ವೊಲ್ವೊ ಹೊಸ ಎಕ್ಸ್‌ಸಿ40 ರೀಚಾರ್ಜ್(XC40 Recharge) ಎಲೆಕ್ಟ್ರಿಕ್ ಎಸ್ ಯುವಿಯು ಭಾರತದಲ್ಲಿ ಎಕ್ಸ್‌ಶೋರೂಂ ಪ್ರಕಾರ ರೂ. 55.90 ಲಕ್ಷ ಬೆಲೆ ಹೊಂದಿದ್ದು, ಹೊಸ ಯೋಜನೆಯ ಭಾಗವಾಗಿ ವೊಲ್ವೊ ಕಂಪನಿಯು ಹೊಸ ಕಾರನ್ನು ನಮ್ಮ ಬೆಂಗಳೂರಿನ ಹೊಸಕೋಟೆಯಲ್ಲಿರುವ ಕಾರು ಉತ್ಪಾದನಾ ಘಟಕದಲ್ಲಿ ಜೋಡಣಾ ಪ್ರಕ್ರಿಯೆಗೆ ಚಾಲನೆ ನೀಡಿದೆ. ಸಿಬಿಯು ಆಮದು ನೀತಿ ಅಡಿ ವಿದೇಶಿ ಮಾರುಕಟ್ಟೆಯಿಂದ ಪೂರ್ಣ ಪ್ರಮಾಣದಲ್ಲಿ ನಿರ್ಮಾಣಗೊಂಡ ಮಾದರಿಯನ್ನು ಆಮದು ಮಾಡಿಕೊಂಡರೆ ಬೆಲೆ ಹೆಚ್ಚಳವಾಗುವ ಕಾರಣಕ್ಕೆ ಕಂಪನಿಯು ಹೊಸ ಕಾರನ್ನು ಸಿಕೆಡಿ ಭಾಗವಾಗಿ ಭಾರತದಲ್ಲಿ ಮಾರಾಟ ಮಾಡಲಿದೆ.
ಸಿಕೆಡಿ ಆಮದು ನೀತಿಯಡಿಯಲ್ಲಿ ಕಾರಿನ ಬಿಡಿಭಾಗಗಳನ್ನು ಭಾರತಕ್ಕೆ ಆಮದು ಮಾಡಿಕೊಳ್ಳುವ ವೊಲ್ವೊ ಕಂಪನಿಯು ಸ್ಥಳೀಯ ಉತ್ಪಾದನಾ ಘಟಕದಲ್ಲಿ ಮರುಜೋಡಣೆ ಮಾಡಿ ಮಾರಾಟ ಮಾಡುತ್ತಿದೆ. ಸಿಕೆಡಿ ಆಮದು ನೀತಿ ಅಡಿ ಮಾರಾಟಗೊಳ್ಳುವ ಕಾರುಗಳು ಸಿಬಿಯು ಆಮದು ನೀತಿ ಮಾರಾಟಗೊಳ್ಳುವ ಕಾರು ಬೆಲೆಗಿಂತೂ ಸಾಕಷ್ಟು ಹೆಚ್ಚಳವಾಗಿರುತ್ತದೆ.
ಈ ಹಿನ್ನಲೆಯಲ್ಲಿ ವೊಲ್ವೊ ಕಂಪನಿಯು ತನ್ನ ಎಂಟ್ರಿ ಲೆವಲ್ ಇವಿ ಕಾರನ್ನು ಭಾರತದಲ್ಲಿಯೇ ಮರುಜೋಡಣೆ ಪ್ರಕ್ರಿಯೆಗೆ ಚಾಲನೆ ನೀಡಿದ್ದು, ಹೊಸ ಕಾರು ಸಾಂಪ್ರಾದಾಯಿಕ ಪೆಟ್ರೋಲ್ ಮಾದರಿಗಿಂತಲೂ ರೂ.11.40 ಲಕ್ಷದಷ್ಟು ದುಬಾರಿ ಬೆಲೆ ಹೊಂದಿದ್ದರೂ ಅತ್ಯುತ್ತಮ ಬ್ಯಾಟರಿ ಆಯ್ಕೆ ಮತ್ತು ಪ್ರೀಮಿಯಂ ಫೀಚರ್ಸ್ ಮೂಲಕ ಗ್ರಾಹಕರನ್ನು ಸೆಳೆಯುತ್ತಿದೆ.
ಬ್ಯಾಟರಿ ಮತ್ತು ಮೈಲೇಜ್
ಹೊಸ ಎಕ್ಸ್‌ಸಿ40 ರೀಚಾರ್ಜ್ ಮಾದರಿಯಲ್ಲಿ ವೊಲ್ವೊ ಕಂಪನಿಯು 78kWh ಬ್ಯಾಟರಿ ಪ್ಯಾಕ್ ಜೋಡಣೆ ಮಾಡಿದ್ದು, ಇದರಲ್ಲಿ ಡ್ಯುಯಲ್ ಎಲೆಕ್ಟ್ರಿಕ್ ಮೋಟಾರ್ ಹೊಂದಿರುವ ಹೊಸ ಕಾರು 402 ಬಿಎಚ್‌ಪಿ ಮತ್ತು 660 ಎನ್ಎಂ ಟಾರ್ಕ್ ಉತ್ಪಾದನೆಯೊಂದಿಗೆ ಪ್ರತಿ ಚಾರ್ಜ್ ಗೆ ಗರಿಷ್ಠ 418 ಕಿ.ಮೀ ಮೈಲೇಜ್ ನೀಡುತ್ತದೆ.
ಹೊಸ ಕಾರು ಖರೀದಿದಾರರಿಗೆ ಕಂಪನಿಯು ಸ್ಟ್ಯಾಂಡರ್ಡ್ ಆಗಿ 11kW ಹೋಂ ಚಾರ್ಜರ್ ನೀಡಲಿದ್ದು, ಹೋಂ ಚಾರ್ಜರ್ ಮೂಲಕ ಹೊಸ ಕಾರಿನ ಬ್ಯಾಟರಿ ಪೂರ್ತಿ ಚಾರ್ಜ್ ಮಾಡಲು ಕನಿಷ್ಠ 12 ರಿಂದ 18 ಗಂಟೆಗಳ ಕಾಲ ಸಮಯಾವಕಾಶ ತೆಗೆದುಕೊಂಡರೆ 50kW ಫಾಸ್ಟ್ ಚಾರ್ಜಿಂಗ್ ನಿಲ್ದಾಣಗಳಲ್ಲಿ ಕೇವಲ ಎರಡೂವರೆ ಗಂಟೆಗಳಲ್ಲಿ ಪೂರ್ತಿ ಚಾರ್ಜ್ ಮಾಡಬಹುದಾಗಿದೆ.
ಇದನ್ನು ಓದಿ: ಭಾರತದಲ್ಲಿ ಸದ್ಯ ಖರೀದಿಸಬಹುದಾದ ಅತಿಹೆಚ್ಚು ಸುರಕ್ಷಿತ ಮಧ್ಯಮ ಕ್ರಮಾಂಕದ ಕಾರುಗಳಿವು!
ಡಿಸೈನ್ ಮತ್ತು ಫೀಚರ್ಸ್
ಹೊಸ ಎಕ್ಸ್‌ಸಿ40 ರೀಚಾರ್ಜ್ ಇವಿ ಕಾರು ಮಾದರಿಯು ಸಾಮಾನ್ಯ ಎಕ್ಸ್‌ಸಿ40 ಪೆಟ್ರೋಲ್ ಕಾರಿಗಿಂತಲೂ ಹೆಚ್ಚಿನ ಮಟ್ಟದ ಫೀಚರ್ಸ್ ನೊಂದಿಗೆ 4,425 ಎಂಎಂ ಉದ್ದ, 1,863 ಎಂಎಂ ಅಗಲ, 1,652 ಎಂಎಂ ಅಗಲ ಮತ್ತು 175 ಎಂಎಂ ಗ್ರೌಂಡ್ ಕ್ಲಿಯೆರೆನ್ಸ್ ಹೊಂದಿದೆ.
ಪೆಟ್ರೋಲ್ ಮಾದರಿಯಲ್ಲಿರುವಂತೆಯೇ ಹೊಸ ಕಾರಿನಲ್ಲಿ ಪ್ರೀಮಿಯಂ ಕ್ಯಾಬಿನ್ ಸೌಲಭ್ಯದೊಂದಿಗೆ ಅಂಡ್ರಾಯಿಡ್ ಆಟೋ ಮತ್ತು ಕಾರ್ ಪ್ಲೇ ಸರ್ಪೊಟ್ ಮಾಡುವ ಇನ್ಪೋಟೈನ್‌ಮೆಂಟ್ ಸಿಸ್ಟಂ, ಆನ್ ಬೋರ್ಡ್ ಇ-ಸಿಮ್ ಮೂಲಕ ಗೂಗಲ್ ಮ್ಯಾಪ್ ಅಂಡ್ ಅಸಿಸ್ಟ್ ನೀಡಿದೆ. ಹಾಗೆಯೇ ಹೊಸ ಕಾರಿನಲ್ಲಿ ಎಲೆಕ್ಟ್ರಿಕ್ ಸನ್‌ರೂಫ್, ವೈರ್‌ಲೆಸ್ ಸ್ಮಾರ್ಟ್ ಫೋನ್ ಚಾರ್ಜರ್, ಸೆನ್ಸಾರ್ ಆಧರಿಸಿರುವ ಲೆವಲ್ 2 ಎಡಿಎಸ್ ಸಿಸ್ಟಂ ಇದರಲ್ಲಿದೆ.
ಇದನ್ನು ಓದಿ: ಪ್ರತಿ ಚಾರ್ಜ್ ಗೆ 590 ಕಿ.ಮೀ ಮೈಲೇಜ್ ಹೊಂದಿರುವ ಹೊಸ ಮರ್ಸಿಡಿಸ್ ಇಕ್ಯೂಇ ಅನಾವರಣ
ವಾರಂಟಿ
ಹೊಸ ಎಕ್ಸ್ ಸಿ 40 ರೀಚಾರ್ಜ್ ಕಾರಿನ ಮೇಲೆ ವೊಲ್ವೊ ಕಂಪನಿಯು ಒಟ್ಟು ಮೂರು ವರ್ಷಗಳ ಸ್ಟ್ಯಾಂಡರ್ಡ್ ವಾರಂಟಿ ಘೋಷಣೆ ಮಾಡಿದೆ. ಹಾಗೆಯೇ ಕಾರಿನ ಬ್ಯಾಟರಿ ಪ್ಯಾಕ್ ಮೇಲೆ 8 ವರ್ಷಗಳ ವಾರಂಟಿ ನೀಡುತ್ತಿದ್ದು, ಹೊಸ ಕಾರಿಗಾಗಿ ಈಗಾಗಲೇ ಮೊದಲ ಹಂತದ ಬುಕಿಂಗ್ ಪ್ರಕ್ರಿಯೆ ಕೂಡಾ ಪೂರ್ಣಗೊಂಡಿದೆ.
Published On - 8:26 pm, Thu, 20 October 22