VinFast: ಭಾರೀ ಪ್ರಮಾಣದ ಹೂಡಿಕೆಯೊಂದಿಗೆ ಭಾರತಕ್ಕೆ ಅಧಿಕೃತ ಎಂಟ್ರಿ ಕೊಟ್ಟ ವಿನ್‌ಫಾಸ್ಟ್

|

Updated on: Feb 24, 2024 | 3:04 PM

ಎಲೆಕ್ಟ್ರಿಕ್ ಕಾರುಗಳ ಉತ್ಪಾದನೆಯಲ್ಲಿ ಮುಂಚೂಣಿ ಸಾಧಿಸುತ್ತಿರುವ ವಿನ್‌ಫಾಸ್ಟ್ ಕಂಪನಿ ಭಾರತದಲ್ಲಿ ಅಧಿಕೃತವಾಗಿ ಇವಿ ಕಾರು ಉತ್ಪಾದನೆ ಆರಂಭಿಸುವುದಾಗಿ ಘೋಷಣೆ ಮಾಡಿದೆ.

VinFast: ಭಾರೀ ಪ್ರಮಾಣದ ಹೂಡಿಕೆಯೊಂದಿಗೆ ಭಾರತಕ್ಕೆ ಅಧಿಕೃತ ಎಂಟ್ರಿ ಕೊಟ್ಟ ವಿನ್‌ಫಾಸ್ಟ್
ಭಾರತಕ್ಕೆ ಅಧಿಕೃತ ಎಂಟ್ರಿ ಕೊಟ್ಟ ವಿನ್‌ಫಾಸ್ಟ್
Follow us on

ಭಾರತದಲ್ಲಿ ಎಲೆಕ್ಟ್ರಿಕ್ ಕಾರುಗಳ(Electric Cars) ಅಬ್ಬರ ಹೆಚ್ಚುತ್ತಿದ್ದು, ಹೆಚ್ಚುತ್ತಿರುವ ಬೇಡಿಕೆ ಪರಿಣಾಮ ಪ್ರಮುಖ ಕಾರು ಉತ್ಪಾದನಾ ಕಂಪನಿಗಳು ಜಾಗತಿಕ ಕಾರು ಮಾರುಕಟ್ಟೆಯ ಮೇಲೆ ಅಧಿಪತ್ಯ ಸಾಧಿಸಲು ಮುಂದಾಗುತ್ತಿವೆ. ಜೊತೆಗೆ ಇವಿ ಕಾರುಗಳ ಮಾರಾಟದಲ್ಲಿ ಮುಂಚೂಣಿ ಸಾಧಿಸುತ್ತಿರುವ ಭಾರತದಲ್ಲೂ ಎಲೆಕ್ಟ್ರಿಕ್ ವಾಹನ ಉತ್ಪಾದನಾ ಪ್ರಕ್ರಿಯೆ ಜೋರಾಗುತ್ತಿದ್ದು, ಈ ನಿಟ್ಟಿನಲ್ಲಿ ವಿಯೆಟ್ನಾಂ ಮೂಲದ ವಿನ್‌ಫಾಸ್ಟ್ ಕಂಪನಿಯು ಸಹ ಭಾರತದಲ್ಲಿ ಇವಿ ಕಾರುಗಳ ಬಿಡುಗಡೆ ಬೃಹತ್ ಯೋಜನೆ ರೂಪಿಸಿದೆ.

ವಿಯೆಟ್ನಾಂನಲ್ಲಿ ಈಗಾಗಲೇ ವಿವಿಧ ಎಲೆಕ್ಟ್ರಿಕ್ ಕಾರುಗಳು ಮತ್ತು ದ್ವಿಚಕ್ರವಾಹನಗಳ ಉತ್ಪಾದನೆಯೊಂದಿಗೆ ಉತ್ತಮ ಬೇಡಿಕೆ ಪಡೆದುಕೊಂಡಿರುವ ವಿನ್‌ಫಾಸ್ಟ್ ಕಂಪನಿಯು ಇದೀಗ ಜಾಗತಿಕ ಮಾರುಕಟ್ಟೆ ವಿಸ್ತರಣೆ ಯೋಜನೆಯ ಭಾಗವಾಗಿ ಭಾರತಕ್ಕೂ ಪ್ರವೇಶಿಸಿದೆ. ಭಾರತದಲ್ಲಿ ಸದ್ಯಕ್ಕೆ ಎಲೆಕ್ಟ್ರಿಕ್ ಕಾರುಗಳನ್ನು ಉತ್ಪಾದನೆ ಮಾಡುವ ಯೋಜನೆ ರೂಪಿಸಿದ್ದು, ಹೊಸ ಉತ್ಪಾದನಾ ಘಟಕ ಆರಂಭಕ್ಕಾಗಿ ತಮಿಳುನಾಡು ಸರ್ಕಾರದೊಂದಿಗೆ ಒಪ್ಪಂದ ಮಾಡಿಕೊಂಡಿದೆ.

ವಿನ್‌ಫಾಸ್ಟ್ ಕಂಪನಿಯ ಅಧಿಕೃತ ಹೇಳಿಕೆಯ ಪ್ರಕಾರ, ಇದೇ ತಿಂಗಳು ಫೆಬ್ರವರಿ 25ರಂದು ತಮಿಳುನಾಡಿನ ತೂತುಕುಡಿಯಲ್ಲಿ ತನ್ನ ಹೊಸ ಎಲೆಕ್ಟ್ರಿಕ್ ವಾಹನ ಉತ್ಪಾದನಾ ಘಟಕದ ನಿರ್ಮಾಣ ಕಾರ್ಯವನ್ನು ಆರಂಭಿಸುತ್ತಿದೆ. ಮೊದಲ ಹಂತದ ಘಟಕದ ಮೂಲಕ ವಾರ್ಷಿಕವಾಗಿ 1.50 ಲಕ್ಷ ಯುನಿಟ್ ಎಲೆಕ್ಟ್ರಿಕ್ ಕಾರುಗಳನ್ನು ಉತ್ಪಾದಿಸುವ ಗುರಿಹೊಂದಿದೆ.

ಇದನ್ನೂ ಓದಿ: ಈ ತಿಂಗಳು ಬಿಡುಗಡೆಯಾಗಲಿರುವ ಟಾಪ್ 5 ಹೊಸ ಕಾರುಗಳಿವು!

ಹೊಸ ಯೋಜನೆಗಾಗಿ ವಿನ್‌ಫಾಸ್ಟ್ ಕಂಪನಿ ಆರಂಭಿಕವಾಗಿ ರೂ. 425 ಕೋಟಿ ಬಂಡವಾಳ ಹೂಡಿಕೆ ಮಾಡುತ್ತಿದೆ. ಹೊಸ ಇವಿ ಕಾರು ಉತ್ಪಾದನಾ ಘಟಕದೊಂದಿಗೆ ಇದು ಸರಿಸುಮಾರು 3 ಸಾವಿರದಿಂದ 3,500 ಸ್ಥಳೀಯ ಉದ್ಯೋಗಾವಕಾಶಗಳು ಸೃಷ್ಟಿಸಲಿದೆ. ಇದರೊಂದಿಗೆ ಸಾರಿಗೆ ವಲಯದಲ್ಲಿ ಇಂಗಾಲದ ಹೊರಸೂಸುವಿಕೆಯನ್ನು ಕಡಿಮೆ ಮಾಡುವ ಗುರಿಯನ್ನು ಹೊಂದಿದ್ದು, ಹೊಸ ಯೋಜನೆಯಲ್ಲಿ ಭಾರತದಿಂದಲೇ ಇವಿ ವಾಹನಗಳನ್ನು ರಫ್ತು ಮಾಡಲಿದೆ. ರಫ್ತು ಯೋಜನೆ ಅಡಿ ಭಾರತದಿಂದ ದಕ್ಷಿಣ ಏಷ್ಯಾ, ಮಧ್ಯಪ್ರಾಚ್ಯ ಮತ್ತು ಆಫ್ರಿಕನ್ ದೇಶಗಳ ಬೇಡಿಕೆ ಪೂರೈಸುವ ಯೋಜನೆ ರೂಪಿಸಿದೆ.

2017ರಲ್ಲಿ ಮೊದಲ ಬಾರಿಗೆ ಎಲೆಕ್ಟ್ರಿಕ್ ಕಾರು ಉತ್ಪಾದನಾ ವಿಭಾಗಕ್ಕೆ ಕಾಲಿಟ್ಟಿದ್ದ ವಿನ್‌ಫಾಸ್ಟ್ ಕಂಪನಿಯು ಬಿಎಂಡಬ್ಲ್ಯು ಕಂಪನಿಯೊಂದಿಗೆ ಜಂಟಿ ಕಾರ್ಯಾಚರಣೆ ನಡೆಸುತ್ತಿದೆ. ಬಿಎಂಡಬ್ಲ್ಯು ನಿರ್ಮಾಣದ ಬೇಸ್‌ ಕಾರ್ ಮಾಡೆಲ್ ಗಳು ಮತ್ತು ಎಲೆಕ್ಟ್ರಿಕ್‌ ಸ್ಕೂಟರ್‌ಗಳ ರೀಬ್ಯಾಡ್ಜ್ ಮಾದರಿಗಳನ್ನು ಮಾರಾಟ ಮಾಡುತ್ತಿದೆ. ಇದರ ಜೊತೆಗೆ ಸ್ವತಂತ್ರವಾಗಿ ಎಲೆಕ್ಟ್ರಿಕ್‌ ಕಾರುಗಳ ಉತ್ಪಾದನೆ ಸಹ ಆರಂಭಿಸಿದ್ದು, ಹೊಸ ಇವಿ ಉತ್ಪನ್ನಗಳೊಂದಿಗೆ ಜಾಗತಿಕ ಮಾರುಕಟ್ಟೆಗೂ ಲಗ್ಗೆಯಿಡುತ್ತಿದೆ.

ಇದನ್ನೂ ಓದಿ: ಮೊದಲ ಬಾರಿ ಹೊಸ ಕಾರು ಖರೀದಿಸುತ್ತಿದ್ದೀರಾ? ಈ ವಿಚಾರಗಳು ತಪ್ಪದೇ ತಿಳಿದಿರಲಿ..

ಇನ್ನು ವಿಎಫ್‌7, ವಿಎಫ್8 ಮತ್ತು ವಿಎಫ್ಇ34 ಕಾರುಗಳ ಮೂಲಕ ಹೆಚ್ಚಿನ ಜನಪ್ರಿಯತೆ ಹೊಂದಿರುವ ವಿನ್‌ಫಾಸ್ಟ್‌ ಕಂಪನಿ ಭಾರತದಲ್ಲೂ ವಿವಿಧ ಕಾರುಗಳನ್ನು ಬಿಡುಗಡೆ ಮಾಡಲಿದೆ. ಹೊಸ ಇವಿ ಕಾರುಗಳು ಮಧ್ಯಮ ಕ್ರಮಾಂಕದ ಎಸ್ ಯವಿ ಮಾದರಿಗಳಾಗಿ ಮಾರುಕಟ್ಟೆಗೆ ಲಗ್ಗೆಯಿಡಲಿವೆ. ಇವು ಸ್ಥಳೀಯವಾಗಿಯೇ ಉತ್ಪಾದನೆಗೊಳ್ಳುವುದರಿಂದ ಬೆಲೆಯಲ್ಲೂ ಗಮನಸೆಳೆಯಲಿದ್ದು, ಮುಂದಿನ ಒಂದು ವರ್ಷದೊಳಗೆ ಹೊಸ ಕಾರುಗಳನ್ನು ಮಾರುಕಟ್ಟೆ ಪ್ರವೇಶಿಸುವ ನೀರಿಕ್ಷೆಗಳಿವೆ.

Published On - 3:01 pm, Sat, 24 February 24