Upcoming Cars: ಈ ತಿಂಗಳು ಬಿಡುಗಡೆಯಾಗಲಿರುವ ಟಾಪ್ 5 ಹೊಸ ಕಾರುಗಳಿವು!
ಭಾರತದಲ್ಲಿ ಹೊಸ ತಲೆಮಾರಿನ ಕಾರುಗಳ ಅಬ್ಬರ ಹೆಚ್ಚುತ್ತಿದ್ದು, ಈ ತಿಂಗಳಾಂತ್ಯಕ್ಕೆ ಮತ್ತಷ್ಟು ಕಾರು ಮಾದರಿಗಳು ಮಾರುಕಟ್ಟೆಗೆ ಲಗ್ಗೆಯಿಡಲು ಸಜ್ಜಾಗುತ್ತಿವೆ. ಬಿಡುಗಡೆಯಾಗಲಿರುವ ಹೊಸ ಕಾರುಗಳಲ್ಲಿ ಸಾಮಾನ್ಯ ಕಾರುಗಳ ಜೊತೆಗೆ ಸಿಎನ್ ಜಿ ಮತ್ತು ಎಲೆಕ್ಟ್ರಿಕ್ ಕಾರುಗಳು ಸಹ ಬಿಡುಗಡೆಯಾಗುತ್ತಿವೆ.
ದೇಶಿಯ ಮಾರುಕಟ್ಟೆಯಲ್ಲಿ ಹೊಸ ಕಾರುಗಳ (New Cars) ಮಾರಾಟ ಪ್ರಮಾಣ ತಿಂಗಳಿನಿಂದ ತಿಂಗಳಿಗೆ ಹೆಚ್ಚಳವಾಗುತ್ತಲೇ ಇದೆ. ಇದೇ ಕಾರಣಕ್ಕೆ ವಿವಿಧ ಕಾರು ಕಂಪನಿಗಳು ಶೀಘ್ರದಲ್ಲಿಯೇ ಮತ್ತಷ್ಟು ಹೊಸ ಮಾದರಿಯ ಕಾರುಗಳನ್ನು ಬಿಡುಗಡೆ ಮಾಡುವ ಯೋಜನೆ ರೂಪಿಸಿವೆ. ಬಿಡುಗಡೆಯಾಗಲಿರುವ ಹೊಸ ಕಾರುಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಮಾದರಿಗಳಲ್ಲದೆ ಸಿಎನ್ ಜಿ ಮತ್ತು ಎಲೆಕ್ಟ್ರಿಕ್ ಕಾರುಗಳು ಸಹ ಬಿಡುಗಡೆಯ ಸಿದ್ದತೆಯಲ್ಲಿವೆ. ಹಾಗಾದ್ರೆ ಬಿಡುಗಡೆಯಾಗಲಿರುವ ಹೊಸ ಕಾರುಗಳು ಯಾವುವು? ಅವುಗಳ ವಿಶೇಷತೆಗಳೇನು? ಈ ಎಲ್ಲಾ ಮಾಹಿತಿ ಇಲ್ಲಿದೆ.
ಮಾರುತಿ ಸುಜುಕಿ ಹೊಸ ಸ್ವಿಫ್ಟ್
ಈ ತಿಂಗಳು ಬಿಡುಗಡೆಯಾಗಲಿರುವ ಹೊಸ ಕಾರುಗಳಲ್ಲಿ ಮಾರುತಿ ಸುಜುಕಿ ಹೊಸ ತಲೆಮಾರಿನ ಸ್ವಿಫ್ಟ್ ಕಾರು ಪ್ರಮುಖವಾಗಿದೆ. ಹೊಸ ಸ್ವಿಫ್ಟ್ ಕಾರಿನಲ್ಲಿ ಜೆಡ್ ಸೀರಿಸ್ ನಲ್ಲಿರುವ 1.2 ಲೀಟರ್ ತ್ರಿ ಸಿಲಿಂಡರ್ ಪೆಟ್ರೋಲ್ ಎಂಜಿನ್ ಜೋಡಣೆ ಮಾಡಲಾಗಿದ್ದು, ಇದು ಪ್ಯೂರ್ ಪೆಟ್ರೋಲ್ ಮತ್ತು ಮೈಲ್ಡ್ ಹೈಬ್ರಿಡ್ ಪೆಟ್ರೋಲ್ ಎಂಜಿನ್ ಆಯ್ಕೆಗಳನ್ನು ಹೊಂದಿರಲಿದೆ. ಜೊತೆಗೆ ಹೊಸ ಸ್ವಿಫ್ಟ್ ಕಾರಿನ ವಿನ್ಯಾಸ ಮತ್ತು ವೈಶಿಷ್ಟ್ಯತೆಗಳಲ್ಲೂ ಭಾರೀ ಬದಲಾವಣೆಗಳನ್ನು ತರಲಾಗಿದ್ದು, ಪ್ರೀಮಿಯಂ ಫೀಚರ್ಸ್ ಗಳೊಂದಿಗೆ ತುಸು ದುಬಾರಿಯಾಗಿಲಿದೆ.
ಇದನ್ನೂ ಓದಿ: ಎಲೆಕ್ಟ್ರಿಕ್ ವಾಹನ ಹೆಚ್ಚಳಕ್ಕಾಗಿ ಕೇಂದ್ರದಿಂದ ಮಹತ್ವದ ಯೋಜನೆ
ಟಾಟಾ ನೆಕ್ಸಾನ್ ಸಿಎನ್ಜಿ
ಹೊಸ ಕಾರುಗಳಲ್ಲಿ ನೆಕ್ಸಾನ್ ಸಿಎನ್ಜಿ ಆವೃತ್ತಿ ಕೂಡಾ ಒಂದಾಗಿದೆ. ಹೊಸ ಕಾರು ಹಲವಾರು ಹೊಸ ವೈಶಿಷ್ಟ್ಯತೆಗಳೊಂದಿಗೆ ಮಾರುಕಟ್ಟೆ ಪ್ರವೇಶಿಸಲು ಸಜ್ಜಾಗಿದ್ದು, ಇದು 1.2 ಲೀಟರ್ ಪೆಟ್ರೋಲ್ ಎಂಜಿನ್ ಜೊತೆಗೆ ಐ ಸಿಎನ್ಜಿ ಕಿಟ್ ಪಡೆದುಕೊಳ್ಳಲಿದೆ. ಇದು ಪ್ರತಿ ಕೆಜಿ ಸಿಎನ್ ಜಿಗೆ ಗರಿಷ್ಠ 25 ಕಿ.ಮೀ ಮೈಲೇಜ್ ಹಿಂದಿರುಗಿಸುವ ಸಾಧ್ಯತೆಗಳಿದ್ದು, ಇದು ಇದೀಗ ಎಲ್ಲಾ ಮಾದರಿಯಲ್ಲೂ ಖರೀದಿಗೆ ಲಭ್ಯವಿರುವ ಏಕೈಕ ಕಾರು ಮಾದರಿಯಾಗಿರಲಿದೆ. ನೆಕ್ಸಾನ್ ಕಾರು ಪೆಟ್ರೋಲ್, ಡೀಸೆಲ್ ಮತ್ತು ಎಲೆಕ್ಟ್ರಿಕ್ ಆವೃತ್ತಿಯಲ್ಲಿ ಈಗಾಗಲೇ ಲಭ್ಯವಿದ್ದು, ಇದೀಗ ಸಿಎನ್ ಜಿ ಆಯ್ಕೆಯನ್ನು ಸಹ ಪಡೆದುಕೊಳ್ಳುತ್ತಿದೆ.
ಟಾಟಾ ಕರ್ವ್
ಈ ತಿಂಗಳು ಬಿಡುಗಡೆಯಾಗಲಿರುವ ಹೊಸ ಕಾರುಗಳಲ್ಲಿ ಟಾಟಾ ಮೋಟಾರ್ಸ್ ನಿರ್ಮಾಣದ ಕರ್ವ್ ಕೂಡಾ ಭಾರೀ ನೀರಿಕ್ಷೆ ಹುಟ್ಟುಹಾಕಿದೆ. ಕರ್ವ್ ಕಾರು ಮಾದರಿಯನ್ನು ಟಾಟಾ ಕಂಪನಿಯು ಡೀಸೆಲ್ ಆವೃತ್ತಿಯಲ್ಲಿ ಬಿಡುಗಡೆ ಮಾಡುತ್ತಿದ್ದು, ತದನಂತರ ಎಲೆಕ್ಟ್ರಿಕ್ ಆವೃತ್ತಿಯಲ್ಲಿ ಬಿಡುಗಡೆ ಮಾಡುವ ಸುಳಿವು ನೀಡಿದೆ. ಹೊಸ ಕಾರು ಕ್ರೆಟಾ ಕಾರಿಗೆ ಪೈಪೋಟಿಯಾಗಿ 1.5 ಲೀಟರ್ ಡೀಸೆಲ್ ಎಂಜಿನ್ ನಲ್ಲಿ ಬಿಡುಗಡೆಯಾಗಲಿದ್ದು, ಈ ವರ್ಷಾಂತ್ಯಕ್ಕೆ ಇವಿ ಆವೃತ್ತಿಯಲ್ಲಿ ಬಿಡುಗಡೆಯಾಗಬಹುದಾಗಿದೆ.
ಇದನ್ನೂ ಓದಿ: ಕಾಮೆಟ್ ಮತ್ತು ಜೆಡ್ಎಸ್ ಇವಿ ಬೆಲೆಯಲ್ಲಿ ಭಾರೀ ಇಳಿಕೆ ಮಾಡಿದ ಎಂಜಿ ಮೋಟಾರ್
ಕ್ರೆಟಾ ಎನ್-ಲೈನ್ ಮತ್ತು ಜಿಎಲ್ ಬಿ ಫೇಸ್ ಲಿಫ್ಟ್
ಇದರೊಂದಿಗೆ ಹ್ಯುಂಡೈ ಇಂಡಿಯಾ ಕಂಪನಿಯು ಕ್ರೆಟಾ ಕಾರು ಮಾದರಿಯಲ್ಲಿ ಎನ್ ಲೈನ್ ಆವೃತ್ತಿಯನ್ನು ಬಿಡುಗಡೆ ಮಾಡಬಹುದಾಗಿದೆ ಎನ್ನಲಾಗಿದ್ದು, ಇದು ಹೆಚ್ಚಿನ ಮಟ್ಟದ ಪ್ರೀಮಿಯಂ ಫೀಚರ್ಸ್ ಗಳನ್ನು ಹೊಂದಿರಲಿದೆ. ಹ್ಯುಂಡೈ ಕ್ರೆಟಾ ಎನ್ ಲೈನ್ ನಂತರ ಐಷಾರಾಮಿ ಕಾರು ವಿಭಾಗದಲ್ಲಿ ಮರ್ಸಿಡಿಸ್ ಜಿಎಲ್ ಬಿ ಫೇಸ್ ಲಿಫ್ಟ್ ಬಿಡುಗಡೆಯಾಗಬಹುದಾಗಿದೆ. ಇದು ಐಷಾರಾಮಿ ಎಸ್ ಯುವಿ ವಿಭಾಗದಲ್ಲಿ ಸದ್ಯ ಹೆಚ್ಚಿನ ಬೇಡಿಕೆಯಲ್ಲಿದ್ದು, ಇದೀಗ ಮತ್ತಷ್ಟು ಹೊಸ ಬದಲಾವಣೆಗಳೊಂದಿಗೆ ಬಿಡುಗಡೆಯಾಗುತ್ತಿದೆ.
Published On - 6:57 pm, Wed, 7 February 24