ದೇಶಿಯ ಮಾರುಕಟ್ಟೆಯಲ್ಲಿನ ಪ್ರಯಾಣಿಕ ಕಾರುಗಳ ವಿಭಾಗದಲ್ಲಿ ಮಧ್ಯಮ ಕ್ರಮಾಂಕದ ಕೂಪೆ ಎಸ್ಯುವಿಗಳ (Coupe SUV’s) ಅಬ್ಬರ ಹೆಚ್ಚುತ್ತಿದ್ದು, ಇತ್ತೀಚೆಗೆ ಬಿಡುಗಡೆಯಾದ ಟಾಟಾ ಕರ್ವ್ ಮತ್ತು ಸಿಟ್ರನ್ ಬಸಾಲ್ಟ್ ಗ್ರಾಹಕರಲ್ಲಿ ಕುತೂಹಲ ಹುಟ್ಟುಹಾಕಿವೆ. ಇಷ್ಟು ದಿನಗಳ ಕಾಲ ಐಷಾರಾಮಿ ಕಾರುಗಳ ಮಾತ್ರ ಕಂಡುಬರುತ್ತಿದ್ದ ಕೂಪೆ ಎಸ್ಯುವಿ ಮಾದರಿಗಳು ಇದೀಗ ಮಧ್ಯಮ ಕ್ರಮಾಂಕದ ಕಾರುಗಳಲ್ಲೂ ಲಭ್ಯವಾಗುತ್ತಿರುವ ಹೊಸ ಸಂಚಲನಕ್ಕೆ ಕಾರಣವಾಗಿದೆ. ಹಾಗಾದ್ರೆ ಹೊಸದಾಗಿ ಬಿಡುಗಡೆಯಾಗಲಿರುವ ಟಾಟಾ ಕರ್ವ್ ಮತ್ತು ಸಿಟ್ರನ್ ಬಸಾಲ್ಟ್ ವಿಶೇಷತೆಗಳೇನು? ಎರಡು ಕಾರುಗಳಲ್ಲಿ ಯಾವುದು ಬೆಸ್ಟ್? ಇದರ ಕುರಿತಾಗಿ ಇಲ್ಲಿ ಸಂಪೂರ್ಣವಾಗಿ ಚರ್ಚಿಸಲಾಗಿದೆ.
ವೆರಿಯೆಂಟ್ ಗಳು ಮತ್ತು ಬೆಲೆ
ಕರ್ವ್ ಕಾರಿನಲ್ಲಿ ಟಾಟಾ ಮೋಟಾರ್ಸ್ ಕಂಪನಿಯು ಸ್ಮಾರ್ಟ್, ಪ್ಯೂರ್ ಪ್ಲಸ್, ಪ್ಯೂರ್ ಪ್ಲಸ್ ಎಸ್, ಕ್ರಿಯೆಟಿವ್, ಕ್ರಿಯೆಟಿವ್ ಪ್ಲಸ್, ಕ್ರಿಯೆಟಿವ್ ಪ್ಲಸ್ ಎಸ್, ಅಕಂಪ್ಲಿಶೇಡ್ ಎಸ್ , ಅಕಂಪ್ಲಿಶೇಡ್ ಪ್ಲಸ್ ಎಸ್ ಎನ್ನುವ ಎಂಟು ವೆರಿಯೆಂಟ್ ಗಳನ್ನು ಹೊಂದಿದ್ದು, ಇದರಲ್ಲಿ ಆರಂಭಿಕ ಮಾದರಿಯು ರೂ. 10 ಲಕ್ಷ ಬೆಲೆ ಹೊಂದಿದ್ದರೆ ಟಾಪ್ ಎಂಡ್ ಮಾದರಿಯು ರೂ. 17.70 ಲಕ್ಷ ಬೆಲೆ ಹೊಂದಿದೆ.
ಬಸಾಲ್ಟ್ ಕೂಪೆ ಎಸ್ ಯುವಿಯು ಪ್ರಮುಖ ಐದು ವೆರಿಯೆಂಟ್ ಗಳಲ್ಲಿ ಖರೀದಿಗೆ ಲಭ್ಯವಿದ್ದು, ಎಕ್ಸ್ ಶೋರೂಂ ಪ್ರಕಾರ ಇದು ರೂ. 7.99 ಲಕ್ಷದಿಂದ ರೂ. 13.62 ಲಕ್ಷ ಬೆಲೆ ಹೊಂದಿದೆ. ಇದು ಪ್ರತಿಸ್ಪರ್ಧಿ ಮಾದರಿಗಿಂತಲೂ ರೂ. 1 ಲಕ್ಷದಷ್ಟು ಕಡಿಮೆ ಬೆಲೆಯಲ್ಲಿ ಖರೀದಿಗೆ ಲಭ್ಯವಿದ್ದು, ಹೊಸ ಕಾರು ಟಾಟಾ ಕರ್ವ್ ಸೇರಿದಂತೆ ಹ್ಯುಂಡೈ ಕ್ರೆಟಾ, ಕಿಯಾ ಸೆಲ್ಟೊಸ್, ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ, ಹೋಂಡಾ ಎಲಿವೇಟ್ ಕಾರುಗಳಿಗೆ ಉತ್ತಮ ಪೈಪೋಟಿ ನೀಡುವ ತವಕದಲ್ಲಿದೆ.
ಎಂಜಿನ್ ಮತ್ತು ಪರ್ಫಾಮೆನ್ಸ್
ಕರ್ವ್ ಕಾರಿನಲ್ಲಿ120 ಹಾರ್ಸ್ ಪವರ್ ಮತ್ತು 170 ಎನ್ಎಂ ಟಾರ್ಕ್ ಉತ್ಪಾದಿಸಬಲ್ಲ ತ್ರಿ ಸಿಲಿಂಡರ್ 1.2 ಲೀಟರ್ ಪೆಟ್ರೋಲ್ ಎಂಜಿನ್, 118 ಹಾರ್ಸ್ ಪವರ್ ಉತ್ಪಾದಿಸಬಲ್ಲ 1.5 ಲೀಟರ್ ಡೀಸೆಲ್ ಎಂಜಿನ್ ಮತ್ತು ಪರ್ಫಾಮೆನ್ಸ್ ಪ್ರಿಯರಿಗಾಗಿ 125 ಹಾರ್ಸ್ ಪವರ್, 225 ಎನ್ಎಂ ಟಾರ್ಕ್ ಉತ್ಪಾದಿಸಬಲ್ಲ 1.2 ಲೀಟರ್ ಡೈರೆಕ್ಟ್ ಇಂಜೆಕ್ಷನ್ ಟರ್ಬೊ ಪೆಟ್ರೋಲ್ ಎಂಜಿನ್ ಆಯ್ಕೆ ನೀಡಲಾಗುತ್ತಿದೆ. ಇದರಲ್ಲಿ 6-ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಆಯ್ಕೆಯನ್ನು ಎಲ್ಲಾ ವೆರಿಯೆಂಟ್ ನಲ್ಲೂ ಸ್ಟ್ಯಾಂಡರ್ಡ್ ಆಗಿ ನೀಡಲಾಗಿದ್ದು, ಹೆಚ್ಚಿನ ಮಟ್ಟದ ಪರ್ಫಾಮೆನ್ಸ್ ಗಾಗಿ 7-ಸ್ಪೀಡ್ ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಆಯ್ಕೆ ಮಾಡಬಹುದಾಗಿದೆ.
ಸಿಟ್ರನ್ ಕಂಪನಿಯು ಬಸಾಲ್ಟ್ ಕಾರಿನಲ್ಲಿ 1.2 ಲೀಟರ್ ಪೆಟ್ರೋಲ್ ಎಂಜಿನ್ ಆಯ್ಕೆ ನೀಡಲಾಗಿದ್ದು, ಗ್ರಾಹಕರು ಇದರಲ್ಲಿ ಎರಡು ರೀತಿಯ ಪರ್ಫಾಮೆನ್ಸ್ ಆಯ್ಕೆಗಳನ್ನು ಮಾಡಬಹುದಾಗಿದೆ. ಮೊದಲನೇದಾಗಿ ಆರಂಭಿಕ ಮಾದರಿಯು 5-ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಆಯ್ಕೆಯೊಂದಿಗೆ 82 ಹಾರ್ಸ್ ಪವರ್ ಮತ್ತು 115 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಇದರೊಂದಿಗೆ ಟಾಪ್ ಎಂಡ್ ಟರ್ಬೊ ಮಾದರಿಯು 6-ಸ್ಪೀಡ್ ಮ್ಯಾನುವಲ್ ಮತ್ತು 6-ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಆಯ್ಕೆಗಳಿದ್ದು, ಇದು 110 ಹಾರ್ಸ್ ಪವರ್ ಮತ್ತು 205 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಮೂಲಕ ಹೊಸ ಕಾರು ಅತ್ಯುತ್ತಮ ಇಂಧನ ದಕ್ಷತೆ ಹೊಂದಿದ್ದು, ಪ್ರತಿ ಲೀಟರ್ ಗೆ ಇದು 18 ಕಿ.ಮೀ ನಿಂದ 19.5 ಕಿ.ಮೀ ಮೈಲೇಜ್ ನೀಡಲಿದೆ.
ಇದನ್ನೂ ಓದಿ: ಸನ್‌ರೂಫ್ ಹೊಂದಿರುವ ಕಾರುಗಳಲ್ಲಿ ಎಷ್ಟೆಲ್ಲಾ ನ್ಯೂನತೆಗಳಿವೆ ನೋಡಿ!
ವಿನ್ಯಾಸ ಮತ್ತು ವೈಶಿಷ್ಟ್ಯತೆಗಳು
ಕರ್ವ್ ಕಾರು ಕೂಪೆ ಎಸ್ ಯುವಿ ವಿನ್ಯಾಸದೊಂದಿಗೆ ಡ್ಯುಯಲ್ ಟೋನ್ ಬಂಪರ್, ರೂಫ್ ಟಾಪ್ ಮೌಂಟೆಡ್ ಸ್ಪಾಯ್ಲರ್, 18 ಇಂಚಿನ ಅಲಾಯ್ ವ್ಹೀಲ್, ಫ್ಲಶ್ ಡೋರ್ ಹ್ಯಾಂಡಲ್ಸ್, ಪನೊರಮಿಕ್ ಸನ್ ರೂಫ್, ಗೆಸ್ಚರ್ ಕಂಟ್ರೋಲ್ ಹೊಂದಿರುವ ಟೈಲ್ ಗೇಟ್ ಹೊಂದಿದೆ.
ಬಸಾಲ್ಟ್ ಕಾರಿನಲ್ಲಿ ಸ್ಪೋರ್ಟಿ ಲುಕ್ ನೊಂದಿಗೆ ಕ್ರೋಮ್ ಲೈನ್ ಹೊಂದಿರುವ ಚೆವರಾನ್ ಲೊಗೊ, ಎರಡು ಹಂತಗಳಲ್ಲಿ ವಿಭಾಗಗೊಂಡಿರುವ ಫ್ರಂಟ್ ಗ್ರೀಲ್, ಪ್ರೊಜೆಕ್ಟರ್ ಹೆಡ್ ಲ್ಯಾಂಪ್ಸ್, ಎಲ್ಇಡಿ ರನ್ನಿಂಗ್ ಲ್ಯಾಂಪ್ಸ್, ಕ್ಲಾಡಿಂಗ್ ಹೊಂದಿರುವ ವ್ಹೀಲ್ ಆರ್ಚ್, 17 ಇಂಚಿನ ಅಲಾಯ್ ವ್ಹೀಲ್ ಗಳು, ಪೂರ್ಣಪ್ರಮಾಣದಲ್ಲಿ ತೆರೆದುಕೊಳ್ಳುವ ಡೋರ್ ಗಳು, ಹಾಲೋಜೆನ್ ಟೈಲ್ ಲ್ಯಾಂಪ್ಸ್, 3ಡಿ ಎಫೆಕ್ಟ್ ಹೊಂದಿರುವ ಸ್ಪೋರ್ಟಿ ಡ್ಯುಯಲ್ ಟೋನ್ ಬಂಪರ್ ಸೇರಿದಂತೆ ಹಲವಾರು ಫೀಚರ್ಸ್ ನೀಡಲಾಗಿದೆ.
ಒಳವಿನ್ಯಾಸ ಮತ್ತು ವೈಶಿಷ್ಯತೆಗಳು
ಕರ್ವ್ ಕಾರಿನಲ್ಲಿ 12.3 ಇಂಚಿನ ಟಚ್ ಸ್ಕ್ರೀನ್ ಇನ್ಪೋಟೈನ್ ಮೆಂಟ್ ಸಿಸ್ಟಂ, ಮುಂಭಾಗದಲ್ಲಿ ವೆಂಟಿಲೆಟೆಡ್ ಆಸನಗಳು, 2 ಹಂತದಲ್ಲಿ ಹೊಂದಾಣಿಕೆ ಮಾಡಬಹುದಾದ ಹಿಂಬದಿ ಆಸನಗಳಿವೆ.
ಬಸಾಲ್ಟ್ ನಲ್ಲಿ ಹೊಸ ವಿನ್ಯಾಸದ ಹ್ವಾಕ್ ಪ್ಯಾನೇಲ್ ನೊಂದಿಗೆ ಟಾಂಗಲ್ ಸ್ವಿಚ್ ಗಳು, ಆಟೋಮ್ಯಾಟಿಕ್ ಎಸಿ, ಅತ್ಯುತ್ತಮವಾಗಿರುವ ಆರ್ಮ್ ರೆಸ್ಟ್, ಹೊಂದಾಣಿಕೆ ಮಾಡಬಹುದಾದ ಹಿಂಬದಿಯ ಆಸನಗಳ ಹೆಡ್ ರೆಸ್ಟ್, ರಿಯರ್ ಎಸಿ ವೆಂಟ್ಸ್ ಜೊತೆಗೆ 470 ಲೀಟರ್ ಸಾಮರ್ಥ್ಯದ ಬೂಟ್ ಸ್ಪೆಸ್ ನೀಡಲಾಗಿದೆ. ಜೊತೆಗೆ ಕನೆಕ್ಟಿವಿ ಸೌಲಭ್ಯಕ್ಕಾಗಿ 10..25 ಇಂಚಿನ ಪ್ಲೊಟರಿಂಗ್ ಇನ್ಪೋಟೈನ್ ಮೆಂಟ್ ಸಿಸ್ಟಂ, 7 ಇಂಚಿನ ಆಲ್ ಡಿಜಿಟಲ್ ಇನ್ ಸ್ಟ್ರುಮೆಂಟ್ ಕ್ಲಸ್ಟರ್, ವೈರ್ ಲೆಸ್ ಸ್ಮಾರ್ಟ್ ಫೋನ್ ಚಾರ್ಜರ್ ಮತ್ತು ತ್ರಿ ಸ್ಪೋಕ್ ಸ್ಟೀರಿಂಗ್ ವ್ಹೀಲ್ ನೀಡಲಾಗಿದೆ.
ಸುರಕ್ಷಾ ಸೌಲಭ್ಯಗಳು
ಕರ್ವ್ ಕಾರಿನಲ್ಲಿ ಸುರಕ್ಷತೆಗಾಗಿ ಹಲವಾರು ಸ್ಟ್ಯಾಂಡರ್ಡ್ ಫೀಚರ್ಸ್ ಗಳೊಂದಿಗೆ ಆರು ಏರ್ ಬ್ಯಾಗ್ ಗಳು, ಆಲ್ ವ್ಹೀಲ್ ಡಿಸ್ಕ್ ಬ್ರೇಕ್ಸ್, ಟೈರ್ ಪ್ರೆಷರ್ ಮಾನಿಟರಿಂಗ್ ಸಿಸ್ಟಂ, 360 ಡಿಗ್ರಿ ಕ್ಯಾಮೆರಾ, ಆಟೋ ಹೋಲ್ಡ್ ಅಸಿಸ್ಟ್, ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್ ಸೌಲಭ್ಯಗಳಿವೆ. ಹಾಗೆಯೇ ಹೈಎಂಡ್ ಮಾದರಿಗಳಿಗಾಗಿ ಹೆಚ್ಚಿನ ಮಟ್ಟದ ಸುರಕ್ಷಾ ಫೀಚರ್ಸ್ ಹೊಂದಿರುವ ಲೆವಲ್ 2 ಅಡ್ವಾನ್ಸ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಂ ನೀಡಲಾಗಿದ್ದು, ಇದು ರಡಾರ್ ಸಹಾಯದೊಂದಿಗೆ ಸಂಭಾವ್ಯ ಅಪಘಾತಗಳನ್ನು ತಡೆಯುವಲ್ಲಿ ಪ್ರಮುಖ ಪಾತ್ರವಹಿಸಲಿದೆ.
ಸಿಟ್ರನ್ ಕಂಪನಿಯು ಕೂಡಾ ಬಸಾಲ್ಟ್ ಕಾರಿನಲ್ಲಿ ಸ್ಟ್ಯಾಂಡರ್ಡ್ ಆಗಿ ಆರು ಏರ್ ಬ್ಯಾಗ್ ಗಳು ಸೇರಿದಂತೆ ಎಬಿಎಸ್ ಜೊತೆ ಇಬಿಡಿ, ಇಎಸ್ ಪಿ, ಹಿಲ್ ಹೋಲ್ಡ್ ಅಸಿಸ್ಟ್, ಟೈರ್ ಪ್ರೆಷರ್ ಮಾನಿಟರಿಂಗ್ ಸಿಸ್ಟಂ ಸೇರಿದಂತೆ ಹಲವಾರು ಸುರಕ್ಷಾ ಫೀಚರ್ಸ್ ಗಳಿದ್ದು, ಇದು ಕ್ರ್ಯಾಶ್ ಟೆಸ್ಟಿಂಗ್ ನಲ್ಲೂ ಉತ್ತಮ ಕಾರ್ಯಕ್ಷಮತೆ ಪ್ರದರ್ಶಿಸುವ ನೀರಿಕ್ಷೆಯಲ್ಲಿದೆ.
ಇದನ್ನೂ ಓದಿ: ಅಗಸ್ಟ್ ತಿಂಗಳಿನಲ್ಲಿ ಬಿಡುಗಡೆಯಾಗಿ ಭರ್ಜರಿ ಬೇಡಿಕೆ ಪಡೆದುಕೊಳ್ಳುತ್ತಿರುವ ಟಾಪ್ 5 ಕಾರುಗಳಿವು!
ಖರೀದಿಗೆ ಯಾವುದು ಬೆಸ್ಟ್?
ವಿನ್ಯಾಸ ಮತ್ತು ವೈಶಿಷ್ಟ್ಯತೆಗಳಲ್ಲಿ ಸಾಕಷ್ಟು ಸಾಮ್ಯತೆ ಹೊಂದಿರುವ ಕರ್ವ್ ಮತ್ತು ಬಸಾಲ್ಟ್ ಕಾರುಗಳು ಸುರಕ್ಷಾ ಫೀಚರ್ಸ್ ಮತ್ತು ಎಂಜಿನ್ ಆಯ್ಕೆಗಳಲ್ಲಿ ಗ್ರಾಹಕರಿಗೆ ಹೆಚ್ಚಿನ ಆಯ್ಕೆ ಒದಗಿಸುತ್ತವೆ. ಬಸಾಲ್ಟ್ ಕಾರು ಆಕರ್ಷಕ ಬೆಲೆ ಹೊಂದಿದ್ದರೂ ಕೂಡಾ ಕಡಿಮೆ ವೈಶಿಷ್ಟ್ಯತೆಗಳೊಂದಿಗೆ ಒಂದೇ ಎಂಜಿನ್ ಆಯ್ಕೆ ಹೊಂದಿದೆ. ಆದರೆ ಟಾಟಾ ಕರ್ವ್ ಕಾರು ವಿವಿಧ ಎಂಜಿನ್ ಆಯ್ಕೆಗಳೊಂದಿಗೆ ಗ್ರಾಹಕರನ್ನು ಹೆಚ್ಚಿನ ಸಂಖ್ಯೆಯಲ್ಲಿ ಸೆಳೆಯುವ ನೀರಿಕ್ಷೆಯಲ್ಲಿದೆ. ಜೊತೆಗೆ ಬಸಾಲ್ಟ್ ಕಾರಿಗಿಂತಲೂ ಗುಣಮಟ್ಟದ ಸುರಕ್ಷಾ ಫೀಚರ್ಸ್ ಗಳು ಕರ್ವ್ ನಲ್ಲಿದ್ದು, ಕ್ರ್ಯಾಶ್ ಟೆಸ್ಟಿಂಗ್ ನಲ್ಲಿ 5 ಸ್ಟಾರ್ ಪಡೆದುಕೊಳ್ಳುವ ನೀರಿಕ್ಷೆಯಲ್ಲಿದೆ. ಹೀಗಾಗಿ ಕಡಿಮೆ ಬೆಲೆಯಲ್ಲಿ ಕೂಪೆ ಬಯಸುವ ಗ್ರಾಹಕರಿಗೆ ಬಸಾಲ್ಟ್ ಉತ್ತಮವಾಗಿದ್ದರೆ ಪ್ರೀಮಿಯಂ ಫೀಚರ್ಸ್ ಮತ್ತು ಹೆಚ್ಚಿನ ಸುರಕ್ಷಾ ಫೀಚರ್ಸ್ ಬಯಸುವ ಗ್ರಾಹಕರಿಗೆ ಕರ್ವ್ ಅತ್ಯುತ್ತಮ ಆಯ್ಕೆ ಎನ್ನಬಹುದು.