ಓದಿದ್ದು 10ನೇ ಕ್ಲಾಸ್, ಆದ್ರೂ ಜೀವನದಲ್ಲಿ ಆಗಿದ್ದಾರೆ ಇವ್ರು ಪಾಸ್. ಮದುವೆ ಸಮಾರಂಭಗಳಲ್ಲಿ ಲೈಟ್ ಬಾಯ್ ಆಗಿದ್ದ ಈತ, ಈಗ ಹತ್ತಾರು ಸೆಲೆಬ್ರಿಟಿಗಳ ನೆಚ್ಚಿನ ಫೊಟೋಗ್ರಾಫರ್. ಅದಿತಿ ಪ್ರಭುದೇವ, ರಂಜಿನಿ, ಡಾರ್ಲಿಂಗ್ ಕೃಷ್ಣ, ಮಿಲನ, ಪ್ರಣಿತ ಸುಭಾಷ್, ಶುಭ ಪೂಂಜಾ, ಕಾವ್ಯ ಶಾಸ್ತ್ರಿ , ಭವ್ಯ ಗೌಡ, ಗಟ್ಟಿಮೇಳ ಧಾರವಾಹಿಯ ನಿಶಾ, ಶ್ವೇತ ಶ್ರಿವತ್ಸ ಹೀಗೆ ಹಲವಾರು ಜನರನ್ನು ತಮ್ಮ ಕ್ಯಾಮೆರಾದಲ್ಲಿ ಸೇರೆಹಿಡಿರುವ ಸೆರೆಹಿಡಿದ ಮಾಂತ್ರಿಕನೇ ಮಂಜುನಾಥ್ ಮಗಜಿ. ಎಂಸಿಎಂ ಫೊಟೋಗ್ರಫಿ ಸಂಸ್ಥೆಯ ಸಂಸ್ಥಾಪಕರೂ ಆಗಿರುವ ಇವರು ನಮ್ ಜೊತೆ ಮಾತಾಡಿರುವ ಅವರ, ಕೆಲ ಮಾತು ಪದಗಳಲ್ಲಿ……
ನನಗೆ ಕಲಿಕೆಯಲ್ಲಿ ಆಸಕ್ತಿ ಇರಲಿಲ್ಲ. ಓದಿದ್ದು ಕೇವಲ 10ನೇ ತರಗತಿ. ಆಮೇಲೆ ಮುಂದುವರೆಸಲಿಲ್ಲ. ಏನಾದರೂ ಕೆಲಸ ಮಾಡುವ ಅಂತ ಹುಡುಕಾಡ್ತಿದ್ದೆ. ಆಗ, ಮದುವೆ ಮನೆಗಳಲ್ಲಿ ವಿಡಿಯೋಗ್ರಾಫರ್ ಜೊತೆ ಲೈಟ್ ಬಾಯ್ ಆಗಿ ಕೆಲಸ ಮಾಡುತ್ತಿದ್ದೆ. ಸುಮಾರು ಎರಡೂವರೆ ವರ್ಷದ ನಂತರ ಅದನ್ನು ಬಿಟ್ಟೆ. ಅಷ್ಟು ಸಮಯ ಕ್ಯಾಮೆರಾ ಹಿಂದೆ ಇದ್ದರೂ, ಯಾರೂ ನನಗೆ ಕ್ಯಾಮೆರಾ ಕಲಿಸಿಕೊಡಲಿಲ್ಲ. ನಾನೇ ಖುದ್ದಾಗಿ ಮೆಲ್ಲನೆ ಕಲಿತೆ. ಮುಂದೆ ಕ್ಯಾಮೆರಾ ತಗೊಳ್ಳೋದು ಆಸೆ ಇದ್ರೂ ಕೈಯಲ್ಲಿ ಹಣ ಇರಲಿಲ್ಲ. ಕೊನೆಗೆ ಸಾಲ ಮಾಡಿಕೊಂಡು, ಒಂದುವರೆ ಲಕ್ಷದ 5ಡಿ ಮಾರ್ಕ್ 3 ಕ್ಯಾಮರಾ ಖರೀದಿಸಿದೆ ಎಂದು ಹೇಳುತ್ತಾರೆ ಮಂಜುನಾಥ್.
ಶಾಲೆ ಬಿಟ್ಟು ಲೈಟ್ ಬಾಯ್ ಆಗಿದ್ದಾಗ, ನನಗೆ ಮನೆಯಲ್ಲಿಯೇ ವಿರೋಧ ಎದುರಾಗಿತ್ತು. ಶಾಲೆ ಯಾಕೆ ಬಿಟ್ಟೆ ಅಂದವರೇ ಹೆಚ್ಚು. ನನ್ನಮ್ಮನೇ “ನೀನು ಜೀವನದಲ್ಲಿ ಎಂದೂ ಉದ್ಧಾರ ಆಗಲ್ಲ” ಅಂದಿದ್ರು. ಆದ್ರೆ ಈಗ ಅಮ್ಮನೇ ಹೆಮ್ಮೆ ಪಡೋ ಮಗನಾಗಿದ್ದಕ್ಕೆ ಖುಷಿಯಿದೆ. ಪ್ರಾರಂಭದ ದಿನಗಳಲ್ಲಿ ನನಗೆ ಇಂಡಸ್ಟ್ರಿಯಲ್ಲಿ ರಾಮ್ ಮತ್ತು ನಟ ಜಾಲಿ ಡೇಸ್ ಪ್ರದೀಪ್ ಸಹಾಯ ಮಾಡಿದರು. ನನ್ನ ಫಸ್ಟ್ ಮಾಡೆಲ್ ನಿಕಿತಾ ಗೌಡ. ಮೊದಮೊದಲು ಯಾರಾದರೂ ಸೆಲೆಬ್ರಿಟಿಗಳು ಬಂದ್ರೆ ಅವರೊಂದಿಗೆ ಸೆಲ್ಫಿ ತೆಗೆಯೋ ಶೋಕಿಯಿತ್ತು. ಆದರೆ ಇವಾಗ ನನ್ನ ಕ್ಯಾಮೆರಾದಲ್ಲಿಯೇ ಅವ್ರನ್ನು ಸೆರೆಹಿಡಿಯುತ್ತಿದ್ದೇನೆ ಎಂದು ಹೇಳುತ್ತಾರೆ ಇವರು
ಇತ್ತೀಚಿಗೆ ಶುಭ ಪೂಂಜ ಅವರ ಮದುವೆಯ ಫೋಟೋಗಳನ್ನು ನಾನು ತೆಗೆದಿದ್ದೆ. ಮಂಜು ತೆಗೆದ ಫೋಟೋ ತುಂಬಾ ನ್ಯಾಚುರಲ್ ಆಗಿರುತ್ತೆ ಎಂದು ಶುಭಾ ಪೂಂಜ ನನ್ನ ಫೊಟೋಗಳನ್ನು ಇಷ್ಟಪಟ್ಟಿದ್ದರು. ಕ್ಲಿಕ್ ಮಾಡಿದ ಫೊಟೋಗಳನ್ನು ನಾನು ಮತ್ತೆ ಹೆಚ್ಚಾಗಿ ಎಡಿಟ್ ಮಾಡಲ್ಲ. ನನ್ನ ಫೊಟೋಗಳಲ್ಲಿ 10% ಮಾತ್ರ ಎಡಿಟಿಂಗ್ ಇರುತ್ತೆ. ಅದಿತಿ ಪ್ರಭುದೇವ ಅವ್ರು ನನಗೆ “ಎಡಿಟಿಂಗ್ ಕಲಿಯೋ ಚಿನ್ನ” ಅಂತ ಹೇಳಿದ್ದರು. ಆ ಮಾತು ನನ್ನ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದೆ. ಒಂದಲ್ಲ ಒಂದು ದಿನ ಎಡಿಟಿಂಗ್ ಕಲಿಯಲೇಬೇಕು, ಕಲಿತೇ ಕಲಿತೀನಿ ಅನ್ನೋ ವಿಶ್ವಾಸ ಇದೆ ಎನ್ನುತ್ತಾರೆ.
ಕಿಚ್ಚನ ಫ್ಯಾಮಿಲಿ ಫೊಟೋಶೂಟ್!
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ಫ್ಯಾಮಿಲಿ ಫೋಟೋ ಶೂಟ್ ಮಾಡುವ ಬಹುದೊಡ್ಡ ಆಸೆ ಇತ್ತು ಅದು ನೆರವೇರಿತು ಕೂಡ. ಫೊಟೋ ತೆಗೆಯಲು ಸುದೀಪ್ ಅವರು ನನಗೆ 10 ನಿಮಿಷ ಸಮಯ ಕೊಟ್ಟರು. ನಾನು ಅವರ ಫ್ಯಾಮಿಲಿ ಫೋಟೋಶೂಟ್ ಮಾಡಿದೆ.
ಫಿಲಂ ಡೈರೆಕ್ಷನ್ ಕನಸು
ಎಲ್ಲೋ ಬೋರ್ಡ್ ಸಿನಿಮಾದ ಪೋಸ್ಟರ್ ಫೊಟೋಶೂಟ್ ಮಾಡಿದ್ದೆ. ಆ ಸಿನಿಮಾದಲ್ಲಿ ವೀಡಿಯೋಗ್ರಫಿಯಲ್ಲೂ ಕೆಲಸ ಮಾಡಿದ್ದಲ್ಲದೆ, ಒಂದು ಹಾಡಿನ ಸ್ಟಿಲ್ ವೀಡಿಯೊ ಮಾಡಿದ್ದೇನೆ. ಮುಂದೊಂದು ದಿನ ಕನ್ನಡ ಫಿಲಂ ಇಂಡಸ್ಟ್ರಿಯಲ್ಲಿ ಒಂದೊಳ್ಳೆ ಸಿನಿಮಾ ನಿರ್ದೇಶನ ಮಾಡುವ ಆಸೆ ಇದೆ. ಆಫರ್ ಬಂದ್ರೆ ಖಂಡಿತ ಒಪ್ಪಿಕೊಳ್ಳುತ್ತೇನೆ.
“ಈ ಸಮಾಜದಲ್ಲಿ ಬೆಳೆಯಬೇಕೆಂದರೆ ನಮ್ಮಲ್ಲಿ ತಾಳ್ಮೆ ಅನ್ನೋದು ಅತ್ಯಗತ್ಯವಾಗಿ ಇರಲೇಬೇಕು. ಒಳ್ಳೆಯ ಸಂಗತಿ ಎದುರಾದಾಗ ಹಿಗ್ಗದೇ, ಸೋತಾಗ ಕುಗ್ಗದೆ ತಾಳ್ಮೆಯಿಂದ ಎರಡನ್ನೂ ಸಮಾನವಾಗಿ ಸ್ವೀಕರಿಸಬೇಕು. ಮತ್ತು, ನಾವು ಎಷ್ಟೇ ಎತ್ತರಕ್ಕೆ ಹೋದರೂ ನಮ್ಮ ಮೊದಲ ಆದ್ಯತೆ ಮನೆ ಹಾಗೂ ಕುಟುಂಬದ ಕಡೆ ಇರಬೇಕು. ಹೀಗಿದ್ದುಕೊಂಡು, ನಮ್ಮ ಕೆಲಸದ ಮೇಲೆ ಪ್ರಾಮುಖ್ಯತೆ ಕೊಟ್ಟಾಗ ಎಲ್ಲವೂ ತಾನಾಗಿಯೇ ಬರುತ್ತದೆ.
ಮಂಜುನಾಥ್ ಮಗಜಿ, ಫೋಟೋಗ್ರಾಫರ್
ಎಲ್ಲಾ ಇಂಡಸ್ಟ್ರಿಯಲ್ಲಿ ಕಾಂಪಿಟೇಶನ್ ಇರುವ ಹಾಗೆ ಇಲ್ಲಿಯೂ ಕಾಂಪಿಟೇಶನ್ ಇದೆ. ಪ್ರತಿಯೊಬ್ಬರಿಗೂ ತಮ್ಮ ಮೇಲೆ ನಂಬಿಕೆ ಇರಬೇಕು ಹಾಗೂ ಇತರರಿಗಿಂತ ತಾವು ಹೇಗೆ ಭಿನ್ನ ಅಂತ ತೋರಿಸಿ ಕೊಡಬೇಕು. ನಿಮ್ಮ ಕೌಶಲ್ಯದ ಮೇಲೆ ಕೆಲಸ ಮಾಡಿ. ಇತರರನ್ನು ಅನುಕರಣೆ ಮಾಡುವ ಅಗತ್ಯವಿಲ್ಲ.
– ಆನಂದ ಜೇವೂರ್,ಕಲಬುರಗಿ