Car Comparison: ಹೋಂಡಾ ಸಿಟಿ vs ಹ್ಯುಂಡೈ ವೆರ್ನಾ…ಯಾವುದು ಬೆಸ್ಟ್?

|

Updated on: Mar 24, 2023 | 9:03 PM

ಹೋಂಡಾ ಸಿಟಿ ಸೆಡಾನ್ ಮತ್ತು ಹ್ಯುಂಡೈ ವೆರ್ನಾ ಕಾರುಗಳು ಅತ್ಯುತ್ತಮ ಪ್ರತಿಸ್ಪರ್ಧಿಯಾಗಿದ್ದು, ಎರಡು ಕಾರುಗಳು ಇತ್ತೀಚೆಗೆ ಭಾರೀ ಬದಲಾವಣೆಯೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಟ್ಟಿವೆ.

Car Comparison: ಹೋಂಡಾ ಸಿಟಿ vs ಹ್ಯುಂಡೈ ವೆರ್ನಾ...ಯಾವುದು ಬೆಸ್ಟ್?
ಹೋಂಡಾ ಸಿಟಿ vs ಹ್ಯುಂಡೈ ವೆರ್ನಾ
Follow us on

ಸೆಡಾನ್ ಕಾರುಗಳ(Sedan Cars) ವಿಭಾಗದಲ್ಲಿ ಇತ್ತೀಚೆಗೆ ಹಲವು ಹೊಸ ಕಾರುಗಳು ಮಾರುಕಟ್ಟೆ ಲಗ್ಗೆಯಿಟ್ಟಿವೆ. ಮಧ್ಯಮ ಕ್ರಮಾಂಕದ ಸೆಡಾನ್ ಕಾರುಗಳ ವಿಭಾಗದಲ್ಲಿ ಸದ್ಯ ಹೋಂಡಾ ಸಿಟಿ(Honda City) ಅಗ್ರಸ್ಥಾನದಲ್ಲಿದ್ದು, ಸಿಟಿ ಕಾರಿಗೆ ಪೈಪೋಟಿಯಾಗಿ ಹ್ಯುಂಡೈ ವೆರ್ನಾ(Hyundai Verna) ಕೂಡಾ ಮಹತ್ವದ ಬದಲಾವಣೆಯೊಂದಿಗೆ ಬಿಡುಗಡೆಯಾಗಿದೆ. ಈ ಎರಡೂ ಹೊಸ ಕಾರುಗಳ ನಡುವೆ ಇದೀಗ ಭಾರೀ ಪೈಪೋಟಿ ಶುರುವಾಗಿದ್ದು, ಹೊಸ ಕಾರುಗಳು ಹಲವಾರು ವಿಶೇಷತೆಗಳೊಂದಿಗೆ ಗ್ರಾಹಕರನ್ನ ಸೆಳೆಯುತ್ತಿವೆ.

ಭಾರತದಲ್ಲಿ ವಿವಿಧ ಕಾರು ಮಾದರಿಗಳ ವಿಭಾಗದಲ್ಲಿ ಸೆಡಾನ್ ಆವೃತ್ತಿಗಳು ಕೂಡಾ ಉತ್ತಮ ಬೇಡಿಕೆ ಹೊಂದಿದ್ದು, ಹೋಂಡಾ ಸಿಟಿ ಕಾರು ಈ ವಿಭಾಗದಲ್ಲಿ ಸದ್ಯ ಅಗ್ರಸ್ಥಾನ ಕಾಯ್ದುಕೊಂಡಿದೆ. ಹೋಂಡಾ ಕಂಪನಿಯು ಭಾರತದಲ್ಲಿ ಸದ್ಯ ಐದನೇ ತಲೆಮಾರಿನ ಸಿಟಿ ಕಾರನ್ನ ಮಾರಾಟ ಮಾಡುತ್ತಿದ್ದು, ಸಿಟಿ ಕಾರಿಗೆ ಹ್ಯುಂಡೈ ವೆರ್ನಾ ಪ್ರಬಲ ಪೈಪೋಟಿ ನೀಡುತ್ತಿದೆ. ಸಿಟಿ ಕಾರಿನಲ್ಲಿರುವಂತೆ ಹಲವಾರು ವಿಶೇಷ ಸೌಲಭ್ಯಗಳನ್ನ ಹೊಂದಿರುವ ವೆರ್ನಾ ಕಾರು ಇತ್ತೀಚೆಗೆ ಭಾರೀ ಬದಲಾವಣೆ ಪಡೆದುಕೊಂಡಿದ್ದು, ಹೋಂಡಾ ಸಿಟಿ ಕೂಡಾ ಹಲವು ಹೊಸ ಫೀಚರ್ಸ್ ಪಡೆದುಕೊಂಡಿದೆ. ಏಪ್ರಿಲ್ 1 ಜಾರಿಗೆ ಬರಲಿರುವ ರಿಯರ್ ಡ್ರೈವಿಂಗ್ ಎಮಿಷನ್ ಗೆ ಅನುಗುಣವಾಗಿ ಈ ಎರಡು ಕಾರುಗಳು ಇದೀಗ ಹೊಸ ಎಂಜಿನ್ ಆಯ್ಕೆಯನ್ನ ಕೂಡಾ ಪಡೆದುಕೊಂಡಿದ್ದು, ಸ್ಮಾರ್ಟ್ ಫೀಚರ್ಸ್ ಮೂಲಕ ಗ್ರಾಹಕರನ್ನ ಸೆಳೆಯುತ್ತಿವೆ.

2023ರ ಸಿಟಿ ಸೆಡಾನ್ ಕಾರು ಮಾದರಿಯು ಭಾರೀ ಬದಲಾವಣೆಯೊಂದಿಗೆ ಬಿಡುಗಡೆಗೊಂಡಿದ್ದು, ಹೊಸ ಕಾರು ಪ್ರಮುಖ ನಾಲ್ಕು ವೆರಿಯೆಂಟ್ ಗಳಲ್ಲಿ ಖರೀದಿಗೆ ಲಭ್ಯವಿದೆ. ಇದರೊಂದಿಗೆ ಹೊಸ ಕಾರು ಎಕ್ಸ್ ಶೋರೂಂ ಪ್ರಕಾರ ರೂ. 11.49 ಲಕ್ಷ ಆರಂಭಿಕ ಬೆಲೆ ಹೊಂದಿದ್ದು, ಇದರಲ್ಲಿ ಟಾಪ್ ಎಂಡ್ ಮಾದರಿಯು ರೂ. 20.39 ಲಕ್ಷ ಬೆಲೆ ಹೊಂದಿದೆ. ಹೊಸ ಸಿಟಿ ಕಾರಿನಲ್ಲಿ ಹೋಂಡಾ ಕಂಪನಿಯು ಸದ್ಯ 1.5 ಲೀಟರ್ ಪೆಟ್ರೋಲ್ ಮತ್ತು ಪೆಟ್ರೋಲ್ ಹೈಬ್ರಿಡ್ ಆವೃತ್ತಿಯನ್ನ ಮಾತ್ರ ಮಾರಾಟ ಮಾಡುತ್ತಿದ್ದು, ಹೊಸ ಕಾರಿನಲ್ಲಿ ಡೀಸೆಲ್ ಎಂಜಿನ್ ಆಯ್ಕೆಯನ್ನ ಸ್ಥಗಿತಗೊಳಿಸಿದೆ.

ಹೊಸ ಮಾಲಿನ್ಯ ನಿಯಂತ್ರಣ ಮಾನದಂಡಗಳಿಗೆ ಅನುಗುಣವಾಗಿ ಹೋಂಡಾ ಕಂಪನಿಯು ಹೊಸ ಸಿಟಿ ಕಾರಿನಲ್ಲಿ ಈ ಹಿಂದಿನ ಡೀಸೆಲ್ ಮಾದರಿಯನ್ನ ಸ್ಥಗಿತಗೊಳಿಸಿದೆ. ಹೀಗಾಗಿ ಸದ್ಯಕ್ಕೆ ಪೆಟ್ರೋಲ್ ಮತ್ತು ಹೈಬ್ರಿಡ್ ಎಂಜಿನ್ ಆಯ್ಕೆ ಮಾತ್ರ ನೀಡಲಾಗುತ್ತಿದ್ದು, ಇದರಲ್ಲಿ ಪೆಟ್ರೋಲ್ ಮಾದರಿಯು 6 ಸ್ಪೀಡ್ ಮ್ಯಾನುವಲ್ ಮತ್ತು ಸಿಟಿವಿ ಗೇರ್ ಆಯ್ಕೆಯೊಂದಿಗೆ 121 ಹಾರ್ಸ್ ಪವರ್ ಉತ್ಪಾದಿಸುತ್ತದೆ. ಹಾಗೆಯೇ ಸಿಟಿ ಕಾರಿನ ಹೈಬ್ರಿಡ್ ಮಾದರಿಯು ಆಟ್ಕಿನ್ಸನ್ ಹೈಬ್ರಿಡ್ ತಂತ್ರಜ್ಞಾನದೊಂದಿಗೆ ಇಸಿವಿಟಿ ಗೇರ್ ಬಾಕ್ಸ್ ಹೊಂದಿದ್ದು, ಇದು 126 ಹಾರ್ಸ್ ಪವರ್ ಉತ್ಪಾದನೆಯೊಂದಿಗೆ ಪ್ರತಿ ಲೀಟರ್ ಗೆ ಗರಿಷ್ಠ 26.5 ಕಿ.ಮೀ ಮೈಲೇಜ್ ಹಿಂದಿರುಗಿಸುತ್ತದೆ.

ಇದರೊಂದಿಗೆ ಹೊಸ ಸಿಟಿ ಕಾರಿನಲ್ಲಿ ಸುರಕ್ಷತೆಗೂ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ಸ್ಟ್ಯಾಂಡರ್ಡ್ ಆಗಿ ಆರು ಏರ್ ಬ್ಯಾಗ್ ಗಳು, ಟೈರ್ ಪ್ರೆಷರ್ ಮಾನಿಟರಿಂಗ್ ಸಿಸ್ಟಂ, ರೈನ್ ಸೆನ್ಸಿಂಗ್ ವೈಪರ್, ಆಂಬಿಯೆಂಟ್ ಲೈಟಿಂಗ್, ವೈರ್ ಲೆಸ್ ಚಾರ್ಜರ್, ಆ್ಯಪಲ್ ಕಾರ್ ಪ್ಲೇ ಮತ್ತು ಅಂಡ್ರಾಯಿಡ್ ಆಟೋ ಸೌಲಭ್ಯಗಳಿವೆ. ಹಾಗೆಯೇ ಟಾಪ್ ಎಂಡ್ ವೆರಿಯೆಂಟ್ ಗಳಲ್ಲಿ ಅಡ್ವಾನ್ಸ್ ಡ್ರೈವರ್ ಅಸಿಸ್ಟ್ ಸಿಸ್ಟಂ ಸೌಲಭ್ಯ ನೀಡಿದ್ದು, ಇದಕ್ಕೆ ಪೈಪೋಟಿಯಾಗಿ ಹ್ಯುಂಡೈ ವೆರ್ನಾ ಹೊಸ ಆವೃತ್ತಿ ಕೂಡಾ ಭಾರೀ ಬದಲಾವಣೆ ಪಡೆದುಕೊಂಡಿದೆ. ಹೊಸ ವೆರ್ನಾ ಕಾರು ಮಾದರಿಯು ಪ್ರಮುಖ ನಾಲ್ಕು ವೆರಿಯೆಂಟ್ ಗಳಲ್ಲಿ ಖರೀದಿಗೆ ಲಭ್ಯವಿದ್ದು, ಆರಂಭಿಕ ಮಾದರಿಯು ದೆಹಲಿ ಎಕ್ಸ್ ಶೋರೂಂ ಪ್ರಕಾರ ರೂ. 10.90 ಲಕ್ಷ ಬೆಲೆ ಹೊಂದಿದೆ. ಹೊಸ ಕಾರಿನ ಟಾಪ್ ಎಂಡ್ ಮಾದರಿಯು ರೂ. 17.38 ಲಕ್ಷ ಬೆಲೆ ಹೊಂದಿದ್ದು, ಪ್ರಮುಖ ಎರಡು ಎಂಜಿನ್ ಆಯ್ಕೆ ಹೊಂದಿದೆ.

ವೆರ್ನಾ ಹೊಸ ಆವೃತ್ತಿಯಲ್ಲಿ ಹ್ಯುಂಡೈ ಕಂಪನಿ ಈ ಬಾರಿ ಡೀಸೆಲ್ ಎಂಜಿನ್ ಆಯ್ಕೆಯನ್ನ ಸ್ಥಗಿತಗೊಳಿಸಿದೆ. ಈ ಹಿಂದಿನ 1.5 ಲೀಟರ್ ನ್ಯಾಚುರಲಿ ಆಸ್ಪೆರೆಟೆಡ್ ಪೆಟ್ರೋಲ್ ಎಂಜಿನ್ ಜೊತೆಗೆ ಹೊಸದಾಗಿ 1.5 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಆಯ್ಕೆಯನ್ನ ನೀಡಿದೆ. ಟರ್ಬೊ ಪೆಟ್ರೋಲ್ ಮಾದರಿಯು 160 ಹಾರ್ಸ್ ಪವರ್ ಉತ್ಪಾದನೆ ಮಾಡಲಿದ್ದು, ಸ್ಪೋರ್ಟಿ ಲುಕ್ ಮೂಲಕ ಪ್ರತಿಸ್ಪರ್ಧಿ ಮಾದರಿಗಿಂತಲೂ ಹೆಚ್ಚಿನ ಮಟ್ಟದ ಉದ್ದಳತೆ ಹೊಂದಿದೆ. ಜೊತೆಗೆ ಟಾಪ್ ಎಂಡ್ ವೆರಿಯೆಂಟ್ ನಲ್ಲಿ ಆಲ್ ವ್ಹೀಲ್ ಡಿಸ್ಕ್ ಬ್ರೇಕ್ ಸೇರಿದಂತೆ ಅಡ್ವಾನ್ಸ್ ಡ್ರೈವಿಂಗ್ ಅಸಿಸ್ಟ್ ಸಿಸ್ಟಂ ಜೋಡಣೆ ಹೊಂದಿದೆ. ಇದು ಫ್ರಂಟ್ ಅಂಡ್ ರಿಯರ್ ಕ್ಯಾಮೆರಾ ಮತ್ತು ರಡಾರ್ ಸೌಲಭ್ಯದೊಂದಿಗೆ ಗರಿಷ್ಠ ಸುರಕ್ಷತೆಯನ್ನು ಖಾತ್ರಿಪಡಿಸುತ್ತದೆ. ಈ ಮೂಲಕ ಸಿಟಿ ಕಾರಿನೊಂದಿಗೆ ವೆರ್ನಾ ಕಾರು ಎಲ್ಲಾ ವಿಭಾಗದಲ್ಲೂ ಉತ್ತಮ ಪ್ರತಿಸ್ಪರ್ಧಿಯಾಗಿದೆ ಎನ್ನಬಹುದು. ಆದರೆ ಹೋಂಡಾ ಸಿಟಿ ಕಾರಿನಲ್ಲಿ ಹೆಚ್ಚಿನ ಇಂಧನ ದಕ್ಷತೆ ಹೊಂದಿರುವ ಹೈಬ್ರಿಡ್ ಎಂಜಿನ್ ಆಯ್ಕೆಯು ಹ್ಯುಂಡೈ ವೆರ್ನಾ ಕಾರಿಗೆ ಪ್ರಬಲ ಪೈಪೋಟಿಯಾಗಿರುವುದು ಗಮನಿಸಬೇಕಾದ ಅಂಶವಾಗಿದೆ.

Published On - 9:03 pm, Fri, 24 March 23