ಟರ್ಬೊ ಪೆಟ್ರೋಲ್ ಆಟೋಮ್ಯಾಟಿಕ್ ನಲ್ಲಿ ಟಾಟಾ ನೆಕ್ಸಾನ್ ಸಿಎನ್​ಜಿ ವರ್ಷನ್

|

Updated on: Aug 25, 2024 | 8:04 PM

ಟಾಟಾ ಮೋಟಾರ್ಸ್ ಕಂಪನಿಯು ಹೊಸ ಕಾರು ಮಾದರಿಗಳೊಂದಿಗೆ ಭರ್ಜರಿ ಬೇಡಿಕೆ ಪಡೆದುಕೊಳ್ಳುತ್ತಿದ್ದು, ಶೀಘ್ರದಲ್ಲಿಯೇ ತನ್ನ ಬಹುನೀರಿಕ್ಷಿತ ನೆಕ್ಸಾನ್ ಸಿಎನ್​ಜಿ ಆವೃತ್ತಿಯನ್ನು ಬಿಡುಗಡೆ ಮಾಡುತ್ತಿದೆ.

ಟರ್ಬೊ ಪೆಟ್ರೋಲ್ ಆಟೋಮ್ಯಾಟಿಕ್ ನಲ್ಲಿ ಟಾಟಾ ನೆಕ್ಸಾನ್ ಸಿಎನ್​ಜಿ ವರ್ಷನ್
ಟಾಟಾ ನೆಕ್ಸಾನ್ ಸಿಎನ್​ಜಿ
Follow us on

ವಿನೂತನ ಫೀಚರ್ಸ್ ಗಳೊಂದಿಗೆ ಹೊಸ ಕಾರುಗಳ ಮಾರಾಟದಲ್ಲಿ ಮುಂಚೂಣಿ ಸಾಧಿಸುತ್ತಿರುವ ಟಾಟಾ ಮೋಟಾರ್ಸ್ (Tata Motors) ಕಂಪನಿಯು ಶೀಘ್ರದಲ್ಲಿಯೇ ನೆಕ್ಸಾನ್ ಸಿಎನ್​ಜಿ ಆವೃತ್ತಿ ಬಿಡುಗಡೆ ಮಾಡುವ ಸುಳಿವು ನೀಡಿದೆ. ನೆಕ್ಸಾನ್ ಕಾರು ಮಾದರಿಯನ್ನು ಸದ್ಯ ಪೆಟ್ರೋಲ್, ಡೀಸೆಲ್ ಸೇರಿದಂತೆ ಎಲೆಕ್ಟ್ರಿಕ್ ಆವೃತ್ತಿಯಲ್ಲಿ ಮಾರಾಟ ಮಾಡುತ್ತಿರುವ ಟಾಟಾ ಕಂಪನಿಯು ಇದೀಗ ಸಿಎನ್​ಜಿ ಮಾದರಿಯಲ್ಲಿ ಬಿಡುಗಡೆ ಮಾಡುತ್ತಿದ್ದು, ಹೊಸ ಕಾರು ಮಾದರಿಯು ಮುಂಬರುವ ದೀಪಾವಳಿ ಹೊತ್ತಿಗೆ ಅಧಿಕೃತವಾಗಿ ಬಿಡುಗಡೆಯಾಗಬಹುದಾಗಿದೆ.

ನೆಕ್ಸಾನ್ ಸಿಎನ್​ಜಿ ಬಿಡುಗಡೆಗಾಗಿ ಈಗಾಗಲೇ ಹಲವು ಸುತ್ತಿನ ರೋಡ್ ಟೆಸ್ಟಿಂಗ್ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಲಾಗಿದ್ದು, ಹೊಸ ಕಾರು ಮಾದರಿಯನ್ನು ಟರ್ಬೊ ಪೆಟ್ರೋಲ್ ಎಂಜಿನ್ ನೊಂದಿಗೆ ಸಂಯೋಜನೆ ಮಾಡಲಿದೆ. ಇದು ಪ್ರಸ್ತುತ ಮಾರುಕಟ್ಟೆಯಲ್ಲಿರುವ ಇತರೆ ಸಿಎನ್​ಜಿ ಕಾರುಗಳಿಂತಲೂ ಹೆಚ್ಚಿನ ಮಟ್ಟದ ತಂತ್ರಜ್ಞಾನ ಮತ್ತು ವಿವಿಧ ಗೇರ್ ಬಾಕ್ಸ್ ಆಯ್ಕೆಗಳಲ್ಲಿ ಲಭ್ಯವಿರಲಿದೆ.

ಹೊಸ ನೆಕ್ಸಾನ್ ಸಿಎನ್​ಜಿ ಮಾದರಿಯು 1.2 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಜೊತೆಗೆ ಐ ಸಿಎನ್​ಜಿ ತಂತ್ರಜ್ಞಾನ ಹೊಂದಿದ್ದು, ಇದು 5-ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಜೊತೆಗೆ ಆಟೋಮ್ಯಾಟಿಕ್ ಮಾದರಿಯಲ್ಲೂ ಸಹ ಬಿಡುಗಡೆಯಾಗಲಿದೆ ಎನ್ನಲಾಗಿದೆ. ಇದರೊಂದಿಗೆ ನೆಕ್ಸಾನ್ ಕಾರು ಟರ್ಬೊ ಪೆಟ್ರೋಲ್ ನಲ್ಲಿ ಖರೀದಿಗೆ ಲಭ್ಯವಾಗುತ್ತಿರುವ ಮೊದಲ ಸಿಎನ್ ಜಿ ಕಾರು ಮಾದರಿಯೆಂಬ ಹೆಗ್ಗಳಿಕೆಗೆ ಪಾತ್ರವಾಗುವುದಲ್ಲದೆ ಆಟೋಮ್ಯಾಟಿಕ್ ನಲ್ಲಿ ಲಭ್ಯವಾಗುತ್ತಿರುವ ಮೊದಲ ಸಿಎನ್ ಜಿ ಕಾರು ಮಾದರಿಯಾಗಲಿದೆ.

ಇದನ್ನೂ ಓದಿ: ಸೆಕೆಂಡ್ ಹ್ಯಾಂಡ್ ಕಾರು ಖರೀದಿಸುವಾಗ ಹೇಗೆಲ್ಲಾ ಮೋಸ ಮಾಡ್ತಾರೆ ನೋಡಿ..

ಟಾಟಾ ಮೋಟಾರ್ಸ್ ಕಂಪನಿಯು ಅಭಿವೃದ್ದಿಪಡಿಸಿರುವ ಐ ಸಿಎನ್​ಜಿ ವಿನೂತನ ತಂತ್ರಜ್ಞಾನದೊಂದಿಗೆ ನೆಕ್ಸಾನ್ ಕಾರು ಪ್ರತಿ ಕೆಜಿ ಸಿಎನ್ ಜಿಗೆ ಗರಿಷ್ಠ 25 ಕಿ.ಮೀ ಮೈಲೇಜ್ ಹಿಂದಿರುಗಿಸುವ ಸಾಧ್ಯತೆಗಳಿದ್ದು, ಇದರೊಂದಿಗೆ ಸಿಎನ್ ಜಿ ಕಾರುಗಳಲ್ಲಿ ಪರಿಚಯಿಸಲಾಗಿರುವ ಟ್ವಿನ್ ಸಿಲಿಂಡರ್ ಟ್ಯಾಂಕ್ ವೈಶಿಷ್ಟ್ಯತೆಯು ಸಹ ಗ್ರಾಹಕರನ್ನು ಸೆಳೆಯುತ್ತಿದೆ. ಹೊಸ ವಿನ್ಯಾಸ ವೈಶಿಷ್ಟ್ಯತೆಯಿಂದಾಗಿ ಬೂಟ್ ಸ್ಪೆಸ್ ಸಾಮಾನ್ಯ ಕಾರುಗಳಿಂತಲೂ ತುಸು ಕಡಿಮೆಯಾದರೂ ಸಹ ಇತರೆ ಕಂಪನಿಗಳ ಸಿಎನ್ ಜಿ ಕಾರುಗಳಿಂತಲೂ ಹೆಚ್ಚಿನ ಮಟ್ಟದ ಲಗೇಜ್ ಕೊಂಡಯ್ಯಬಹುದಾಗಿದೆ.

ಸಾಮಾನ್ಯವಾಗಿ ಸಿಎನ್‌ ಜಿ ಕಾರುಗಳಲ್ಲಿ ಬೂಟ್ ಸ್ಪೆಸ್ ಸ್ಥಾನದಲ್ಲಿ ಸಿಎನ್​ಜಿ ಟ್ಯಾಂಕ್ ನೀಡುವುದರಿಂದ ಹೆಚ್ಚಿನ ಲಗೇಜ್ ಕೊಂಡಯ್ಯಲು ಸಾಧ್ಯವಾಗುವುದಿಲ್ಲ. ಈ ಕುರಿತಾಗಿ ಹಲವಾರು ಗ್ರಾಹಕರು ಅಸಮಾಧಾನ ಹೊಂದಿದ್ದು, ಗ್ರಾಹಕರ ಅಭಿಪ್ರಾಯ ಆಧರಿಸಿ ಟಾಟಾ ಕಂಪನಿ ಸಿಂಗಲ್ ಸಿಲಿಂಡರ್ ಬದಲಾಗಿ ಟ್ವಿನ್ ಸಿಲಿಂಡರ್ ಟ್ಯಾಂಕ್ ನೀಡುತ್ತಿದೆ. ಇದು ಲಗೇಜ್ ಸ್ಥಳದಲ್ಲಿ ಸಾಮಾನ್ಯ ಕಾರುಗಳಂತೆಯೇ ಸ್ಥಳಾವಕಾಶ ನೀಡಲು ಸಾಧ್ಯವಾಗಿದ್ದು, ಇದಕ್ಕೆ ಗ್ರಾಹಕರು ಕೂಡಾ ಸಾಕಷ್ಟು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಸನ್‌ರೂಫ್‌ ಹೊಂದಿರುವ ಕಾರುಗಳಲ್ಲಿ ಎಷ್ಟೆಲ್ಲಾ ನ್ಯೂನತೆಗಳಿವೆ ನೋಡಿ!

ಟ್ವಿನ್ ಸಿಲಿಂಡರ್ ಟ್ಯಾಂಕ್ ವಿನ್ಯಾಸ ವೈಶಿಷ್ಟ್ಯತೆಯನ್ನು ಈಗಾಗಲೇ ಟಿಗೋರ್, ಟಿಯಾಗೋ, ಪಂಚ್ ಮತ್ತು ಆಲ್ಟ್ರೊಜ್ ಸಿಎನ್ ಜಿ ಮಾದರಿಗಳಲ್ಲಿ ಪರಿಚಯಿಸಿರುವ ಟಾಟಾ ಮೋಟಾರ್ಸ್ ಕಂಪನಿಯು ಇದೀಗ ನೆಕ್ಸಾನ್ ನಲ್ಲೂ ಹೊಸ ವೈಶಿಷ್ಟ್ಯತೆ ನೀಡಿದೆ. ಜೊತೆಗೆ ಹೊಸ ಕಾರು ಸಾಮಾನ್ಯ ನೆಕ್ಸಾನ್ ಕಾರಿನ ಮಧ್ಯಮ ವೈಶಿಷ್ಯತೆಯ ವೆರಿಯೆಂಟ್ ನಲ್ಲಿ ಬಿಡುಗಡೆಯಾಗಲಿದ್ದು, ಇದು ಭರ್ಜರಿ ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಲ್ಲಿದೆ. ಇದರೊಂದಿಗೆ ಹೊಸ ಕಾರು ಪೆಟ್ರೋಲ್ ಮಾದರಿಗಿಂತಲೂ ರೂ. 90 ಸಾವಿರದಿಂದ ರೂ. 1.10 ಲಕ್ಷದಷ್ಟು ಹೆಚ್ಚುವರಿ ಬೆಲೆ ಹೊಂದಬಹುದಾಗಿದ್ದು, ಸೆಪ್ಟೆಂಬರ್ 2ರಂದು ಕರ್ವ್ ಬಿಡುಗಡೆಯ ನಂತರ ನೆಕ್ಸಾನ್ ಸಿಎನ್ ಜಿ ಬಿಡುಗಡೆಯಾಗಬಹುದಾಗಿದೆ.

Published On - 6:26 pm, Sun, 25 August 24