Tata Punch EV: ಬಜೆಟ್ ಬೆಲೆಯಲ್ಲಿ ರಸ್ತೆಗಿಳಿಯಲು ಸಜ್ಜಾದ ಬಹುನೀರಿಕ್ಷಿತ ಟಾಟಾ ಪಂಚ್ ಇವಿ!

ಟಾಟಾ ಮೋಟಾರ್ಸ್ ಕಂಪನಿಯು ತನ್ನ ಬಹುನೀರಿಕ್ಷಿತ ಪಂಚ್ ಎಲೆಕ್ಟ್ರಿಕ್ ಕಾರು ಮಾದರಿಯನ್ನು ಬಿಡುಗಡೆಗೊಳಿಸಲು ಸಿದ್ದಗೊಳ್ಳುತ್ತಿದ್ದು, ಹೊಸ ಇವಿ ಕಾರು 2023ರ ದೆಹಲಿ ಆಟೋ ಎಕ್ಸ್ ಪೋದಲ್ಲಿ ಉತ್ಪಾದನಾ ಆವೃತ್ತಿಯೊಂದಿಗೆ ಅನಾವರಣಗೊಳ್ಳಲಿದೆ.

Tata Punch EV: ಬಜೆಟ್ ಬೆಲೆಯಲ್ಲಿ ರಸ್ತೆಗಿಳಿಯಲು ಸಜ್ಜಾದ ಬಹುನೀರಿಕ್ಷಿತ ಟಾಟಾ ಪಂಚ್ ಇವಿ!
ಎಲೆಕ್ಟ್ರಿಕ್ ಮಾದರಿಯಲ್ಲಿ ಬಿಡುಗಡೆಯಾಗಲಿದೆ ಟಾಟಾ ಪಂಚ್
Praveen Sannamani

Updated on: Jan 09, 2023 | 7:58 PM

ದೇಶಿಯ ಮಾರುಕಟ್ಟೆಯಲ್ಲಿನ ಎಲೆಕ್ಟ್ರಿಕ್ ಕಾರು(Electric Cars) ಮಾರಾಟದಲ್ಲಿ ಸದ್ಯ ಅಗ್ರಸ್ಥಾನ ಕಾಯ್ದುಕೊಂಡಿರುವ ಟಾಟಾ ಮೋಟಾರ್ಸ್(Tata Motors) ಕಂಪನಿಯು ಶೀಘ್ರದಲ್ಲಿಯೇ ಮತ್ತಷ್ಟು ಇವಿ ಕಾರು ಮಾದರಿಗಳನ್ನು ಬಿಡುಗಡೆ ಮಾಡುವ ಯೋಜನೆಯಲ್ಲಿದ್ದು, ಹೊಸ ಇವಿ ಕಾರುಗಳ ಪಟ್ಟಿಯಲ್ಲಿ ಪಂಚ್ ಎಲೆಕ್ಟ್ರಿಕ್(Punch Electric) ಆವೃತ್ತಿಯು ಕೂಡಾ ಭಾರೀ ನೀರಿಕ್ಷೆ ಹುಟ್ಟುಹಾಕಿದೆ.

ಪ್ರಸ್ತುತ ಮಾರುಕಟ್ಟೆಯಲ್ಲಿ ನೆಕ್ಸಾನ್ ಇವಿ, ಟಿಗೋರ್ ಇವಿ, ಟಿಯಾಗೋ ಇವಿ ಮತ್ತು ಎಕ್ಸ್ ಪ್ರೆಸ್ಸ್-ಟಿ ಎಲೆಕ್ಟ್ರಿಕ್ ಕಾರುಗಳನ್ನು ಮಾರಾಟ ಮಾಡುತ್ತಿರುವ ಟಾಟಾ ಮೋಟಾರ್ಸ್ ಕಂಪನಿಯು ಇದೀಗ ಪಂಚ್ ಇವಿ ಬಿಡುಗಡೆಗೆ ಸಿದ್ದವಾಗಿದ್ದು, ಹೊಸ ಇವಿ ಕಾರು ಇದೇ ತಿಂಗಳು 12ರಿಂದ ಆರಂಭವಾಗಲಿರುವ ದೆಹಲಿ ಆಟೋ ಎಕ್ಸ್ ಪೋದಲ್ಲಿ ಅನಾವರಣಗೊಂಡ ನಂತರವಷ್ಟೇ ಮಾರುಕಟ್ಟೆಗೆ ಲಗ್ಗೆಯಿಡಲಿದೆ.

ಹೆಚ್ಚುತ್ತಿರುವ ಇಂಧನಗಳ ಬೆಲೆ ಪರಿಣಾಮ ಹೊಸ ಕಾರು ಖರೀದಿದಾರರು ಪರಿಸರ ಸ್ನೇಹಿಯಾಗಿರುವ ಮತ್ತು ಕಡಿಮೆ ನಿರ್ವಹಣಾ ವೆಚ್ಚ ಹೊಂದಿರುವ ಎಲೆಕ್ಟ್ರಿಕ್ ಕಾರುಗಳತ್ತ ಗಮನಸರಿಸುತ್ತಿದ್ದಾರೆ. ಹೀಗಾಗಿ ಗ್ರಾಹಕರ ಬೇಡಿಕೆಯೆಂತೆ ವಿವಿಧ ಇವಿ ಕಾರು ಮಾದರಿಗಳ ಮೂಲಕ ಟಾಟಾ ಮೋಟಾರ್ಸ್ ಕಂಪನಿಯು ಮುಂಚೂಣಿ ಸಾಧಿಸುತ್ತಿದ್ದು, ಪಂಚ್ ಇವಿ ಕಾರನ್ನ ಕೂಡಾ ಉತ್ತಮ ಬೆಲೆಯೊಂದಿಗೆ ಬಿಡುಗಡೆ ಮಾಡುವ ಸುಳಿವು ನೀಡಿದೆ.

ಇದನ್ನೂ ಓದಿ: ಭರ್ಜರಿ ಮೈಲೇಜ್ ಪ್ರೇರಿತ ಗ್ರ್ಯಾಂಡ್ ವಿಟಾರಾ ಸಿಎನ್​ಜಿ ಬಿಡುಗಡೆ

ನೀರಿಕ್ಷಿತ ಬ್ಯಾಟರಿ ಪ್ಯಾಕ್ ಮತ್ತು ಮೈಲೇಜ್

ಹೊಸ ಪಂಚ್ ಇವಿ ಕಾರಿನಲ್ಲಿ ಟಾಟಾ ಮೋಟಾರ್ಸ್ ಕಂಪನಿಯು ಇತ್ತೀಚೆಗೆ ಬಿಡುಗಡೆಯಾದ ಟಿಯಾಗೋ ಇವಿ ಕಾರಿನಲ್ಲಿರುವಂತೆ ಜಿಪ್ ಟ್ರಾನ್ ತಂತ್ರಜ್ಞಾನ ಪ್ರೇರಿತ ಎರಡು ಮಾದರಿಯ ಬ್ಯಾಟರಿ ಆಯ್ಕೆಗಳನ್ನು ಪಡೆದುಕೊಳ್ಳಬಹುದಾಗಿದೆ. ಹೊಸ ಕಾರಿನ ಆರಂಭಿಕ ವೆರಿಯೆಂಟ್ ನಲ್ಲಿ 19.2kWh ಬ್ಯಾಟರಿ ಪ್ಯಾಕ್ ಜೋಡಣೆ ಮಾಡಿದ್ದಲ್ಲಿ ಟಾಪ್ ಎಂಡ್ ವೆರಿಯೆಂಟ್ ನಲ್ಲಿ 24kWh ಬ್ಯಾಟರಿ ಪ್ಯಾಕ್ ಜೋಡಣೆ ಹೊಂದಬಹುದಾಗಿದೆ. ಈ ಮೂಲಕ ಇದು ಪ್ರತಿ ಚಾರ್ಜ್ ಗೆ 250 ಕಿ.ಮೀ ನಿಂದ 320 ಕಿ.ಮೀ ಮೈಲೇಜ್ ನೀಡಬಹುದಾಗಿದೆ.

ನೀರಿಕ್ಷಿತ ಬೆಲೆ

ಸದ್ಯ ಮಾರುಕಟ್ಟೆಯಲ್ಲಿ ಪಂಚ್ ಕಾರು ಮಾದರಿಯು ಪೆಟ್ರೋಲ್ ವೆರಿಯೆಂಟ್ ನಲ್ಲಿ ಮಾತ್ರ ಖರೀದಿಗೆ ಲಭ್ಯವಿದ್ದು, ಇದು ಎಕ್ಸ್ ಶೋರೂಂ ಪ್ರಕಾರ ರೂ. 5.99 ಲಕ್ಷದಿಂದ ರೂ. 9.54 ಲಕ್ಷ ಬೆಲೆ ಹೊಂದಿದೆ. ಹೀಗಾಗಿ ಹೊಸದಾಗಿ ಬಿಡುಗಡೆಯಾಗಲಿರುವ ಎಲೆಕ್ಟ್ರಿಕ್ ಆವೃತ್ತಿಯು ಆರಂಭಿಕವಾಗಿ ಬ್ಯಾಟರಿ ಪ್ಯಾಕ್ ಆಯ್ಕೆಗೆ ಅನುಗುಣವಾಗಿ ರೂ. 9 ಲಕ್ಷದಿಂದ ರೂ. 14 ಲಕ್ಷ ಬೆಲೆ ಅಂತರದಲ್ಲಿ ಮಾರಾಟಗೊಳ್ಳಬಹುದಾಗಿದೆ.

ಇದನ್ನೂ ಓದಿ: ಎಡಿಎಎಸ್ ಸೌಲಭ್ಯ ಪಡೆದುಕೊಳ್ಳಲಿವೆ ಈ ಟಾಪ್ 5 ಮಧ್ಯಮ ಕ್ರಮಾಂಕದ ಕಾರುಗಳು!

ಜೊತೆಗೆ ಹೊಸ ಕಾರು ಎಂಟ್ರಿ ಲೆವಲ್ ಇವಿ ಕಾರುಗಳಲ್ಲಿಯೇ ಅತಿ ಹೆಚ್ಚು ಪ್ರೀಮಿಯಂ ಸೌಲಭ್ಯಗಳನ್ನು ಪಡೆದುಕೊಳ್ಳಬಹುದಾಗಿದ್ದು, ಹೊಸ ಕಾರಿನಲ್ಲಿ IP67 ಮಾನದಂಡಗಳನ್ನು ಪೂರೈಸಿರುವ ಎಲೆಕ್ಟ್ರಿಕ್ ಬ್ಯಾಟರಿ ಮತ್ತು ಮೋಟಾರ್ ಜೋಡಿಸಲಾಗಿದೆ. ಇದು ಧೂಳು ಮತ್ತು ತುಕ್ಕು ನಿರೋಧಕ ವೈಶಿಷ್ಟ್ಯತೆ ಹೊಂದಿರಲಿದ್ದು, ಇದರೊಂದಿಗೆ ಹೊಸ ಕಾರಿನ ಬ್ಯಾಟರಿ ಮತ್ತು ಮೋಟಾರ್ ಮೇಲೆ ಕಂಪನಿಯು ಗರಿಷ್ಠ 8 ವರ್ಷಗಳ ವಾರಂಟಿ ನೀಡಲಿದೆ. ಆದರೆ ಸದ್ಯ ಲಭ್ಯವಿರುವ ಸಾರ್ವಜನಿಕ ಬಳಕೆಯ ಚಾರ್ಜಿಂಗ್ ಮೂಲಭೂತ ಸೌಕರ್ಯದ ಕೊರತೆಯಿಂದಾಗಿ ಇದು ದೂರದ ಪ್ರಯಾಣಕ್ಕೆ ಅಷ್ಟೊಂದು ಅನುಕೂಲಕರವಾಗುವುದಿಲ್ಲವಾದರೂ ನಗರಪ್ರದೇಶದಲ್ಲಿನ ಸಂಚಾರಕ್ಕೆ ಅತ್ಯುತ್ತಮ ಆಯ್ಕೆಯಾಗಿದೆ ಎನ್ನಬಹುದು.

Published On - 7:58 pm, Mon, 9 January 23

Praveen Sannamani

Praveen Sannamani is a enthusiast and passionate Journalist in Kannada Language. Automobile and Current affairs are the interested areas

Loading...
Unable to load recommendations.
Follow Us