
ಎಲೆಕ್ಟ್ರಿಕ್ ವಾಹನಗಳ ಬ್ಯಾಟರಿ ಉತ್ಪಾದನೆಯಲ್ಲಿರುವ ಭಾರೀ ಬದಲಾವಣೆ ಪರಿಣಾಮ ಎಲೆಕ್ಟ್ರಿಕ್ ಕಾರುಗಳು (Electric Cars) ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವ ಟಾಟಾ ಮೋಟಾರ್ಸ್ (Tata Motors) ಕಂಪನಿಯು ತನ್ನ ಪ್ರಮುಖ ಇವಿ ಕಾರುಗಳ ಬೆಲೆಯಲ್ಲಿ ಕಡಿತ ಮಾಡಿದೆ. ನೆಕ್ಸಾನ್ ಇವಿ ಮತ್ತು ಟಿಯಾಗೋ ಇವಿ ಕಾರುಗಳ ಬೆಲೆಯಲ್ಲಿ ಇಳಿಕೆ ಮಾಡಿದ್ದು, ವಿವಿಧ ವೆರಿಯೆಂಟ್ ಗಳಿಗೆ ಅನುಗುಣವಾಗಿ ರೂ. 20 ಸಾವಿರದಿಂದ ರೂ. 1.20 ಲಕ್ಷದ ತನಕ ಬೆಲೆ ಇಳಿಕೆ ಮಾಡಿದೆ.
ಎಲೆಕ್ಟ್ರಿಕ್ ವಾಹನಗಳಲ್ಲಿ ಬ್ಯಾಟರಿ ಉತ್ಪಾದನೆಯಲ್ಲಿ ಆಗಿರುವ ಪ್ರಮುಖ ಬದಲಾವಣೆಗಳು ಉತ್ಪಾದನಾ ವೆಚ್ಚ ತಗ್ಗಿಸಿದ್ದು, ಈ ಹಿನ್ನಲೆಯಲ್ಲಿ ಟಾಟಾ ಮೋಟಾರ್ಸ್ ಕಂಪನಿ ಇವಿ ಕಾರುಗಳ ಬೆಲೆಯನ್ನು ತಗ್ಗಿಸಿದೆ. ಶೀಘ್ರದಲ್ಲಿಯೇ ಮತ್ತಷ್ಟು ಹೊಸ ಬದಲಾವಣೆಗಳೊಂದಿಗೆ ಇವಿ ಉತ್ಪಾದನಾ ವೆಚ್ಚ ತಗ್ಗಿಸುವ ಸುಳಿವು ನೀಡಿದ್ದು, ಸಾಮಾನ್ಯ ಕಾರುಗಳ ಬೆಲೆಯಲ್ಲಿ ಇವಿ ಕಾರುಗಳ ಮಾರಾಟ ಮಾಡುವ ವಿಶ್ವಾಸ ವ್ಯಕ್ತಪಡಿಸಿದೆ.
ಹೊಸ ದರಪಟ್ಟಿಯಲ್ಲಿ ಟಾಟಾ ಮೋಟಾರ್ಸ್ ಕಂಪನಿಯು ನೆಕ್ಸಾನ್ ಇವಿ ಬೆಲೆಯಲ್ಲಿ ರೂ. 25 ಸಾವಿರದಿಂದ ರೂ. 1.20 ಲಕ್ಷದ ತನಕ ಬೆಲೆ ಇಳಿಕೆ ಮಾಡಿದ್ದು, ಬೆಲೆ ಇಳಿಕೆ ನಂತರ ಇದು ಎಕ್ಸ್ ಶೋರೂಂ ಪ್ರಕಾರ ರೂ. 14.49 ಲಕ್ಷದಿಂದ ರೂ.19.29 ಲಕ್ಷ ಬೆಲೆ ಹೊಂದಿದೆ. ಹೊಸ ನೆಕ್ಸಾನ್ ಇವಿ ಮಾದರಿಯು ಮಿಡ್ ರೇಂಜ್ ಮತ್ತು ಲಾಂಗ್ ರೇಂಜ್ ವೆರಿಯೆಂಟ್ ಗಳನ್ನು ಹೊಂದಿದ್ದು, ಇದರಲ್ಲಿ ಮಿಡ್ ರೇಂಜ್ ವೆರಿಯೆಂಟ್ ಗಳು ರೂ. 14.49 ಲಕ್ಷದಿಂದ ರೂ. 17.49 ಲಕ್ಷ ಬೆಲೆ ಹೊಂದಿದ್ದರೆ ಲಾಂಗ್ ರೇಂಜ್ ವೆರಿಯೆಂಟ್ ಗಳು ರೂ. 16.99 ಲಕ್ಷದಿಂದ ರೂ. 19.29 ಲಕ್ಷ ಬೆಲೆ ಹೊಂದಿದೆ.
ಇದನ್ನೂ ಓದಿ: ಮೊದಲ ಬಾರಿ ಹೊಸ ಕಾರು ಖರೀದಿಸುತ್ತಿದ್ದೀರಾ? ಈ ವಿಚಾರಗಳು ತಪ್ಪದೇ ತಿಳಿದಿರಲಿ..
ನೆಕ್ಸಾನ್ ಇವಿ ಕಾರಿನ ಲಾಂಗ್ ರೇಂಜ್ ವೆರಿಯೆಂಟ್ ಗಳು 40.5 ಕೆವಿಹೆಚ್ ಬ್ಯಾಟರಿ ಪ್ಯಾಕ್ ಅನ್ನು ಹೊಂದಿದ್ದು, ಮಿಡ್ ರೇಂಜ್ ವೆರಿಯೆಂಟ್ ಗಳು 30 ಕೆವಿಹೆಚ್ ಬ್ಯಾಟರಿ ಪ್ಯಾಕ್ ಜೋಡಣೆ ಹೊಂದಿರಲಿವೆ. ಇದರಲ್ಲಿ ಲಾಂಗ್ ರೇಂಜ್ ವೆರಿಯೆಂಟ್ ಗಳು ಪ್ರತಿ ಚಾರ್ಜ್ ಗೆ ಗರಿಷ್ಠ 465 ಕಿ.ಮೀ ಮೈಲೇಜ್ ನೀಡಲಿದ್ದು, ಇದು 142 ಹಾರ್ಸ್ ಪವರ್ ಮತ್ತು 215 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಹಾಗೆಯೇ ಮಿಡ್ ರೇಂಜ್ ವೆರಿಯೆಂಟ್ ಗಳು ಪ್ರತಿ ಚಾರ್ಜ್ ಗೆ 325 ಕಿ.ಮೀ ಮೈಲೇಜ್ ನೀಡಲಿದ್ದು, ಇವು 127 ಹಾರ್ಸ್ ಪವರ್ ಮತ್ತು 215 ಎನ್ಎಂ ಟಾರ್ಕ್ ಉತ್ಪಾದನೆ ಮಾಡುತ್ತವೆ. ಈ ಮೂಲಕ ಹೊಸ ಇವಿ ಕಾರು ಈ ಹಿಂದಿನ ಮಾದರಿಗಿಂತಲೂ ಹೆಚ್ಚುವರಿಯಾಗಿ 12 ಕಿ.ಮೀ ಮೈಲೇಜ್ ನೀಡುವುದರ ಜೊತೆಗೆ ಪರ್ಫಾಮೆನ್ಸ್ ನಲ್ಲೂ ಕೂಡಾ ಸಾಕಷ್ಟು ಸುಧಾರಿಸಿದೆ.
ಹಾಗೆಯೇ ಹೊಸ ನೆಕ್ಸಾನ್ ಇವಿ ಕಾರಿನಲ್ಲಿ V2V ಮತ್ತು V2L ತಂತ್ರಜ್ಞಾನ ಬಳಕೆ ಮಾಡಲಾಗಿದ್ದು, ಹೊಸ ತಂತ್ರಜ್ಞಾನದೊಂದಿಗೆ ಇತರೆ ಇವಿ ಕಾರುಗಳ ಚಾರ್ಜರ್ ಸೌಲಭ್ಯದಿಂದಲೂ ಚಾರ್ಜ್ ಮಾಡಬಹುದಾಗಿದೆ. ಇದು ತುರ್ತು ಸಂದರ್ಭದಲ್ಲಿ ಚಾರ್ಜರ್ ಸಮಸ್ಯೆ ಬಗೆಹರಿಸಲು ಸಾಧ್ಯವಾಗಲಿದ್ದು, ಇಕೋ, ಸಿಟಿ ಮತ್ತು ಸ್ಪೋರ್ಟ್ ಡ್ರೈವಿಂಗ್ ಮೋಡ್ ಗಳು ಚಾಲನಾ ಆದ್ಯತೆಗೆ ಸಹಕಾರಿಯಾಗಿವೆ.
ಇನ್ನು ಹೊಸ ದರ ಪಟ್ಟಿಯಲ್ಲಿ ಟಾಟಾ ಮೋಟಾರ್ಸ್ ಕಂಪನಿಯು ಟಿಯಾಗೋ ಕಾರಿನ ಬೆಲೆಯಲ್ಲಿ ರೂ. 20 ಸಾವಿರದಿಂದ ರೂ. 70 ಸಾವಿರ ತನಕ ಬೆಲೆ ಇಳಿಕೆ ಮಾಡಿದೆ. ದರ ಇಳಿಕೆ ನಂತರ ಹೊಸ ಟಿಯಾಗೋ ಕಾರು ಇದೀಗ ಎಕ್ಸ್ ಶೋರೂಂ ಪ್ರಕಾರ ರೂ. 7.99 ಲಕ್ಷದಿಂದ ರೂ. 11.89 ಲಕ್ಷ ಬೆಲೆ ಪಡೆದುಕೊಂಡಿದ್ದು, ಬೆಸಿಕ್ ವೆರಿಯೆಂಟ್ ಬೆಲೆಯಲ್ಲಿ ಗರಿಷ್ಠ ರೂ. 70 ಸಾವಿರ ಇಳಿಕೆ ಮಾಡಲಾಗಿದೆ.
ಇದನ್ನೂ ಓದಿ: ಚಲಿಸುತ್ತಿರುವಾಗಲೇ ಹೊತ್ತಿ ಉರಿದ ವೊಲ್ವೊ ಐಷಾರಾಮಿ ಎಲೆಕ್ಟ್ರಿಕ್ ಕಾರು
ಟಿಯಾಗೋ ಇವಿ ಮಾದರಿಯು ಸದ ನೆಕ್ಸಾನ್ ಇವಿಯಂತೆ ಮಿಡ್ ರೇಂಜ್ ಮತ್ತು ಲಾಂಗ್ ರೇಂಜ್ ವೆರಿಯೆಂಟ್ ಗಳನ್ನು ಹೊಂದಿದ್ದು, ಇದರಲ್ಲಿ ಮಿಡ್ ರೇಂಜ್ ವೆರಿಯೆಂಟ್ ಗಳು 19.2 ಕೆವಿಹೆಚ್ ಬ್ಯಾಟರಿ ಪ್ಯಾಕ್ ಹೊಂದಿದ್ದರೆ ಲಾಂಗ್ ರೇಂಜ್ ವೆರಿಯೆಂಟ್ ಗಳು 24 ಕೆವಿಹೆಚ್ ಬ್ಯಾಟರಿ ಪ್ಯಾಕ್ ಜೋಡಣೆ ಹೊಂದಿದೆ.
19.2 ಕೆವಿಹೆಚ್ ಬ್ಯಾಟರಿ ಪ್ಯಾಕ್ ಹೊಂದಿರುವ ಮಿಡ್ ರೇಂಜ್ ವೆರಿಯೆಂಟ್ ಗಳು ಪ್ರತಿ ಚಾರ್ಜ್ ಗಳು 250 ಕಿ.ಮೀ ಮೈಲೇಜ್ ನೀಡಿದರೆ 24 ಕೆವಿಹೆಚ್ ಬ್ಯಾಟರಿ ಪ್ಯಾಕ್ ಹೊಂದಿರುವ ಲಾಂಗ್ ರೇಂಜ್ ವೆರಿಯೆಂಟ್ ಗಳು ಪ್ರತಿ ಚಾರ್ಜ್ ಗೆ 315 ಕಿ.ಮೀ ಮೈಲೇಜ್ ನೀಡುತ್ತದೆ. ಇದರೊಂದಿಗೆ ಹೊಸ ಇವಿ ಕಾರು ಹಲವಾರು ಹೊಸ ಫೀಚರ್ಸ್ ಹೊಂದಿದ್ದು, ಸಣ್ಣ ಕಾರು ಖರೀದಿದಾರರನ್ನು ಸೆಳೆಯುತ್ತಿದೆ.