Opinion Article: ಮುಸ್ಲಿಮರ ಬಳಿ ವ್ಯಾಪಾರ- ವ್ಯವಹಾರ ಮಾಡಬಾರದೆಂದು ಬಹಿಷ್ಕಾರ ಹಾಕುವಷ್ಟು ಸಿಟ್ಟೇಕೆ? ಅದರ ಪರಿಣಾಮ ಏನಾಗಬಹುದು?
ಮುಸ್ಲಿಮರ ಬಳಿ ವ್ಯಾಪಾರ- ವ್ಯವಹಾರ ಮಾಡದಂತೆ ಹಿಂದೂಪರ ಸಂಘಟನೆಗಳು ಕರ್ನಾಟಕದ ಕೆಲ ಭಾಗಗಳಲ್ಲಿ ಕರೆ ನೀಡುತ್ತಿವೆ. ಇದರ ಪರಿಣಾಮ ಏನಾಗಬಹುದು ಎಂಬ ಬಗ್ಗೆ ಚಿಂತಕ ಎಚ್.ಕೆ.ವಿವೇಕಾನಂದ ಅವರ ವಿಶ್ಲೇಷಣೆ ಇಲ್ಲಿದೆ.
ಮುಸ್ಲಿಮರ (Muslims) ಬಳಿ ಯಾವುದೇ ವ್ಯಾಪಾರ- ವ್ಯವಹಾರ ಮಾಡಬೇಡಿ. ಅವರನ್ನು ಬಹಿಷ್ಕರಿಸಿ ಎಂದು ಕೆಲವು ಹಿಂದುತ್ವ ವಾದಿಗಳು ಪ್ರಚಾರ ಮಾಡುತ್ತಿದ್ದಾರೆ. ಇದು ಒಂದು ಉತ್ತಮ ನಿರ್ಧಾರವೇ? ಇದರಿಂದ ಭಾರತ ದೇಶಕ್ಕೆ ಮತ್ತು ಹಿಂದೂಗಳಿಗೆ ಒಳ್ಳೆಯದು ಆಗುತ್ತದೆಯೇ? ಈ ಅಭಿಯಾನದಿಂದ ಮುಸ್ಲಿಮರು ಪಾಠ ಕಲಿಯುತ್ತಾರೆ ಎಂಬ ನಿರೀಕ್ಷೆ ನಿಜವಾಗುವುದೇ? ಇದು ದೇಶಭಕ್ತಿಯ ನಿಜವಾದ ವ್ಯಕ್ತಪಡಿಸುವಿಕೆಯೇ? ಇದರ ಮುಂದಿನ ಪರಿಣಾಮಗಳು ಸಮಾಜದ ಒಟ್ಟು ಹಿತಾಸಕ್ತಿಯ ದೃಷ್ಟಿಯಿಂದ ಒಳ್ಳೆಯದಾಗುತ್ತದೆಯೇ? ನಿಜಕ್ಕೂ ಮುಸ್ಲಿಮರು ಬಹಿಷ್ಕಾರಕ್ಕೆ ಅರ್ಹರೇ? ಅವರು ಅಷ್ಟೊಂದು ಕೆಟ್ಟವರೇ? ಅವರು ಭಾರತದ ಪ್ರಜೆಗಳಲ್ಲವೇ? ಅವರು ಹಿಂದೂಗಳ ನಂತರದ ಎರಡನೇ ದರ್ಜೆಯ ನೌಕರರೇ? ದ್ವೇಷ- ಅಸೂಯೆ, ಕೋಪ- ಸೇಡಿನ ಮುಂದಿನ ಪರಿಣಾಮಗಳ ಅರಿವು ಇದೆಯೇ?
ಒಂದು ಆತ್ಮಾವಲೋಕನ. ಈ ಪ್ರಶ್ನೆಗಳಿಗೆ ಉತ್ತರ ಹುಡುಕುವ ಒಂದು ಸಣ್ಣ ಪ್ರಯತ್ನ. ಇಲ್ಲಿ ಹಿಂದೂಗಳ ಪರ ಅಥವಾ ವಿರೋಧ, ಮುಸ್ಲಿಂ ಪರ ಅಥವಾ ವಿರೋಧಕ್ಕಿಂತ ಭಾರತ ದೇಶದ ಮತ್ತು ಜನರ ಒಟ್ಟು ಹಿತಾಸಕ್ತಿಯ ಹಿನ್ನೆಲೆಯಲ್ಲಿ. ಭಾರತದ ಒಟ್ಟು ಮುಸ್ಲಿಂ ಜನಸಂಖ್ಯೆ ಸುಮಾರು 20 ಕೋಟಿ (ಶೇ 17/18). ಬಹುಶಃ ವಿಶ್ವದ ಅತಿಹೆಚ್ಚು ಮುಸ್ಲಿಂ ಜನಸಂಖ್ಯೆ ಭಾರತದಲ್ಲಿಯೇ ಇದೆ. ಇದು ಒಂದು ದೊಡ್ಡ ದೇಶದ ಜನಸಂಖ್ಯೆಗೆ ಸಮವಾಗುವಷ್ಟು. ಭಾರತದಲ್ಲಿ ಸುಮಾರು 8 ಶತಮಾನಗಳಿಗೂ ಹೆಚ್ಚು ಕಾಲದಿಂದ ಈ ನೆಲದಲ್ಲಿ ವಾಸಿಸುತ್ತಿದ್ದಾರೆ. ಕನಿಷ್ಠ 10/16 ತಲೆಮಾರುಗಳ ಆಗಿಹೋಗಿರಬಹುದು. ಸ್ವಾತಂತ್ರ್ಯ ಹೋರಾಟದಲ್ಲಿ ಸಹ ಈ ನೆಲದಿಂದ ಪರಕೀಯರನ್ನು ಹೊರಹಾಕಲು ಕಾಯಾ- ವಾಚಾ- ಮನಸಾ ಶ್ರಮಿಸಿದ್ದಾರೆ. ಅದಕ್ಕಾಗಿ ಪಾಕಿಸ್ತಾನ ಎಂಬ ರಾಷ್ಟ್ರವನ್ನು ಸಹ ಸೃಷ್ಟಿಸಲಾಯಿತು. ಅದರ ನಂತರವೂ ಇಲ್ಲಿ ಸಾಕಷ್ಟು ಜನ ನೆಲೆ ನಿಂತರು. ಭಾರತೀಯ ಪ್ರಜೆಗಳಾದರು. ಅವರಲ್ಲಿ ಬಹುತೇಕರು ಮತಾಂತರ ಹೊಂದಿದವರೇ ಆಗಿದ್ದಾರೆ.
ಹಿಂದೂ ಮತ್ತು ಇಸ್ಲಾಂ ಎಂಬ ಎರಡು ಧರ್ಮೀಯರು ಸಾಕಷ್ಟು ಭಿನ್ನತೆಗಳ ನಡುವೆಯೂ ಸಣ್ಣ- ಪುಟ್ಟ ಕಹಿ ಘಟನೆಗಳ ನಡುವೆಯೂ ಹೇಗೋ ಈ ನೆಲದಲ್ಲಿ ವಾಸಿಸುತ್ತಾ ಇದ್ದರು. ಆದರೆ ವರ್ಷಗಳು ಉರುಳಿದಂತೆ ರಾಜಕೀಯ ಕಾರಣಗಳಿಗಾಗಿ ಇಬ್ಬರ ನಡುವಿನ ವೈಮನಸ್ಯ ಬೆಳೆಯುತ್ತಾ ಹೋಯಿತು. ಈಗ ಅದು ಬೃಹದಾಕಾರವಾಗಿ ಬೆಳೆದು, ಈ ಮಟ್ಟಕ್ಕೆ ಬಂದು ನಿಂತಿದೆ. ಸುಮಾರು 35 ವರ್ಷಗಳ ಹಿಂದಿನ ಮಾತು. ಕನ್ನಡದ ಮೇರು ನಟ ರಾಜ್ ಕುಮಾರ್ ಅಭಿನಯದ, ಸಾಹಿತ್ಯ ರತ್ನ ಚಿ. ಉದಯ ಶಂಕರ್ ರಚಿಸಿದ, ಸಂಗೀತ ದಿಗ್ಗಜರಾದ ರಾಜನ್ ಮತ್ತು ನಾಗೇಂದ್ರ ಸಂಗೀತ ನಿರ್ದೇಶನ, ರಾಜ್ ಕುಮಾರ್ ಅವರೇ ಹಾಡಿರುವ ಒಂದು ಹಾಡು ಹೀಗಿದೆ:
ಅಲ್ಲಾ ಅಲ್ಲಾ ನೀನೇ ಎಲ್ಲಾ, ನಿನ್ನನು ಬಿಟ್ಟರೆ ಗತಿಯಾರಿಲ್ಲ, ನಿನ್ನಲೇ ಜಗವೆಲ್ಲಾ
– ಹೀಗೆ ಅಲ್ಲಾ ಎಂಬ ದೇವರ ಗುಣಗಾನ ಮಾಡಲಾಗುತ್ತದೆ. ಇದು ಒಂದು ಸಿನಿಮಾ ಮತ್ತು ಸನ್ನಿವೇಶಕ್ಕೆ ತಕ್ಕಂತೆ ರಚಿಸಲಾದ ಚಿತ್ರಕಥೆ ಮತ್ತು ಹಾಡು ಎಂಬುದು ನಿಜ. ಆದರೆ ಈಗ ಆ ರೀತಿಯ ದೃಶ್ಯ ಸೃಷ್ಟಿಸಿದರೆ ಆಗಬಹುದಾದ ಅನಾಹುತಗಳನ್ನು ಊಹಿಸಿ. ಆಗ ಇದರ ಬಗ್ಗೆ ಯಾವುದೇ ಪ್ರತಿಭಟನೆ ವ್ಯಕ್ತವಾಗಲಿಲ್ಲ. ಎಲ್ಲರೂ ಸಹಜವಾಗಿ ಸ್ವೀಕರಿಸಿದರು. ಆರ್ಕೆಸ್ಟ್ರಾಗಳಲ್ಲಿ ಸಹ ಈ ಹಾಡು ಜನಪ್ರಿಯತೆ ಪಡೆಯಿತು. ಅಂದರೆ ಇದರ ಒಟ್ಟು ಸಾರಾಂಶ, ಈಗಿನ ಸಾಮಾಜಿಕ ಮನಸ್ಥಿತಿ ಎಷ್ಟು ಹದಗೆಟ್ಟಿದೆ ಎಂದು ಅರ್ಥವಾಗುತ್ತದೆ. ಸಾಮಾನ್ಯವಾಗಿ ವ್ಯಾಪಾರ- ವಹಿವಾಟು ಎಂದರೆ ಅಲ್ಲಿ ಹೆಚ್ಚು ಗ್ರಾಹಕರು ಇದ್ದರೆ ಅದರಿಂದ ಲಾಭ ಬರುತ್ತದೆ. ಒಂದು ವೇಳೆ ಹಿಂದೂಗಳು ಮುಸ್ಲಿಮರ ಜೊತೆ ವ್ಯಾಪಾರ- ವಹಿವಾಟು ಬಹಿಷ್ಕರಿಸಿದರೆ ಮುಸ್ಲಿಂ ವ್ಯಾಪಾರಿಗಳು ಸಹಜವಾಗಿ ನಷ್ಟಕ್ಕೆ ಒಳಗಾಗುತ್ತಾರೆ. ಆಗ ಅವರ ಮುಂದಿನ ನಡೆ ಏನಾಗಬಹುದು? ಒಂದು ವೇಳೆ ಮುಸ್ಲಿಮರು ಹಿಂದೂಗಳ ಬಳಿ ವ್ಯಾಪಾರ- ವಹಿವಾಟು ನಿಷೇಧಿಸಿದರೆ ಅದರಿಂದ ಅವರಿಗೆ ನಷ್ಟವೇ ಹೆಚ್ಚು. ಕಾರಣ ತುಂಬಾ ಸರಳ. ಹಿಂದೂಗಳ ಸಂಖ್ಯೆ ಸುಮಾರು ಶೇ 80ರಷ್ಟು. ಈ ರೀತಿಯ ಘಟನೆಗಳು ಸಹ ನಡೆದ ಸುದ್ದಿ ಇದೆ.
ಮುಸ್ಲಿಮರಿಗೆ ವ್ಯಾಪಾರದಲ್ಲಿ ನಷ್ಟ ಉಂಟಾಗತೊಡಗಿದರೆ ಅವರು ಹೆಚ್ಚು ಹತಾಶರಾಗತೊಡಗುತ್ತಾರೆ. ಅವರಲ್ಲಿ ಅನೇಕರಿಗೆ ಇಷ್ಟವಿಲ್ಲದಿದ್ದರೂ ಈ ನೆಲದ ಮೇಲಿನ ಅಭಿಮಾನ ಕಡಿಮೆ ಆಗುತ್ತದೆ. ನಾವು ಈ ದೇಶದ ಎರಡನೇ ದರ್ಜೆಯ ಪ್ರಜೆಗಳು ಎನಿಸತೊಡಗುತ್ತದೆ. ಮುಂದೆ ಈ ಅಸಮಾಧಾನದ ಮಾಹಿತಿ ಪಾಕಿಸ್ತಾನದ ಐಎಸ್ಐ ಮತ್ತು ಚೀನಾದ ಗೂಢಚಾರ ಸಂಸ್ಥೆಗೆ ತಿಳಿಯುತ್ತದೆ. ಅವರು ಈ ಪರಿಸ್ಥಿತಿಯ ಲಾಭ ಪಡೆಯಲು ಹೊಂಚು ಹಾಕುತ್ತಾರೆ. ಸಂಚು ಮಾಡುತ್ತಾರೆ. ಇದು ಈಗಲೇ ಸಂಭವಿಸುತ್ತದೆ ಎಂದು ಹೇಳಲಾಗದು. ಮುಂದೊಂದು ದಿನ ಸಂಭವಿಸಿದರೆ ಅಚ್ಚರಿ ಏನಿಲ್ಲ. ಹಾಗಾದರೆ ಕೆಲವು ಮುಸ್ಲಿಂ ಸಂಘಟನೆಗಳು ಮಾಡುವುದು ಸರಿಯೇ? ಹೈಕೋರ್ಟ್ ತೀರ್ಪಿನ ವಿರುದ್ಧ ಕರ್ನಾಟಕ ಬಂದ್ ಮಾಡುವ ದಾರ್ಷ್ಟ್ಯ ಅಪರಾಧವಲ್ಲವೇ?
ಹೌದು, ಅದು ಖಂಡಿತ ಒಂದು ಅಪರಾಧ. ಕಾನೂನು ಮತ್ತು ಸುವ್ಯವಸ್ಥೆ ಅದನ್ನು ಸರಿಯಾಗಿ ನಿರ್ವಹಿಸಬೇಕು. ಅದರಲ್ಲಿ ಯಾವುದೇ ರಾಜಿ ಮಾಡಿಕೊಳ್ಳಬಾರದು. ಆದರೆ ಸಾಮಾನ್ಯ ಜನರ ಈ ರೀತಿಯ ಪ್ರತಿಕ್ರಿಯೆ ತುಂಬಾ ಆತಂಕಕಾರಿ. ಜಾತ್ರೆಗಳಲ್ಲಿ ಅವರ ವ್ಯಾಪಾರ ನಿಷೇಧವು ಸರಿಪಡಿಸಲಾಗದಷ್ಟು ಅಂತರ ನಿರ್ಮಾಣ ಮಾಡುತ್ತದೆ. ಒಂದು ನೆನಪಿಡಿ. ಇಡೀ ವಿಶ್ವದ ಕೆಲವೇ ಶಾಂತಿಪ್ರಿಯ, ಕಡಿಮೆ ಹಿಂಸೆಯ ದೇಶಗಳಲ್ಲಿ ಭಾರತವೂ ಒಂದು. ಯರೋಪಿಯನ್ ದೇಶಗಳಲ್ಲಿ ನಡೆದ ಬರ್ಬರ ಹತ್ಯಾಕಾಂಡಗಳು, ಯುದ್ದಗಳು ಇಲ್ಲಿ ನಡೆದಿಲ್ಲ. ಆದರೆ ವಿವಿಧ ರಾಜ್ಯಗಳ ಮಧ್ಯೆ, ದುರ್ಬಲ ಸಮುದಾಯಗಳ ಮೇಲೆ ಅಮಾನುಷ ಹತ್ಯಾಕಾಂಡಗಳು ನಡೆದಿವೆ. ಅರಬ್ ಮತ್ತು ಪರ್ಷಿಯನ್ ದೇಶಗಳಲ್ಲಿ ನಡೆದ ಮತ್ತು ನಡೆಯುತ್ತಿರುವ ಅತ್ಯಂತ ಹೇಯ ಹಿಂಸೆಗಳು ಇಲ್ಲಿ ನಡೆದಿಲ್ಲ. ಬಹುಶಃ ಆಫ್ರಿಕಾ ಖಂಡದ ರೀತಿಯ ಹತ್ಯೆ- ದೌರ್ಜನ್ಯಗಳು ಈಗಲೂ ನಡೆಯುತ್ತಿವೆ. ಇಂತಹ ಮನೋಭಾವದ ಜನರೇ ಹೆಚ್ಚಾಗಿ ಇರುವಾಗ ದ್ವೇಷ- ಅಸೂಯೆ, ಆಕ್ರೋಶ, ಹಿಂಸೆಗಳ ಮುಖಾಂತರ ಯಾವುದೇ ಸಮಸ್ಯೆ ಬಗೆಹರಿಸುವುದು ಭಾರತದಲ್ಲಿ ತುಂಬಾ ಕಷ್ಟ.
ಈಗಿನ ಕಾಲದಲ್ಲಿ ಒಬ್ಬ ವ್ಯಕ್ತಿಯನ್ನು ಟೀಕಿಸಿದರೆ ಆತ ಕೈ ಎತ್ತುತ್ತಾನೆ. ಆತ ಕೈ ಎತ್ತಿದರೆ ಈತ ಚಾಕು ತೆಗೆಯುತ್ತಾನೆ. ಈತ ಚಾಕು ತೆಗೆದರೆ ಆತ ಮಚ್ಚು ಎತ್ತುತ್ತಾನೆ. ಆತ ಮಚ್ಚು ಎತ್ತಿದರೆ ಈತ ಲಾಂಗು ಬೀಸುತ್ತಾನೆ. ಈತ ಲಾಂಗು ಬೀಸಿದರೆ ಆತ ಬಂದೂಕು ತೆಗೆಯುತ್ತಾನೆ, ಆತ ಬಂದೂಕು ತೆಗೆದರೆ ಈತ ಬಾಂಬು ಎಸೆಯುತ್ತಾನೆ. ಈತ ಬಾಂಬು ಎಸೆದರೆ ಆತ ಮಾನವ ಬಾಂಬ್ ಆಗುತ್ತಾನೆ. ಕೊನೆಗೆ ಎಲ್ಲವೂ ಎಲ್ಲರೂ ಸರ್ವನಾಶ. ನಮ್ಮ ಮನಸ್ಸುಗಳಲ್ಲಿ ಕೇವಲ ದ್ವೇಷ- ಅಸೂಯೆಗಳು ಮತ್ತು ಅಜ್ಞಾನ ತುಂಬಿ ಕೊಂಡಿರುವುದರಿಂದ ಸತ್ಯ ಕಾಣದೆ ಮಬ್ಬಾಗಿದೆ. ಎರಡೂ ಧರ್ಮದ ಕೆಲವೇ ಕೆಲವು ಮತಾಂಧರು ಇಡೀ ಸಮಾಜಕ್ಕೆ ಬೆಂಕಿ ಇಡುತ್ತಿದ್ದಾರೆ. ರಾಜಕಾರಣಿಗಳು ಅದರ ಭರಪೂರ ಲಾಭ ಪಡೆಯುತ್ತಿದ್ದಾರೆ. ಈ ನೆಲಕ್ಕೆ ಹಿಂಸೆ ಒಗ್ಗುವುದಿಲ್ಲ. ನಮ್ಮ ಹೆಂಡತಿ- ಮಕ್ಕಳು ತುಂಬ ಒಳ್ಳೆಯವರು. ಈ ಕೋಮುದ್ವೇಷ ದೊಡ್ಡದಾಗಿ ಒಮ್ಮೆ ಆಂತರಿಕ ಹಿಂಸೆ ಭುಗಿಲೆದ್ದರೆ ಅದನ್ನು ನಿಗ್ರಹಿಸುವುದು ಕಷ್ಟ. ಎರಡೂ ಕಡೆ ಸಾಕಷ್ಟು ರಕ್ತಪಾತಗಳು ಆಗುತ್ತವೆ. ಆಗ ಯಾವುದೇ ಶ್ರೀಮಂತ ಅಥವಾ ರಾಜಕಾರಣಿಗಳ ಮಕ್ಕಳು ಸಾಯುವುದಿಲ್ಲ. ಎರಡೂ ಕಡೆ ಬಡವರೇ ಹತ್ಯೆಯಾಗುತ್ತಾರೆ. ಧರ್ಮದ ನಿಜವಾದ ಮುಖ ಅಫೀಮು ಎಂದು ಸಾಬೀತಾಗುವ ಮುನ್ನ ಎಚ್ಚೆತ್ತುಕೊಳ್ಳಿ.
ಮುಸ್ಲಿಮರೇ ಆಗಲಿ, ಹಿಂದೂಗಳೇ ಆಗಲಿ, ಯಾರೇ ಆಗಲಿ ಸಂವಿಧಾನ ವಿರೋಧಿ ನಿಲುವು ಪ್ರಕಟಿಸಿದರೆ ಕಾನೂನಿನ ವಿರುದ್ಧವಾಗಿ ವರ್ತಿಸಿದರೆ ದೇಶದ ಪೊಲೀಸ್ ವ್ಯವಸ್ಥೆ ಅತ್ಯಂತ ಕಠಿಣ ಕ್ರಮ ಕೈಗೊಳ್ಳಬೇಕು. ಆದರೆ ಸಾಮಾನ್ಯ ಜನ ಅಥವಾ ಸಂಘ- ಸಂಸ್ಥೆಗಳು ಈ ರೀತಿಯ ಬಹಿಷ್ಕಾರ ಮುಂದೆ ದುಷ್ಪರಿಣಾಮ ಬೀರಬಹುದು. ಹಿಂದೆ ಅನೇಕ ತಪ್ಪುಗಳ ನಡೆದಿವೆ, ನಿಜ. ಈಗ ಅದನ್ನು ಸರಿಪಡಿಸಬೇಕೆ ಹೊರತು ಮತ್ತೊಂದು ತಪ್ಪು ಮಾಡಬಾರದು. ದಯವಿಟ್ಟು ಯೋಚಿಸಿ.
ಲೇಖಕರು: ಎಚ್.ಕೆ. ವಿವೇಕಾನಂದ, ಚಿಂತಕರು
ವಿಶ್ವದ ಅತ್ಯಂತ ದೊಡ್ಡ ಹಿಂದು ದೇಗುಲ ನಿರ್ಮಾಣಕ್ಕೆ 2.5 ಕೋಟಿ ರೂ.ಮೌಲ್ಯದ ಭೂಮಿ ದಾನ ಮಾಡಿದ ಮುಸ್ಲಿಂ ಉದ್ಯಮಿ