆಚ್ಚಿನ ಮಟ್ಟದ ಪರ್ಫಾಮೆನ್ಸ್ ಮತ್ತು ವಿನೂತನ ಸ್ಪೋರ್ಟಿ ಫಿರ್ಚಸ್ ಒಳಗೊಂಡಿರುವ ರೇಸರ್ ಎಡಿಷನ್ ಅಭಿವೃದ್ದಿಪಡಿಸಿದೆ.
ಸಾಮಾನ್ಯ ಕಾರು ಮಾದರಿಗಿಂತಲೂ ಹೆಚ್ಚು ಪವರ್ ಫುಲ್ ಮತ್ತು ಸ್ಪೋರ್ಟಿಯಾಗಿರುವ ಹೊಸ ಆಲ್ಟ್ರೊಜ್ ರೇಸರ್ ಕಾರು ಮಾದರಿಯಲ್ಲಿ 1.2 ಲೀಟರ್ ಟರ್ಬೊ ಚಾರ್ಜ್ಡ್ ಪೆಟ್ರೋಲ್ ಎಂಜಿನ್ ಆಯ್ಕೆ ನೀಡಲಾಗುತ್ತಿದೆ. ಇದು ಮ್ಯಾನುವಲ್ ಮತ್ತು ಡ್ಯುಯಲ್ ಕ್ಲಚ್ ಆಟೋ ಗೇರ್‌ಬಾಕ್ಸ್ ಆಯ್ಕೆ ಹೊಂದಿರಲಿದ್ದು, 120 ಹಾರ್ಸ್ ಪವರ್ ಮತ್ತು 170 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಮೂಲಕ ಹೊಸ ಕಾರು ಹ್ಯುಂಡೈ ಐ20 ಎನ್ ಲೈನ್ ಕಾರಿಗೆ ಭರ್ಜರಿ ಪೈಪೋಟಿ ನೀಡಲಿದೆ.
ಇನ್ನು ಹೊಸ ಕಾರು ಸಾಮಾನ್ಯ ಮಾದರಿಗಿಂತಲೂ ತುಸು ಭಿನ್ನವಾಗಿರಲಿದ್ದು, ಡ್ಯುಯಲ್-ಟೋನ್ ಬಣ್ಣದ ಆಯ್ಕೆಯಿಂದಾಗಿ ಸ್ಪ್ರೋಟಿ ಲುಕ್ ಗಮನಸೆಳೆಯಲಿದೆ. ಜೊತೆಗೆ ಹೊಸ ಕಾರು ಸ್ವಲ್ಪ ವಿಭಿನ್ನವಾದ ಮುಂಭಾಗದ ಬಂಪರ್, ಹೊಸದಾಗಿ ವಿನ್ಯಾಸಗೊಳಿಸಲಾದ ಅಲಾಯ್ ವ್ಹೀಲ್ ಗಳು, ಬಾಡಿ ಡಿಕಾಲ್ ಗಳು ಮತ್ತು ರೇಸರ್ ಬ್ಯಾಡ್ಜಿಂಗ್ ಒಳಗೊಂಡಿದೆ.
ಇದನ್ನೂ ಓದಿ: ಎಡಿಎಎಸ್ ಸೌಲಭ್ಯ ಹೊಂದಿರುವ ಭಾರತದ ಬಜೆಟ್ ಕಾರುಗಳಿವು!
ಇದರೊಂದಿಗೆ ಹೊಸ ಕಾರಿನ ಕ್ಯಾಬಿನ್‌ನ ಒಳಭಾಗವು ಕೂಡಾ ಆಕರ್ಷಕವಾಗಿದ್ದು, ಸ್ಪೋರ್ಟಿ ಆಗಿರುವ ಆಸನಗಳು ಮತ್ತು ರೇಸರ್ ಬ್ಯಾಡ್ಜಿಂಗ್ ಗಮನಸೆಳೆಯುತ್ತದೆ. ಇದರಲ್ಲಿ ಹರ್ಮನ್ ಆಡಿಯೋ, ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ಪ್ಲೇ, 10.25 ಇಂಚಿನ ಟಚ್ ಸ್ಕ್ರೀನ್ ಇನ್ಪೋಟೈನ್ಮೆಂಟ್ ಸಿಸ್ಟಂ, 7 ಇಂಚಿನ ಡಿಜಿಟಲ್ ಇನ್ ಸ್ಟ್ರಮೆಂಟ್ ಕ್ಲಸ್ಟರ್, ಫ್ರಂಟ್ ವೆಂಟಿಲೆಷನ್ ಸೀಟುಗಳು ಸೇರಿದಂತೆ ಹಲವಾರು ಹೊಸ ಫೀಚರ್ಸ್ ಗಳಿರಲಿವೆ. ಇದರೊಂದಿಗೆ ಹೊಸ ಕಾರು ಮಾದರಿಯು ಸಾಮಾನ್ಯ ಮಾದರಿಗಿಂತಲೂ ರೂ. 1 ಲಕ್ಷದಿಂದ ರೂ. 1.50 ಲಕ್ಷದಷ್ಟು ದುಬಾರಿಯಾಗಿರಲಿದೆ.